ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂಧನ ಬೆಲೆ: ವ್ಯಾಟ್‌ ಕಡಿತ ಮಾಡಿದ ನಾಲ್ಕು ರಾಜ್ಯಗಳು’

Last Updated 5 ಫೆಬ್ರುವರಿ 2018, 19:42 IST
ಅಕ್ಷರ ಗಾತ್ರ

ನವದೆಹಲಿ : ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಸ್ಥಳೀಯ ಮಾರಾಟ ತೆರಿಗೆ ಅಥವಾ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್‌) ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ ಕಡಿತ ಮಾಡಿವೆ ಎಂದು ಲೋಕಸಭೆಗೆ ಮಾಹಿತಿ ನೀಡಲಾಗಿದೆ.

2017ರ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರವು ಈ ಎರಡೂ ಇಂಧನಗಳ ಮೇಲಿನ ಎಕ್ಸೈಸ್‌ ಸುಂಕವನ್ನು ಪ್ರತಿ ಲೀಟರ್‌ಗೆ ₹ 2ರಂತೆ ತಗ್ಗಿಸಿತ್ತು. ರಾಜ್ಯಗಳೂ ಇದೇ ರೀತಿ ‘ವ್ಯಾಟ್‌’ ದರ ಕಡಿಮೆ ಮಾಡಬೇಕು ಎಂದು ಮನವಿ ಮಾಡಿಕೊಂಡಿತ್ತು. ಇದಕ್ಕೆ ನಾಲ್ಕು ರಾಜ್ಯಗಳು ಮಾತ್ರ ಸ್ಪಂದಿಸಿವೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಬಿಜೆಪಿ 19 ರಾಜ್ಯಗಳಲ್ಲಿ ಅಧಿಕಾರದಲ್ಲಿ ಇದೆ. ಕೇಂದ್ರ ಸರ್ಕಾರವು ಎಕ್ಸೈಸ್‌ ಸುಂಕ ಕಡಿತ ಮಾಡಿದ ನಂತರ ಮಹಾರಾಷ್ಟ್ರ, ಗುಜರಾತ್‌, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳು ‘ವ್ಯಾಟ್‌’ ತಗ್ಗಿಸಿದ್ದವು. ಕೇಂದ್ರ ಸರ್ಕಾರವು 2014 ರಿಂದ 2016ರ ಜನವರಿ ಅವಧಿಯಲ್ಲಿ 9 ಬಾರಿ ಎಕ್ಸೈಸ್‌ ಸುಂಕ ಹೆಚ್ಚಿಸಿತ್ತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆ ಆಧರಿಸಿ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ನಿಗದಿ ಮಾಡಲಾಗುತ್ತಿದೆ. ಇವುಗಳ ಚಿಲ್ಲರೆ ಮಾರಾಟ ದರದಲ್ಲಿ (ಆರ್‌ಎಸ್‌ಪಿ) ಎಕ್ಸೈಸ್‌ ಸುಂಕ, ವ್ಯಾಟ್‌, ಮಾರುಕಟ್ಟೆ ವೆಚ್ಚ, ವಿತರಕರ ಕಮಿಷನ್‌ ಮತ್ತು ಲಾಭ ಒಳಗೊಂಡಿರುತ್ತದೆ.

4 ವರ್ಷಗಳ ಗರಿಷ್ಠ ಮಟ್ಟಕ್ಕೆ

ಸದ್ಯಕ್ಕೆ ಪೆಟ್ರೋಲ್‌ ಬೆಲೆ ನಾಲ್ಕು ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ಸೋಮವಾರ ಪ್ರತಿ ಲೀಟರ್‌ಗೆ ₹ 74.45ಕ್ಕೆ  ಮತ್ತು ಡೀಸೆಲ್‌ ಬೆಲೆ ₹ 65.40ಕ್ಕೆ ತಲುಪಿದೆ. ಎಕ್ಸೈಸ್‌ ಸುಂಕವನ್ನು ₹ 2 ರಷ್ಟು ಕಡಿಮೆ ಮಾಡಿದ ಸಂದರ್ಭದಲ್ಲಿ (2017ರ ಅಕ್ಟೋಬರ್‌ 3) ಪೆಟ್ರೋಲ್ ಬೆಲೆ ₹ 71.87 ರ ಆಸುಪಾಸಿನಲ್ಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT