ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗನ ಕಾಯಿಲೆ: ತುರ್ತು ಕ್ರಮಕ್ಕೆ ಡಿಸಿ ಸೂಚನೆ

Last Updated 6 ಫೆಬ್ರುವರಿ 2018, 6:58 IST
ಅಕ್ಷರ ಗಾತ್ರ

ಶಿವಮೊಗ್ಗ: ಮಂಗನ ಕಾಯಿಲೆ ಹರಡುವುದನ್ನು ತಡೆಯಲು ವ್ಯಾಪಕ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್  ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಮಂಗನ ಕಾಯಿಲೆ ತಡೆಯುವ ಕುರಿತು ಹಿರಿಯ ವೈದ್ಯಾಧಿಕಾರಿಗಳ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು.

ಮಂಗನ ಕಾಯಿಲೆ ದೃಢೀಕರಿಸಲು ಪುಣೆಯ ಪ್ರಯೋಗಾಲಯಕ್ಕೆ ಸತ್ತ ಮಂಗನ ಜೈವಿಕ ಅಂಶಗಳನ್ನು ಕಳುಹಿಸಲಾಗಿದ್ದು, ವರದಿ ಸಿಗುವುದು ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೋಗ ಪತ್ತೆ ಉಪಕರಣ ಖರೀದಿಸಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಮಂಗ ಸಾವಿಗೀಡಾಗಿರುವುದು ಕಂಡು ಬಂದಲ್ಲಿ ತಕ್ಷಣ ಸ್ಥಳೀಯ ಆರೋಗ್ಯ ಅಧಿಕಾರಿಗಳ, ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು. ಯಾವುದೇ ಕಾರಣದಿಂದ ಮಂಗ ಸತ್ತಿದ್ದರೂ ಸಾವಿಗೀಡಾದ ಮಂಗನ ಹತ್ತಿರ ಹೋಗಬಾರದು. ಕಾಡಿಗೆ ಹೋಗುವಾಗ ಮುಂಜಾಗರೂಕತಾ ಕ್ರಮವಾಗಿ ಡಿಎಂಪಿ ತೈಲವನ್ನು ಹಚ್ಚಿಕೊಳ್ಳಬೇಕು. ಮಂಗ ಸತ್ತ ಜಾಗದಲ್ಲಿ ಕನಿಷ್ಠ ಒಂದು ವಾರ ಓಡಾಡಬಾರದು. ಆರೋಗ್ಯ ಇಲಾಖೆ ಅಧಿಕಾರಿಗಳು ಮಂಗ ಸತ್ತ ಪ್ರದೇಶದ 150 ಅಡಿ ವ್ಯಾಪ್ತಿಯಲ್ಲಿ ಮೆಲಾಥಿನ್ ಸಿಂಪಡಿಸಿ, ಮಂಗಗಳ ಶವಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಬೇಕು ಎಂದು ಮಾಹಿತಿ ನೀಡಿದರು.

ಜಾಗೃತಿ ಶಿಬಿರ: ಮಂಗನ ಕಾಯಿಲೆ ಕುರಿತು ಈಗಾಗಲೇ ತೀರ್ಥಹಳ್ಳಿ ತಾಲೂಕಿನಲ್ಲಿ ವೈದ್ಯಾಧಿಕಾರಿಗಳಿಗೆ ತರಬೇತಿ ನೀಡಲಾಗಿದ್ದು, ಸಾಗರ ಮತ್ತು ಸೊರಬ ತಾಲೂಕಿನಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಸಂಬಂಧಪಟ್ಟ ಪಿಡಿಒಗಳು, ಆಶಾ ಕಾರ್ಯಕರ್ತರು ಶಿಬಿರದಲ್ಲಿ ಭಾಗವಹಿಸಬೇಕು ಎಂದು ಸೂಚನೆ ನೀಡಿದರು.

ಮಂಗನ ಕಾಯಿಲೆ ವಿರುದ್ಧ ಲಸಿಕೆಯನ್ನು ಪ್ರಥಮ ವರ್ಷ ಎರಡು ಬಾರಿ ಹಾಗೂ ಪ್ರತಿ ವರ್ಷ ಒಂದು ಬಾರಿ ಹಾಕಬೇಕು. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಈಗಾಗಲೇ 43 ಸಾವಿರ ಮಂದಿಗೆ ಲಸಿಕೆ ಹಾಕಲಾಗಿದ್ದು, ಸಾಗರದಲ್ಲಿ 6 ಸಾವಿರ ಮಂದಿಗೆ ಲಸಿಕೆ ಹಾಕಲಾಗಿದೆ. ಮಂಗನ ಕಾಯಿಲೆ ಕಾಣಿಸಿಕೊಳ್ಳುವ ತಾಲ್ಲೂಕುಗಳಲ್ಲಿ ಕರ್ತವ್ಯ ನಿರ್ವಹಿಸುವ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು, ವಿದ್ಯಾರ್ಥಿಗಳು ತಪ್ಪದೆ ಲಸಿಕೆ ಹಾಕಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶದ ಕೆಲವೆಡೆ ಮಕ್ಕಳು ಕಾಡಿಗೆ ಹೋಗಿ ಬರುವವರಿರುತ್ತಾರೆ. ಮುಂಜಾಗರೂಕತೆಗಾಗಿ ಮಕ್ಕಳಿಗೆ ಚುಚ್ಚುಮದ್ದು ನೀಡಲು ಕ್ರಮ ಕೈಗೊಳ್ಳುವಂತೆ ಡಿಡಿಪಿಐ ಅವರಿಗೆ ಜಿಲ್ಲಾಧಿಕಾರಿ ತಿಳಿಸಿದರು.

ರೋಗದ ಲಕ್ಷಣಗಳು: ಸತ್ತ ಮಂಗನ ದೇಹದಿಂದ ಹೊರ ಬರುವ ಉಣ್ಣೆಗಳು ಕಚ್ಚಿದರೆ ಮನುಷ್ಯರಿಗೆ ಮಂಗನ ಕಾಯಿಲೆ ಬರುತ್ತದೆ. ಉಣ್ಣೆಗಳು ಕಚ್ಚಿದ 3ರಿಂದ 8 ದಿನಗಳ ಒಳಗಾಗಿ ಜ್ವರ, ತಲೆ, ಕೈ ಕಾಲು, ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಕಣ್ಣು ಕೆಂಪಗಾಗುವುದು, ವಸಡು, ಬಾಯಿ ಮತ್ತು ಮಲದಲ್ಲಿ ರಕ್ತ ಕಾಣಿಸಿಕೊಳ್ಳುವುದು ಎಂದು ತೀರ್ಥಹಳ್ಳಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಕಿರಣ್ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶಂಕರಪ್ಪ, ಡಿಡಿಪಿಐ ಮಚ್ಚಾದೋ ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಈ ವರ್ಷ ಈವರೆಗೆ 13 ಮಂಗನ ಕಾಯಿಲೆಯ ಪ್ರಕರಣಗಳು ಪತ್ತೆಯಾಗಿವೆ. ಮಂಗನ ಕಾಯಿಲೆಯಿಂದ ತೀರ್ಥಹಳ್ಳಿ ತಾಲೂಕಿನಲ್ಲಿ ಒಂದು ಸಾವು ಸಂಭವಿಸಿದೆ. 2014ರಲ್ಲಿ 147 ಮಂಗನ ಕಾಯಿಲೆ ಪ್ರಕರಣಗಳು, 2015ರಲ್ಲಿ 41ಪ್ರಕರಣಗಳು, 2016ರಲ್ಲಿ 13, 2017ರಲ್ಲಿ 37ಪ್ರಕರಣಗಳು ಪತ್ತೆಯಾಗಿತ್ತು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT