7

ಮದುವೆ ತಡೆ ಹಕ್ಕು ಯಾರಿಗೂ ಇಲ್ಲ: ಸುಪ್ರೀಂ ಕೋರ್ಟ್‌

Published:
Updated:
ಮದುವೆ ತಡೆ ಹಕ್ಕು ಯಾರಿಗೂ ಇಲ್ಲ: ಸುಪ್ರೀಂ ಕೋರ್ಟ್‌

ನವದೆಹಲಿ: ಇಬ್ಬರು ವಯಸ್ಕ ವ್ಯಕ್ತಿಗಳ ಮದುವೆಯಲ್ಲಿ ಹಸ್ತಕ್ಷೇಪ ನಡೆಸುವ ಅಧಿಕಾರ ಯಾರಿಗೂ ಇಲ್ಲ. ಇಬ್ಬರು ತಮ್ಮಿಷ್ಟದಂತೆ ಮದುವೆಯಾದರೆ ಅವರ ಹೆತ್ತವರಿಗೆ ಅಥವಾ ಸರ್ಕಾರಕ್ಕೆ ಕೂಡ ತಡೆಯುವ ಹಕ್ಕು ಇಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ವಯಸ್ಕರ ನಡುವಣ ಮದುವೆಗೆ ಕಾನೂನಿನ ಸಮ್ಮತಿ ಇದೆ. ಹಾಗಾಗಿ ಇಂತಹ ವಿಚಾರಗಳಲ್ಲಿ ಜಾತಿ ಪಂಚಾಯತಿಗಳು ಸಮಾಜದ ಆತ್ಮಸಾಕ್ಷಿ ರಕ್ಷಕರಂತೆ ನಡೆದುಕೊಳ್ಳಬಾರದು ಎಂದು ಹೇಳಿದೆ.

ಮದುವೆಯ ವಿಚಾರದಲ್ಲಿ ಜಾತಿ ಪಂಚಾಯತಿಯಂತಹ ಸಂಸ್ಥೆಗಳ ಹಸ್ತಕ್ಷೇಪ ತಡೆಗೆ ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸುವುದಾಗಿಯೂ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಹೇಳಿದೆ.

‘ಮದುವೆಗೆ ಕಾನೂನಿನ ಸಮ್ಮತಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ನ್ಯಾಯಾಲಯ ನಿರ್ಧರಿಸುತ್ತದೆ’ ಎಂದೂ ಪೀಠ ಹೇಳಿದೆ.

ಅಂತರಜಾತಿ ಮತ್ತು ಅಂತರಧರ್ಮೀಯ ಮದುವೆಗಳನ್ನು ಜಾತಿ ಪಂಚಾಯಿತಿಗಳು ಪ್ರೋತ್ಸಾಹಿಸುತ್ತಿವೆ. ಜಾತಿ ಪಂಚಾಯಿತಿಗಳು ಸಮಾಜದ ಆತ್ಮಸಾಕ್ಷಿ ರಕ್ಷಕರಂತೆ ವರ್ತಿಸುತ್ತಿವೆ ಎಂದು ಜಾತಿ ಪಂಚಾಯಿತಿಗಳ ಪರ ವಕೀಲರು ಪೀಠಕ್ಕೆ ತಿಳಿಸಿದರು.

ಅದಕ್ಕೆ ಪ್ರತಿಕ್ರಿಯೆ ನೀಡಿದ ಪೀಠ, ‘ಮದುವೆ ಅತ್ಯಂತ ಮೂಲಭೂತ ವಿಚಾರ. ಇಬ್ಬರು ವಯಸ್ಕ ವ್ಯಕ್ತಿಗಳು ಮದುವೆಯಾದರೆ ಅದು ಅವರ ಆಯ್ಕೆ. ಕಾನೂನನ್ನು ನೀವು ಕೈಗೆ ತೆಗೆದುಕೊಳ್ಳುವಂತಿಲ್ಲ. ಮದುವೆ ವಿಚಾರದಲ್ಲಿ ಹಸ್ತಕ್ಷೇಪಕ್ಕೆ ನಿಮಗೆ ಯಾವುದೇ ಅಧಿಕಾರ ಇಲ್ಲ’ ಎಂದು ಹೇಳಿತು.

ಮರ್ಯಾದೆಗೇಡು ಹತ್ಯೆ ಪ್ರಕರಣಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಶಕ್ತಿ ವಾಹಿನಿ ಎಂಬ ಎನ್‌ಜಿಒ 2010ರಲ್ಲಿಯೇ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಪೀಠ ಹೀಗೆ ಹೇಳಿದೆ.

ಜಾತಿ ಪಂಚಾಯತಿಗಳು ಉತ್ತರ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಸಕ್ರಿಯವಾಗಿವೆ. ಇವು ಗ್ರಾಮದ ವಿವಾದಗಳಲ್ಲಿ ನ್ಯಾಯ ತೀರ್ಮಾನದ ಕೆಲಸವನ್ನು ಮಾಡುತ್ತವೆ. ಕೆಲವೊಮ್ಮೆ, ಪುರಾತನ ಪದ್ಧತಿಗಳ ಆಧಾರದಲ್ಲಿ  ಭಾರಿ ಕಠಿಣ ಶಿಕ್ಷೆಗಳನ್ನೂ ವಿಧಿಸುತ್ತವೆ.

ಮದುವೆಯಾಗಲು ಬಯಸುವ ವಯಸ್ಕ ಪುರುಷ ಮತ್ತು ಮಹಿಳೆಯರನ್ನು ಇಂತಹ ಪಂಚಾಯತಿಗಳು ಬೆದರಿಸುತ್ತವೆ. ಇದನ್ನು ತಡೆಯಲು ಸಲಹೆಗಳನ್ನು ನೀಡುವಂತೆ ಕೇಂದ್ರಕ್ಕೆ ಸೂಚಿಸಲಾಗಿದೆ. ಆದರೆ ಕೇಂದ್ರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡೇ ಇಲ್ಲ ಎಂದು ಪೀಠ ತರಾಟೆಗೆ ತೆಗೆದುಕೊಂಡಿದೆ.

ಜಾತಿ ಪಂಚಾಯತಿಗಳು ಮಹಿಳೆಯರ ವಿರುದ್ಧ ಎಸಗುವ ಅಪರಾಧವನ್ನು ತಡೆಯಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಇಂತಹ ಕೃತ್ಯಗಳ ತಡೆಗೆ ನ್ಯಾಯಾಲಯವೇ ಸೂಕ್ತವಾದ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಕೇಂದ್ರ ಸರ್ಕಾರ ಹಿಂದಿನ ವಿಚಾರಣೆ ಸಂದರ್ಭದಲ್ಲಿ ಕೋರಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry