ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಡಿಪಿ–ಬಿಜೆಪಿ ವಿಚ್ಛೇದನ ಅನಿವಾರ್ಯ

ಮಿತ್ರಪಕ್ಷಗಳ ನಡುವಣ ಅವಿಶ್ವಾಸ ಮುಗಿದ ಕತೆಯೇನೂ ಅಲ್ಲ
Last Updated 5 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ವಿಜಯವಾಡದಲ್ಲಿ ಭಾನುವಾರ ನಡೆದ ತೆಲುಗುದೇಶಂ ಪಾರ್ಟಿಯ (ಟಿಡಿಪಿ) ಸಂಸದೀಯ ಪಕ್ಷದ ಸಭೆ ಯೋಜನೆಯಂತೆಯೇ ನಡೆಯಿತು ಎಂದು ಪಕ್ಷದ ಸಂಸದರೊಬ್ಬರು ಹೇಳುವ ಮೂಲಕ ಗುಟ್ಟು ರಟ್ಟಾಗಿಸಿದರು. ಸಿಟ್ಟಾಗಿರುವ ಚಂದ್ರಬಾಬು ನಾಯ್ಡು ಅವರನ್ನು ಬಿಜೆಪಿಯ ಕೇಂದ್ರ ನಾಯಕತ್ವ ಮನವೊಲಿಸುವಂತೆ ಒತ್ತಡ ಹೇರುವುದಕ್ಕಾಗಿ ಸಾಕಷ್ಟು ಸದ್ದು ಮಾಡುವುದು ಮತ್ತು ಈ ಸದ್ದು ಭಾರಿ ದೊಡ್ಡದಾಗಿ ಕೇಳುವಂತೆ ಮಾಡಲು ಪ್ರಾದೇಶಿಕ ಮತ್ತು ರಾಷ್ಟ್ರ ಮಟ್ಟದ ಮಾಧ್ಯಮವನ್ನು ಬಳಸಿಕೊಳ್ಳುವುದು ಟಿಡಿಪಿಯ ಯೋಜನೆಯಾಗಿತ್ತು.

ಆಂಧ್ರಪ್ರದೇಶವನ್ನು 2014ರಲ್ಲಿ ವಿಭಜಿಸಿ ತೆಲಂಗಾಣ ರಾಜ್ಯ ಸೃಷ್ಟಿಸಿದ ಬಳಿಕ ಆಂಧ್ರಪ್ರದೇಶ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಆದರೆ, ಕೇಂದ್ರ ಬಜೆಟ್‌ನಲ್ಲಿ ಆಂಧ್ರಪ್ರದೇಶದ ಬೇಡಿಕೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂಬುದು ಟಿಡಿಪಿಯ ಅಸಮಾಧಾನಕ್ಕೆ ಕಾರಣ.

ಟಿಡಿಪಿಯ ಕಾರ್ಯತಂತ್ರ ಫಲ ನೀಡಿತು. ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಟಿಡಿಪಿ ಸಂಸದೀಯ ಪಕ್ಷದ ಸಭೆ ನಡೆಯುತ್ತಿದ್ದಾಗಲೇ ನಾಯ್ಡು ಅವರಿಗೆ ಕರೆ ಮಾಡಿದರು. ಆ ಬಳಿಕ ಗದ್ದಲವನ್ನು ತೀವ್ರಗೊಳಿಸದಿರಲು ನಿರ್ಧರಿಸಲಾಯಿತು. ತನ್ನ ಮಿತ್ರ ಪಕ್ಷದ ವಿರುದ್ಧವೇ ಹೋರಾಟ ಮಾಡುತ್ತಿರುವುದಾಗಿ ಆಂಧ್ರದ ಜನರಿಗೆ ತೋರಿಸಲು ಸಂಸತ್ತಿನಲ್ಲಿ ಟಿಡಿ‍ಪಿ ಸಂಸದರು ಪ್ರತಿಭಟನೆ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ. ನಾಯ್ಡು ಅವರು ಎನ್‌ಡಿಎ ಯಿಂದ ಹೊರಗೆ ಹೋಗದಂತೆ ಅವರನ್ನು ಹೇಗೆ ಸಾಂತ್ವನಪಡಿಸಬೇಕು ಎಂಬುದನ್ನು ನಿರ್ಧರಿಸಲು ಕೇಂದ್ರ ಸರ್ಕಾರಕ್ಕೆ ಇಡೀ ವಾರದ ಕಾಲಾವಕಾಶ ಇದೆ.

ಆಂಧ್ರಪ್ರದೇಶ ವಿಧಾನಸಭೆ ಗೆಲುವು ಮತ್ತು ಲೋಕಸಭೆಯ 25 ಸ್ಥಾನಗಳ ಪೈಕಿ 17 ಕ್ಷೇತ್ರಗಳಲ್ಲಿ ಟಿಡಿಪಿ–ಬಿಜೆಪಿ ಮೈತ್ರಿಕೂಟ ಗೆದ್ದ ನಾಲ್ಕು ವರ್ಷ ಬಳಿಕ ಈಗ ಮಿತ್ರ ಪಕ್ಷಗಳ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಮೈತ್ರಿಕೂಟವೇ ಅಧಿಕಾರದಲ್ಲಿದ್ದರೂ ಆಂಧ್ರಪ್ರದೇಶ ಪುನರ್‌ವಿಂಗಡನೆ ಕಾಯ್ದೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲಾಗಿಲ್ಲ ಎಂದು ಟಿಡಿಪಿಯ ಮುಖಂಡರು ಹೇಳುತ್ತಿದ್ದಾರೆ.

ತಳಮಟ್ಟದಲ್ಲಿ ಎರಡೂ ಪಕ್ಷಗಳ ನಡುವೆ ಅಂತಹ ಸಾಮರಸ್ಯವೇನೂ ಉಳಿದಿಲ್ಲ. ವಿಭಜನೆ ಬಳಿಕ ಆಂಧ್ರಪ್ರದೇಶಕ್ಕೆ ಹೆಚ್ಚಿನ ನೆರವು ಬೇಕಾಗಿದೆ ಎಂಬುದನ್ನು ಕೇಂದ್ರ ಸರ್ಕಾರದ ಎಲ್ಲ ಪ್ರಮುಖರಿಗೆ ಹಲವು ಬಾರಿ ಮನದಟ್ಟು ಮಾಡಲಾಗಿದೆ ಎಂದು ಟಿಡಿಪಿ ಹೇಳುತ್ತಿದೆ. ರಾಜಧಾನಿ ಅಮರಾವತಿಯ ನಿರ್ಮಾಣದ ಮೊದಲ ಹಂತಕ್ಕೆ ಬೇಕಿರುವ ₹10 ಸಾವಿರ ಕೋಟಿಯಲ್ಲಿ ಶೇ 25ರಷ್ಟನ್ನು ಮಾತ್ರ ಕೇಂದ್ರ ಈವರೆಗೆ ನೀಡಿದೆ.

ಎರಡನೇ ಅವಧಿಗೆ ಅಧಿಕಾರಕ್ಕೆ ಏರಲು ಬೇಕಿರುವ ಏಣಿ ಎಂದು ನಾಯ್ಡು ಭಾವಿಸಿರುವ ಪೋಲವರಂ ನೀರಾವರಿ ಯೋಜನೆಗೆ ಆಂಧ್ರಪ್ರದೇಶ ಸರ್ಕಾರ ₹7,400 ಕೋಟಿ ವೆಚ್ಚ ಮಾಡಿದೆ. ಕೇಂದ್ರ ಸರ್ಕಾರ ನೀಡಿದ್ದು ₹4,300 ಕೋಟಿ ಮಾತ್ರ. ಹಣ ಇಲ್ಲ ಎಂಬ ಕಾರಣಕ್ಕೆ ಯೋಜನೆಯ ಕೆಲಸ ಮೂರು ತಿಂಗಳಿನಿಂದ ಸಂಪೂರ್ಣವಾಗಿ ನಿಂತುಹೋಗಿದೆ. ವಿಭಜನೆಯ ಸಂದರ್ಭದಲ್ಲಿ ಆಂಧ್ರಪ್ರದೇಶದ ವರಮಾನ ಕೊರತೆ ₹16 ಸಾವಿರ ಕೋಟಿ ಇತ್ತು. ಅದರಲ್ಲಿ ಕೇಂದ್ರ ಸರ್ಕಾರ ತುಂಬಿ ಕೊಟ್ಟದ್ದು ₹4,100 ಕೋಟಿ.

ಆದರೆ, ಬಿಜೆಪಿ ಬೇರೆಯದೇ ಕತೆ ಹೇಳುತ್ತಿದೆ. ‘ರಾಜಕೀಯ ಕಾರ್ಯತಂತ್ರದ ಭಾಗವಾಗಿ ನಾಯ್ಡು ಅವರು ಅನಗತ್ಯ ಹುಯಿಲು ಎಬ್ಬಿಸುತ್ತಿದ್ದಾರೆ’ ಎಂಬುದು ಬಿಜೆಪಿ ವಾದ. ಆಂಧ್ರಪ್ರದೇಶ ಬಿಜೆಪಿಯ ಹಲವು ಮುಖಂಡರು ಮೈತ್ರಿ ಮುಂದುವರಿಸುವ ಬಗ್ಗೆ ಒಲವು ಹೊಂದಿಲ್ಲ.

ಮೈತ್ರಿ ಧರ್ಮವನ್ನು ಟಿಡಿಪಿ ಪಾಲಿಸುತ್ತಿಲ್ಲ ಎಂಬುದು ಅವರ ಆಕ್ಷೇಪ. ಅದಕ್ಕೆ ಅವರು ಕಾಕಿನಾಡ ನಗರಪಾಲಿಕೆ ಚುನಾವಣೆಯ ಉದಾಹರಣೆ ನೀಡುತ್ತಾರೆ. ಚುನಾವಣೆಯಲ್ಲಿ ಮೈತ್ರಿಯ ಭಾಗವಾಗಿ ಬಿಜೆಪಿಗೆ ಬಿಟ್ಟುಕೊಟ್ಟ ಸ್ಥಾನಗಳಲ್ಲಿ ಟಿಡಿಪಿಯ ಬಂಡಾಯ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಗೆದ್ದ ಮೂವರು ಬಂಡಾಯ ಅಭ್ಯರ್ಥಿಗಳು ಬಳಿಕ ಟಿಡಿಪಿ ಸೇರಿಕೊಂಡರು. ಹಾಗಾಗಿಯೇ ನಾಯ್ಡು ಜತೆಗೆ ಹೋಗುವುದು ಎಂದರೆ ರಾಜ್ಯದಲ್ಲಿ ಬಿಜೆಪಿಯನ್ನು ನಿರ್ನಾಮ ಮಾಡುವಂತೆ ಎಂಬುದು ರಾಜ್ಯ ಬಿಜೆಪಿ ಘಟಕದ ಅಭಿಪ್ರಾಯ.

ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳೂ ಸೇರಿ ಎಲ್ಲದರ ಖ್ಯಾತಿಯನ್ನು ಟಿಡಿಪಿಯೇ ಪಡೆದುಕೊಳ್ಳುತ್ತಿದೆ. ಪ್ರಧಾನಿಯ ಹೆಸರನ್ನೂ ಉಲ್ಲೇಖಿಸುತ್ತಿಲ್ಲ ಎಂದು ಹೇಳುವಷ್ಟು ಅವಿಶ್ವಾಸ ತೀವ್ರವಾಗಿದೆ.

ಬಿಜೆಪಿಯ ಕೇಂದ್ರ ನಾಯಕತ್ವ ಕಾಲ ತಳ್ಳುವ ಕೆಲಸ ಮಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಇಲ್ಲ ಎಂದು ಶಿವಸೇನಾ ಘೋಷಿಸಿದ ಬೆನ್ನಿಗೇ ಟಿಡಿಪಿ ಕೂಡ ಮೈತ್ರಿಕೂಟದಿಂದ ಹೊರನಡೆದರೆ ಚೆನ್ನಾಗಿರುವುದಿಲ್ಲ ಎಂಬುದು ಬಿಜೆಪಿಗೆ ಗೊತ್ತು. ನಾಯ್ಡು ಕೂಡ ಬಿಜೆಪಿಗೆ ಸಮಯ ಕೊಟ್ಟಿದ್ದಾರೆ. ಯಾಕೆಂದರೆ, ಮಮತಾ ಬ್ಯಾನರ್ಜಿ ಅಥವಾ ಜಯಲಲಿತಾ ಅವರಂತೆ ಬೀದಿಯಲ್ಲಿ ಕಿತ್ತಾಡುವುದು ನಾಯ್ಡು ಜಾಯಮಾನ ಅಲ್ಲ.

ಆದರೆ, ಎಲ್ಲವೂ ಸರಿ ಇಲ್ಲ ಎಂಬುದು ಸ್ಪಷ್ಟ. ಟಿಡಿಪಿ ಮತ್ತೆ ಮತದಾರರ ಬಳಿಗೆ ಹೋಗಬೇಕಿದೆ ಮತ್ತು ಆಗ, ಆಂಧ್ರಪ್ರದೇಶದ ಹಿತಾಸಕ್ತಿಯನ್ನು ಬಿಜೆಪಿ ಕಡೆಗಣಿಸಿದ್ದರಲ್ಲಿ ತನ್ನ ಪಾತ್ರ ಇಲ್ಲ ಎಂಬುದನ್ನು ಮತದಾರರಿಗೆ ಹೇಳಬೇಕಿದೆ. ಹಾಗಾಗಿ ‘ವಿಚ್ಛೇದನ’ ಅನಿವಾರ್ಯ. ಆಂಧ್ರಪ್ರದೇಶವನ್ನು ನಿರ್ಲಕ್ಷಿಸಲಾಗಿದೆ ಎಂಬುದು ಜನರ ಮನಸ್ಸಲ್ಲಿ ಗಟ್ಟಿಯಾಗಿ ಅಚ್ಚೊತ್ತಿದೆ. ಆದ್ದರಿಂದ, ಎನ್‌ಡಿಎಯನ್ನು ಸಮರ್ಥಿಸಲು ಟಿಡಿಪಿ ಮುಂದಾದರೆ ಅದಕ್ಕೆ ರಾಜಕೀಯ ಬೆಲೆ ತೆರಬೇಕಾಗುತ್ತದೆ. ಹಾಗಾಗಿ, 2019ರಲ್ಲಿ ಅಧಿಕಾರವನ್ನು ಕೈಬಿಡುವುದರ ಬದಲಿಗೆ ಮೋದಿಯನ್ನು ನಾಯ್ಡು ಅವರು ಕೈಬಿಡುತ್ತಾರೆ.

ಆಂಧ್ರಪ್ರದೇಶದಲ್ಲಿ ಮೋದಿ ಮಾಂತ್ರಿಕತೆ ಶಕ್ತಿ ಕಳೆದುಕೊಳ್ಳುತ್ತಿದೆ ಎಂದು ಟಿಡಿಪಿ ಭಾವಿಸಿರುವುದರಿಂದ ಮೈತ್ರಿ ಮುರಿದರೆ ಟಿಡಿಪಿಗೆ ದೊಡ್ಡ ನಷ್ಟವೇನೂ ಇಲ್ಲ. ಒಂದೆಡೆ ಅಧಿಕಾರದಲ್ಲಿ ಇದ್ದುಕೊಂಡೇ ಬಿಜೆಪಿಯನ್ನು ವಿರೋಧಿಸುವ ಮೂಲಕ ವಿರೋಧ ಪಕ್ಷದ ಸ್ಥಾನವನ್ನೂ ತಾನೇ ಪಡೆದುಕೊಳ್ಳಬಹುದು.

ತಿದ್ದಿಕೊಳ್ಳಲು ತಾನು ಬಯಸಿದ್ದೇನೆ ಎಂಬಂತೆ ಬಿಜೆಪಿ ಬಿಂಬಿಸಿಕೊಳ್ಳಬಹುದು. ವಾಸ್ತವ ಏನೆಂದರೆ, ಬಜೆಟ್‌ನಲ್ಲಿ ಆಂಧ್ರಪ್ರದೇಶಕ್ಕೆ ಏನನ್ನೂ ನೀಡದಿರುವುದು ರಾಜಕೀಯ ತೀರ್ಮಾನ. ಅಮರಾವತಿ ಅಥವಾ ಪೋಲವರಂ ಯೋಜನೆಗೆ ಏನನ್ನೂ ನೀಡದೆ ಬೆಂಗಳೂರು ಉಪನಗರ ರೈಲು ಯೋಜನೆಗೆ ₹17 ಸಾವಿರ ಕೋಟಿ ನೀಡುವ ನಿರ್ಧಾರ ಆಂಧ್ರಪ್ರದೇಶ ಕೆರಳಲು ಕಾರಣ. ಕರ್ನಾಟಕದಲ್ಲಿ ಮೇ ಹೊತ್ತಿಗೆ ಚುನಾವಣೆ ನಡೆಯಲಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಅವಕಾಶ ಇದೆ. ಆದರೆ, ಆಂಧ್ರ ಪ್ರದೇಶದ ರಾಜಕಾರಣದಲ್ಲಿ ಬಿಜೆಪಿ ಬಹಳ ಕುಬ್ಜ. ಅದಲ್ಲದೆ, 2019ರ ಲೋಕಸಭೆ ಚುನಾವಣೆ ಬಳಿಕ, ಅಲ್ಲಿ ಅತಿ ಹೆಚ್ಚು ಸ್ಥಾನ ಪಡೆಯುವ ಯಾವುದೇ ಪಕ್ಷದ ಜತೆಗಾದರೂ ಹೊಂದಾಣಿಕೆ ಮಾಡಿಕೊಳ್ಳಲು ಬಿಜೆಪಿಗೆ ಸಮಸ್ಯೆ ಇಲ್ಲ.

ವಿಜಯವಾಡದಲ್ಲಿ ಸೃಷ್ಟಿಯಾದ ಬಿಸಿ ದೆಹಲಿಯ ಮಂಜುಗಡ್ಡೆಯನ್ನು ಸ್ವಲ್ಪ ಮಟ್ಟಿಗೆ ಕರಗಿಸಿರಬಹುದು; ಆದರೆ, ಟಿಡಿಪಿ ಮತ್ತು ಬಿಜೆಪಿ ನಡುವಣ ಸಂಬಂಧದಲ್ಲಿ ಉಂಟಾಗಿರುವ ಚಳಿಯ ತಂಡಿ ಮುಗಿದ ಕತೆಯೇನೂ ಅಲ್ಲ.

(ಲೇಖಕ: ಹಿರಿಯ ಪತ್ರಕರ್ತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT