ಭಾನುವಾರ, ಡಿಸೆಂಬರ್ 8, 2019
25 °C

ನೋವಿನ ಕತೆಗಳನ್ನು ಬಿಚ್ಚಿಟ್ಟ ಶ್ರಮಿಕ ಮಹಿಳೆಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೋವಿನ ಕತೆಗಳನ್ನು ಬಿಚ್ಚಿಟ್ಟ ಶ್ರಮಿಕ ಮಹಿಳೆಯರು

ಬೆಂಗಳೂರು: ಗಾರ್ಮೆಂಟ್‌ ಕಾರ್ಖಾನೆಗಳ ಮಹಿಳಾ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಲೈಂಗಿಕ ದಮನಿತರು, ಆಶಾ ಕಾರ್ಯಕರ್ತೆಯು ಹಾಗೂ ಮಹಿಳಾ ಪೌರ ಕಾರ್ಮಿಕರು ದೈನಂದಿನ ಬದುಕಿನಲ್ಲಿ ಎದುರಿಸಿದ ನೋವಿನ ಘಟನೆಗಳನ್ನು ಇಲ್ಲಿ ಬಿಚ್ಚಿಟ್ಟರು.

ಅವರು ಕೆಲಸದ ವೇಳೆ ಅನುಭವಿಸುವ ಸಂಕಟಗಳನ್ನು ಒಂದೊಂದಾಗಿ ವಿವರಿಸಿದಂತೆ ಸಭಿಕರಲ್ಲಿ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು.

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಲೋಕ ಕಾಣದ ಲೋಕ’ ದೇಸಿ ಕಮ್ಮಟದಲ್ಲಿ ಕಂಡು ಬಂದ ದೃಶ್ಯಗಳಿವು.

‘ಐದು ವರ್ಷಗಳಿಂದ ಗಾರ್ಮೆಂಟ್‌ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಬೆಳಿಗ್ಗೆ 9ಗಂಟೆಗೆ ಕೆಲಸಕ್ಕೆ ಹೋಗಬೇಕೆಂದರೆ ಬೆಳಿಗ್ಗೆ 5ಕ್ಕೆ ಎದ್ದು ಮನೆಯ ಕೆಲಸಗಳನ್ನು ಮುಗಿಸಬೇಕು. ಹೆಸರಿಗಷ್ಟ ಗಂಡ ಇದ್ದಾನೆ. ಸಂಸಾರದ ಬಂಡಿಯನ್ನು ನಾನೊಬ್ಬಳೇ ಎಳೆಯುತ್ತಿದ್ದೇನೆ. ಈ ನೋವಿನ ಹಂತವನ್ನು ದಾಟಿ ಕೆಲಸಕ್ಕೆಂದು ಹೋದರೆ ಅಲ್ಲಿಯ ಬೇರೆಯದೇ ಹಿಂಸೆ ಕಾದಿರುತ್ತದೆ’ ಎಂದು ಗಾರ್ಮೆಂಟ್‌ ಕಾರ್ಖಾನೆ ಉದ್ಯೋಗಿ ಪ್ರತಿಭಾ ಯಾತನೆಯನ್ನು ಹಂಚಿಕೊಂಡರು.

‘ಮೂರ್ನಾಲ್ಕು ಗಂಡಸರ ಮೇಲ್ವಿಚಾರಣೆಯ ನಡುವೆ ನನ್ನ ಕೆಲಸ ಸಾಗುತ್ತದೆ. ನನಗೆ ಕೊಟ್ಟಿರುವ ಕೆಲಸವನ್ನು ಪೂರ್ಣ ಮಾಡದೆ ಹೋಗುವ ಹಾಗಿಲ್ಲ. ಅರ್ಧ ತಾಸು ಊಟಕ್ಕೆ ಸಮಯವಿದ್ದರೂ ಐದೇ ನಿಮಿಷದಲ್ಲಿ ಊಟ ಮುಗಿಸಿ ಕೆಲಸ ಮುಂದುವರಿಸಬೇಕು. ನೀರು ಕುಡಿದರೆ ಪದೇ ಪದೇ ಶೌಚಾಲಯಕ್ಕೆ ಹೋಗಬೇಕಾಗುತ್ತದೆ. ಹಾಗಾಗಿ ಸತತ 8 ತಾಸು ನೀರು ಕುಡಿಯದೇಯೇ ಕಳೆಯುತ್ತೇನೆ’ ಎಂದು ವಿವರಿಸಿದರು.

‘ಆರಾಮವಾಗಿ ಕೂರಲು ಆಗದಂತಹ ಆಸನ ಹಾಕಿರುತ್ತಾರೆ. ಹಿಂಸೆಯಾದರೂ ಅದರ ಮೇಲೆಯೇ ಕುಳಿತುಕೊಳ್ಳಬೇಕು. ನಿಂತು ಕೆಲಸ ಮಾಡುವವರು ಒಂದು ಕ್ಷಣ ಕುಳಿತು ಆಯಾಸ ಪರಿಹಾರ ಮಾಡಿಕೊಳ್ಳುವಂತಿಲ್ಲ. ಕುಳಿತು ಕೆಲಸ ಮಾಡುವವರು ಎದ್ದು ನಿಂತು ಕೆಲಸ ಮಾಡುವಂತಿಲ್ಲ. ಸುಸ್ತಾಗಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದರೂ ಮೇಲ್ವಿಚಾರಕರ ರಗಳೆ ಆರಂಭವಾಗುತ್ತದೆ’ ಎಂದು ವಾಸ್ತವವನ್ನು ಬಿಚ್ಚಿಟ್ಟರು.

‘ಬಿಸಿಯೂಟ,  ಹಮಾಲಿ, ಪ್ಲಾಂಟೇಷನ್‌ ಹಾಗೂ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿರುವ ಅನೇಕ ಮಹಿಳೆಯರು ಲೈಂಗಿಕ ಕಿರುಕುಳ, ಕೆಲಸದ ಅಭದ್ರತೆ ಎದುರಿಸುತ್ತಿದ್ದಾರೆ. ಹಮಾಲಿ ಮಹಿಳಾ ಕಾರ್ಮಿಕರಿಗೆ ಸಂಬಳದ ರೂಪದಲ್ಲಿ ವಸ್ತುಗಳನ್ನು ನೀಡಲಾಗುತ್ತಿದೆ. ಇಂತಹ ಹೀನಾಯ ಪದ್ಧತಿಯ ಬಗ್ಗೆಯೂ ನಾವು ಮಾತನಾಡಬೇಕಿದೆ’ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘದ (ಸಿಐಟಿಯು) ಅಧ್ಯಕ್ಷೆ ಎಸ್‌.ವರಲಕ್ಷ್ಮಿ ಹೇಳಿದರು.

‘ಮಹಿಳೆಯರ ಕಾಣದ, ಕಾಣಲು ಬಯಸದ ಹಾಗೂ ಕಂಡೂ ಕಾಣದ ಲೋಕಗಳೂ ನಮ್ಮ ನಡುವೆಯೇ ಇವೆ. ಮಹಿಳಾ ಹೋರಾಟ ನಿರ್ಣಾಯಕ ಘಟ್ಟ ತಲುಪಿದೆ. ಪಿತೃ ಸಂಸ್ಕೃತಿಯು ಹೆಣ್ಣಿನ ಲೋಕವನ್ನು ಸ್ಥಾಪಿಸಿದ ಕ್ರಮವನ್ನು ಒಡೆಯದೇ ಹೋದರೆ ನಮ್ಮ ಹೋರಾಟಕ್ಕೆ ಸ್ಪಷ್ಟತೆ ಬರಲು ಸಾಧ್ಯವಿಲ್ಲ. ಸ್ಪಷ್ಟತೆ ಸಾಧಿಸಲು ಈ ರೀತಿಯ ಕಮ್ಮಟಗಳ ಮೂಲಕ ನಡೆಯುವ ಮಾತುಕತೆಗಳು ಸಾಕಷ್ಟು ಕೊಡುಗೆ ನೀಡುತ್ತವೆ’ ಎಂದು ಪ್ರಾಧ್ಯಾಪಕಿ ಎಂ.ಎಸ್‌.ಆಶಾದೇವಿ ತಿಳಿಸಿದರು.

‘ಮಹಿಳಾಪರ ಕಾನೂನುಗಳು ಪುಸ್ತಕದ ಒಳಗಿದ್ದರೆ ಏನು ಪ್ರಯೋಜನ. ಅತ್ಯಾಚಾರ ಮಾಡುವವನಿಗೆ ಶಿಕ್ಷೆ ಏನೆಂಬುದೇ ತಿಳಿದಿರದಿದ್ದರೆ, ಕಾನೂನು ಇದ್ದರೂ ಏನು ಪ್ರಯೋಜನ. ಅಶಿಕ್ಷಿತರಿಗೆ ಕಾನೂನಿನ ಅರಿವನ್ನು ಮೂಡಿಸಬೇಕು’ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಜೀಜಾ ಹರಿಸಿಂಗ್ ಅಭಿಪ್ರಾಯಪಟ್ಟರು.

ಮಂಗಳವಾರವೂ ಕಮ್ಮಟ ಮುಂದುವರಿಯಲಿದೆ. ‘ಮಂಗಳಮುಖಿಯರು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು’ , ‘ಮಹಿಳೆಯರ ಕಳ್ಳ ಸಾಗಣೆ, ಕಚೇರಿಗಳಲ್ಲಿ ವಿಶಾಖ ಮಾರ್ಗಸೂಚಿ ಜಾರಿ’ ಹಾಗೂ ‘ಪೊಲೀಸ್‌ ಇಲಾಖೆ ಮತ್ತ ಸಾರಿಗೆ ಇಲಾಖೆ ಮಹಿಳಾ ನೌಕರರ ಸಮಸ್ಯೆ’ ಕುರಿತ ಗೋಷ್ಠಿಗಳು ನಡೆಯಲಿವೆ.

ಪ್ರತಿಕ್ರಿಯಿಸಿ (+)