ಮಂಗಳವಾರ, ಡಿಸೆಂಬರ್ 10, 2019
20 °C

ಮಾಫಿಯಾ ಜಾಡು: ಆಡಳಿತದ ವೈಫಲ್ಯ ಪಾಡು

ವೈ.ಗ.ಜಗದೀಶ್ / ವಿ.ಎಸ್.ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಮಾಫಿಯಾ ಜಾಡು: ಆಡಳಿತದ ವೈಫಲ್ಯ ಪಾಡು

ಮಂಗಳೂರು: ಕೋಮು ವಿದ್ವೇಷದ ಮನಸ್ಥಿತಿಯ ಬೆನ್ನತ್ತಿ ಹೊರಟರೆ ಮರಳು, ಗಾಂಜಾ ಮಾಫಿಯಾ, ಭೂಗತ ಜಗತ್ತು ಹಾಗೂ ಆಡಳಿತ ವೈಫಲ್ಯದ ಎಳೆಗಳು ಒಂದಕ್ಕೊಂದು ಕೊಂಡಿಗಳಂತೆ ಬೆಸೆದುಕೊಂಡಿರುವುದು ಸ್ಪಷ್ಟವಾಗುತ್ತದೆ.

ಈ ವ್ಯವಹಾರಕ್ಕೂ ಕೊಲೆಗಳು ಹಾಗೂ ಕೋಮು ಸಂಘರ್ಷಗಳಿಗೂ ನಿಕಟ ಸಂಬಂಧವಿದೆ. ಆದರೆ, ಅದು ಕಣ್ಣಿಗೆ ಹೊಡೆಯುವಂತೆ ಕಾಣಿಸುವುದಿಲ್ಲ. ಪಾತಳಿಯಲ್ಲಿ ಇದು ಕೆಲಸ ಮಾಡುತ್ತಿರುವುದು ದಿಟ ಎಂದು ಪೊಲೀಸರೇ ಒಪ್ಪಿಕೊಳ್ಳುತ್ತಾರೆ.

‘ಒಂದು ಲಾರಿ ಮರಳಿಗೆ ₹50,000 ದಿಂದ ₹60,000 ಇದೆ. ಒಬ್ಬ ರೌಡಿ ಅಥವಾ ಮರಳು ಮಾಫಿಯಾದ ಮೇಲೆ ನಿಯಂತ್ರಣ ಇಟ್ಟುಕೊಂಡ ಗುಂಪು ಒಂದು ಲೋಡಿಗೆ ತನಗಾಗಿ ₹ 1,000 ಹಫ್ತಾ ವಸೂಲಿ ಮಾಡುತ್ತದೆ. ಪಾಪ್ಯುಲರ್‌ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ), ಸಂಘಪರಿವಾರದ ಸಂಘಟನೆಗಳ ಬೆಂಬಲ ಬೇಕಾದರೆ ಎರಡೂ ಸಂಘಟನೆಗಳಿಗೆ ತಲಾ ₹2,000 ದಿಂದ ₹3,000 ಕೊಡಬೇಕು. ಇಲ್ಲದಿದ್ದರೆ ಮರಳು ಮಾಫಿಯಾ ನಡೆಸಲು ಸಾಧ್ಯವಿಲ್ಲ. ಇದರ ಜತೆಗೆ ಅಧಿಕಾರಿಗಳು, ರಾಜಕೀಯ ವ್ಯಕ್ತಿಗಳಿಗೂ ಮಾಮೂಲು ಹೋಗುತ್ತದೆ. ಒಟ್ಟಾರೆ, ₹10,000ದಿಂದ ₹12,000ದವರೆಗೆ ಒಂದು ಲಾರಿ ಲೋಡಿನಿಂದ ವಸೂಲಾಗುತ್ತದೆ. ಮಾಫಿಯಾದ ಹಣ ಹಂಚಿಕೆಯಲ್ಲಿ ಹಿಂದೂ-ಮುಸ್ಲಿಂ ಎಂಬ ಧರ್ಮಭೇದವಿಲ್ಲ. ಹಫ್ತಾ ವಸೂಲಿಯ ಪೈಪೋಟಿಗೆ ನಡೆಯುವ ಕೊಲೆ ಕೆಲವೊಮ್ಮೆ ಕೋಮು ಸ್ವರೂಪ ಪಡೆದುಕೊಂಡ ನಿದರ್ಶನವೂ ಇದೆ’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ಬಜರಂಗದಳ, ಹಿಂದೂ ಜಾಗರಣಾ ವೇದಿಕೆ (ಹಿಂಜಾವೇ), ಕಾಂಗ್ರೆಸ್, ಬಿಜೆಪಿ, ಪಿಎಫ್ಐ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಎನ್ನದೇ ಎಲ್ಲ ಸಂಘಟನೆ, ಪಕ್ಷಗಳ ಜತೆಗಿರುವವರು ಇದರಲ್ಲಿ ಪರೋಕ್ಷವಾಗಿ ಭಾಗಿಯಾಗಿದ್ದಾರೆ. ಇಂತಹ ಪ್ರಕರಣಗಳಲ್ಲಿ ಸಿಕ್ಕಿಬಿದ್ದಾಗ ಬಿಡಿಸಿಕೊಳ್ಳಲು ಒಬ್ಬರಲ್ಲ ಮತ್ತೊಬ್ಬರು ನೆರವಿಗೆ ಬರುತ್ತಾರೆ. ಹಿಂದೂಗಳು ಸಿಕ್ಕಿಬಿದ್ದರೆ ಬಜರಂಗದಳ, ಮುಸ್ಲಿಂ ಸಿಕ್ಕಿಬಿದ್ದರೆ ಪಿಎಫ್ಐ ಬಿಡಿಸಿಕೊಳ್ಳುತ್ತದೆ. ಅಲ್ಲದೇ ಕಾನೂನಿನ ನೆರವು ನೀಡುತ್ತದೆ. ಇಂತಹ ದುಷ್ಕರ್ಮಿಗಳು ಮುಂದೆ ಆ ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗುವುದರ ಜತೆಗೆ, ತಮ್ಮ ಕೃತ್ಯವನ್ನು ಯಥಾವತ್ತು ಮುಂದುವರಿಸುತ್ತಾರೆ ಎಂದೂ ಅವರು ವಿವರಿಸುತ್ತಾರೆ.

‘ಮೊದಲು ಹಫ್ತಾ ವಸೂಲಿಯ ಹಣ ಸ್ವಾರ್ಥಕ್ಕಷ್ಟೇ ಬಳಕೆಯಾಗುತ್ತಿತ್ತು. ಕಳೆದ ಐದಾರು ವರ್ಷಗಳಲ್ಲಿ ಈ ಹಣ ಸಂಘಟನಾತ್ಮಕ ಚಟುವಟಿಕೆಗೂ ಸಂದಾಯವಾಗುತ್ತಿದೆ. ಮಾಫಿಯಾ ಮಾತ್ರವಲ್ಲದೇ, ಕೋಮು ಸಂಘರ್ಷ, ಗೋಸಾಗಣೆಯ ದಾಂಧಲೆ, ಭಿನ್ನ ಧರ್ಮಕ್ಕೆ ಸೇರಿದ ಯುವ ಜೋಡಿಗಳ ಮೇಲೆ ಹಲ್ಲೆ ನಡೆಸುವ, ಕಿರುಕುಳ ನೀಡುವ ಪ್ರಕರಣಗಳಲ್ಲಿ ಭಾಗಿಯಾಗುವ ಪುಂಡರಿಗೆ ಕಾನೂನಿನ ನೆರವು ನೀಡಲು ಈ ಹಣ ದೊಡ್ಡಮಟ್ಟದಲ್ಲಿ ಬಳಕೆಯಾಗುತ್ತಿದೆ. ಆರೋಪಕ್ಕೆ ಒಳಗಾದ ವ್ಯಕ್ತಿಗಳಿಗೆ ಕಾನೂನಿನ ನೆರವು, ಆರೋಪಿ ಜೈಲಿನಿಂದ ಹೊರಬರುವವರೆಗೆ ಆತನ ಕುಟುಂಬಕ್ಕೆ ಆರ್ಥಿಕ ನೆರವು, ಆರೋಪ ಮುಕ್ತನಾಗುವವರೆಗೆ ಕಾನೂನು ಹೋರಾಟ ನಡೆಸಲು ಹಣ ಸಹಾಯವನ್ನು ಸಂಘಪರಿವಾರ ಹಾಗೂ ಪಿಎಫ್ಐ ಮಾಡುತ್ತಿವೆ. ಹಿಂಸಾಕೃತ್ಯದಲ್ಲಿ ಭಾಗಿಯಾಗುವವರಿಗೆ ಈ ಮಾದರಿಯ ನೆರವು ಸಿಗುತ್ತಿರುವುದರಿಂದಾಗಿ, ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದರು.

‘ಮರಳು, ಗಾಂಜಾ ಮಾಫಿಯಾ, ಬಡ್ಡಿ ವ್ಯವಹಾರ ಇಲ್ಲಿ ಜೋರಾಗಿದೆ. ಇವೇ ಜಿಲ್ಲಾಡಳಿತವನ್ನು ನಿಯಂತ್ರಿಸುತ್ತಿವೆ. ವೈಯಕ್ತಿಕ, ವ್ಯಾವಹಾರಿಕ ಕಾರಣಕ್ಕೆ ನಡೆಯುವ ಕೊಲೆಗಳು ಕೋಮು ಬಣ್ಣ ಪಡೆಯುತ್ತಿವೆ’ ಎಂದು ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲು ಹೇಳುತ್ತಾರೆ.

‘ಪ್ರೇಮದ ಹೆಸರಿನಲ್ಲಿ ನಮ್ಮ ಹುಡುಗಿಯರನ್ನು ಮುಸ್ಲಿಂ ಯುವಕರು ಮರಳು ಮಾಡಿ ಕರೆದೊಯ್ಯುವುದನ್ನು ತಡೆಯುವುದು ಹಾಗೂ ಗೋ ರಕ್ಷಣೆ ಮಾಡುವುದು ಹಿಂದೂ ಸಮಾಜಕ್ಕಾಗಿ ಮಾಡುತ್ತಿರುವ ಕೆಲಸ. ಹೀಗೆ ಸಮಾಜಕ್ಕಾಗಿ ದುಡಿದವರಿಗೆ ವಕೀಲರಿಂದ ನೆರವು ಕೊಡಿಸುತ್ತೇವೆ. ಅದರಲ್ಲಿ ತಪ್ಪೇನಿದೆ’ ಎಂದು ಪ್ರತಿಪಾದಿಸುವ ಬಿಜೆಪಿ ಹಿಂದುಳಿದ ಮೋರ್ಚಾದ ಉಪಾಧ್ಯಕ್ಷ ಸತ್ಯಜಿತ್ ಸುರತ್ಕಲ್‌, ‘ಹಿಂದೂ ಜಾಗರಣಾ ವೇದಿಕೆ ಸೇರಿದಂತೆ ಸಂಘಪರಿವಾರದ ಸಂಘಟನೆಗಳಲ್ಲಿ ಗುರುತಿಸಿಕೊಂಡವರ ಮೇಲೆ ನಾನಾ ಕಾರಣಕ್ಕೆ ಪ್ರಕರಣಗಳು ಇರುತ್ತವೆ. ಅವರಿಗೆ ಬೇರೆ ಕಡೆ ಕೆಲಸ ಸಿಗುವುದಿಲ್ಲ. ಅಂತಹವರಿಗೆ ನಾನು ನಡೆಸುತ್ತಿರುವ ಶಕ್ತಿ ಟೆಕ್‌ ಕೇಬಲ್ಸ್‌ನಲ್ಲಿ (ಟಿ.ವಿ. ಕೇಬಲ್‌) ಕೆಲಸ ಕೊಟ್ಟಿದ್ದೇನೆ’ ಎಂದೂ ಹೇಳುತ್ತಾರೆ.

ಈ ಬೆಳವಣಿಗೆಗಳ ಕುರಿತು ಬಜರಂಗದಳದ ದಕ್ಷಿಣ ಪ್ರಾಂತ್ಯ ಸಂಚಾಲಕ ಶರಣ್ ಪಂಪ್‌ವೆಲ್‌ ಜೊತೆ ಮಾತಿಗೆ ಕುಳಿತಾಗ, ‘ಭಯೋತ್ಪಾದಕರು ಮತ್ತು ದೇಶದ್ರೋಹಿಗಳ ಪರವಾಗಿ ವಾದ ಮಾಡುವ ವಕೀಲರು ಈ ದೇಶದಲ್ಲಿ ಇದ್ದಾರೆ. ಹಾಗಿರುವಾಗ ಧರ್ಮ ರಕ್ಷಣೆಯ ಕೆಲಸದಲ್ಲಿ ನಿರಂತರಾಗಿ ಕೊಲೆ ಆರೋಪ ಹೊತ್ತವರಿಗೆ ಕಾನೂನಿನ ನೆರವು ಕೊಡುವುದರಲ್ಲಿ ತಪ್ಪೇನು. ಗೋವು ಸಾಗಣೆ ತಡೆ, ಹೆಣ್ಣು ಮಕ್ಕಳ ರಕ್ಷಣೆಗೆ ಮುಂದಾಗುವುದು ಸಮಾಜದ ಕೆಲಸ. ಅಂತಹವರಿಗೆ ಕಾನೂನು ನೆರವು ನೀಡುತ್ತೇವೆ. ನನ್ನದೇ ಭದ್ರತಾ ಏಜೆನ್ಸಿಯಲ್ಲಿ 100ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಾರೆ. ಇಲ್ಲಿ 25ಕ್ಕೂ ಹೆಚ್ಚು ಮಂದಿ ಬಜರಂಗದಳ ಕಾರ್ಯಕರ್ತರಿದ್ದಾರೆ. ಕೆಲಸ ಬೇರೆ, ಸಂಘಟನೆ ಬೇರೆ’ ಎಂದರು.

ಪಿಎಫ್ಐನ ಅಬ್ದುಲ್ ರಜಾಕ್ ಕೆಮ್ಮರ ಇದನ್ನು ಒಪ್ಪುವುದಿಲ್ಲ. ‘ಯಾವುದೇ ಆರೋಪಿಗೆ ಪಿಎಫ್‌ಐ ನೆರವು ನೀಡಿಲ್ಲ. ಅವೆಲ್ಲ ಆಧಾರ ರಹಿತ ಆರೋಪಗಳು. ನಮ್ಮ ಸಂಘಟನೆಗೆ ಕಳಂಕ ತರುವ ಉದ್ದೇಶದಿಂದ ಬಿಜೆಪಿ, ಕಾಂಗ್ರೆಸ್ ನಾಯಕರು ಇಂತಹ ಆರೋಪ ಮಾಡುತ್ತಾರೆ’ ಎಂದು ಹರಿಹಾಯುತ್ತಾರೆ.

ಎಸ್‌ಡಿಪಿಐನ ಹನೀಫ್ ಖಾನ್ ಕೊಡಾಜೆ ಇದನ್ನು ಬೇರೊಂದು ರೀತಿ ವಿವರಿಸುತ್ತಾರೆ. ‘ಕರಾವಳಿಯಲ್ಲಿ ಮರಳು, ಗಾಂಜಾ ಮಾಫಿಯಾ ದೊಡ್ಡ ಪ್ರಮಾಣದಲ್ಲಿದ್ದು, ಈ ವ್ಯವಹಾರದ ಪೈಪೋಟಿಗಾಗಿ ಅನೇಕ ಬಾರಿ ಘರ್ಷಣೆ ನಡೆದಿದೆ. ಮರಳು, ಗಾಂಜಾ ಮಾಫಿಯಾದಲ್ಲಿ ಸಕ್ರಿಯವಾಗಿರುವ ಸಫ್ವಾನ್ ಗುಂಪಿನ ಜತೆ ನೌಶಾದ್ ಇದ್ದರು. ಆತ ನಮ್ಮ ಪಕ್ಷದಲ್ಲಿ ಇರಲೇ ಇಲ್ಲ. ಆದರೆ ಪ್ರಕರಣವೊಂದರಲ್ಲಿ ಬಂಧನವಾದ ಬಳಿಕ ಆತ ನಮ್ಮ ಪಕ್ಷದ ಸದಸ್ಯ ಎಂದು ಬಿಂಬಿಸಲಾಯಿತು. ನಮ್ಮ ಪಕ್ಷ ಆರೋಪಿಗಳಿಗೆ ಸಹಾಯ ಮಾಡಿಲ್ಲ. ಅನೇಕ ಪ್ರಕರಣಗಳಲ್ಲಿ ನಿರಪರಾಧಿಗಳು, ಮುಗ್ಧರ ಮೇಲೆ ಮೊಕದ್ದಮೆ ಹಾಕಿದಾಗ ನಾವೇ ವಕೀಲರನ್ನಿಟ್ಟು ಬಿಡಿಸಿಕೊಂಡು ಬಂದಿದ್ದೇವೆ. ಕಾನೂನು ನೆರವು ನೀಡುತ್ತೇವೆ’ ಎಂದು ಪ್ರತಿಪಾದಿಸುತ್ತಾರೆ.

ಸಂಘಪರಿವಾರದ ಕಾರ್ಯಕರ್ತರಿಂದ ಹತ್ಯೆಯಾದ ನಾವೂರು ಹರೀಶ್ ಪೂಜಾರಿ, ತಂಗಿಯಿಂದ ಹತ್ಯೆಯಾದ ಕುತ್ತಾರಿನ ಕೀರ್ತಿರಾಜ್‌ ಇಬ್ಬರ ಪ್ರಕರಣ ಇಲ್ಲಿ ಉಲ್ಲೇಖಿಸಬೇಕು. ಈ ಇಬ್ಬರ ಕೊಲೆಗಳೂ ಒಂದೇ ರೀತಿಯಲ್ಲಾಗಿತ್ತು. ಇವರಿಬ್ಬರು ಹಿಂದೂ ಎಂಬ ಕಾರಣಕ್ಕೆಇದು ಪಿಎಫ್‌ಐ ಕೃತ್ಯ ಎಂದು ಬಜರಂಗದಳ, ಹಿಂಜಾವೇ ಸಂಘಟನೆಗಳು ಕೂಗೆಬ್ಬಿಸಿದವು. ಆದರೆ, ಪೊಲೀಸರ ತನಿಖೆಯಿಂದ ಸತ್ಯ ಬಯಲಾಯಿತು.

ಇದೇ ರೀತಿ ರೌಡಿ ಗುಂಪುಗಳ ನಡುವಿನ ಘರ್ಷಣೆ, ಭೂಗತ ಜಗತ್ತಿನ ನಂಟಿನ ಕಾರಣಕ್ಕೆ ಕೆಲವು ಮುಸ್ಲಿಮರ ಕೊಲೆಗಳು ಆದಾಗ ಅದನ್ನು ಬಜರಂಗದಳ, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ತಲೆಗೆ ಕಟ್ಟಲು ಪಿಎಫ್‌ಐ, ಎಸ್‌ಡಿಪಿಐ ಯತ್ನಿಸಿದ್ದೂ ಇದೆ.

ಯಾವುದೇ ಘರ್ಷಣೆ, ಮಾಫಿಯಾ, ಗಲಾಟೆ ಹೀಗೆ ವಿವಿಧ ಪ್ರಕರಣಗಳಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಮೊಕದ್ದಮೆ ದಾಖಲಿಸಿದರೆ ಪ್ರಕರಣಗಳು ಸಾಕಷ್ಟು ಕಡಿಮೆಯಾಗುತ್ತವೆ. ಇದಕ್ಕೆ ಕೋಮು ಮತ್ತು ರಾಜಕೀಯ ಬಣ್ಣ ಬಳಿಯುತ್ತಿರುವುದರಿಂದ ಪೊಲೀಸರು ಕೈ ಕಟ್ಟಿ ಕುಳಿತಿದ್ದಾರೆ ಎಂಬ ಟೀಕೆ ಸಾಮಾನ್ಯವಾಗಿದೆ.

ಮುಸ್ಲಿಮರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರೆ ಸರ್ಕಾರ, ಸಚಿವರು ಅವರ ಪರವಾಗಿ ನಿಲ್ಲುತ್ತಾರೆ ಎಂಬ ಆಕ್ರೋಶ ಬಜರಂಗದಳ, ಹಿಂಜಾವೇ ನಾಯಕರದ್ದಾಗಿದೆ. ಗೋಹತ್ಯೆ ಮಾಡುವವರು ಹಾಗೂ ಹುಡುಗಿಯರನ್ನು ವಂಚಿಸುವ ಮುಸ್ಲಿಮರ ಮೇಲೆ ಪ್ರಕರಣವನ್ನೇ ದಾಖಲಿಸುವುದಿಲ್ಲ. ಹಿಂದೂಗಳು ಸಣ್ಣಪುಟ್ಟ ಗಲಾಟೆಯಲ್ಲಿ ಪಾಲ್ಗೊಂಡರೆ ದೊಡ್ಡ ಕೇಸು ಹಾಕುತ್ತಾರೆ. ದಶಕಗಳಿಂದ ಹೀಗೆ ನಡೆದು ಬಂದಿದೆ. ಇಂತಹ ಹೊತ್ತಿನಲ್ಲಿ ಹಿಂದೂಗಳ ಪರ ಬಜರಂಗದಳ, ಬಿಜೆಪಿ ನಿಲ್ಲುವುದರಿಂದಾಗಿ ತಳಸ್ತರಕ್ಕೆ ಸೇರಿದ ಯುವಕರಿಗೆ ಈ ಸಂಘಪರಿವಾರದ ಸಂಘಟನೆಯ ಜತೆ ಸಂಪರ್ಕ ಹಾಗೂ ಸಂಬಂಧ ಬೆಳೆದಿದೆ. ಒಮ್ಮೆ ಕೇಸು ಬಿದ್ದವರು ಆ ಸಂಘಟನೆಯ ಜತೆ ಗುರುತಿಸಿಕೊಳ್ಳುತ್ತಾರೆ. ಈ ರೀತಿ ಭೇದಭಾವ ಮಾಡುವುದನ್ನು ಕಾಂಗ್ರೆಸ್ ನಿಲ್ಲಿಸಿದ್ದರೆ ಪರಿಸ್ಥಿತಿ ಈ ಮಟ್ಟಿಗೆ ಹೋಗುತ್ತಿರಲಿಲ್ಲ ಎಂಬ ಅಭಿಪ್ರಾಯ ಬಲವಾಗಿದೆ.

ಪೊಲೀಸ್ ಮತ್ತು ಧರ್ಮ

ಕರಾವಳಿಯ ಒಟ್ಟು ಪೊಲೀಸ್ ಬಲದಲ್ಲಿ ಮುಸ್ಲಿಮರ ಸಂಖ್ಯೆ ಕಡಿಮೆ ಇರುವುದು ಸಮಸ್ಯೆ ಉಲ್ಬಣವಾಗಲು ಮತ್ತೊಂದು ಕಾರಣ.

‘ಕೆಲವು ಠಾಣೆಗಳಲ್ಲಿ 2–3 ಮುಸ್ಲಿಂ ಸಿಬ್ಬಂದಿ ಇಲ್ಲ. ಹಿಂದೂಗಳೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಯಾವುದೇ ಮುಸ್ಲಿಂ ದೂರು ಕೊಡಲು ಹೋದರೆ, ಅವರನ್ನು ಅನುಮಾನದಿಂದ ನೋಡುವ ಪರಿಸ್ಥಿತಿ ಇದೆ. ಮುಸ್ಲಿಮರಿಗೆ ಅಭದ್ರತೆ ಇದೆ ಎಂಬ ಭಾವನೆ ಇದರಿಂದ ಬಂದಿದೆ. ಪಿಎಫ್ಐ ವ್ಯಾಪಕವಾಗಿ ತನ್ನ ಜಾಲವನ್ನು ವಿಸ್ತರಿಸಿಕೊಳ್ಳಲು ಇದೂ ಒಂದು ಕಾರಣವಾಗಿದೆ’ ಎಂದು ಕಮಿಷನರೇಟ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಎಷ್ಟೇ ಬಡತನವಿದ್ದರೂ ಪೊಲೀಸರ ನೇಮಕಾತಿಯಲ್ಲಿ ಮುಸ್ಲಿಮರು ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಪೊಲೀಸರಲ್ಲಿ ಮುಸ್ಲಿಮರ ಸಂಖ್ಯೆ ಕಡಿಮೆ ಎಂದೂ ಅವರು ತಿಳಿಸಿದರು.

ಹಿರಿಯ ಅಧಿಕಾರಿಗಳನ್ನು ಬದಲಾವಣೆ ಮಾಡಲಾಗುತ್ತಿದೆ ವಿನಾ 10–15 ವರ್ಷಗಳಿಂದ ಒಂದೇ ಠಾಣೆಯಲ್ಲಿ ಝಂಡಾ ಹೊಡೆದು ಕುಳಿತ ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಿಲ್ಲ. ಒಂದೇ ಜಾಗದಲ್ಲಿರುವುದರಿಂದ ಪೊಲೀಸರು ಸ್ಥಳೀಯ ದುಷ್ಕರ್ಮಿಗಳ ಜತೆ ಅನೈತಿಕ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇಡೀ ಪೊಲೀಸ್ ವ್ಯವಸ್ಥೆಗೆ ಅಮೂಲಾಗ್ರ ಬದಲಾವಣೆ ತಂದರೆ ಪರಿಸ್ಥಿತಿ ಸುಧಾರಿಸಬಹುದು ಎನ್ನುತ್ತಾರೆ ಅವರು.

ಸುಧೀರ್ ಕುಮಾರ್ ರೆಡ್ಡಿ ಎತ್ತಂಗಡಿ ಹಿಂದೆ ಮಾಫಿಯಾ?

ಮಾಫಿಯಾದಿಂದ ಬರುವ ಹಣಕ್ಕೂ, ಕೋಮುವಾದಿ ಸಂಘಟನೆಗಳ ಬಲವರ್ಧನೆಗೂ ಅಂತರ್ ಸಂಬಂಧ ಇದೆ ಎಂದು ಖಚಿತ ಪಡಿಸಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಹಿಂದಿನ ಎಸ್‌ಪಿ ಸಿ.ಎಚ್‌.ಸುಧೀರ್ ಕುಮಾರ್ ರೆಡ್ಡಿ ಕೆಲವು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡಿದ್ದರು. ಈ ಸಂಘಟನೆಗಳ ಚಟುವಟಿಕೆಯನ್ನು ಹತ್ತಿಕ್ಕಬೇಕಾದರೆ ಅದಕ್ಕೆ ಬರುತ್ತಿರುವ ಹಣದ ಮೂಲವನ್ನು ನಿರ್ಬಂಧಿಸಬೇಕು, ಹಣ ಬರುವುದು ತಪ್ಪಿದರೆ ಕಾನೂನು ನೆರವು ಕೊಡುವುದು ನಿಲ್ಲುತ್ತದೆ ಎಂಬ ಕಾರಣಕ್ಕೆ ಮರಳು ಮಾಫಿಯಾವನ್ನು ತುಳಿದು ಹಾಕಿದ್ದರು. ಗಲಾಟೆಯಲ್ಲಿ ಭಾಗಿಯಾದವರರನ್ನು ಮಾತ್ರ ಬಂಧಿಸದೇ ಅವರಿಗೆ ರಕ್ಷಣೆ ನೀಡುವ ಸಂಘಟನೆಗಳ ಪ್ರಮುಖರ ಮೇಲೂ ಮೊಕದ್ದಮೆ ದಾಖಲಿಸಲು ಮುಂದಾಗಿದ್ದರು. ಮಾಫಿಯಾ ನಿಯಂತ್ರಣ ಮಾಡುವಲ್ಲಿ ಬಹುತೇಕ ಯಶಸ್ವಿಯಾಗಿದ್ದ ರೆಡ್ಡಿ ಅವರನ್ನು ಕಾಂಗ್ರೆಸ್, ಬಿಜೆಪಿ, ಸಂಘಪರಿವಾರ, ಪಿಎಫ್ಐ ಎಂಬ ಭೇದವನ್ನು ಮರೆತು, ಎಲ್ಲರೂ ಒಂದಾಗಿ ಕೇವಲ ಆರೇ ತಿಂಗಳಲ್ಲಿ ಬೆಳಗಾವಿಗೆ ಎತ್ತಂಗಡಿ ಮಾಡಿಸಿದರು ಎಂಬ ಟೀಕೆಗಳೂ ಇವೆ.

ಕಾನೂನು ನೆರವಿಗೆ ಹಫ್ತಾ ವಸೂಲಿ ದುಡ್ಡು?

ಎಗ್ಗಿಲ್ಲದೇ ನಡೆಯುತ್ತಿದೆ ಮರಳು ಮಾಫಿಯಾ

ರಾಜಕೀಯ, ಆಡಳಿತ, ಮಾಫಿಯಾಕ್ಕೆ ನಂಟು

ನಾಳಿನ ಸಂಚಿಕೆಯಲ್ಲಿ. .

(ಶೈಕ್ಷಣಿಕ ಹಂತದಲ್ಲೇ ವಿಭಜನೆ–ಮತಾಂಧ ಭಾವನೆ)

ಪ್ರತಿಕ್ರಿಯಿಸಿ (+)