ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಂಟಿಬಯೊಟಿಕ್ ಮಾರಾಟಕ್ಕೆ ಅಂಕುಶವಿಲ್ಲ

ಸಿಡಿಎಸ್‌ಸಿಒ ಅನುಮತಿ ಪಡೆಯದ ಬಹುರಾಷ್ಟ್ರೀಯ ಕಂಪನಿಗಳು
Last Updated 5 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಬಹುರಾಷ್ಟ್ರೀಯ ಔಷಧ ತಯಾರಕ ಕಂಪನಿಗಳು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ (ಸಿಡಿಎಸ್‌ಸಿಒ) ಅನುಮೋದನೆ ಪಡೆಯ
ದೆಯೇ ಭಾರತದಲ್ಲಿ ಸಾವಿರಾರು ಆ್ಯಂಟಿಬಯೊಟಿಕ್‌ಗಳನ್ನು (ಪ್ರತಿಜೀವಕ) ಮಾರಾಟ ಮಾಡುತ್ತಿವೆ ಎಂದು ಬ್ರಿಟನ್ನಿನ ಅಧ್ಯಯನಕಾರರು ಹೇಳಿದ್ದಾರೆ.

ಲಂಡನ್ನಿನ ಕ್ವೀನ್‌ ಮೇರಿ ವಿಶ್ವವಿದ್ಯಾಲಯ ಮತ್ತು ನ್ಯೂಕ್ಯಾಸಲ್‌ ವಿಶ್ವವಿದ್ಯಾಲಯಗಳ ತಜ್ಞರು ನಡೆಸಿರುವ ಜಂಟಿ ಅಧ್ಯಯನ ಈ ವಿಷಯವನ್ನು ಬಹಿರಂಗ ಪಡಿಸಿದೆ.

118 ಬಗೆಯ ನಿಗದಿತ ಪ್ರಮಾಣದ ಔಷಧದ ಮಿಶ್ರಣವನ್ನು (ಫಿಕ್ಸ್‌ಡ್‌ ಡೋಸ್‌ ಕಾಂಬಿನೇಷನ್ಸ್‌ (ಎಫ್‌ಡಿಸಿ)– ಎರಡಕ್ಕಿಂತ ಹೆಚ್ಚು ಔಷಧವನ್ನು ಒಂದೇ ಮಾತ್ರೆಯಲ್ಲಿ ಸೇರಿಸುವುದು) ಭಾರತದಲ್ಲಿ ಮಾರಾಟ ಮಾಡಲಾಗುತ್ತಿದ್ದು ಈ ಪೈಕಿ ಶೇ 64ರಷ್ಟು ಆ್ಯಂಟಿಬಯೊಟಿಕ್‌ಗಳಿಗೆ ಸಿಡಿಎಸ್‌ಸಿಒ ಅನುಮತಿ ನೀಡಿಲ್ಲ ಎಂದು ಅಧ್ಯಯನ ವರದಿ ಹೇಳಿದೆ.

ಈ 118 ಔಷಧಗಳನ್ನು 500 ಔಷಧ ತಯಾರಿಕಾ ಕಂಪನಿಗಳು 3,300 ಹೆಸರುಗಳಲ್ಲಿ ಮಾರಾಟ ಮಾಡುತ್ತಿವೆ. ಈ ಔಷಧಗಳನ್ನು ತಯಾರಿಸುತ್ತಿರುವವರಲ್ಲಿ ಬಹುರಾಷ್ಟ್ರೀಯ ಕಂಪನಿಗಳೂ ಸೇರಿವೆ.

2011–12ರಲ್ಲಿ ಮಾರಾಟವಾದ  ಎಫ್‌ಡಿಸಿ ಆ್ಯಂಟಿಬಯೊಟಿಕ್‌ಗಳಲ್ಲಿ ಶೇ 34.5ರಷ್ಟನ್ನು ಅನುಮತಿ ಇಲ್ಲದೇ ಮಾರಾಟ ಮಾಡಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಬಹುತೇಕ ಎಫ್‌ಡಿಸಿಗಳು ಎರಡು ಆ್ಯಂಟಿಮೈಕ್ರೋಬಿಯಲ್‌ಗಳನ್ನು (ಸೂಕ್ಷ್ಮಾಣುಜೀವಿಗಳ ವಿರುದ್ಧ ಕಾರ್ಯನಿರ್ವಹಿಸುವ ವಸ್ತು) ಹೊಂದಿರುತ್ತವೆ. ಬಹುತೇಕ ಸಂದರ್ಭಗಳಲ್ಲಿ ಇವುಗಳು ಕಳಪೆ ಗುಣಮಟ್ಟದ್ದಾಗಿರುತ್ತವೆ. ಇವುಗಳು ರೋಗನಿರೋಧಕ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯೇ ಹೆಚ್ಚಿರುತ್ತದೆ.

ಭಾರತದ ಔಷಧ ಮಾರುಕಟ್ಟೆಯಲ್ಲಿರುವ ಎಫ್‌ಡಿಸಿ ಆ್ಯಂಟಿಬಯೊಟಿಕ್‌ ಮತ್ತು ಎಸ್‌ಡಿಎಫ್‌ (ಸಿಂಗಲ್‌ ಡ್ರಗ್‌ ಫಾರ್ಮ್ಯುಲೇಷನ್‌– ಒಂದೇ ಔಷಧದಿಂದ ಮಾಡಿದ ಮಾತ್ರೆ) ಆ್ಯಂಟಿಬಯೊಟಿಕ್‌ಗಳ ಮಾರಾಟ ಅಂಕಿ–ಅಂಶಗಳನ್ನು ಅಧ್ಯಯನದಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ.

‘ಬ್ರಿಟಿಷ್‌ ಜರ್ನಲ್‌ ಆಫ್‌ ಕ್ಲಿನಿಕಲ್‌ ಫಾರ್ಮಕಾಲಜಿ’ಯಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ.

ವರದಿ ಹೇಳುವುದೇನು?

* ಭಾರತದಲ್ಲಿ ಮಾರಾಟವಾದ ಎಫ್‌ಡಿಸಿ, ಎಸ್‌ಡಿಎಫ್‌ಗಳಲ್ಲಿ ಶೇ 20ರಷ್ಟನ್ನು ಬಹುರಾಷ್ಟ್ರೀಯ ಕಂಪನಿಗಳು ತಯಾರಿಸಿವೆ

* ಇವುಗಳಲ್ಲಿ 28 ಎಫ್‌ಡಿಸಿಗಳಿಗೆ ಸಿಡಿಎಸ್‌ಸಿಒ ಅನುಮತಿ ನೀಡಿದ ಬಗ್ಗೆ ದಾಖಲೆಗಳಿಲ್ಲ

* ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ತಯಾರಿಸಿದ 53 ಎಫ್‌ಡಿಸಿಗಳ ಪೈಕಿ ಕೇವಲ ನಾಲ್ಕಕ್ಕೆ ಮಾತ್ರ ಬ್ರಿಟನ್‌ ಅಥವಾ ಅಮೆರಿಕದಲ್ಲಿ ಅನುಮತಿ ಸಿಕ್ಕಿದೆ

* ಬಹುರಾಷ್ಟ್ರೀಯ ಕಂಪನಿಗಳು ತಯಾರಿಸಿರುವ ಶೇ 94ರಷ್ಟು ಎಸ್‌ಡಿಎಫ್‌ಗೆ ಸಿಡಿಎಸ್‌ಸಿಒ ಅನುಮತಿ ನೀಡಿದೆ. ಶೇ 70ಕ್ಕೆ ಅಮೆರಿಕ ಅಥವಾ ಬ್ರಿಟನ್‌ ಅನುಮೋದನೆ ಕೊಟ್ಟಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT