ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಋಣಮುಕ್ತನಾಗಬೇಕು: ಎಚ್‌ಡಿಕೆ

Last Updated 7 ಫೆಬ್ರುವರಿ 2018, 11:43 IST
ಅಕ್ಷರ ಗಾತ್ರ

ಪ್ರಶ್ನೆ 1 : ನೀವು ಅಧಿಕಾರಕ್ಕೆ ಬಂದರೆ ಎಲ್ಲಕ್ಕಿಂತ ಹೆಚ್ಚು ಆದ್ಯತೆ ನೀಡುವ ಒಂದು ನಿರ್ದಿಷ್ಟ ವಿಷಯ ಯಾವುದು?

ರಾಜ್ಯದ ರೈತರಿಗೆ ಶಕ್ತಿ ತುಂಬುವುದು ನನ್ನ ಆದ್ಯತೆ. ಸಾಲಗಾರರು ಎಂಬ ಹಣೆಪಟ್ಟಿಯಿಂದ ಈ ಸಮುದಾಯವನ್ನು ಪಾರು ಮಾಡುವ ನಿಟ್ಟಿನಲ್ಲಿ ಕೃಷಿ ಕ್ಷೇತ್ರವನ್ನು ಸುಧಾರಣೆ ಮಾಡಬೇಕಿದೆ.   

ಅತಿವೃಷ್ಟಿ, ಅನಾವೃಷ್ಟಿಯಿಂದ ಅಂದಾಜು ₹ 56 ಸಾವಿರ ಕೋಟಿ ಮೊತ್ತದ ಬೆಳೆ ನಷ್ಟವಾಗಿದೆ. ಇದು ರೈತರನ್ನು ಹೈರಾಣಾಗಿಸಿದೆ. ಅದರಿಂದ ಹೊರಗೆ ಬರಲು ಅವರಿಗೆ ಸಾಧ್ಯವಾಗುತ್ತಿಲ್ಲ. ಸಾಲದ ಸುಳಿಗೆ ಸಿಕ್ಕಿ 3,500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಳೆ ಪರಿಹಾರಕ್ಕೆ ಓಬಿರಾಯನ ಕಾಲದ ನಿಯಮಗಳೇ ಈಗಲೂ ಜಾರಿಯಲ್ಲಿವೆ. ಇದರಿಂದ ಕೃಷಿಕರಿಗೆ ಬಿಡಿಗಾಸು ಪ್ರಯೋಜನವೂ ಆಗುತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕು, ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸಾಲ ಒಂದು ಬಾರಿ‌ ಮನ್ನಾ ಆಗಲೇಬೇಕು. ಸಾಲಮುಕ್ತರಾದ ಬಳಿಕ ಮತ್ತೆ ಆ ಶೂಲಕ್ಕೆ ಬಲಿಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯೂ ಸರ್ಕಾರದ್ದು. ಅಧಿಕಾರಕ್ಕೆ ಬಂದರೆ ನಾನು ಇದನ್ನು ಚಾಚೂತಪ್ಪದೆ ಮಾಡುತ್ತೇನೆ.

ಹೊಸ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಮಾತ್ರ ಬದಲಾವಣೆ ಸಾಧ್ಯ. ಈ ಉದ್ದೇಶಕ್ಕೆ ₹ 25 ಸಾವಿರ ಕೋಟಿ ಅಗತ್ಯವಿದೆ. ನಮ್ಮ ‍ಪಕ್ಷ ಅಧಿಕಾರಕ್ಕೆ ಬಂದರೆ ಸರ್ಕಾರವೇ ಈ ಬಂಡವಾಳ‌ ಹೂಡಿ, ಗುಣಮಟ್ಟದ ಬಿತ್ತನೆ ಬೀಜ, ಗೊಬ್ಬರ ಮತ್ತು ಕ್ರಿಮಿನಾಶಕವನ್ನು ಪೂರೈಸುತ್ತದೆ. ಬೆಳೆ ದಾಸ್ತಾನು ಮತ್ತು ಮಾರುಕಟ್ಟೆ ವ್ಯವಸ್ಥೆ ಸರ್ಕಾರದ ಜವಾಬ್ದಾರಿ. ಕೇಂದ್ರದ ನೆರವಿಗೆ ಕಾಯದೆ ರೈತರಿಗಾಗಿ ಪ್ರತ್ಯೇಕ ನಿಧಿ ಸ್ಥಾಪಿಸುತ್ತೇವೆ.

ಇತ್ತೀಚೆಗೆ ನಾನು ಇಸ್ರೇಲ್‌ಗೆ ಹೋಗಿದ್ದಾಗ ಅಲ್ಲಿನ ಕೃಷಿ ಪದ್ಧತಿ ಗಮನಿಸಿದ್ದೇನೆ. ಬರಡು ಭೂಮಿಯಲ್ಲೂ ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಬೆಳೆ ತೆಗೆದು ಸ್ವಾವಲಂಬಿಗಳಾಗಿರುವ ಅಲ್ಲಿನ ರೈತ ವರ್ಗ ನಮಗೂ ಮಾದರಿ. ಕೀಟನಾಶಕ ಬಳಸದೆ ಉತ್ತಮ ಬೆಳೆ ಬೆಳೆಯುತ್ತಾರೆ. 300 ವಿವಿಧ ತಳಿಗಳ ಟೊಮೆಟೊ ಇದ್ದರೂ ಹೊಸ ತಳಿ ಸಂಶೋಧನೆ ಮುಂದುವರಿದಿದೆ. ಆರು ವಿಧದ ಪಾಪಸ್‌ ಕಳ್ಳಿಗಿಡ (ಕ್ಯಾಕ್ಟಸ್‌) ಬೆಳೆಯುವ ರೈತರು ಅದರಲ್ಲೂ ಭಾರಿ ಲಾಭ ಮಾಡುತ್ತಿದ್ದಾರೆ.

ರೈತರ ಹೆಸರಿನಲ್ಲಿ ಪ್ರತಿವರ್ಷ ಇಸ್ರೇಲ್‌ಗೆ ಯಾರನ್ನೋ ಕಳುಹಿಸಿ ಸರ್ಕಾರದ ಹಣ ವೆಚ್ಚ ಮಾಡುವ ಬದಲು ಅಲ್ಲಿಂದಲೇ 200 ಕೃಷಿ ತಜ್ಞರನ್ನು ಐದು ವರ್ಷಗಳ ಅವಧಿಗೆ ರಾಜ್ಯಕ್ಕೆ ಕರೆಸಿಕೊಳ್ಳಬೇಕು ಎನ್ನುವುದು ನನ್ನ ಆಶಯ. ಪ್ರತಿ ಜಿಲ್ಲೆಗೆ 15ರಿಂದ 20 ತಜ್ಞರನ್ನು ಕಳುಹಿಸಿ, ಅವರಿಗೆ ಎಲ್ಲ ಸೌಲಭ್ಯಗಳನ್ನು ನೀಡಿ, ರಾಜ್ಯದ ಕೃಷಿ ಪದ್ಧತಿ ಸ್ವರೂಪವನ್ನೇ ಬದಲಿಸುವ ಚಿಂತನೆ ಇದೆ.

ಕೃಷಿಗೆ ಪೂರಕವಾಗಿ ಸಣ್ಣ ಆಹಾರ ಸಂಸ್ಕರಣಾ ಘಟಕಗಳನ್ನು ಆರಂಭಿಸುತ್ತೇವೆ. ರೈತರಿಗೆ ಸಬ್ಸಿಡಿ ತ್ವರಿತವಾಗಿ ಸಿಗಬೇಕು ಎಂಬುದು ನಮ್ಮ ಧೋರಣೆ. ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ರಫ್ತು ಮಾಡಬೇಕು. ಈ ಸಂಬಂಧ ಕೃಷಿ ತಜ್ಞ ಎಂ.ಎಸ್‌. ಸ್ವಾಮಿನಾಥನ್‌ 2006ರಲ್ಲೇ ವರದಿ ನೀಡಿದ್ದಾರೆ. ಅದು ಅನುಷ್ಠಾನ ಆಗಿಲ್ಲ. ಹೈನೋದ್ಯಮದಲ್ಲಿ ತಾಂತ್ರಿಕತೆ ತರಬೇಕು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಇಡೀ ದೇಶಕ್ಕೆ ಮಾದರಿಯಾದ ಕೃಷಿ ನೀತಿ ಜಾರಿಗೊಳಿಸಲು ಬದ್ಧ.

ಪ್ರಶ್ನೆ 2 :ನಿಮ್ಮ ಪ್ರಮುಖ ಎದುರಾಳಿ ಪಕ್ಷಗಳು ಏಕೆ ಸೋಲಬೇಕು?

ಐದು ವರ್ಷಗಳ ಬಿಜೆಪಿ ಆಡಳಿತವನ್ನು ಜನ ಮರೆತಿರಬಹುದು. ಆ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳಾದರು. ಮೂವರಲ್ಲ, 30 ಜನ ಆಗಲಿ ಬಿಡಿ. ಅದು ಆ ಪಕ್ಷದ ಆಂತರಿಕ ವಿಚಾರ. ಆದರೆ, ಅವರ ಅವಧಿಯಲ್ಲಿ ರಾಜ್ಯದ ಗೌರವವೇ ಮಣ್ಣುಪಾಲಾಯಿತು. ‘ಆಪರೇಷನ್‌ ಕಮಲ’ ಮಾಡಿ ಎಲ್ಲರೂ ತಲೆತಗ್ಗಿಸುವಂತೆ ಮಾಡಿದರು. ಅವರ ಅವಧಿಯಲ್ಲೇ ಬೆಂಗಳೂರಿಗೆ ‘ಗಾರ್ಬೇಜ್‌ ಸಿಟಿ’ ಎಂಬ ಕಳಂಕವೂ ಅಂಟಿತು.

ಆನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಖರಿ ಬಿಜೆಪಿಗಿಂತ ಭಿನ್ನವೇನೂ ಇಲ್ಲ. ಭ್ರಷ್ಟಾಚಾರ ಎನ್ನುವಂಥದ್ದು ಬೀದಿಮಾತಾಗಿದೆ. ಆಡಳಿತ ಹದಗೆಟ್ಟಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದ ಸಾಲ ₹ 50 ಸಾವಿರ ಕೋಟಿ ಇತ್ತು. ಅದೀಗ ₹ 2.90 ಲಕ್ಷ ಕೋಟಿಗೆ ಏರಿದೆ. ಆರ್ಥಿಕ ವ್ಯವಸ್ಥೆ ನಿಭಾಯಿಸುವಲ್ಲಿ ಎಡವಿದ್ದರಿಂದ ಈ ಸ್ಥಿತಿ ನಿರ್ಮಾಣ ಆಗಿದೆ.

ಸಾಲ ಹೆಚ್ಚು ಮಾಡಿ ಬಿಜೆಪಿ ಮತ್ತು ಕಾಂಗ್ರೆಸ್‌ ಸರ್ಕಾರಗಳು ಎಷ್ಟು ಆಸ್ತಿ ಸೃಷ್ಟಿ ಮಾಡಿವೆ? ತೆರಿಗೆ ಹಣ ಎಲ್ಲಿ ಹೋಯಿತು? ನೀರಾವರಿ ಯೋಜನೆಗಳಲ್ಲಿ ಎಷ್ಟು ಗುರಿ ಮುಟ್ಟಿದ್ದೇವೆ? ರಸ್ತೆಗಳು ಎಷ್ಟರಮಟ್ಟಿಗೆ ಸುಧಾರಣೆ ಆಗಿವೆ? ಈ ಎಲ್ಲ ಅಂಶಗಳನ್ನು ಮತದಾರರು ಗಣನೆಗೆ ತೆಗೆದುಕೊಳ್ಳಬೇಕು.

ಆಂಧ್ರ, ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳ ಸರ್ಕಾರ ಇದೆ. ಅ ಸರ್ಕಾರಗಳ ಮನವಿಗಳಿಗೆ ಕೇಂದ್ರ ತಕ್ಷಣವೇ ಸ್ಪಂದಿಸುತ್ತದೆ. ಕೇಂದ್ರದಿಂದ ₹ 2,500 ಕೋಟಿ ನೆರವು ಪಡೆದು ಹೊಗೇನಕಲ್‌ ಜಲಪಾತದಿಂದ ತಮ್ಮ 2–3 ಜಿಲ್ಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಲ್ಲಿ ತಮಿಳುನಾಡು ಸಫಲವಾಗಿದ್ದು ಇದೇ ಕಾರಣದಿಂದ. ಆದರೆ, ಉತ್ತರ ಕರ್ನಾಟಕ ಭಾಗದ ಜನರ ಕುಡಿಯುವ ಅಗತ್ಯಕ್ಕೆ ಮಹದಾಯಿಯಿಂದ 7 ಟಿ.ಎಂ.ಸಿ. ಅಡಿ ನೀರು ಕೊಡಿ ಎಂದು ಆ ಭಾಗದ ಜನರು 30 ವರ್ಷಗಳಿಂದ ಗೋಗರೆದರೂ ಕೊಡಿಸಲು ಇವೆರಡೂ ಪಕ್ಷಗಳಿಗೆ ಸಾಧ್ಯ ಆಗಿಲ್ಲ.

ಕರ್ನಾಟಕದಲ್ಲೂ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದರೆ ಕೇಂದ್ರವನ್ನು ಬಗ್ಗಿಸಬಹುದು. ನಾವು ಅಧಿಕಾರಕ್ಕೆ ಬಂದರೆ, ರಾಜ್ಯದ ಆರು ಕೋಟಿ ಜನರ ಕೈಗೇ ಆಡಳಿತ ಬಂದಂತೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎಂಬ ಪರಿಕಲ್ಪನೆಯನ್ನು ನಮ್ಮ ಪಕ್ಷದ ಸರ್ಕಾರ ಜಾರಿಗೆ ತರಲಿದೆ.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT