‘ಜಾತಿ ವ್ಯವಸ್ಥೆಯಿಂದಾಗಿ ದೇಶಕ್ಕೆ ಕೆಟ್ಟ ಹೆಸರು’

7

‘ಜಾತಿ ವ್ಯವಸ್ಥೆಯಿಂದಾಗಿ ದೇಶಕ್ಕೆ ಕೆಟ್ಟ ಹೆಸರು’

Published:
Updated:
‘ಜಾತಿ ವ್ಯವಸ್ಥೆಯಿಂದಾಗಿ ದೇಶಕ್ಕೆ ಕೆಟ್ಟ ಹೆಸರು’

ಬೆಂಗಳೂರು: ‘ಜಾತಿ ವ್ಯವಸ್ಥೆಯ ಕಾರಣದಿಂದಾಗಿ ಇಡೀ ಜಗತ್ತು ನಮ್ಮನ್ನು ತುಚ್ಛವಾಗಿ ಕಾಣುತ್ತಿದೆ’ ಎಂದು ಅಮೆರಿಕದ ನ್ಯೂಜೆರ್ಸಿಯ ಕನ್ನಡ ಸಾಹಿತ್ಯ ರಂಗದ ಅಧ್ಯಕ್ಷ ಮೈ.ಶ್ರೀ.ನಟರಾಜ್‌ ಬೇಸರ ವ್ಯಕ್ತಪಡಿಸಿದರು.

ಕೆ.ಎಸ್‌.ನರಸಿಂಹಸ್ವಾಮಿ ಟ್ರಸ್ಟ್‌, ಜೈನ್‌ ವಿಶ್ವವಿದ್ಯಾಲಯ ಹಾಗೂ ಕನ್ನಡ ಸಾಹಿತ್ಯ ರಂಗದ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮೂರು ಕೃತಿಗಳ ಬಿಡುಗಡೆ ಹಾಗೂ ಡಯಾಸ್ಪೋರಾ (ಅನಿವಾಸಿ ಸಮುದಾಯ) ಸಾಂಸ್ಕೃತಿಕ ಆಯಾಮಗಳು ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ನಾವು ಅಮೆರಿಕದವರನ್ನು ಮಾತನಾಡಿಸುವಾಗ ಅವರು ಕೇಳುವ ಮೊದಲ ಪ್ರಶ್ನೆ ಭಾರತದ ಜಾತಿ ವ್ಯವಸ್ಥೆ ಕುರಿತೇ ಆಗಿರುತ್ತದೆ. ಅಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಹೆಚ್ಚಿದೆ. ಇದರಿಂದ ಸಮಾನತೆಯು ತಾನಾಗಿಯೇ ಬರುತ್ತದೆ. ನಮ್ಮ ದೇಶ ಉದ್ಧಾರ ಆಗಬೇಕಾದರೆ ಈ ಮಾರ್ಗವನ್ನೇ ಅನುಸರಿಸಬೇಕು’ ಎಂದು ಹೇಳಿದರು.

‘ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಜಾತಿ ಪದ್ಧತಿ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ನಡುವೆ ಯಾವುದೇ ಭೇದಭಾವ ಇಲ್ಲ. ಭಾರತದಲ್ಲೂ ಕ್ರಮೇಣ ಇಂತಹದೇ ವಾತಾವರಣ ಸೃಷ್ಟಿಯಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಭಾರತದಿಂದ ಅಮೆರಿಕಕ್ಕೆ ಹೋದ ಮೊದಲ ತಲೆಮಾರಿನವರ ಮನಸ್ಸಿನಿಂದ ಜಾತಿ ಒಲವು ಸಂಪೂರ್ಣ ಅಳಿಸಿ ಹೋಗದೇ ಇರಬಹುದು. ಆದರೆ, ನಂತರದ ತಲೆಮಾರು ಜಾತಿ ಪದ್ಧತಿಯನ್ನು ಅನುಸರಿಸುತ್ತಿಲ್ಲ. ಅವರು ಜಾತಿ ನೋಡದೇ ಇಷ್ಟ ಬಂದವರನ್ನು ಮದುವೆ ಆಗುತ್ತಿದ್ದಾರೆ. ಹೊಂದಾಣಿಕೆ ಆಗದಿದ್ದರೆ ದಂಪತಿ ವಿಚ್ಛೇದನ ಪಡೆಯುತ್ತಾರೆ’ ಎಂದರು.

‘ಅಮೆರಿಕದಲ್ಲಿರುವ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಪ್ರತಿ ಭಾನುವಾರ ಕನ್ನಡ ತರಗತಿ ನಡೆಸಲಾಗುತ್ತಿದೆ. ಈ ಸಲುವಾಗಿ ಅನೇಕ ಪುಸ್ತಕಗಳನ್ನು ಪ್ರಕಟಿಸಲಾಗಿದೆ’ ಎಂದರು.

‘ಸಾಹಿತ್ಯದ ಅನನ್ಯತೆ ಮತ್ತು ಡಯಾಸ್ಪೋರಾ’ ಕುರಿತು ಲೇಖಕ ಕೆ.ಸತ್ಯನಾರಾಯಣ ಹಾಗೂ ‘ದೇಶ ಭಾಷೆಗಳು ಮತ್ತು ಡಯಾಸ್ಪೋರಾ’ ಕುರಿತು ಸಂಶೋಧಕ ಜೆ.ಶಶಿಕುಮಾರ್‌ ಮಾತನಾಡಿದರು.

ಬಿಡುಗಡೆಯಾದ ಕೃತಿಗಳು

*‘ಸ್ಮರಣೆ ಸಾಲದೆ’ ಕೆಲವು ನೆನಪುಗಳು

ಲೇಖಕ: ನಾಗ ಐತಾಳ

ಬೆಲೆ: ₹150

*ಬಂದೀತು ಆ ದಿನ

ಲೇಖಕಿ: ನಳಿನಿ ಮೈಯ

ಬೆಲೆ: ₹100

*ನೆನಪಿನ ಓಣಿಯೊಳಗೆ ಮಿನುಗುತಾವ ದೀಪ...

ಸಂಪಾದಕರು: ನಳಿನಿ ಮೈಯ, ನಾಗ ಐತಾಳ,

ಬೆಲೆ: ₹150 ಪ್ರಕಾಶನ:ಅಭಿನವ

ಬಿಡುಗಡೆಯಾದ ಮೂರು ಕೃತಿಗಳು

* ‘ಸ್ಮರಣೆ ಸಾಲದೆ’ ಕೆಲವು ನೆನಪುಗಳು

ಲೇಖಕ: ನಾಗ ಐತಾಳ

ಬೆಲೆ: ₹150* ಬಂದೀತು ಆ ದಿನ

ಲೇಖಕಿ: ನಳಿನಿ ಮೈಯ

ಬೆಲೆ: ₹100* ನೆನಪಿನ ಓಣಿಯೊಳಗೆ ಮಿನುಗುತಾವ ದೀಪ...

ಸಂಪಾದಕರು: ನಳಿನಿ ಮೈಯ, ನಾಗ ಐತಾಳ

ಬೆಲೆ: ₹150

ಪ್ರಕಾಶನ: ಅಭಿನವ

* ಅಮೆರಿಕದ ಕನ್ನಡಿಗರು ಕನ್ನಡವನ್ನು ಪ್ರೀತಿಯಿಂದ ನಡೆಸಿಕೊಂಡಿದ್ದಾರೆ. ಆದರೆ, ಬೆಂಗಳೂರಿನಲ್ಲೇ ಕನ್ನಡ ಮಾಯವಾಗುವ ಸ್ಥಿತಿ ನಿರ್ಮಾಣವಾಗಿದೆ.

– ಮೈ.ಶ್ರೀ.ನಟರಾಜ್‌, ಕನ್ನಡ ಸಾಹಿತ್ಯ ರಂಗದ ಅಧ್ಯಕ್ಷ

* ಎಲ್ಲ ಬಗೆಯ ಚಿಂತನೆಗಳಿಗೆ ಅವಕಾಶ ನೀಡಿ ಬಹುತ್ವವನ್ನು ಎತ್ತಿ ಹಿಡಿಯುವುದೇ ಕೆ.ಎಸ್‌.ನ. ಟ್ರಸ್ಟ್‌ನ ಉದ್ದೇಶ. ಇದು ಪ್ರಜಾಪ್ರಭುತ್ವವನ್ನು ರಕ್ಷಿಸುವ ಕ್ರಮವೂ ಹೌದು.

– ನರಹಳ್ಳಿ ಬಾಲಸುಬ್ರಹ್ಮಣ್ಯ,  ಟ್ರಸ್ಟ್‌ನ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry