ಬುಧವಾರ, ಡಿಸೆಂಬರ್ 11, 2019
20 °C

ಹುಡುಗಿ ನಿನ್ನ ಜಡೆ ಏನಾಯ್ತು...

Published:
Updated:
ಹುಡುಗಿ ನಿನ್ನ ಜಡೆ ಏನಾಯ್ತು...

–ಕಾವ್ಯ ಭಟ್‌

ಅದೊಂದು ಕಾಲವಿತ್ತು. ಹೆಣ್ಣುಮಕ್ಕಳು ಕೂದಲು ಇಳಿಬಿಟ್ಟು ಹೊಸಿಲು ದಾಟುವಂತಿರಲಿಲ್ಲ. ಅಪ್ಪಿತಪ್ಪಿ ದಾಟಿದರೆ ಅಜ್ಜಿಯ ಸಹಸ್ರನಾಮಕ್ಕೆ ಬ್ರೇಕ್ ಇರುತ್ತಿರಲಿಲ್ಲ. ಉದ್ದನೆಯ ಜಡೆ ಎನ್ನುವುದು ಹುಡುಗಿಯರಿಗೆ ಸಂಭ್ರಮದ ವಿಷಯ. ಹಸಿರು ಸೊಪ್ಪು, ಕೆಂಪು ಹೂವು, ಹರಳೆಣ್ಣೆ, ಶೀಗೇಕಾಯಿ, ಹೀಗೆ ಹಲವಾರು ನೈಸರ್ಗಿಕ ವಸ್ತುಗಳನ್ನು ವಾರಕ್ಕೊಮ್ಮೆ ತಲೆ ತುಂಬಾ ಮೆತ್ತಿಕೊಂಡು ಕೂದಲ ಆರೈಕೆ ಮಾಡಿಕೊಳ್ಳುತ್ತಿದ್ದೆವು.

ನಮಗೆಲ್ಲಾ ಆರು ವರ್ಷವಿರುವಾಗಲೇ ಎರಡು ಅಡಿ ಉದ್ದದ ಜಡೆ ಇರುತ್ತಿತ್ತು. ಅದಕ್ಕೆ ಪಿತಪಿತ ಎನ್ನುವಂತೆ ಎಣ್ಣೆಹಚ್ಚಿ, ಸಣ್ಣ ಕಾಲು ದಾರಿಯಂತಹ ಬೈತಲೆ ತೆಗೆದು, ಉಸಿರು ಬಿಗಿ ಹಿಡಿದು ರಿಬ್ಬನ್ನು ಹಾಕಿ ಅಮ್ಮ ಜಡೆ ಕಟ್ಟಿದರೆ ಜಾಗಟೆ ಕೋಲಿನಂತೆ ಕಾಣುತ್ತಿತ್ತು. ಅಮ್ಮ ಅದಕ್ಕೆ ಹೂವು ಮುಡಿಸಿ ಸಂಭ್ರಮ ಪಡುತ್ತಿದ್ದಳು. ‘ನಮ್ಮನೆ ಮಹಾಲಕ್ಷ್ಮಿಗೆ ನನ್ನ ಕಣ್ಣೇ ದೃಷ್ಟಿ’ ಎನ್ನುತ್ತಾ ಅಜ್ಜಿ ಬೆರಳು ಮುರಿದುಕೊಳ್ಳುತ್ತಿದ್ದಳು.

ಮೂರು ರಾತ್ರಿ ಮಲಗೆದ್ದರೂ ಕೂದಲಿಗೆ ಹಣಿಗೆ ತಾಕಿಸುವ ಪ್ರಸಂಗವಿರುತ್ತಿರಲಿಲ್ಲ. ಈಗಷ್ಟೇ ಬಾಚಿದಂತಿರುತ್ತಿತ್ತು. ವಾರಕ್ಕೊಮ್ಮೆ ಹೊಗೆಯಾಡುತ್ತಿರುವ ನೀರಿನಲ್ಲಿ ಸೀಗೇಪುಡಿಯಿಂದ ತಲೆ ಉಜ್ಜಿ ಸ್ನಾನ ಮಾಡಿಸಿದರೆ ಆ ದಿನವಷ್ಟೇ ಹೆಣ್ಣುಮಕ್ಕಳಿಗೆ ಜಡೆಯಿಂದ ಮುಕ್ತಿ.

ಆದರೆ ಈಗೇಕೆ ಹೀಗೆ? ಹೆಣ್ಣುಮಕ್ಕಳಿಗೆ ಜಡೆ ಎಂದರೇನೆ ಅಲರ್ಜಿ. ದುರ್ಯೋಧನನ ತೊಡೆ ಮುರಿಯುವವರೆಗೆ ಮುಡಿ ಕಟ್ಟುವುದಿಲ್ಲವೆಂದು ಪಣ ತೊಟ್ಟ ದ್ರೌಪದಿಯ ಅಪರಾವತಾರದವರಂತೆ ಕೂದಲು ಬಿರಿ ಹೊಯ್ದುಕೊಂಡು ತಿರುಗಾಡುವುದು ಇವರಿಂದ ಅದೆಂಥಾ ಖುಷಿಯೋ? ಜಡೆ ಹಾಕದೆ ಹಾಗೇ ಬಿಟ್ಟರೆ ಚೆಂದ ಕಾಣಿಸ್ತೀವಿ ಎಂಬ ಹಂಬಲವೇ? ಸೆಕ್ಸಿಯಾಗಿ ಕಾಣುತ್ತೇವೆಂಬ ಭ್ರಮೆಯೇ? ಸೋಮಾರಿತನವೇ? ಕಾಲದ ಮಹಿಮೆಯೇ? ಕೈಗೆ ಸಿಗದೆ ಓಡುತ್ತಿರುವ ಸಮಯದ ಅಭಾವವೇ? ವೇಗವಾಗಿ ಬೆಳೆಯುತ್ತಿರುವ ಸಮಾಜಕ್ಕೆ ಹೊಂದಿಕೊಳ್ಳುವ ಪರಿಯಾ? ಅಥವಾ ಹೀಗೆ ಸುಮ್ಮನೇನಾ?

ಜಡೆ ಎಂದರೆ ಹೆಣ್ಣುಮಕ್ಕಳಿಗೆ ‘ವ್ಯಾಕ್’ ಎನ್ನುವಂತಾಗಲು ಕಾರಣ ಹೆತ್ತವರೇ ಕಾರಣ ಎನಿಸುತ್ತದೆ. ಅವರು ಚಿಕ್ಕವರಿರುವಾಗಲೇ ಬೆಳಗಿನ ಅವಸರದಲ್ಲಿ ಶಾಲೆಗೆ ರೆಡಿ ಮಾಡಲು ತಕರಾರೆಂದು ಕೂದಲನ್ನು ಬಾಯ್ ಕಟ್ಟೋ ಅಥವಾ ಬಾಬ್ ಕಟ್ಟೋ ಮಾಡಿಸುತ್ತಾರೆ. ಅದು ಕೂದಲ ಬಗೆಗಿನ ಅಲರ್ಜಿ ಪ್ರಜ್ಞೆಗೆ ನಾಂದಿ. ಮಕ್ಕಳಿಗೆ ಆ ವಯಸ್ಸಿನಲ್ಲಿಯೇ ಕೂದಲೆಂದರೆ ತೊಡಕು ಸಿಕ್ಕು ಎಂಬ ಭಾವನೆ ಬೆಳೆಯಲಾರಂಭಿಸುತ್ತದೆ.

ನಗರಲ್ಲಿ ಅಲೆದಾಡುವ ಯುವತಿಯರತ್ತ ಕಣ್ಣು ಹಾಯಿಸಿದರೆ ಥರಾವರಿ ಕೇಶ ವಿನ್ಯಾಸಗಳು ಕಣ್ಣಿಗೆ ಬೀಳುತ್ತವೆ. ಹಲವರದು ಅಣೆಕಟ್ಟೆಯಿಂದ ಧುಮ್ಮಿಕ್ಕುತ್ತಿರುವ ಜಲಧಾರೆ. ಮತ್ತು ಕೆಲವರದ್ದು ನೂಡಲ್ಸ್‌ಗಳಂತೆ ಸುರುಳಿ ಸುತ್ತಿಕೊಂಡ ಜೋಗಿಯ ಸ್ಟೈಲ್. ಕೆಲ ಹುಡುಗರೂ ಅಚ್ಚುಕಟ್ಟಾಗಿ ನೆತ್ತಿಮೇಲೆ ಜುಟ್ಟು ಹಾಕಿಕೊಂಡು ಲಕ್ಷಣವಾಗಿ ಕಾಣಿಸುತ್ತಾರೆ. ಕಾಲೇಜುಗಳಿಗೆ ಹೋಗುವ ಯುವತಿಯರಲ್ಲೂ ಶೇ.80ರಷ್ಟು ಸಣ್ಣ ಕ್ಲಿಪ್ ಸಿಕ್ಕಿಸಿಯೋ ಅಥವಾ ಬ್ಯಾಂಡ್ ಬಿಗಿದೋ ಕೂದಲಿಗೆ ತನ್ನಿಚ್ಛೆಯಂತೆ ಹಾರಿ ನಲಿದಾಡುವ ಸ್ವಾತಂತ್ರ್ಯ ಕೊಟ್ಟಿರುತ್ತಾರೆ. ನಮ್ಮ ಸಿನಿಮಾ ನಾಯಕಿಯರು, ಜಾಹೀರಾತು ರೂಪದರ್ಶಿಗಳು ಹೀಗೆಯೇ ಇರುತ್ತಾರೆ ಅಲ್ಲವೇ? ಮದುವೆ ದೃಶ್ಯಗಳಲ್ಲೂ ನಾಯಕಿ ಜಡೆ ಹಾಕಿಕೊಳ್ಳುವುದಿಲ್ಲ.

ಇಂದಿನ ಯುವತಿಯರಿಗೆ ತಲೆಗೂದಲು ಅಸಡ್ಡೆ ಅಲ್ಲ. ಉದ್ದನೆಯ ಕೂದಲಿರಲಿ ಎಂಬ ಹಂಬಲ ಈಗಲೂ ಹಲವರಲ್ಲಿದೆ. ಕೂದಲಿನ ನಿರ್ವಹಣೆಗೆಂದೇ ಥರಾವರಿ ಸಾಧನಗಳೂ ಲಭ್ಯವಿದೆ. ಆರ್ಥಿಕವಾಗಿ ಸ್ವಾವಲಂಬಿಗಳಾದ ಯುವತಿಯರಿಗೆ ಇದು ಹೊರೆಯೂ ಅಲ್ಲ. ಆದರೆ ಜಡೆ ಹಣೆದುಕೊಳ್ಳುವ ತಾಪತ್ರಯ ಬೇಡ ಎಂಬ ಮನೋಭಾವ ಅವರದು ಅಷ್ಟೇ.

ತಲೆಗೂದಲು ಸಡಿಲಬಿಟ್ಟ ಯುವತಿಯರು ಜಡೆ ಹೆಣೆದುಕೊಂಡವರಿಗಿಂತ ಸುಂದರವಾಗಿ ಕಾಣಿಸುತ್ತಾರೆ ಎನ್ನುವ ವಾದವನ್ನೂ ಕೆಲವರು ಮುಂದಿಡುತ್ತಾರೆ. ಆದರೆ ಈ ವಾದದ ಸತ್ಯಾಸತ್ಯತೆ ಏನೇ ಇದ್ದರೂ, ಜಡೆ ಹೆಣೆಯುವ ಕಲಾತ್ಮಕತೆ ನಶಿಸುತ್ತಿದೆಯೇ? ನಮ್ಮ ಹೆಣ್ಣುಮಕ್ಕಳಿಗೆ ಅಷ್ಟೂ ವ್ಯವಧಾನವಿಲ್ಲವೇ? ಎಂಬ ಆತಂಕ ನನ್ನದು.

ಪ್ರತಿಕ್ರಿಯಿಸಿ (+)