ಬುಧವಾರ, ಡಿಸೆಂಬರ್ 11, 2019
22 °C

ಸ್ತ್ರೀಯರಿಗೆ ಒಳಿತು ಜಾನು ಶೀರ್ಷಾಸನ

Published:
Updated:
ಸ್ತ್ರೀಯರಿಗೆ ಒಳಿತು ಜಾನು ಶೀರ್ಷಾಸನ

ಜಾನು ಶೀರ್ಷಾಸನ ಕುಳಿತುಕೊಂಡು ಅಭ್ಯಾಸ ಮಾಡುವ ಆಸನವಾಗಿದೆ. ಶಿರಸ್ಸನ್ನು ಮುಂದೆ ಬಾಗಿಸಿ ಮೊಣಕಾಲಿನ ಸಮಕ್ಕೆ ತರಲಾಗುವುದು. ಇದನ್ನು ರಾಗಿ ಬೀಸುವ ಭಂಗಿಯ ಆಸನ ಎಂದೂ ಕರೆಯಲಾಗುತ್ತದೆ.

ಈ ಆಸನ ಅಭ್ಯಾಸ ಮಾಡುವುದರಿಂದ ಕಶೇರು ಖಂಡ ಭಾಗ, ತೊಡೆ ಸಂದು, ಭುಜಗಳ ಭಾಗ, ಮಂಡಿರಜ್ಜು ಭಾಗ ಎಳೆತಕ್ಕೆ ಒಳಗಾಗಿ ಸ್ನಾಯುಗಳು ಬಲಗೊಳ್ಳುತ್ತವೆ. ಜಾನು ಎಂದರೆ ಮೊಣಕಾಲು ಎಂದರ್ಥ. ಶೀರ್ಷ ಎಂದರೆ ತಲೆ, ತಲೆಯನ್ನು ಬಗ್ಗಿಸಿ ಮೊಣಕಾಲಿನ ಮೇಲೆ ಇಡುವುದರಿಂದ ಈ ಆಸನಕ್ಕೆ ಜಾನು ಶೀರ್ಷಾಸನ ಎಂದು ಹೆಸರು ಬಂದಿದೆ.

ಅಭ್ಯಾಸ ಕ್ರಮ: ನೆಲದ ಮೇಲೆ ಕುಳಿತು ಎರಡೂ ಕಾಲುಗಳನ್ನು ಮುಂದಕ್ಕೆ ನೇರವಾಗಿ ಚಾಚಬೇಕು. ಎಡಕಾಲನ್ನು ಬಲತೊಡೆಯ ಮೂಲೆಗೆ (ಬುಡಕ್ಕೆ) ತಾಗುವಂತೆ ಮಡಚಬೇಕು.

ಬಳಿಕ ಉಸಿರು ಬಿಟ್ಟು ಎರಡು ಕೈಗಳಿಂದಲೂ ಬಲಪಾದದ ಬೆರಳುಗಳನ್ನು ನಿಧಾನವಾಗಿ ಸೊಂಟದಿಂದ ಮುಂದೆ ಬಗ್ಗುತ್ತಾ ಹಿಡಿಯಬೇಕು. ಅನಂತರ ಇನ್ನೂ ಬಾಗುತ್ತಾ ಎರಡು ಕೈಗಳಿಂದ ಬಲಪಾದವನ್ನು ಹಿಡಿದು ಬಲಮಂಡಿಯ ಮೇಲೆ ಆರಂಭದಲ್ಲಿ ಹಣೆ, ಮೂಗು, ಕೊನೆಗೆ ಗದ್ದವನ್ನು ಇರಿಸಬೇಕು.

ಈ ಭಂಗಿಯಲ್ಲಿ ಆಳವಾಗಿ ಉಸಿರಾಟ ನಡೆಸುತ್ತಾ ಅರ್ಧ ನಿಮಿಷದಿಂದ ಒಂದು ನಿಮಿಷದವರೆಗೆ ಇರಬೇಕು. ಅನಂತರ ಮೇಲೆ ಹೇಳಿದ ಕ್ರಮದಂತೆ ಬಲ ಕಾಲನ್ನು ಮಡಚಿ ಅದೇ ರೀತಿ ಇನ್ನೊಂದು ಬದಿಯಲ್ಲಿ ಈ ಆಸನ ಅಭ್ಯಾಸ ಮಾಡಬೇಕು. ಅನಂತರ ತುಸು ವಿಶ್ರಾಂತಿ.

ಪ್ರಯೋಜನಗಳು

* ಈ ಆಸನದ ಅಭ್ಯಾಸದಿಂದ ಲಿವರ್, ಕಿಡ್ನಿಯ ಆರೋಗ್ಯ ಉತ್ತಮಗೊಳ್ಳುತ್ತದೆ. ಯಕೃತ್ತಿನ ಭಾಗ ಪುನಶ್ಚೇತನಗೊಳ್ಳುತ್ತದೆ.

*ಭುಜಗಳು, ಬೆನ್ನೆಲುಬು, ಕಶೇರು ಖಂಡ, ತೊಡೆಗಳ ಭಾಗ ಬಲಗೊಳ್ಳುತ್ತವೆ

* ಜೀರ್ಣಶಕ್ತಿ ಹೆಚ್ಚುತ್ತದೆ

* ಮುಟ್ಟಿನ ಸಮಸ್ಯೆ ನಿಯಂತ್ರಣವಾಗುತ್ತದೆ

* ಒತ್ತಡ, ಆತಂಕ, ಆಯಾಸ ಪರಿಹರವಾಗುತ್ತದೆ

* ಅಧಿಕ ರಕ್ತದೊತ್ತಡ, ನಿದ್ರಾಹೀನತೆ ಸಮಸ್ಯೆಗಳನ್ನು ತಹಬದಿಗೆ ತರುತ್ತದೆ

* ತೊಡೆಯ ಸ್ನಾಯುಗಳು ಹಾಗೂ ಕೀಲುಗಳು ಬಲಗೊಳ್ಳುತ್ತವೆ

* ಸ್ತ್ರೀಯರು ಈ ಆಸನವನ್ನು ನಿತ್ಯ ಅಭ್ಯಾಸ ಮಾಡಿದರೆ ಗರ್ಭಾಶಯದ ಆರೋಗ್ಯಕ್ಕೆ ಸಹಕಾರಿ

ಪ್ರತಿಕ್ರಿಯಿಸಿ (+)