ಮಂಗಳವಾರ, ಡಿಸೆಂಬರ್ 10, 2019
20 °C

ಬರಿದಾಗದ ಹಿಟ್ಟಿನ ಭರಣಿ

Published:
Updated:
ಬರಿದಾಗದ ಹಿಟ್ಟಿನ ಭರಣಿ

ಕ್ರಿಸ್ತಪೂರ್ವ ಒಂಬತ್ತನೇ ಶತಮಾನದಲ್ಲಿ ಇಸ್ರೇಲಿನ ಆಹಾಬ ರಾಜನ ಕಾಲದ ಕಥೆಯಿದು. ಹಲವರ್ಷಗಳ ಕಾಲ ಇಸ್ರೇಲ್ ನೆಲವು ಮಳೆ, ಹಿಮಗಳಿಲ್ಲದೆ ಬೆಂದು ಹೋಗಿತ್ತು. ಸಿದೋನ್ ಊರಿನ ಸಾರೆಫಾತ್ ಹಳ್ಳಿಯಲ್ಲಿ ತನ್ನ ಒಬ್ಬನೇ ಮಗನೊಂದಿಗೆ ವಾಸಿಸುತ್ತಿದ್ದ ವಿಧವೆಯೊಬ್ಬಳು ಬರಗಾಲದಿಂದ ದಿಕ್ಕೆಟ್ಟುಹೋಗಿದ್ದಳು. ಮನೆಯಲ್ಲಿ ಉಳಿದಿದ್ದ ಒಂದು ಹಿಡಿಯಷ್ಟು ಹಿಟ್ಟು ಹಾಗೂ ಸ್ವಲ್ಪ ಎಣ್ಣೆಯಿಂದ ರೊಟ್ಟಿಯೊಂದನ್ನು ಸುಟ್ಟು ಮಗನೊಂದಿಗೆ ಹಂಚಿಕೊಂಡು ತಿನ್ನಲು ಇಚ್ಛಿಸಿ ಒಲೆಗೆ ಸೌದೆಯನ್ನು ಹುಡುಕುತ್ತಿರುವಾಗ ಅಲ್ಲಿಗೆ ಬಂದ ಪ್ರವಾದಿ ಎಲೀಯ ಅವಳಲ್ಲಿ ಕುಡಿಯಲು ನೀರನ್ನು ಕೇಳಿದ.

ನೀರನ್ನು ತರಲು ಹೊರಟಾಗ, ಒಂದು ಚೂರು ರೊಟ್ಟಿಯನ್ನೂ ತರಲು ಹೇಳಿದ. ಆಗ ಆ ವಿಧವೆಯು, ತನ್ನ ಮನೆಯಲ್ಲಿ ಹಿಡಿಯಷ್ಟು ಹಿಟ್ಟು ಹಾಗೂ ಸ್ವಲ್ಪವೇ ಎಣ್ಣೆಯಿರುವುದಾಗಿ ಹೇಳಿ ಅದರಿಂದ ಕೊನೆಯ ಊಟವನ್ನು ಮಾಡಿ ಸಾಯಲು ಸಿದ್ಧವಾಗಲು ನಿರ್ಧರಿಸಿದ್ದಾಗಿ ಸತ್ಯವನ್ನು ಬಿಚ್ಚಿಟ್ಟಳು.

ಪ್ರವಾದಿ ಎಲೀಯ ವಿಧವೆಗೆ ಮನೆಯಲ್ಲಿರುವ ಹಿಡಿ ಹಿಟ್ಟಿನಿಂದ ಮೊದಲು ತನಗೊಂದು ರೊಟ್ಟಿಯನ್ನು ತಯಾರಿಸಿಕೊಡುವಂತೆ ಕೇಳಿಕೊಂಡನು. ಅಂತೆಯೇ ಹಿಟ್ಟಿನ ಭರಣಿ ಹಾಗೂ ಎಣ್ಣೆ ಎಂದಿಗೂ ಬರಿದಾಗವು ಎಂಬ ಆಶ್ವಾಸನೆಯಿತ್ತನು.

ಆ ವಿಧವೆಯು ಭರಣಿಯಲ್ಲಿ ಉಳಿದಿದ್ದ ಹಿಡಿ ಹಿಟ್ಟಿನಿಂದ ರೊಟ್ಟಿಯನ್ನು ಮಾಡಿ ಅವನಿಗೆ ನೀಡಿದಳು. ಆದರೆ ಹಿಟ್ಟಿನ ಭರಣಿ ಬರಿದಾಗಲಿಲ್ಲ, ಎಣ್ಣೆಯೂ ಖಾಲಿಯಾಗಲಿಲ್ಲ. ಬರಗಾಲ ಮುಗಿಯುವತನಕ ಅಕ್ಷಯ ಪಾತ್ರೆಯಂತೆ ಭರಣಿಗಳಲ್ಲಿ ಹಿಟ್ಟು ಮತ್ತು ಎಣ್ಣೆ ತುಂಬಿದ್ದವು. ಯಾವತ್ತೂ ಬರಿದಾಗಲಿಲ್ಲ.

ಹಸನ್ಮುಖಿಯಾಗಿ ನೀಡುವವನು ದೇವರಿಗೆ ಪ್ರಿಯನು ಎನ್ನುತ್ತದೆ ಬೈಬಲ್ ಶ್ರೀಗ್ರಂಥ. ಪರರ ಕಷ್ಟಗಳನ್ನು, ಬವಣೆಗಳನ್ನು ಕಂಡು ತನ್ನ ಕೈಲಾದ ಸಹಾಯವನ್ನು ಹಸನ್ಮುಖಿಯಾಗಿ ಮಾಡುವವನಿಗೆ ಎಂದೂ ಯಾವ ಕೊರತೆಯೂ ಕಾಡಲಾರದು. ಆಹಾರ, ಬಟ್ಟೆ, ಇನ್ನಿತರ ವಸ್ತುಗಳ ಬಗ್ಗೆ ಇದು ನಿಜವಾದರೆ, ಪ್ರೀತಿ, ದಯೆ, ಕರುಣೆ, ಸೋದರತ್ವಗಳ ವಿಷಯದಲ್ಲಿ ಇದು ನಿಜಕ್ಕೂ ಸತ್ಯವಾಗಿದೆ. ನಿನ್ನಂತೆ ಪರರನ್ನು ಪ್ರೀತಿಸು ಎಂಬ ಮಾತನ್ನು ಪಾಲಿಸಿ ಪ್ರೀತಿ, ಕರುಣೆ, ದಯೆಗಳನ್ನು ಇತರರಿಗೆ ನೀಡಿ, ಅವರೊಡನೆ ಹಂಚಿಕೊಂಡರೆ ನೀಡಿದವನ ಜೀವನ ಯಾವತ್ತೂ ಪ್ರೀತಿ, ಕ್ಷಮೆ, ದಯೆಯಿಲ್ಲದೆ ಬರಡಾಗದು.

ಆಸ್ಸಿಸಿಯ ಸಂತ ಫ್ರಾನ್ಸಿಸರ ಕೊಟ್ಟರೆ ನಾವು ಪಡೆದುಕೊಳ್ಳುವೆವು ಎಂಬ ಮಾತಿನಲ್ಲಿರುವ ಸತ್ಯವನ್ನು ಅರಿಯಲು ಪ್ರಥಮತಃ ನಾವು ಕೊಡುವುದನ್ನು ಅರಂಭಿಸಬೇಕು. ಪ್ರೀತಿಯ ಕೊಡುವಿಕೆ ಹಾಗು ಪಡೆದುಕೊಳ್ಳುವಿಕೆ ಎಂಬ ಕುಟುಂಬ ಜೀವನವನ್ನು ವ್ಯಾಖ್ಯಾನಿಸಿದರೆ, ಮೊದಲಿಗೆ ಬರುವುದು ಪ್ರೀತಿಯ ಪಡೆದುಕೊಳ್ಳುವಿಕೆಯಲ್ಲ, ಕೊಡುವಿಕೆ. ಇದನ್ನೇ ನಿಸ್ವಾರ್ಥ ಪ್ರೀತಿ ಎನ್ನುವುದು.

ಪ್ರತಿಕ್ರಿಯಿಸಿ (+)