ಮಂಗಳವಾರ, ಡಿಸೆಂಬರ್ 10, 2019
26 °C

ನೀರಾವರಿಗೆ ₹ 1 ಲಕ್ಷ ಕೋಟಿ: ಬಿಎಸ್‌ವೈ

Published:
Updated:
ನೀರಾವರಿಗೆ ₹ 1 ಲಕ್ಷ ಕೋಟಿ: ಬಿಎಸ್‌ವೈ

ಪ್ರಶ್ನೆ 1 : ನೀವು ಅಧಿಕಾರಕ್ಕೆ ಬಂದರೆ ಎಲ್ಲಕ್ಕಿಂತ ಹೆಚ್ಚು ಆದ್ಯತೆ ನೀಡುವ ಒಂದು ನಿರ್ದಿಷ್ಟ ವಿಷಯ ಯಾವುದು?

* ರಾಜ್ಯವು ಸತತ ಬರಗಾಲಕ್ಕೆ ಸಿಕ್ಕಿ ನಲುಗಿದೆ. ಕಳೆದ ಬೇಸಿಗೆಯಲ್ಲಿ ಕುಡಿಯುವ ನೀರಿಲ್ಲದೆ ಜನ ಪರದಾಡಿದ್ದನ್ನು ನಾವು ನೋಡಿದ್ದೇವೆ. ಮಲೆನಾಡೇ ಬರಕ್ಕೆ ತುತ್ತಾಗಿದ್ದು ಆತಂಕ ಹೆಚ್ಚಿಸಿದೆ. ಈ ಕಾರಣಕ್ಕಾಗಿ ನೀರಾವರಿಗೆ ಹೆಚ್ಚು ಪ್ರಾಮುಖ್ಯ ನೀಡಬೇಕಿದೆ. ಪರಿವರ್ತನಾ ಯಾತ್ರೆಯಲ್ಲಿ ಇದೇ ವಿಷಯವನ್ನು ಪ್ರಸ್ತಾಪಿಸಿ ಜನರ ಗಮನ ಸೆಳೆದಿದ್ದೇವೆ. ರೈತರ ಹೊಲಗಳಿಗೆ ಸದಾ ನೀರು ಹರಿದರೆ ಬಹುತೇಕ ಸಮಸ್ಯೆಗಳು ದೂರವಾಗಲಿವೆ. ನಾವು ಅಧಿಕಾರಕ್ಕೆ ಬಂದರೆ ನೀರಾವರಿಗೆ ಐದು ವರ್ಷಗಳ ಅವಧಿಯಲ್ಲಿ ₹ 1 ಲಕ್ಷ ಕೋಟಿ ಕೊಡುತ್ತೇವೆ. ಕುಡಿಯುವ ನೀರಿಗಾಗಿ ಪ್ರತ್ಯೇಕ ಯೋಜನೆಗಳನ್ನು ರೂಪಿಸುತ್ತೇವೆ. ನಿರ್ದಿಷ್ಟ ಯೋಜನೆಗಳನ್ನು ರೂಪಿಸುವುದಕ್ಕಾಗಿ ಶಾಸಕ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಎಲ್ಲ ತಾಲ್ಲೂಕುಗಳ ಕೆರೆ– ಕಟ್ಟೆಗಳಿಗೆ ನೀರು ತುಂಬಿಸಲು,  ಅಂತರ್ಜಲ ಮಟ್ಟ ಹೆಚ್ಚಿಸಲು ಒತ್ತು ನೀಡುತ್ತೇವೆ. ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ ಇದೆ. ಇದನ್ನು ಕೊನೆಗಾಣಿಸಬೇಕಿದೆ.

ಕಾಂಗ್ರೆಸ್‌ ಆಡಳಿತದಲ್ಲಿ ನೀರಾವರಿ ಯೋಜನೆಗಳು ಮಂದಗತಿಯಲ್ಲಿ ಸಾಗಿವೆ. ಅವುಗಳಿಗೆ ಮಹತ್ವ ಸಿಕ್ಕಿಲ್ಲ. 2017–18ರ ಸಾಲಿನಲ್ಲಿ ನೀರಾವರಿಗೆ ನಿಗದಿ ಮಾಡಿರುವ ಒಟ್ಟು ಹಣದಲ್ಲಿ ಅರ್ಧದಷ್ಟನ್ನೂ ಖರ್ಚು ಮಾಡಲು ಆಗಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿವರ್ಷ ₹ 10 ಸಾವಿರ ಕೋಟಿ ಕೊಡುವ ವಾಗ್ದಾನ ಮಾಡಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಿದ್ದರು. ಆದರೆ, ಈವರೆಗೆ  ಕೊಟ್ಟಿರುವುದು ಬರೀ ₹ 6400 ಕೋಟಿ!

ಪ್ರಶ್ನೆ 2 :ನಿಮ್ಮ ಪ್ರಮುಖ ಎದುರಾಳಿ ಪಕ್ಷಗಳು ಏಕೆ ಸೋಲಬೇಕು?

* ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅತ್ಯಂತ ಭ್ರಷ್ಟವಾಗಿದೆ. ಇದರಿಂದಾಗಿ ಅದು ಸೋಲಲೇಬೇಕು. ಭ್ರಷ್ಟ ಆಡಳಿತದಿಂದ ರೋಸಿ ಹೋಗಿರುವ ಜನ ಶಾಪ ಹಾಕುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಮುಖ್ಯಮಂತ್ರಿ ಸಿಕ್ಕಾಪಟ್ಟೆ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಇಲ್ಲಿವರೆಗೆ 60 ರಿಂದ 70 ಭ್ರಷ್ಟಾಚಾರ ಪ್ರಕರಣಗಳು ಈ ಸರ್ಕಾರದ ವಿರುದ್ಧ ದಾಖಲಾಗಿವೆ. ಹ್ಯೂಬ್ಲೋ ವಾಚ್‌ ಪ್ರಕರಣ, ಮುಖ್ಯಮಂತ್ರಿ ಪುತ್ರನ ಲ್ಯಾಬ್‌ ಹಗರಣ, ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್‌ ಪ್ರಕರಣ... ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಅಂಕಿಅಂಶ ಮತ್ತು ಸಾಕ್ಷ್ಯಾಧಾರಗಳ ಸಮೇತ ಬಯಲಿಗೆಳೆಯುತ್ತೇವೆ. ಬಿಬಿಎಂಪಿಯಲ್ಲಿ ವಿವಿಧ ಕಾಮಗಾರಿಗಳ ಟೆಂಡರ್‌ ನೀಡಿಕೆಯಲ್ಲೂ ಹಗರಣ ನಡೆದಿದೆ. ಸಿದ್ದರಾಮಯ್ಯನವರು ಜಾತಿ, ಧರ್ಮಗಳ ಮಧ್ಯೆ ವಿಷಬೀಜ ಬಿತ್ತುತ್ತಿದ್ದಾರೆ. ಇದೊಂದು ಅಭಿವೃದ್ಧಿ ವಿರೋಧಿ ಸರ್ಕಾರ... ಇದು ಮುಂದುವರಿಯಬೇಕೆ?

ಇನ್ನು ಜೆಡಿಎಸ್‌ ಕುರಿತ ಪ್ರಶ್ನೆ ಉದ್ಭವಿಸುವುದಿಲ್ಲ. ಆ ಪಕ್ಷದ ಬಗ್ಗೆ ನಾನು ಮಾತನಾಡುವುದಿಲ್ಲ...

ಇದನ್ನೂ ಓದಿ

ಸರ್ವರಿಗೂ ಆರೋಗ್ಯ ಭಾಗ್ಯ: ಸಿದ್ದರಾಮಯ್ಯ

ರೈತ ಋಣಮುಕ್ತನಾಗಬೇಕು: ಎಚ್‌ಡಿಕೆ

ಪ್ರತಿಕ್ರಿಯಿಸಿ (+)