ಶುಕ್ರವಾರ, ಡಿಸೆಂಬರ್ 13, 2019
27 °C

ಕ್ರಿಕೆಟ್: ಯುವಶಕ್ತಿಯ ಉತ್ತುಂಗ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್: ಯುವಶಕ್ತಿಯ  ಉತ್ತುಂಗ ಸಾಧನೆ

‘ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು...’ ಎಂಬ ಮಂಕುತಿಮ್ಮನ ಕಗ್ಗದ ಈ ಸಾಲು 19 ವರ್ಷದೊಳಗಿನವರ ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಅಕ್ಷರಶಃ ಅನ್ವಯಿಸುತ್ತದೆ. ಅನುಭವಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಯುವಪಡೆಯು ಈಚೆಗೆ ನ್ಯೂಜಿಲೆಂಡ್‌ನ ಮೌಂಟ್‌ ಮಾಂಗನೂಯಿಯಲ್ಲಿ ಹೊಸ ದಾಖಲೆ ಬರೆಯಿತು. ಈ  ವಯೋಮಿತಿಯ ವಿಭಾಗದಲ್ಲಿ ನಾಲ್ಕನೇ  ಬಾರಿ ಪ್ರಶಸ್ತಿ ಗೆದ್ದಿತು.

ಆಸ್ಟ್ರೇಲಿಯಾ ಮೂರು ಬಾರಿ ಈ ಸಾಧನೆ ಮಾಡಿದೆ. 1988ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿ ಆರಂಭವಾಗಿತ್ತು. ಆಗ ಆಸ್ಟ್ರೇಲಿಯಾ ಚಾಂಪಿಯನ್ ಆಗಿತ್ತು. ಅದರ ನಂತರ ಹತ್ತು ವರ್ಷ ಟೂರ್ನಿ ನಡೆಯಲಿಲ್ಲ. 1998ರಿಂದ ಎರಡು ವರ್ಷಗಳಿಗೊಮ್ಮೆ ಈ ಟೂರ್ನಿ ಆಯೋಜನೆಯಾಗುತ್ತಿದೆ.

2000ನೇ ಇಸವಿಯಲ್ಲಿ ಮೊಹಮ್ಮದ್ ಕೈಫ್ ಬಳಗವು ಮೊದಲ ಬಾರಿ ಈ ವಿಶ್ವಕಪ್ ಗೆದ್ದಾಗ ಭಾರತದ ಕ್ರಿಕೆಟ್‌ನ ಯುವಶಕ್ತಿ ಅನಾವರಣಗೊಂಡಿತ್ತು. ನಂತರ ವಿರಾಟ್ ಕೊಹ್ಲಿ (2008) ಮತ್ತು ಉನ್ಮುಕ್ತ್ ಚಾಂದ್ (2012) ನಾಯಕತ್ವದ ತಂಡಗಳು ವಿಶ್ವಕಪ್ ಜಯಿಸಿದ್ದವು. ಇದೀಗ ಅವರ ಸಾಲಿನಲ್ಲಿ ಪೃಥ್ವಿ ಶಾ ಬಳಗ ನಿಂತಿದೆ.

ಈ ಸಲ ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ಶುಭಮನ್ ಗಿಲ್, ಫೈನಲ್ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿದ್ದ ಮನ್ಜೋತ್ ಕಾಲ್ರಾ, ಅತಿಹೆಚ್ಚು ವಿಕೆಟ್ ಗಳಿಸಿದ ಎಡಗೈ ಸ್ಪಿನ್ನರ್ ಅನುಕೂಲ್ ರಾಯ್ (14 ವಿಕೆಟ್), ವೇಗದ ಬೌಲರ್‌ಗಳಾದ ಶಿವಂ ಮಾವಿ, ಇಶಾನ್ ಪೊರೆಲ್, ಕಮಲೇಶ್ ನಾಗರಕೋಟಿ ಭವಿಷ್ಯದ ತಾರೆಗಳಾಗುವ ಭರವಸೆ ಮೂಡಿಸಿದ್ದಾರೆ. ಟೂರ್ನಿಯ ‘ಬಿ’ ಗುಂಪಿನಲ್ಲಿ ಭಾರತ ತಂಡವು ಅಗ್ರಸ್ಥಾನ ಪಡೆದಿತ್ತು.

ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ, ಜಿಂಬಾಬ್ವೆ, ಕ್ರಿಕೆಟ್ ಅಂಗಳದ ಕೂಸು ಪಪುವಾ ನ್ಯೂಗಿನಿ ತಂಡಗಳನ್ನು ಸೋಲಿಸಿತ್ತು. ಕ್ವಾರ್ಟರ್‌ಫೈನಲ್‌ನಲ್ಲಿ ಬಾಂಗ್ಲಾ ತಂಡವನ್ನೂ ಸೋಲಿಸಿತ್ತು. ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡದ ಸವಾಲನ್ನೂ ಶಾ ಬಳಗ ಮೀರಿನಿಂತಿತು.

ಶುಭಮನ್ ಬಾರಿಸಿದ್ದ ಅಜೇಯ ಶತಕ ಫೈನಲ್‌ ದಾರಿಯನ್ನು ಸುಗಮಗೊಳಿಸಿತ್ತು. ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡದ ಸವಾಲನ್ನು ಮೆಟ್ಟಿ ನಿಲ್ಲಲು ಕೋಚ್ ರಾಹುಲ್ ದ್ರಾವಿಡ್ ಅವರ ಶಿಸ್ತಿನ ಮಾರ್ಗದರ್ಶನ ಮತ್ತು ಯೋಜನೆಗಳು ಕಾರಣವಾದವು. ತಂಡದ ಪ್ರತಿಯೊಬ್ಬ ಆಟಗಾರನ ಸಾಮರ್ಥ್ಯ ಮತ್ತು ಪ್ರತಿಭೆಗೆ ತಕ್ಕ ಅವಕಾಶ ನೀಡಿದರು. ಅದಕ್ಕಾಗಿಯೇ ಪ್ರಶಸ್ತಿ ಗೆದ್ದ ನಂತರ ಆಟಗಾರರೆಲ್ಲರೂ ‘ದ್ರಾವಿಡ್ ಸರ್’ ಗುಣಗಾನ ಮಾಡಿದ್ದರು. ಆದರೆ ಯಶಸ್ಸಿನ ಶ್ರೇಯವೆಲ್ಲವೂ ಹುಡುಗರದ್ದೇ ಎಂದು ಕೋಚ್ ಪ್ರತಿಕ್ರಿಯಿಸಿದ್ದು ತಂಡದಲ್ಲಿರುವ ಉತ್ತಮ ವಾತಾವರಣವನ್ನು

ಪ್ರತಿಬಿಂಬಿಸಿತ್ತು. 2016ರಲ್ಲಿ ಢಾಕಾದಲ್ಲಿ ನಡೆದಿದ್ದ ಫೈನಲ್‌ನಲ್ಲಿ ಇಶಾನ್ ಕಿಶನ್ ನಾಯಕತ್ವದ ಪಡೆಯು ವೆಸ್ಟ್‌ ಇಂಡೀಸ್ ಎದುರು ಸೋತಿತ್ತು. ಆಗಲೂ ರಾಹುಲ್ ಕೋಚ್ ಆಗಿದ್ದರು. ಆ ನಿರಾಸೆಯ ಕೊರಗನ್ನು ಈಗ ನಿವಾರಿಸಿಕೊಂಡಿದ್ದಾರೆ. ಈ ಸಲದ ತಂಡದಲ್ಲಿ ಕರ್ನಾಟಕದ ಆಟಗಾರರು ಇಲ್ಲದ ಕೊರತೆಯನ್ನೂ ಅವರು ನೀಗಿಸಿದರು. ಜೂನಿಯರ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ, ಕನ್ನಡಿಗ ವೆಂಕಟೇಶ್ ಪ್ರಸಾದ್ ಅವರಿಗೂ ಈ ಯಶಸ್ಸಿನಲ್ಲಿ ಪಾಲು ಸಲ್ಲಬೇಕು.

ಆದರೆ ಆಟಗಾರರು ಇಷ್ಟಕ್ಕೇ ಮೈಮರೆಯಬಾರದು. ಏಕೆಂದರೆ, ಇಂದಿನ ಕ್ರಿಕೆಟ್‌ ರಂಗದಲ್ಲಿ ವಿಪರೀತ ಪೈಪೋಟಿ ಇದೆ. ದೇಶಿ ಟೂರ್ನಿಗಳು, ವಯೋಮಿತಿಯ ಟೂರ್ನಿಗಳು ಮತ್ತು ಐಪಿಎಲ್‌ಗಳಲ್ಲಿ ಆಡುವವರ ಏಕೈಕ ಗುರಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವುದೇ ಆಗಿರುತ್ತದೆ.

ಒಂದೊಮ್ಮೆ ಸ್ಥಾನ ಸಿಕ್ಕರೆ ನಿರಂತರವಾಗಿ ಶ್ರೇಷ್ಠ ಆಟವಾಡಲೇಬೇಕು. ಆದ್ದರಿಂದ 19 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿ ಯುವಪ್ರತಿಭೆಗಳಿಗೆ ಒಂದು ವೇದಿಕೆ ಮಾತ್ರ. ಇಲ್ಲಿಯ ವಿಶ್ವಕಪ್ ವಿಜಯದ ಸಾಧನೆ ಅಂತಿಮವಲ್ಲ. ಅದು ಹೊಸ ಸವಾಲಿಗೆ ಸಿದ್ಧಗೊಳ್ಳುವ ಪ್ರಕ್ರಿಯೆಯ ಆರಂಭ.

ಪ್ರತಿಕ್ರಿಯಿಸಿ (+)