ಬುಧವಾರ, ಡಿಸೆಂಬರ್ 11, 2019
26 °C

ದುರುಳರ ಕೊಲ್ಲುವ ‘ಕಾಟೇರಿ’

Published:
Updated:
ದುರುಳರ ಕೊಲ್ಲುವ ‘ಕಾಟೇರಿ’

ಅವಳು ಪಾತ್ರೆ ತೊಳೆಯುತ್ತಿದ್ದಾಳೆ. ಮುಖದಲ್ಲಿ ದಣಿವು ಎದ್ದು ಕಾಣುತ್ತಿದೆ. ಪುರುಷನೊಬ್ಬ ಹಿಂದಿನಿಂದ ಬಂದು ಅವಳ ಮುಡಿಯನ್ನು ಹಿಡಿದು ರೂಮಿನೊಳಗೆ ಎಳೆದೊಯ್ಯುತ್ತಾನೆ. ಅವಳ ಚೀತ್ಕಾರಕ್ಕೆ ಅಲ್ಲಿ ಬೆಲೆಯಿಲ್ಲ.

ಹರೆಯದ ಹುಡುಗಿ... ಯಾವುದೋ ಹಾಡಿಗೆ ಹೆಜ್ಜೆ ಹಾಕುತ್ತ ಸುತ್ತಲಿನ ಜಗತ್ತನ್ನೇ ಮರೆತಿದ್ದಾಳೆ. ಅಲ್ಲಿಗೆ ಮೂರು ನಾಲ್ಕು ಪಡ್ಡೆ ಹುಡುಗರು ಬರುತ್ತಾರೆ. ಬೇಕಂತಲೇ ಅವಳಿಗೆ ಮೈ ತಾಕಿಸುತ್ತಾರೆ. ಪ್ರತಿಭಟಿಸಿದವಳನ್ನು ನೆಲಕ್ಕೊತ್ತಿಹಿಡಿದು ಆವರಿಸಿಕೊಳ್ಳುತ್ತಾರೆ. ಅವಳ ಆಕ್ರಂದವನ್ನು ಕೇಳುವವರು ಅಲ್ಲಿ ಯಾರೂ ಇಲ್ಲ.

ಪುಟಾಣಿ ಹುಡುಗಿ... ತರಗತಿಯಿಂದ ಹಾದು ಹೋಗುತ್ತಿದ್ದವಳನ್ನು ಮೇಷ್ಟ್ರು ಕರೆಯುತ್ತಾರೆ. ನೆಲಕ್ಕೆ ಬಿದ್ದ ಹಾಳೆಯನ್ನು ಎತ್ತಿಕೊಡಲು ಹೇಳುತ್ತಾರೆ.

ಹಾಗೆ ಎತ್ತಿಕೊಟ್ಟ ಬಾಲಕಿಯನ್ನು ತಮ್ಮ ಮೈಗೆ ಬಲವಂತದಿಂದ ಒತ್ತಿಕೊಳ್ಳುತ್ತಾರೆ. ಅವಳ ಕಣ್ಣೀರ ಬಿಸಿ ಯಾರನ್ನೂ ತಾಕುವುದಿಲ್ಲ.

ಬೆಂಕಿ ಹೊತ್ತಿ ಉರಿಯುತ್ತಿದೆ. ಧಗಧಗ ಕೆನ್ನಾಲಿಗೆ ಚಾಚಿ ಎಲ್ಲವನ್ನೂ ಆಪೋಶನ ತೆಗೆದುಕೊಳ್ಳುವ ಆಕ್ರೋಶದಲ್ಲಿರುವ ಆ ಅಗ್ನಿ ಈ ಮೇಲಿನ ಮೂರೂ ಘಟನೆಗೆ ಸಾಕ್ಷಿಯಾಗಿರುವಂತಿದೆ. ಅದರ ಪಕ್ಕದಲ್ಲಿ ಕಣ್ಣುಗಳಲ್ಲಿಯೇ ಕಿಡಿ ಉದುರಿಸುತ್ತಾ ನಿಂತಿರುವ ಯುವಕನ ಮುಖದಲ್ಲಿಯೂ ಕ್ರೋಧಾಗ್ನಿ ಜ್ವಲಿಸುತ್ತಿದೆ.

ಮರುಕ್ಷಣವೇ ಆ ಎಲ್ಲ ಕಾಮಾಂಧ ಕಿಡಿಗೇಡಿಗಳೆಲ್ಲ ಒಂದೇ ಕಡೆಯಲ್ಲಿ ಬಿದ್ದು ಒದ್ದಾಡುತ್ತಿದ್ದಾರೆ. ಅವರನ್ನು ಹೆಡೆಮುರಿ ಕಟ್ಟಲಾಗಿದೆ.

ಕಾಟೇರಿ!

ರಾಕೇಶ್‌ ರಾಜನ್‌  ಅವರು ರಚಿಸಿ, ನಿರ್ದೇಶಿಸುವುದರ ಜತೆಗೆ ನಟಿಸಿರುವ ವಿಡಿಯೊ ಸಾಂಗ್‌ ಇಂಥದ್ದೊಂದು ಸಮಕಾಲೀನ ಮತ್ತು ಮಹತ್ವದ ಥೀಮ್‌ನ ಕಾರಣದಿಂದಲೇ ಗಮನ ಸೆಳೆಯುತ್ತದೆ.

ಮಹಿಳೆಯರ ಮೇಲೆ ನಿರಂತರವಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಲೈಂಗಿಕ ಶೋಷಣೆಯ ಪ್ರತಿಭಟನಾತ್ಮಕ ಧ್ವನಿಯಾಗಿ ಈ ಹಾಡನ್ನು ನೋಡಬಹುದು. ಲೈಂಗಿಕ ಶೋಷಣೆಗೆ ಹೆಣ್ಣಿನ ವಯಸ್ಸು, ಅಂತಸ್ತು, ಹಾಕಿರುವ ಬಟ್ಟೆ, ರೂಪ ಇವ್ಯಾವವೂ ಕಾರಣವಲ್ಲ, ಗಂಡಿನ ಮನಸ್ಸಿನೊಳಗಿನ ಮೃಗೀಯ ಗುಣವೇ ಕಾರಣ ಅನ್ನುವುದನ್ನು ಸಾಂಕೇತಿಕವಾಗಿ ಹೇಳಿದ್ದಾರೆ ರಾಜೇಶ್‌.

‘ಕಾಟೇರಿ ಎಂದರೆ ಕಾಳಿಯ 64ನೇ ರೂಪ. ಸಂಹಾರ ಮಾಡುವುದೇ ಆ ದೇವಿಯ ಗುಣ. ಆ ದೇವಿ ಯಾವುದೋ ರೂಪದಲ್ಲಿ ಬಂದು ದುಷ್ಟರನ್ನು ಸಂಹಾರ ಮಾಡುತ್ತಾಳೆ. ನಮ್ಮ ಸಮಾಜದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ಶೋಷಣೆಯನ್ನು ತಡೆಯಲು ನಾವೂ ಕಾಟೇರಿಯ ರೂಪ ತಾಳಬೇಕಾಗುತ್ತದೆ ಎಂಬುದನ್ನು ಹೇಳುತ್ತಿದ್ದೇವೆ’ ಎಂದರು ರಾಜೇಶ್‌.

ನಿವೃತ್ತ ಪೊಲೀಸ್‌ ಅಧಿಕಾರಿ ಶಂಕರ ಬಿದರಿ ಈ ವಿಡಿಯೊ ಸಾಂಗ್‌ ಬಿಡುಗಡೆ ಮಾಡಿದರು. ಆರ್‌.ಜೆ. ಪ್ರದೀಪ್‌ ಅವರ ‘ಸಖತ್‌ ಸ್ಟುಡಿಯೊ’ ಚಾನೆಲ್‌ನಲ್ಲಿ (SAKKATH STUDIO) ಈ ಹಾಡು ಲಭ್ಯ. ಗುರುಪ್ರಸಾದ್‌ ಛಾಯಾಗ್ರಹಣ ಈ ಹಾಡಿಗಿದೆ. ರಾಜೇಶ್‌ ರಾಜನ್‌ ಜತೆಗೆ ಸಾನ್ವಿ, ಮಣಿಕಂಠ, ಮಯೂರಿ ಶಾ ನಟಿಸಿದ್ದಾರೆ.

ಪ್ರತಿಕ್ರಿಯಿಸಿ (+)