ಬಾಲಕಿಗೆ ಲೈಂಗಿಕ ಕಿರುಕುಳ; ಚಿಕ್ಕಪ್ಪನಿಗೆ ಜೈಲು ಶಿಕ್ಷೆ

7

ಬಾಲಕಿಗೆ ಲೈಂಗಿಕ ಕಿರುಕುಳ; ಚಿಕ್ಕಪ್ಪನಿಗೆ ಜೈಲು ಶಿಕ್ಷೆ

Published:
Updated:

ಬೆಂಗಳೂರು: ಹನ್ನೆರಡು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ, ಆಕೆಯ ಚಿಕ್ಕಪ್ಪ ಅಮ್ಜದ್‌ ಪಾಷಾನಿಗೆ (35) ಎರಡು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹1.05 ಲಕ್ಷ ದಂಡ ವಿಧಿಸಿ ನಗರದ 55ನೇ ಸಿಟಿ ಸಿವಿಲ್‌ ನ್ಯಾಯಾಲಯವು ಸೋಮವಾರ ಆದೇಶ ಹೊರಡಿಸಿದೆ.

2014ರ ಆಗಸ್ಟ್‌ 16ರಂದು ನಡೆದಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವನಮಾಲಾ ಯಾದವ್‌, ದಂಡದಲ್ಲಿ ₹1 ಲಕ್ಷವನ್ನು ಸಂತ್ರಸ್ತೆಗೆ ನೀಡುವಂತೆ ಸೂಚಿಸಿದರು. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎಸ್‌.ಎನ್‌.ಹಿರೇಮನಿ ವಾದಿಸಿದ್ದರು.

ಪ್ರಕರಣದ ವಿವರ: ‘ಬಾಲ್ಯದಲ್ಲೇ ಪೋಷಕರನ್ನು ಕಳೆದುಕೊಂಡ ಬಾಲಕಿ, ಚಿಕ್ಕಪ್ಪ ಅಮ್ಜದ್ ಪಾಷಾನ ಆಶ್ರಯದಲ್ಲೇ ಬೆಳೆದಿದ್ದಳು. ಮನೆಯಲ್ಲಿ ತಿಗಣೆ ಕಾಟ ಹೆಚ್ಚಾಗಿದ್ದು, ಔಷಧ ಸಿಂಪಡಿಸಬೇಕೆಂದು ಸುಳ್ಳು ಹೇಳಿ ಆ.16ರಂದು ತನ್ನ ಪತ್ನಿ–ಮಕ್ಕಳನ್ನು ಸಂಬಂಧಿಕರ ಮನೆಗೆ ಕಳುಹಿಸಿದ್ದ ಅಮ್ಜದ್, ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ. ಅಲ್ಲದೆ, ವಿಷಯ ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಬೆದರಿಕೆಯನ್ನೂ ಹಾಕಿದ್ದ’ ಎಂದು ಹಿರೇಮನಿ ಹೇಳಿದರು.

‘ಕೆಲ ದಿನಗಳ ಬಳಿಕ ತಾಯಿಯ ಸಂಬಂಧಿಕರ ಮನೆಗೆ ಹೋಗಿದ್ದ ಬಾಲಕಿ, ಲೈಂಗಿಕ ಕಿರುಕುಳದ ವಿಷಯ ತಿಳಿಸಿದ್ದಳು. ಆ ಸಂಬಂಧಿಕರು ಬಾಲಕಿ ಸಮೇತ ಆರ್‌.ಟಿ.ನಗರ ಠಾಣೆಗೆ ಹೋಗಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡಿದ್ದ ಪೊಲೀಸರು, ಅಮ್ಜದ್‌ ಪಾಷಾನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು’ ಎಂದು ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry