ಸೋಮವಾರ, ಡಿಸೆಂಬರ್ 9, 2019
22 °C

ಓಡಾಡುತ್ತಲೇ ಇದ್ದ ಶಾಸಕ ಜಮೀರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಓಡಾಡುತ್ತಲೇ ಇದ್ದ ಶಾಸಕ ಜಮೀರ್

ಬೆಂಗಳೂರು: ಜೆಡಿಎಸ್‌ನಿಂದ ಅಮಾನತುಗೊಂಡಿರುವ ಜಮೀರ್ ಅಹಮದ್‌ ಹಾಗೂ ಚೆಲುವರಾಯಸ್ವಾಮಿ  ಜಂಟಿ ಸದನವನ್ನು ಉದ್ದೇಶಿಸಿ ರಾಜ್ಯಪಾಲರ ಭಾಷಣ ಮಾಡುತ್ತಿದ್ದಾಗ ಅತ್ತಿಂದಿತ್ತ ಓಡಾಡುತ್ತಲೇ ಇದ್ದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷರೂ ಆಗಿರುವ ಕಾಂಗ್ರೆಸ್‌ನ ಕೆ. ವೆಂಕಟೇಶ್ ಪಕ್ಕದಲ್ಲಿ ( ಕಾಂಗ್ರೆಸ್‌ನ ಎಚ್‌.ವೈ. ಮೇಟಿಗೆ ಮೀಸಲಾಗಿದ್ದ ಆಸನ) ಸುಮಾರು 48 ನಿಮಿಷ  ಕುಳಿತಿದ್ದ ಜಮೀರ್ ಚರ್ಚೆ ನಡೆಸುತ್ತಿದ್ದರು. ಈ ಇಬ್ಬರು ಒಟ್ಟಿಗೆ ಹೊರಟು ಬಿಡಿಎ ಸದಸ್ಯ ಬೈರತಿ ಬಸವರಾಜು ಬಳಿ ಹೋಗಿ ಕೆಲ ಹೊತ್ತು ಮಾತನಾಡಿದರು. ಮತ್ತೆ ಇಬ್ಬರೂ ಒಟ್ಟಿಗೆ ಸಭಾಂಗಣದಿಂದ ಹೊರ ಹೋದರು.

ಇದೇ ಹೊತ್ತಿಗೆ ಸದನಕ್ಕೆ ಬಂದ ಚೆಲುವರಾಯಸ್ವಾಮಿ, ಜೆಡಿಎಸ್‌ ಸದಸ್ಯರಿಗೆ ಮೀಸಲಾಗಿದ್ದ ಆಸನದಲ್ಲಿ ಕ್ಷಣ ಹೊತ್ತು ಕುಳಿತರು. ಅಲ್ಲಿಂದ ಹೊರಟ ಅವರು ಸಚಿವರಾದ ಡಿ.ಕೆ. ಶಿವಕುಮಾರ್, ಎಚ್‌.ಸಿ. ಮಹದೇವಪ್ಪ ಮಧ್ಯೆ ಇರುವ (ರಮಾನಾಥ ರೈಗೆ ಮೀಸಲಾದ) ಆಸನದಲ್ಲಿ ಕುಳಿತು, 15 ನಿಮಿಷ ಚರ್ಚಿಸಿದರು.

ಜಮೀರ್‌ ಮತ್ತು ಚೆಲುವರಾಯಸ್ವಾಮಿ ಇಬ್ಬರೂ ಒಟ್ಟಿಗೆ ಕೆಲವು ಶಾಸಕರನ್ನು ಮಾತನಾಡಿಸಿ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಜಿ. ಪರಮೇಶ್ವರ ಅವರ ಹಿಂದೆ ನಿಂತುಕೊಂಡು ಸಮಾಲೋಚನೆ ನಡೆಸಿದರು.

ಓಡಾಡುತ್ತಲೇ ಇದ್ದ ಸಚಿವ ಡಿಕೆಶಿ: ರಾಜ್ಯಪಾಲರು ಭಾಷಣ ಆರಂಭಿಸಿ ಐದು ನಿಮಿಷದ ಬಳಿಕ ಸದನಕ್ಕೆ ಬಂದ ಸಚಿವ ಶಿವಕುಮಾರ್, ಕೆಲಹೊತ್ತು ತಮಗೆ ಮೀಸಲಾದ ಜಾಗದಲ್ಲಿ ಕುಳಿತಿದ್ದರು. ಅಲ್ಲಿಂದ ಎದ್ದ ಅವರು, ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್‌ ಬಳಿ ಹೋಗಿ ಕೆಲ ಹೊತ್ತು ಮಾತುಕತೆ ನಡೆಸಿದರು. ಅದಾದ ಬಳಿಕ ಕಾಂಗ್ರೆಸ್ ಸದಸ್ಯರನ್ನು ಮಾತನಾಡಿಸುತ್ತಾ ಓಡಾಡುತ್ತಲೇ ಇದ್ದರು.

ತಮ್ಮ ಹಿಂದಿನ ಸಾಲಿನಲ್ಲಿದ್ದ ಉಮೇಶ ಜಾಧವ್‌ ಪಕ್ಕ ಹೋದ ಡಿಕೆಶಿ ಅಲ್ಲಿಯೇ ಕುಳಿತರು. ಅಷ್ಟೊತ್ತಿಗೆ ರಾಜ್ಯಪಾಲರು ಇಂಧನ ಇಲಾಖೆಯ ಸಾಧನೆ ವಿವರಿಸಲಾರಂಭಿಸಿದರು. ಆಗ ಭಾಷಣ ಪ್ರತಿಯತ್ತ ಡಿಕೆಶಿ ತನ್ಮಯರಾದರು. ಇಲಾಖೆ ಶ್ಲಾಘನೆ ಮುಗಿಯುತ್ತಿದ್ದಂತೆ ಮತ್ತೆ ಚರ್ಚೆಯಲ್ಲಿ ತೊಡಗಿದರು.

ಜಂಟಿ ಅಧಿವೇಶನಕ್ಕೂ ನಿರಾಸಕ್ತಿ: 14 ನೇ ವಿಧಾನಸಭೆಯ ಅವಧಿ ಇದೇ ಮೇ 28ಕ್ಕೆ ಕೊನೆಯಾಗಲಿದೆ. ಹೀಗಾಗಿ, ಈಗ ಆಯ್ಕೆಯಾಗಿರುವ ವಿಧಾನಸಭಾ ಸದಸ್ಯರಿಗೆ ಇದೇ ಕೊನೆಯ ಅಧಿವೇಶನ. ವಿಧಾನಸಭೆ, ಪರಿಷತ್ತಿನ  294 (ವಿಧಾನಸಭೆಯ 225 ಸದಸ್ಯರ ಪೈಕಿ ಇಬ್ಬರು ನಿಧನರಾಗಿದ್ದು, ನಾಲ್ವರು ರಾಜೀನಾಮೆ ಕೊಟ್ಟಿದ್ದಾರೆ) ಸದಸ್ಯರ ಪೈಕಿ 185 ಸದಸ್ಯರು ಮಾತ್ರ ಹಾಜರಾಗಿದ್ದರು. ವಿರೋಧ ಪಕ್ಷದ ಸಾಲಿನಲ್ಲಿ ಹಾಜರಾತಿ ಕಡಿಮೆ ಇತ್ತು.

ರಾಜ್ಯಪಾಲರ ಭಾಷಣ ಮುಗಿದ ಬಳಿಕ ಕಲಾಪ ಮುಂದೂಡಲಾಯಿತು. ಮತ್ತೆ ಕಲಾಪ ಆರಂಭವಾದಾಗ ವಿಧಾನಸಭೆಯ 219 ಸದಸ್ಯರ ಪೈಕಿ ಕೇವಲ 45 ಸದಸ್ಯರು ಮಾತ್ರ ಸದನದಲ್ಲಿ ಇದ್ದರು.

ಸಚಿವರು, ಎಚ್‌ಡಿಕೆ ಗೈರು: ಸಚಿವರಾದ ರಮಾನಾಥ ರೈ, ಎಚ್.ಆಂಜನೇಯ, ಎಸ್.ಎಸ್. ಮಲ್ಲಿಕಾರ್ಜುನ, ಶರಣ ಪ್ರಕಾಶ ಪಾಟೀಲ ಅಧಿವೇಶನದಲ್ಲಿ ಹಾಜರಿರಲಿಲ್ಲ.

ರಾಜ್ಯಪಾಲರ ಭಾಷಣ ಆರಂಭವಾಗಿ 10 ನಿಮಿಷದ ಬಳಿಕ ಸಚಿವರಾದ ಕೃಷ್ಣಪ್ಪ, ವಿನಯಕುಲಕರ್ಣಿ ಸದನಕ್ಕೆ ಬಂದರು.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ಶಾಸಕರಾದ ಎಚ್.ಡಿ. ರೇವಣ್ಣ, ವೈ.ಎಸ್‌.ವಿ. ದತ್ತ ಹಾಜರಿರಲಿಲ್ಲ. ಜೆಡಿಎಸ್‌ ಸದಸ್ಯರ ಹಾಜರಾತಿ ಅತ್ಯಂತ ಕಡಿಮೆ ಇತ್ತು.

ಬಿಜೆಪಿಯ ವಿ. ಸೋಮಣ್ಣ ಭಾಷಣ ಪೂರ್ಣಗೊಳ್ಳುವ ಮುನ್ನವೇ ಹೊರಟು ಹೋದರು. ರಾಜ್ಯಪಾಲರು ಭಾಷಣದ ಕೊನೆಯ ಪ್ಯಾರಾ ಓದುತ್ತಿದ್ದಾಗ ಜೆಡಿಎಸ್‌ನ ಡಿ. ನಾಗರಾಜಯ್ಯ ಸದನದ ಒಳಗೆ ಬಂದರು.

ಹಿಂದಿ ಭಾಷೆಯ ಪ್ರತಿಗಳಿಗೆ ಬೇಡಿಕೆ ಇಲ್ಲ: ರಾಜ್ಯಪಾಲರ ಭಾಷಣವನ್ನು ಹಿಂದಿ, ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಮುದ್ರಿಸಲಾಗಿತ್ತು. ಆದರೆ, ಹಿಂದಿ ಭಾಷಣದ ಪ್ರತಿಯನ್ನು ಕೇಳುವವರೇ ಇರಲಿಲ್ಲ.

ಎಲ್ಲ ಸದಸ್ಯರಿಗೂ ಮೂರೂ ಭಾಷೆಯ ಪ್ರತಿ ನೀಡಲಾಗಿತ್ತು. ಬಹುತೇಕರು ಹಿಂದಿ ಪ್ರತಿಯನ್ನು ವಾಪಸ್ ಕೊಟ್ಟರು. ಸಚಿವ ಆರ್.ವಿ. ದೇಶಪಾಂಡೆ ಕೆಲಹೊತ್ತು ಹಿಂದಿ ಪ್ರತಿ ಓದುತ್ತಿದ್ದರು. ಬಳಿಕ ಇಂಗ್ಲಿಷ್‌ ಪ್ರತಿ ಹಿಡಿದರು. ಬಿಜೆಪಿಯ ಲಹರ್ ಸಿಂಗ್ ಹಿಂದಿ ಪ್ರತಿಯನ್ನೇ ಓದುತ್ತಿದ್ದರು.

ಪ್ರತಿಕ್ರಿಯಿಸಿ (+)