ಶುಕ್ರವಾರ, ಡಿಸೆಂಬರ್ 6, 2019
25 °C

ಬೀನ್ಸ್‌, ಗೆಡ್ಡೆ ಕೋಸು, ಹಣ್ಣುಗಳ ಬೆಲೆ ಕೊಂಚ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀನ್ಸ್‌, ಗೆಡ್ಡೆ ಕೋಸು, ಹಣ್ಣುಗಳ ಬೆಲೆ ಕೊಂಚ ಏರಿಕೆ

ಮಂಡ್ಯ: ಕಳೆದ ಒಂದು ವಾರದಿಂದ ತರಕಾರಿ ಬೆಲೆಯಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ಎಲ್ಲೆಡೆ ಮದುವೆಗಳು ನಡೆಯುತ್ತಿರುವ ಕಾರಣ ತರಕಾರಿ ಬೆಲೆ ಹೆಚ್ಚಳವಾಗುವ ಮುಸ್ಸೂಚನೆ ಸಿಕ್ಕಿದೆ.

ಕಳೆದ ವಾರ ಗೆಡ್ಡೆಕೋಸಿನ ಬೆಲೆ ಪಾತಾಳಕ್ಕೆ ತಲುಪಿತ್ತು. ಕೆ.ಜಿ ₹ 10ಕ್ಕೆ ಮಾರಾಟವಾಗುತ್ತಿತ್ತು. ಕೆಲವೆಡೆ ರೈತರು ಎತ್ತಿನಗಾಡಿಯಲ್ಲಿ ತಂದು ₹ 8ಕ್ಕೆ ಮಾರಾಟ ಮಾಡುತ್ತಿದ್ದರು. ಆದರೆ ಈ ವಾರ ₹ 20ಕ್ಕೇರಿದೆ. ಇನ್ನೂ ಬೀನ್ಸ್‌ ಬೆಲೆ ಕೂಡ ಹೆಚ್ಚಳವಾಗಿದ್ದು ಮಾರು ಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗಿದೆ.

ರೈತರು ಮದುವೆಮನೆಗಳಿಗೆ ನೇರವಾಗಿ ಬೀನ್ಸ್‌ ಪೂರೈಸುತ್ತಿರುವ ಕಾರಣ ಮಾರುಕಟ್ಟೆಗೆ ಬರುತ್ತಿರುವ ಮಾಲಿನಲ್ಲಿ ಕುಸಿತವಾಗಿದೆ. ಹೀಗಾಗಿ ಈ ವಾರ ಬೀನ್ಸ್‌ ಬೆಲೆ ₹ 30ಕ್ಕೇರಿದೆ. ಕಳೆದ ವಾರ ₹ 15ಕ್ಕೆ ಮಾರಾಟವಾಗುತ್ತಿತ್ತು.

‘ಮುಂದಿನ ವಾರಕ್ಕೆ ಎಲ್ಲಾ ತರಕಾರಿಗಳ ಬೆಲೆ ಹೆಚ್ಚಳವಾಗಲಿದೆ. ಈ ವಾರ ಮಾರುಕಟ್ಟೆಗೆ ಬಂದಿರುವ ತರಕಾರಿ ಪ್ರಮಾಣ ಕುಸಿದಿದೆ. ಇದು ಬೆಲೆ ಏರಿಕೆಗೆ ಮುನ್ಸೂಚನೆ’ ಎಂದು ತರಕಾರಿ ವ್ಯಾಪಾರಿ ರಮೇಶ್‌ಗೌಡ ಹೇಳಿದರು.

ಟೊಮೆಟೊ ಬೆಲೆ ಕೂಡ ಕೊಂಚ ಹೆಚ್ಚಳ ಕಂಡಿದೆ. ಕಳೆದ ವಾರ ₹ 5ಕ್ಕೆ ಕೆ.ಜಿ ಟೊಮೆಟೊ ಸಿಗುತ್ತಿತ್ತು. ಈವಾರ ₹ 10ಕ್ಕೆ ಮಾರಾಟವಾಗುತ್ತಿದೆ. ಇನ್ನು ಆಲೂಗಡ್ಡೆ, ಹೂಕೋಸು, ಬೆಂಡೆಕಾಯಿ, ಈರೆಕಾಯಿ, ತೊಂಡೆಕಾಯಿ, ಕ್ಯಾರೇಟ್‌, ಬೀಟರೂಟ್‌ ₹ 20ಕ್ಕೆ ಮಾರಾಟವಾಗುತ್ತಿವೆ. ಸುವರ್ಣಗೆಡ್ಡೆ, ಚಪ್ಪರದ ಅವರೆ ಹಾಗೂ ಹಸಿ ಬಟಾಣಿ ಬೆಲೆ ₹ 40 ಇದೆ. ಈರುಳ್ಳಿ ಬೆಲೆ ಕಳೆದ ತಿಂಗಳಿಂದ ಸ್ಥಿರವಾಗಿದ್ದು ₹ 40ಕ್ಕೆ ಮಾರಾಟವಾಗುತ್ತಿದೆ.

‘ಟೊಮೆಟೊ, ಕ್ಯಾರೇಟ್‌, ಬೀಟ ರೂಟ್‌ ಬೆಲೆ ಹೆಚ್ಚಳವಾಗದಿದ್ದರೆ ಅಷ್ಟೇ ಸಾಕು. ಈ ಮೂರು ಅಡುಗೆಮನೆಯ ಅಮೂಲ್ಯ ತರಕಾರಿಗಳು’ ಎಂದು ಗೃಹಿಣಿ ಲಕ್ಷ್ಮಿ ತಿಳಿಸಿದರು. ಕೊತ್ತಂಬರಿ ಬೆಲೆಯಲ್ಲಿ ಕೊಂಚ ಹೆಚ್ಚಳವಾಗಿದೆ. ಫಾರಂ ಕೊತ್ತಂಬರಿ ಒಂದು ಕಟ್ಟಿಗೆ ₹ 8, ನಾಟಿ ಕೊತ್ತಂಬರಿ ₹ 10ಕ್ಕೆ ಮಾರಾಟವಾಗುತ್ತಿದೆ. ಇನ್ನು ಪಾಲಕ್, ಕೀರೆ, ಸಬ್ಬಸಿಗೆ, ಮೆಂಥೆ, ದಂಟು, ಕಿಲ್‌ಕೀರೆ, ಪುದೀನಾ ಸೊಪ್ಪು ₹ 5ಕ್ಕೆ ಮಾರಾಟವಾಗುತ್ತಿದೆ. ಕಟ್ಟು ಕರಿಬೇವಿನ ಸೊಪ್ಪಿಗೆ ₹ 10 ಇದೆ.

ಹೂವಿನ ಬೆಲೆ ಸ್ಥಿರತೆ ಕಾಯ್ದು ಕೊಂಡಿದೆ. ಮಾರು ಕಾಕಡ ₹ 40, ಚೆಂಡು ಹೂವು ₹ 20, ಸೇವಂತಿಗೆ ₹ 30, ಮೈಸೂರು ಮಲ್ಲಿಗೆ ₹ 100ರಂತೆ ಮಾರಾಟವಾಗುತ್ತಿವೆ. ಹಾರಗಳ ಬೆಲೆ ಕಡಿಮೆ ಇದ್ದು ಸಣ್ಣ ಹಾರ ₹ 40, ದೊಡ್ಡ ಹಾರ ₹ 150ರಂತೆ ಮಾರಾಟ ನಡೆಯುತ್ತಿದೆ.

ಹಣ್ಣಿನ ಬೆಲೆ ಏರಿಕೆ: ಹಣ್ಣಿನ ಬೆಲೆ ಹೆಚ್ಚಿದ್ದು, ಕೆ.ಜಿ. ವಾಷಿಂಗ್‌ ಟನ್‌ ಸೇಬು ₹ 140, ಕಪ್ಪು ದ್ರಾಕ್ಷಿ ₹ 120ಕ್ಕೆ ಮಾರಾಟ ವಾಗುತ್ತಿದೆ. ಅನಾನಸ್ ಹಣ್ಣು ಒಂದಕ್ಕೆ ₹ 30ಕ್ಕೆಮಾರಾಟವಾಗುತ್ತಿದೆ.

ದಾಳಿಂಬೆ ₹ 100ಕ್ಕೆ ಏರಿಕೆ ಕಂಡಿದೆ. ಮೋಸಂಬಿ ಬೆಲೆ ಕಳೆದ ವಾರ ₹ 40 ಇತ್ತು. ಈ ವಾರ ₹ 80ಕ್ಕೆ ಏರಿದೆ. ಸಪೋಟ ₹ 60ಕ್ಕೆ ಮಾರಾಟವಾಗುತ್ತಿವೆ. ಕೆ.ಜಿ ಕರಬೂಜ ಕಳೆದ ವಾರ ₹ 15ಕ್ಕೆ ಮಾರಾಟವಾಗುತ್ತಿತ್ತು. ಈ ವಾರ ₹ 25ಕ್ಕೆ ಏರಿಕೆ ಕಂಡಿದೆ. ಏಲಕ್ಕಿ ಬಾಳೆ ಹಣ್ಣು ₹ 70, ಪಚ್ಚ ಬಾಳೆ ₹ 40ಕ್ಕೆ ಮಾರಾಟವಾಗುತ್ತಿವೆ.

ಪ್ರತಿಕ್ರಿಯಿಸಿ (+)