ಶುಕ್ರವಾರ, ಡಿಸೆಂಬರ್ 6, 2019
26 °C

ಸರ್ವರಿಗೂ ಆರೋಗ್ಯ ಭಾಗ್ಯ: ಸಿದ್ದರಾಮಯ್ಯ

Published:
Updated:
ಸರ್ವರಿಗೂ ಆರೋಗ್ಯ ಭಾಗ್ಯ: ಸಿದ್ದರಾಮಯ್ಯ

ಪ್ರಶ್ನೆ 1 : ನೀವು ಅಧಿಕಾರಕ್ಕೆ ಬಂದರೆ ಎಲ್ಲಕ್ಕಿಂತ ಹೆಚ್ಚು ಆದ್ಯತೆ ನೀಡುವ ಒಂದು ನಿರ್ದಿಷ್ಟ ವಿಷಯ ಯಾವುದು?

* ನಾವು ಪುನರಾಯ್ಕೆಯಾದರೆ ವಿಭಿನ್ನವಾದ, ವಿನೂತನ ಕಾರ್ಯಕ್ರಮಗಳನ್ನು ಕೊಡುತ್ತೇವೆ. ರಾಜ್ಯದ ಜನರಿಗೆ ಅನ್ನಭಾಗ್ಯ, ಅನಿಲಭಾಗ್ಯ ಕೊಟ್ಟಂತೆ ‘ಸರ್ವರಿಗೂ ಆರೋಗ್ಯ ಭಾಗ್ಯ’ ನೀಡುವ ಸಂಕಲ್ಪ ಮಾಡಿದ್ದೇವೆ. ನಮ್ಮ ಸರ್ಕಾರ ಈಗಾಗಲೇ ‘ಸಾರ್ವತ್ರಿಕ ಆರೋಗ್ಯ ಯೋಜನೆ’ (ಯುನಿವರ್ಸಲ್‌ ಹೆಲ್ತ್‌ ಸ್ಕೀಂ) ಜಾರಿಗೊಳಿಸಿದೆ. ಜನಾರೋಗ್ಯದ ಮಹತ್ವ ನಮಗೆ ಗೊತ್ತು. ಆರೋಗ್ಯ ಯೋಜನೆಯನ್ನು ಆದ್ಯತೆ ಮೇಲೆ ಮುಂದುವರಿಸುತ್ತೇವೆ. ಎಪಿಎಲ್‌ ಮತ್ತು ಬಿಪಿಎಲ್‌ ಕಾರ್ಡ್‌ ಹೊಂದಿದವರೂ ಸೇರಿದಂತೆ ಎಲ್ಲರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸಿಗಲಿದೆ. ಅಲ್ಲಿ ಸೌಲಭ್ಯವಿಲ್ಲದ ಚಿಕಿತ್ಸೆಗಳಿಗೆ ಸರ್ಕಾರದ ಖರ್ಚಿನಲ್ಲೇ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುತ್ತೇವೆ. ಈ ಯೋಜನೆಗೆ ವರ್ಷಕ್ಕೆ ₹ 1,500 ಕೋಟಿ ಅನುದಾನ ಬೇಕು. 1.43 ಕೋಟಿ ಕುಟುಂಬಗಳು ಇದರ ಪ್ರಯೋಜನ ಪಡೆಯಲಿವೆ.  ಆರೋಗ್ಯ ಕಾರ್ಡ್‌ ವಿತರಣೆ ಆಗಲಿದೆ. ಖಾಸಗಿ ಆಸ್ಪತ್ರೆಗಳು ಈ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳಲು ಬಿಡುವುದಿಲ್ಲ. ’ಕರ್ನಾಟಕ ವೈದ್ಯಕೀಯ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ’ಯು ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಲಿದೆ. ಚಿಕಿತ್ಸಾ ದರಗಳನ್ನು ತಜ್ಞರ ಸಮಿತಿ ನಿರ್ಧರಿಸಲಿದೆ. ಯಶಸ್ವಿನಿ ಹಾಗೂ ವಾಜಪೇಯಿ ಆರೋಗ್ಯಶ್ರೀ ಸೇರಿದಂತೆ ಎಲ್ಲ ಆರೋಗ್ಯ ಕಾರ್ಯಕ್ರಮಗಳು ಇದರ ವ್ಯಾಪ್ತಿಗೆ ಬರಲಿವೆ.

ಕೇಂದ್ರ ಸರ್ಕಾರ ಈಗ ಸಾರ್ವತ್ರಿಕ ಆರೋಗ್ಯ ಯೋಜನೆ ಘೋಷಣೆ ಮಾಡಿದೆ. ಅದೊಂದು ಬೋಗಸ್‌ ಕಾರ್ಯಕ್ರಮ. ಬರೀ ₹ 2000 ಕೋಟಿ ಅನುದಾನ ಪ್ರಕಟಿಸಿದೆ. ಇದು ಯಾತಕ್ಕೂ ಸಾಲದು. ಈ ಯೋಜನೆಯಲ್ಲಿ ಫಲಾನುಭವಿಗಳೂ ಶೇ 40ರಷ್ಟು ಪಾವತಿಸಬೇಕು. ರಾಜ್ಯವೂ ಪಾಲು ಕೊಡಬೇಕು. ಅಂದಮೇಲೆ ಇದೆಂಥ ಯೋಜನೆ!

ಪ್ರಶ್ನೆ 2 :ನಿಮ್ಮ ಪ್ರಮುಖ ಎದುರಾಳಿ ಪಕ್ಷಗಳು ಏಕೆ ಸೋಲಬೇಕು?

* ಬಿಜೆಪಿ ಕೋಮುವಾದಿ ಪಕ್ಷ. ಅದು ಜಾತ್ಯತೀತ ಧೋರಣೆ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಸಾಮಾಜಿಕ ನ್ಯಾಯದಲ್ಲಿ ಅದಕ್ಕೆ ನಂಬಿಕೆ ಇಲ್ಲ. ಧರ್ಮ– ಜಾತಿ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದೆ. ಎಲ್ಲರನ್ನೂ ಒಳಗೊಳ್ಳುವಂಥ ಪ್ರಗತಿಯಲ್ಲಿ ಅದಕ್ಕೆ ವಿಶ್ವಾಸವಿಲ್ಲ. ಬಾಯಿ ಮಾತಿಗೆ ‘ಸಬ್‌ ಕಾ ಸಾಥ್‌, ಸಬ್ ಕಾ ವಿಕಾಸ್‌’ ಎಂದು ಹೇಳುತ್ತಿದೆ. ಆದರೆ, ಆಂತರಿಕ ಕಾರ್ಯಸೂಚಿ ಬೇರೆಯೇ ಇದೆ.

ಬಿಜೆಪಿಯವರು ಕರಾವಳಿ ಭಾಗದಲ್ಲಿ ಕೋಮು ಭಾವನೆ ಕೆರಳಿಸುತ್ತಿರುವುದು ಇದೇ ಮೊದಲಲ್ಲ. ಬಹಳ ವರ್ಷಗಳಿಂದ ಇದೇ ಕಸುಬನ್ನು ಮಾಡಿಕೊಂಡು ಬಂದಿದ್ದಾರೆ. ಹಿಂದುತ್ವದ ಬಗ್ಗೆ ಇವರು ಏನೇ ಹೇಳಿದರೂ ಜನ ನಂಬುವುದಿಲ್ಲ. ಇವರ ಕಮ್ಯುನಲ್‌ ಅಜೆಂಡಾ ಜನರಿಗೆ ಗೊತ್ತಿದೆ.  ಕಳೆದ ಸಲ ಅಧಿಕಾರದಲ್ಲಿದ್ದರೂ ಬಿಜೆಪಿಗೆ ಕರಾವಳಿಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್‌ ಏಳರಲ್ಲಿ ಆರು ಸ್ಥಾನ ಗೆದ್ದಿತ್ತು. ಬಿಜೆಪಿ ಗೆದ್ದಿದ್ದು ಸುಳ್ಯದಲ್ಲಿ ಮಾತ್ರ. ಉತ್ತರ ಕನ್ನಡದಲ್ಲಿ ಶಿರಸಿ ಮಾತ್ರ ಬಿಜೆಪಿ ‍‍ಪಾಲಾಗಿತ್ತು. ಉಡುಪಿ ಜಿಲ್ಲೆಯಲ್ಲಿ ಅದಕ್ಕೆ ಸಿಕ್ಕಿದ್ದು ಕಾರ್ಕಳ ಮಾತ್ರ. ಕರಾವಳಿ ಭಾಗದ ಮಾತು ಬಿಡಿ, ಬಿಜೆಪಿಯವರು ಮೈಸೂರಿನಲ್ಲಿ ಗೆಲ್ಲುತ್ತಾರಾ? ಮಂಡ್ಯದಲ್ಲಿ ಗೆಲ್ಲುತ್ತಾರಾ? ಹಾಸನದಲ್ಲಿ ಗೆಲ್ಲುತ್ತಾರಾ? ರಾಮನಗರದಲ್ಲಿ ಗೆಲ್ಲುತ್ತಾರಾ? ಕೋಲಾರದಲ್ಲಿ ಗೆಲ್ಲುತ್ತಾರಾ? ಬಿಜೆಪಿಯವರು ಕೋಮುವಾದಿಗಳಷ್ಟೇ ಅಲ್ಲ, ಕಡು ಭ್ರಷ್ಟರೂ ಹೌದು. ಅವರ ಸರ್ಕಾರ ಇದ್ದಾಗ ಮೂರು ಮುಖ್ಯಮಂತ್ರಿಗಳು ಬದಲಾದರು. ಯಡಿಯೂರಪ್ಪ ಒಳಗೊಂಡಂತೆ 13 ಮಂದಿ ಜೈಲಿಗೆ ಹೋಗಿದ್ದರು. ಹೀಗಾಗಿ ಅವರು ಸೋಲಲೇಬೇಕು.

ಜೆಡಿಎಸ್‌ ಪ್ರಾದೇಶಿಕ ಪಕ್ಷ. ಅದಕ್ಕೆ ಸಿದ್ಧಾಂತವಿಲ್ಲ. ಅದು ಅವಕಾಶವಾದಿ ಪಕ್ಷ. ಐದಾರು ಜಿಲ್ಲೆಗಳಿಗೆ ಮಾತ್ರ ಸೀಮಿತ. ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ.

ಇದನ್ನೂ ಓದಿ

ರೈತ ಋಣಮುಕ್ತನಾಗಬೇಕು: ಎಚ್‌ಡಿಕೆ

ನೀರಾವರಿಗೆ ₹ 1 ಲಕ್ಷ ಕೋಟಿ: ಬಿಎಸ್‌ವೈ

ಪ್ರತಿಕ್ರಿಯಿಸಿ (+)