ಮಂಗಳವಾರ, ಡಿಸೆಂಬರ್ 10, 2019
26 °C

ರೈತರ ಸಮಸ್ಯೆಗೆ ಸ್ಪಂದನೆ; ಹೊಲಕ್ಕೆ ದಾರಿ ನಿರ್ಮಾಣ

ಡಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ರೈತರ ಸಮಸ್ಯೆಗೆ ಸ್ಪಂದನೆ; ಹೊಲಕ್ಕೆ ದಾರಿ ನಿರ್ಮಾಣ

ವಿಜಯಪುರ: ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೆ ವಾರ್ಷಿಕ ಬಿಡುಗಡೆಯಾಗುವ ₹ 2 ಕೋಟಿ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ ಹೊರತುಪಡಿಸಿ, ಹೆಚ್ಚಿನ ಮೊತ್ತವನ್ನು ರೈತರ ಹೊಲಕ್ಕೆ ದಾರಿ ನಿರ್ಮಿಸಲು ಮೀಸಲಿಡುವ ಮೂಲಕ ಸಿಂದಗಿ ಶಾಸಕ ರಮೇಶ ಭೂಸನೂರ ‘ರೈತ ಮಿತ್ರ’ ಆಗಿದ್ದಾರೆ.

ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಲ ಭಾಗ ನೀರಾವರಿಗೊಳಪಟ್ಟಿದೆ. ಈ ಭಾಗದಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯುತ್ತಾರೆ. ಕಟಾವಿನ ಸಂದರ್ಭ ಸೂಕ್ತ ರಸ್ತೆಯಿಲ್ಲದೆ, ಸಾಗಣೆಗೆ ಪರದಾಡುವುದು ಪ್ರತಿ ಬಾರಿಯೂ ತಪ್ಪದ ಗೋಳಾಟ.

ಇದಕ್ಕೆ ಪರಿಹಾರ ಕಲ್ಪಿಸಲು ಕ್ಷೇತ್ರದ ಶಾಸಕ ರಮೇಶ ಭೂಸನೂರ ಮುಂದಾಗಿದ್ದಾರೆ. ದಾರಿ ಸಮಸ್ಯೆ ಎದುರಾದ ಕಡೆ ತಮ್ಮ ಶಾಸಕರ ನಿಧಿಯಿಂದ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಿ, ರಸ್ತೆ ನಿರ್ಮಿಸಿ, ರೈತರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ.

2013–14ನೇ ಸಾಲಿನಲ್ಲಿ ₹ 27 ಲಕ್ಷ, 14–15ರಲ್ಲಿ ₹ 34 ಲಕ್ಷ, 15–16ರಲ್ಲಿ ₹ 14.50 ಲಕ್ಷ, 16–17ರಲ್ಲಿ ₹ 47 ಲಕ್ಷ ಸೇರಿದಂತೆ, ನಾಲ್ಕು ವರ್ಷದ ಅವಧಿಯಲ್ಲಿ ಒಟ್ಟು ₹ 1.22 ಕೋಟಿ ಮೊತ್ತವನ್ನು ರಸ್ತೆ ನಿರ್ಮಾಣಕ್ಕೆ ವ್ಯಯಿಸಿದ್ದಾರೆ.

ಸಮುದಾಯ ಭವನಕ್ಕೂ ಆದ್ಯತೆ...

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳ ಜನರ ಸಮುದಾಯ ಭವನ ನಿರ್ಮಾಣದ ಬೇಡಿಕೆಗೂ ಶಾಸಕ ರಮೇಶ ಭೂಸನೂರ ಸ್ಪಂದಿಸಿದ್ದು, ವ್ಯಾಪಕ ಪ್ರಮಾಣದಲ್ಲಿ ಅನುದಾನ ಮಂಜೂರು ಮಾಡಿದ್ದಾರೆ.

2013–14ನೇ ಸಾಲಿನಲ್ಲಿ ₹ 1.48 ಕೋಟಿ, 14–15ರಲ್ಲಿ ₹ 1.44 ಕೋಟಿ, 15–16ರಲ್ಲಿ ₹ 1.60 ಕೋಟಿ, 16–17ರಲ್ಲಿ ₹ 1.32 ಕೋಟಿ, 2017–18ರಲ್ಲಿ ₹ 79.50 ಲಕ್ಷ ಸೇರಿದಂತೆ, ನಾಲ್ಕು ವರ್ಷದ ಅವಧಿಯಲ್ಲಿ ಒಟ್ಟು ₹ 6.63 ಕೋಟಿ ಮೊತ್ತವನ್ನು 207 ಸಮುದಾಯ ಭವನ ನಿರ್ಮಾಣಕ್ಕೆ ಮಂಜೂರಾತಿ ಪಡೆದಿದ್ದಾರೆ.

ಇವುಗಳಲ್ಲಿ ಬಹುತೇಕ ಸಮುದಾಯ ಭವನದ ಕಾಮಗಾರಿ ಪೂರ್ಣಗೊಂಡು ಬಳಕೆಯಾಗುತ್ತಿದ್ದರೆ, ಇನ್ನೂ ಕೆಲವು ಶೇ 90ರಷ್ಟು ಕಾಮಗಾರಿ ಪೂರ್ಣಗೊಂಡು, ಮತ್ತಷ್ಟು ಅನುದಾನದ ನಿರೀಕ್ಷೆಯಲ್ಲಿವೆ. 2018–19ನೇ ಸಾಲಿನಲ್ಲಿ ಶಾಸಕರ ಅನುದಾನ ದೊರೆತರೆ ಪೂರ್ಣಗೊಳ್ಳುವ ನಿರೀಕ್ಷೆ ಆಯಾ ಗ್ರಾಮಗಳ ಗ್ರಾಮಸ್ಥರದ್ದಾಗಿದೆ.

ಐದು ವರ್ಷದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ₹ 48.50 ಲಕ್ಷ ಅನುದಾನವನ್ನು ರಮೇಶ ಭೂಸನೂರ ಒದಗಿಸಿದ್ದು, ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಲು 2015–16ನೇ ಸಾಲಿನಲ್ಲಿ ₹ 14 ಲಕ್ಷ ನೀಡಿದ್ದಾರೆ.

ಅನುದಾನ ಸದ್ಬಳಕೆ...

2013–14ರಲ್ಲಿ ₹ 1.96 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈ ಪೂರ್ಣ ಮೊತ್ತದಲ್ಲಿ 70 ಕಾಮಗಾರಿಗಳಿಗಾಗಿ ₹ 1,95,25,000 ಖರ್ಚಾಗಿದೆ. ಕೇವಲ ₹ 75,000 ಮಾತ್ರ ಖರ್ಚಾಗಬೇಕಿದೆ. 2014–15ರಲ್ಲೂ ಸಹ ₹ 2 ಕೋಟಿ ಬಿಡುಗಡೆಯಾಗಿದ್ದು, ಈ ಪೈಕಿ 72 ಕಾಮಗಾರಿಗಳಿಗೆ ₹ 1.96 ಕೋಟಿ ಖರ್ಚಾಗಿದ್ದು, ₹ 4 ಲಕ್ಷ ಉಳಿದಿದೆ.

2015–16ರಲ್ಲೂ ₹ 2 ಕೋಟಿ ಮಂಜೂರಾಗಿದ್ದು, ₹ 1,99,95,000 ಮೊತ್ತದ 66 ಕಾಮಗಾರಿ ನಡೆಸಲು ಅನುಮೋದನೆ ನೀಡಲಾಗಿದೆ. ಇದರಲ್ಲಿ ₹ 1.86 ಕೋಟಿ ಮೊತ್ತದ ಕಾಮಗಾರಿ ಪೂರ್ಣಗೊಂಡಿದ್ದು, ₹ 13 ಲಕ್ಷವಷ್ಟೇ ಉಳಿದಿದೆ. ಈ ಆರ್ಥಿಕ ಸಾಲಿನಲ್ಲಿ ಮಾತ್ರ ಬೆರಳೆಣಿಕೆ ಕಾಮಗಾರಿ ಪೂರ್ಣಗೊಂಡಿಲ್ಲ.

2016–17ರಲ್ಲಿ ₹ 2 ಕೋಟಿ ಮಂಜೂರಾಗಿದ್ದು, 63 ಕಾಮಗಾರಿ ಕೈಗೊಳ್ಳಲು ಪೂರ್ಣ ಮೊತ್ತಕ್ಕೆ ಅನುದಾನ ಮಂಜೂರು ಮಾಡಿರುವುದು ವಿಶೇಷ. ಇದರಲ್ಲಿ ₹ 1.15 ಕೋಟಿ ಮಾತ್ರ ವೆಚ್ಚವಾಗಿದ್ದು, ವರ್ಷ ಗತಿಸಿದರೂ ಹಲ ಕಾಮಗಾರಿಗಳು ಈ ಆರ್ಥಿಕ ವರ್ಷದಲ್ಲಿ ಪೂರ್ಣಗೊಂಡಿಲ್ಲ.

2017–18ನೇ ಸಾಲಿನಲ್ಲಿ ಬಿಡುಗಡೆಯಾದ ₹ 1.50 ಕೋಟಿ ಮೊತ್ತದಲ್ಲಿ, 32 ಕಾಮಗಾರಿ ಕೈಗೊಳ್ಳಲು ₹ 99.50 ಲಕ್ಷ ಮೊತ್ತಕ್ಕೆ ಅನುದಾನ ಮಂಜೂರು ಮಾಡಿದ್ದಾರೆ. ಇದರಲ್ಲಿ ಈಗಾಗಲೇ ₹ 39.60 ಲಕ್ಷ ಮೊತ್ತ ಖರ್ಚಾಗಿದೆ.

ಅನುದಾನ ಸದ್ಬಳಕೆಯ ತೃಪ್ತಿ

‘ಶಾಸಕರ ನಿಧಿಯಲ್ಲಿ ಮಂಜೂರು ಮಾಡಿರುವ ಅನುದಾನ ಎಲ್ಲೂ ದುರ್ಬಳಕೆಯಾಗಿಲ್ಲ. ರೈತರ ಹೊಲಕ್ಕೆ ತೆರಳಲು ದಾರಿ ನಿರ್ಮಿಸಲು, ಗ್ರಾಮೀಣ ಪ್ರದೇಶದಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೂ ಅನುದಾನ ನೀಡಿರುವೆ’ ಎಂದು ಶಾಸಕ ರಮೇಶ ಭೂಸನೂರ ತಿಳಿಸಿದರು.

‘ಢವಳಾರ, ಬೋರಗಿ, ಖಾನಾಪುರ, ಗೂಗಿಹಾಳ, ರಾಮನಹಳ್ಳಿ, ಗೊರನಾಳ ಬಳಿಯ ಬನ್ನಟ್ಟಿಯಲ್ಲಿ ಗ್ರಾಮ ವಾಸ್ತವ್ಯ ನಡೆಸಿ, ಗ್ರಾಮ ವಿಕಾಸ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಪೂರಕವಾಗುವಂತೆ ಅನುದಾನ ಬಿಡುಗಡೆ ಮಾಡಿರುವೆ.

ಕಾನೂನು ತೊಡಕಿನಿಂದ ಶೇ 100 ಬಳಕೆ ಸಾಧ್ಯವಾಗಿಲ್ಲ. 2017–18ನೇ ಸಾಲಿನಲ್ಲಿ ಗುತ್ತಿಗೆಯಲ್ಲೂ ಮೀಸಲಾತಿ ಜಾರಿಗೊಳಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ಆರು ತಿಂಗಳು ಅನುದಾನವನ್ನು ವಿಳಂಬವಾಗಿ ಬಿಡುಗಡೆ ಮಾಡಿದ್ದರಿಂದ, ಬಳಕೆಯೂ ವಿಳಂಬವಾಗಿದೆ. ಇಲ್ಲದಿದ್ದರೆ ಈ ವರ್ಷವೂ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ಈಗ ನಡೆದಿರುವ ಕಾಮಗಾರಿ ಸಂತೃಪ್ತಿ ನೀಡಿದೆ. ಅನುದಾನವನ್ನು ಸಾರ್ಥಕ ಉದ್ದೇಶಕ್ಕೆ ನೀಡಿರುವ ಮನತೃಪ್ತಿಯೂ ನನ್ನದಾಗಿದೆ’ ಎಂದು ಹೇಳಿದರು.

* *

ಜನರ ನಿರೀಕ್ಷೆಗೆ ತಕ್ಕಂತೆ ಶಾಸಕರ ಅನುದಾನ ಬಳಕೆಯಾಗಿದೆ. ಶಾಸಕ ರಮೇಶ ಭೂಸನೂರ ಕ್ಷೇತ್ರದ ಜನರಿಗೆ ನೀಡಿದ್ದ ಭರವಸೆ ಈಡೇರಿಸಿದ್ದಾರೆ. ಅಭಿವೃದ್ಧಿಗೆ ಪ್ರಾಮಾಣಿಕ ಯತ್ನ ನಡೆಸಿದ್ದಾರೆ

ಎಂ.ಎನ್‌.ಕಿರಣರಾಜ್, ಜಿಲ್ಲಾ ಯೋಜನಾ ಸಮಿತಿ ಸದಸ್ಯ

ಪ್ರತಿಕ್ರಿಯಿಸಿ (+)