ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪದಕ ಗೆದ್ದು ವಿದಾಯ ಹೇಳುವ ಗುರಿ’

ಭಾರತದ ಲೂಜ್‌ ಸ್ಪರ್ಧಿ ಶಿವ ಕೇಶವನ್‌ ಮನದ ಮಾತು
Last Updated 5 ಫೆಬ್ರುವರಿ 2018, 19:47 IST
ಅಕ್ಷರ ಗಾತ್ರ

ನವದೆಹಲಿ: ‘ಮುಂಬರುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಅಂತರರಾಷ್ಟ್ರೀಯ ಕ್ರೀಡಾ ಬದುಕಿಗೆ ವಿದಾಯ ಹೇಳುವ ಗುರಿ ಇಟ್ಟುಕೊಂಡಿದ್ದೇನೆ’ ಎಂದು ಭಾರತದ ಲೂಜ್‌ ಸ್ಪರ್ಧಿ ಶಿವ ಕೇಶವನ್‌ ತಿಳಿಸಿದ್ದಾರೆ.

ಫೆಬ್ರುವರಿ 9ರಿಂದ 25ರವರೆಗೆ ದಕ್ಷಿಣ ಕೊರಿಯಾದಲ್ಲಿ ನಡೆಯುವ  ಒಲಿಂಪಿಕ್ಸ್‌ನಲ್ಲಿ ಶಿವ ಸ್ಪರ್ಧಿಸುತ್ತಿದ್ದಾರೆ. ಅವರು ಭಾಗವಹಿಸುತ್ತಿರುವ ಆರನೇ ಒಲಿಂಪಿಕ್ಸ್‌ ಇದು.

‘ನನಗೆ ಈಗ 36 ವರ್ಷ. 22 ವರ್ಷಗಳ ಕಾಲ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದೇನೆ. ಈ ಬಾರಿಯ ಒಲಿಂಪಿಕ್ಸ್‌ ನನ್ನ ಪಾಲಿಗೆ ಕೊನೆಯದ್ದು, ಇದರಲ್ಲಿ ಪದಕ ಗೆಲ್ಲಲು ಶ್ರಮಿಸುತ್ತೇನೆ’ ಎಂದು ಶಿವ ಅವರು ಹೇಳಿದ್ದಾರೆ.

ಹಿಮಾಚಲ ಪ್ರದೇಶದ ಮನಾಲಿನಲ್ಲಿ ಹುಟ್ಟಿ ಬೆಳೆದ ಶಿವ, ಏಷ್ಯಾ ಲೂಜ್ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ಬಾರಿ ಚಿನ್ನ ಗೆದ್ದಿದ್ದಾರೆ. 2011, 2012, 2016 ಮತ್ತು 2017ರಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು. ಜೊತೆಗೆ ನಾಲ್ಕು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳಿಗೂ ಕೊರಳೊಡ್ಡಿದ್ದಾರೆ.

‘2014ರಲ್ಲಿ ಐಒಸಿ, ಭಾರತ ಒಲಿಂಪಿಕ್‌ ಸಂಸ್ಥೆಯನ್ನು (ಐಒಎ) ಅಮಾನತು ಮಾಡಿತ್ತು. ಹೀಗಾಗಿ ಆ ವರ್ಷ ನಡೆದಿದ್ದ ಸೋಚಿ ಒಲಿಂಪಿಕ್ಸ್‌ನಲ್ಲಿ ಐಒಸಿ ಧ್ವಜದಡಿ ಸ್ಪರ್ಧಿಸಿದ್ದೆ. ಅದನ್ನು ಬಿಟ್ಟು ಉಳಿದೆಲ್ಲಾ ಕೂಟಗಳಲ್ಲಿ ತ್ರಿವರ್ಣ ಧ್ವಜದಡಿ ಭಾಗವಹಿಸಿದ್ದು ಹೆಮ್ಮೆಯ ವಿಷಯ’ ಎಂದಿದ್ದಾರೆ.

ಕೇಶವನ್‌ 2006ರ ಕೂಟದಲ್ಲಿ 25ನೇ ಸ್ಥಾನ ಗಳಿಸಿದ್ದರು. ಇದು    ಅವರ ಶ್ರೇಷ್ಠ ಒಲಿಂಪಿಕ್ಸ್‌ ಸಾಧನೆಯಾಗಿದೆ. ಈ ಬಾರಿ ಸರ್ಕಾರದಿಂದ  ಹಣಕಾಸಿನ ನೆರವು ಪಡೆದಿರುವ ಅವರು ಮೊದಲ ಬಾರಿಗೆ ವೈಯಕ್ತಿಕ ಕೋಚ್‌ ಜೊತೆ ಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ ಪದಕದ ಕನಸು ಗರಿಗೆದರಿದೆ.

‘ಜರ್ಮನಿಯಲ್ಲಿ ನಡೆದಿದ್ದ ಸ್ಪರ್ಧೆಯೊಂದರ ವೇಳೆ ಸಂಭವಿಸಿದ ಅಪಘಾತದಲ್ಲಿ ಕೈಗೆ ಗಾಯವಾಗಿತ್ತು. ಇದರ ನಡುವೆಯೂ ಕಠಿಣ ತಾಲೀಮು ನಡೆಸಿದ್ದೇನೆ. ಫೆಬ್ರುವರಿ 10 ಮತ್ತು 11ರಂದು ಲೂಜ್‌ ಸ್ಪರ್ಧೆ ಇದ್ದು ಅಷ್ಟರೊಳಗೆ ಸಂಪೂರ್ಣವಾಗಿ ಗುಣಮುಖನಾಗುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT