3

ರಾಜ್ಯಪಾಲರ ಹಿಂದಿ ಭಾಷಣ: ರಮೇಶ್‌ ಬಾಬು ಆಕ್ಷೇಪ

Published:
Updated:
ರಾಜ್ಯಪಾಲರ ಹಿಂದಿ ಭಾಷಣ: ರಮೇಶ್‌ ಬಾಬು ಆಕ್ಷೇಪ

ಬೆಂಗಳೂರು: ‘ರಾಜ್ಯಪಾಲ ವಜುಭಾಯಿ ವಾಲಾ ಹಿಂದಿಯಲ್ಲಿ ಭಾಷಣ ಮಾಡಿದ್ದು ತಪ್ಪು’ ಎಂದು ಜೆಡಿಎಸ್‌ನ ರಮೇಶ್‌ ಬಾಬು ಆಕ್ಷೇಪ ವ್ಯಕ್ತಪಡಿಸಿದರು.

ಸೋಮವಾರ ವಜುಭಾಯಿ ವಾಲಾ ಜಂಟಿ ಅಧಿವೇಶನ ಉದ್ದೇಶಿಸಿ ಹಿಂದಿಯಲ್ಲಿ ಭಾಷಣ ಮಾಡಿದರು. ವಿಧಾನ ಪರಿಷತ್ತಿನಲ್ಲಿ ಭಾಷಣದ ಪ್ರತಿಯನ್ನು ಮಂಡಿಸಲಾಯಿತು.

ಸದಸ್ಯರಿಗೆ ಹಿಂದಿ ಭಾಷೆಯಲ್ಲಿದ್ದ ಪ್ರತಿಗಳನ್ನು ಹಂಚಿದ್ದು ರಮೇಶ್‌ ಬಾಬು ಅವರನ್ನು ಕೆರಳಿಸಿತು. ಹಿಂದಿ ಪ್ರತಿ ಹಂಚಿದ್ದು ಸರಿಯಲ್ಲ. ಕನ್ನಡದ ಪ್ರತಿಗಳು ಸಿಕ್ಕಿಲ್ಲ. ಇಂಗ್ಲಿಷ್‌ ಪ್ರತಿ ಹಂಚಿದರೂ ಅಡ್ಡಿ ಇಲ್ಲ. ಹಿಂದಿ ಪ್ರತಿಗಳನ್ನು ಹಂಚಿದ್ದು ಏಕೆ ಎಂದು ಪ್ರಶ್ನಿಸಿದರು.

ರಾಜ್ಯಪಾಲರ ಭಾಷಣದ ಕನ್ನಡ ಮತ್ತು ಇಂಗ್ಲಿಷ್‌ ಪ್ರತಿಗಳಿವೆ. ಆದರೆ, ಹಿಂದಿ ಪ್ರತಿಗಳಿಗೆ ಆಕ್ಷೇಪ ಏತಕ್ಕೆ. ಇಂಗ್ಲಿಷ್‌ ಒಪ್ಪುವ ನೀವು ಹಿಂದಿಯನ್ನು ವಿರೋಧಿಸುವುದು ಏಕೆ ಎಂದು ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಪ್ರಶ್ನಿಸಿದರು.

ಎಲ್ಲರಿಗೂ ಕನ್ನಡದ ಪ್ರತಿಗಳನ್ನು ತಲುಪಿಸುವುದಾಗಿ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಸಮಾಧಾನ ಪಡಿಸಿದರು.

ಅಲ್ಪಸಂಖ್ಯಾತರ ನಾಯಕರು ಎನ್ನಬೇಡಿ: ಮೈಸೂರಿನ ಮುಕ್ತಾರುನ್ನೀಸ್ಸಾ ಬೇಗಂ ಅವರ ನಿಧನಕ್ಕೆ ಸಂತಾಪ ಸೂಚಿಸುವಾಗ, ಅಲ್ಪಸಂಖ್ಯಾತರ ನಾಯಕಿ ಎಂದು ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಹೇಳಿದರು. ಇದನ್ನು ಕಾಂಗ್ರೆಸ್‌ನ ಸಿ.ಎಂ.ಇಬ್ರಾಹಿಂ ಆಕ್ಷೇ‍ಪಿಸಿದರು.

‘ಅಲ್ಪಸಂಖ್ಯಾತರ ಸಮುದಾಯದ ನಾಯಕಿ ಎಂದು ಹೇಳುವುದು ಸರಿಯಲ್ಲ’ ಎಂದು ಇಬ್ರಾಹಿಂ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ, ‘ನಿಮ್ಮನ್ನು ಅಲ್ಪಸಂಖ್ಯಾತರ ನಾಯಕ ಎಂದು ಹೇಳಲು ಆಗುವುದಿಲ್ಲ. ನಾವು ಈ ಸದನದಲ್ಲಿ ಇರುವ ತನಕ ನಿಮಗೆ ಸಂತಾಪ ಹೇಳುವ ಅವಕಾಶ ಸಿಗಬಾರದು. ದೀರ್ಘ ಕಾಲ ಬಾಳಿರಿ’ ಎಂದು ಹಾರೈಸಿದರು.

ಹೊಸ ಕ್ಯಾಂಟಿನ್‌, ಹೊಸ ಕೊಠಡಿ: ವಿರೋಧ ಪಕ್ಷದ ನಾಯಕರಿಗಾಗಿ ಹೊಸ ಕೊಠಡಿ ಮತ್ತು ಪರಿಷತ್‌ ಸದಸ್ಯರಿಗಾಗಿ ಹೊಸ ಕ್ಯಾಂಟೀನ್‌ ಆರಂಭಗೊಂಡಿದೆ.

ಈವರೆಗೆ ವಿರೋಧ ಪಕ್ಷದ ನಾಯಕರು ಮಾಧ್ಯಮ ಅಥವಾ ಅಧಿಕಾರಿಗಳ ಜತೆ ಮೊಗಸಾಲೆಯಲ್ಲಿ ಕುಳಿತೇ ಮಾತನಾಡಬೇಕಿತ್ತು. ಇನ್ನು ಮುಂದೆ ಸಣ್ಣಪುಟ್ಟ ಸಭೆ ಅಥವಾ ಮಾಧ್ಯಮಗಳ ಜತೆ ಮಾತನಾಡಲು ಹೊಸ ಕೊಠಡಿ ಬಳಸಿಕೊಳ್ಳಲಿದ್ದಾರೆ.

ತಮಗೆ ನೀಡಿದ ಹೊಸ ಕೊಠಡಿಯಲ್ಲಿ ಕುಳಿತಿದ್ದ ಈಶ್ವರಪ್ಪಗೆ ಶುಭ ಕೋರಲು ಬಂದ ಬಿಜೆಪಿಯ ತಾರಾ, ಶ್ರೀನಿವಾಸಪೂಜಾರಿ ಮತ್ತು ಭಾನುಪ್ರಕಾಶ್‌ ‘ಕಾಯಂ ಆಗಿ ಇಲ್ಲೇ ಇರಿ ಎಂದು ಹಾರೈಸುವುದಿಲ್ಲ. ಇನ್ನು ಮೂರು ತಿಂಗಳಲ್ಲಿ ಕಾಂಗ್ರೆಸ್‌ನವರು ಇಲ್ಲಿ ಬಂದು ಕುಳಿತುಕೊಳ್ಳುತ್ತಾರೆ. ಆಗ ನೀವು ಜಾಗ ತೆರವು ಮಾಡಬೇಕಾಗುತ್ತದೆ’ ಎಂದು ಹೇಳಿದಾಗ ಈಶ್ವರಪ್ಪ ಜೋರಾಗಿ ನಕ್ಕರು. ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿಸೋಜಾ  ಕೊಠಡಿಗೆ ಬಂದು ಶುಭಕೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry