ಸೋಮವಾರ, ಡಿಸೆಂಬರ್ 9, 2019
22 °C
ನಗರದ ಸಾಫ್ಟ್‌ವೇರ್ ಉದ್ಯೋಗಿ ಸೆರೆ

₹ 1.70 ಕೋಟಿ ಮೊತ್ತದ 100 ನೋಟು ಪತ್ತೆ !

ಎಂ.ಸಿ.ಮಂಜುನಾಥ್ Updated:

ಅಕ್ಷರ ಗಾತ್ರ : | |

₹ 1.70 ಕೋಟಿ ಮೊತ್ತದ 100 ನೋಟು ಪತ್ತೆ !

ಬೆಂಗಳೂರು: ಟರ್ಕಿ ದೇಶದ ₹1.70 ಕೋಟಿ ಮೊತ್ತದ ನೋಟುಗಳನ್ನು ಮಾರುವ ಯತ್ನದಲ್ಲಿದ್ದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಆರ್‌ಎಂಸಿ ಯಾರ್ಡ್‌ ಪೊಲೀಸರ ಅತಿಥಿಯಾಗಿದ್ದಾರೆ.

ಎಚ್‌ಎಸ್‌ಆರ್‌ ಲೇಔಟ್ 11ನೇ ಅಡ್ಡರಸ್ತೆ ನಿವಾಸಿ ದೀಪೇಶ್ (35) ಎಂಬುವರನ್ನು ಬಂಧಿಸಿರುವ ಪೊಲೀಸರು, ₹10 ಲಕ್ಷ ಲಿರಾ (ಟರ್ಕಿ ಕರೆನ್ಸಿ) ಮುಖಬೆಲೆಯ 100 ನೋಟುಗಳು (ಭಾರತೀಯ ಮೌಲ್ಯ 1.70 ಕೋಟಿ) ಹಾಗೂ ಸ್ಕೂಟರ್ ಜಪ್ತಿ ಮಾಡಿದ್ದಾರೆ.

ಮೈಸೂರಿನ ದೀಪೇಶ್, ಐದು ವರ್ಷಗಳಿಂದ ಬೆಳ್ಳಂದೂರಿನ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದಾರೆ. ಡಿ.22ರಿಂದ ಪ್ರತಿದಿನ ಸಂಜೆ ಅವರು ಯಶವಂತಪುರದ ಗೋವರ್ಧನ್ ಚಿತ್ರಮಂದಿರ ಸಮೀಪದ ಅಂಗಡಿಗಳ ಮಾಲೀಕರನ್ನು ಭೇಟಿಯಾಗುತ್ತಿದ್ದರು. ‘ನನ್ನ ಬಳಿ ಟರ್ಕಿಯ ನೋಟುಗಳಿವೆ. ಅವು ₹ 200 ಕೋಟಿ ರೂಪಾಯಿಗೆ ಸಮ. ನೀವು ₹30 ಲಕ್ಷ ಕೊಟ್ಟು ಈ ನೋಟುಗಳನ್ನು ಖರೀದಿಸಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿನಿಮಯ ಮಾಡಿಕೊಂಡರೆ ರಾತ್ರೋರಾತ್ರಿ ಶ್ರೀಮಂತರಾಗುತ್ತೀರಿ’ ಎಂದು ಆಮಿಷ ಒಡ್ಡುತ್ತಿದ್ದರು.

ನಿತ್ಯವೂ ಬಂದು ಹೋಗುತ್ತಿದ್ದ ಗಡ್ಡದಾರಿ ದೀಪೇಶ್ ಮೇಲೆ ಅನುಮಾನಗೊಂಡ ಮಾಲೀಕರೊಬ್ಬರು, ಲಿರಾ ನೋಟುಗಳ ಬಗ್ಗೆ ತಿಳಿಯಲು ಅಂತರ್ಜಾಲದಲ್ಲಿ ಶೋಧಿಸಿದ್ದರು. ಆಗ ಟರ್ಕಿ ಸರ್ಕಾರ ₹5 ಹಾಗೂ ₹10ಲಕ್ಷ ಮುಖಬೆಲೆಯ ಲಿರಾ ಚಲಾವಣೆ ನಿರ್ಬಂಧಿಸಿರುವುದು ಅರಿವಿಗೆ ಬಂದಿತ್ತು. ಕೂಡಲೇ ಅವರು ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ್ದರು.

ಡಿ.28ರ ಸಂಜೆ ಕಾರ್ಯಾಚರಣೆಗೆ ಇಳಿದ ಪಿಎಸ್‌ಐ ರಘುಪ್ರಸಾದ್ ನೇತೃತ್ವದ ತಂಡ, ಬಾಡಿಗೆ ಕಾರಿನಲ್ಲಿ ಗಿರಾಕಿಗಳಂತೆ ಸ್ಥಳಕ್ಕೆ ತೆರಳಿತ್ತು. ‘ನಾವು ಇಷ್ಟೂ ನೋಟುಗಳನ್ನು ಖರೀದಿಸಲು ಸಿದ್ಧರಿದ್ದೇವೆ. ಇನ್ನೂ ಹೆಚ್ಚು ನೋಟುಗಳಿದ್ದರೆ ಹೇಳಿ, ಇದೇ ದಿನ ಖರೀದಿಸುತ್ತೇವೆ’ ಎಂದು ಸಿಬ್ಬಂದಿ ಹೇಳಿದ್ದರು. ಅದಕ್ಕೆ ದೀಪೇಶ್, ‘ಸದ್ಯ ನನ್ನ ಬಳಿ ಇರುವುದು ಇಷ್ಟೇ ನೋಟುಗಳು’ ಎಂದಿದ್ದರು. ನಂತರ ಪೊಲೀಸರು ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ವಿಚಾರಣೆಗೆ ಒಳಪ‍ಡಿಸಿದಾಗ, ‘ನನಗೆ ಶಿವಾಜಿನಗರದ ಫಾರೂಕ್ ಈ ನೋಟುಗಳನ್ನು ಕೊಟ್ಟಿದ್ದರು. ₹30 ಲಕ್ಷಕ್ಕೆ ಮಾರಾಟ ಮಾಡಿದರೆ ಶೇ10ರಷ್ಟು ಕಮಿಷನ್ ಕೊಡುವುದಾಗಿ ಹೇಳಿದ್ದರು. ಈಗ ಅವರ ಮೊಬೈಲ್ ಸ್ವಿಚ್ಡ್‌ ಆಫ್ ಆಗಿದೆ’ ಎಂದು ಆರೋಪಿ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ತಿಳಿಸಿದರು.

ಚನ್ನಕೇಶವರೆಡ್ಡಿ ನಂಟು: ‘ಟರ್ಕಿ ನೋಟುಗಳನ್ನು ರಾಜ್ಯದಲ್ಲಿ ಮಾರಾಟ ಮಾಡುತ್ತಿದ್ದ ತೆಲಂಗಾಣದ ಜಮೀನ್ದಾರ ಚನ್ನಕೇಶವ ರೆಡ್ಡಿ ಎಂಬಾತನಿಗೂ ದೀಪೇಶ್‌ನಿಗೂ ಸಂಪರ್ಕವಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ’ ಎಂದು ಅಧಿಕಾರಿಗಳು ಹೇಳಿದರು.

‘2016ರ ಅಕ್ಟೋಬರ್‌ನಲ್ಲಿ ಚನ್ನಕೇಶವರೆಡ್ಡಿಯನ್ನು ಬಂಧಿಸಿದ್ದ ಪೊಲೀಸರು, ₹87.69 ಕೋಟಿ ಮೊತ್ತದ ಲಿರಾ ನೋಟುಗಳನ್ನು ಜಪ್ತಿ ಮಾಡಿದ್ದರು. ಆತನ ಸಹಚರ ನಾಗರಾಜು (ಚಿತ್ರದುರ್ಗದ ಹೆಡ್‌ಕಾನ್‌ಸ್ಟೆಬಲ್), 2017ರ ಜೂನ್‌ನಲ್ಲಿ ಮಾರತ್ತಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದ. ದೀಪೇಶ್ ಕೂಡ ಅದೇ ಗ್ಯಾಂಗ್‌ನ ಸದಸ್ಯನಿರಬಹುದು ಎಂದು ಪೊಲೀಸರು ಹೇಳಿದರು.

2019ರವರೆಗೆ ಗಡುವು

‘ಭಾರತದಲ್ಲಿ ₹ 500 ಹಾಗೂ ₹ 1,000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿರುವಂತೆಯೇ ಟರ್ಕಿಯಲ್ಲಿ ಅಧಿಕ ಮೌಲ್ಯದ ಲಿರಾ ನೋಟುಗಳ ಚಲಾವಣೆ ನಿರ್ಬಂಧಿಸಲಾಗಿದೆ. ಆ ನೋಟುಗಳನ್ನು ಬದಲಾಯಿಸಿಕೊಳ್ಳಲು ಸರ್ಕಾರ 2019ರ ಡಿ.31ರವರೆಗೆ ಗಡುವು ನೀಡಿದೆ. ಹೀಗಾಗಿ, ಆ ದೇಶದ ಶ್ರೀಮಂತರು, ಏಜೆಂಟ್‌ಗಳ ಮೂಲಕ ನೋಟುಗಳ ಬದಲಾವಣೆಗೆ ಯತ್ನಿಸುತ್ತಿದ್ದಾರೆ’ ಎಂದು ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ಟರ್ಕಿಯ ಲಿರಾಗೆ ಭಾರತೀಯ ರೂಪಾಯಿ

ಟರ್ಕಿ ಕರೆನ್ಸಿ                      ರೂಪಾಯಿ

1 ಲಿರಾ                             ₹ 17

10 ಲಕ್ಷ ಲಿರಾ (1 ನೋಟು)      ₹ 1.70 ಕೋಟಿ

ಪ್ರತಿಕ್ರಿಯಿಸಿ (+)