ಸೋಮವಾರ, ಡಿಸೆಂಬರ್ 9, 2019
21 °C

ಸಮಸ್ಯೆಗಳ ಸುಳಿಯಲ್ಲಿ ಬೆಂಚಿಗಡ್ಡಿ

ಮಹಾಂತೇಶ ಹೊಗರಿ Updated:

ಅಕ್ಷರ ಗಾತ್ರ : | |

ಸಮಸ್ಯೆಗಳ ಸುಳಿಯಲ್ಲಿ ಬೆಂಚಿಗಡ್ಡಿ

ಕಕ್ಕೇರಾ: ಸಮೀಪದ ಬೆಂಚಿಗಡ್ಡಿ ಪಕ್ಕದಲ್ಲಿ ಜೀವನಾಡಿ ಕೃಷ್ಣ ನದಿಯಿದ್ದರೂ ಗ್ರಾಮಸ್ಥರು ಪ್ರತಿದಿನ ಬೆಳಿಗ್ಗೆ 8.30ರಿಂದ 9.30 ಮತ್ತು ಸಂಜೆ 4.30ರಿಂದ 5.30ರವರೆಗೆ ಕೊಡಗಳನ್ನು ಹಿಡಿದು ಸರತಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ಇದೆ.

ಬೆಂಚಿಗಡ್ಡಿಯಲ್ಲಿ ಸುಮಾರು 1,500ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಗೆದ್ದಲಮರಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮದಲ್ಲಿ 3 ಜನ ಗ್ರಾಮ ಪಂಚಾಯಿತಿ ಸದಸ್ಯರು, ಒಬ್ಬರು ತಾಲ್ಲೂಕು ಪಂಚಾಯಿತಿ ಸದಸ್ಯರಿದ್ದಾರೆ.

‘ನಿತ್ಯ ಕುಡಿಯುವ ನೀರಿಗಾಗಿ ಪರದಾಟ ತಪ್ಪಿಲ್ಲ. ನೀರು ತರುವುದೇ ಒಂದು ಸಾಹಸದ ಕೆಲಸವಾಗಿ ಪರಿಣಮಿಸಿದೆ. ಜನ ನೀರು ತುಂಬಲು ನಾಮುಂದೆ ತಾಮುಂದು ಎಂದು ಹೊಡೆದಾಡಿ ಸಮೀಪದ ಕೊಡೇಕಲ್ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ ಎಂದರೆ ಪಂಚಾಯಿತಿ ಅಧ್ಯಕ್ಷರು, ಪಿಡಿಒ ಹಾಗೂ ಸದಸ್ಯರ ಕಾರ್ಯವೈಖರಿ ಎತ್ತಿ ತೋರಿಸುತ್ತದೆ’ ಎಂದು ಗ್ರಾಮಸ್ಥ ದುರಗಪ್ಪ ಮಾಲಿಪಾಟೀಲ ಆರೋಪಿಸುತ್ತಾರೆ.

ಹತ್ತಿರದ ಕೃಷ್ಣ ಹೈಡ್ರೋ ಪವರ್ ಸಂಸ್ಥೆಯವರು ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಒಂದು ಗಂಟೆ ನೀರು ಬಿಡುತ್ತಾರೆ. ಆ ಸಮಯದಲ್ಲಿಯೇ ಗ್ರಾಮದ ಮಹಿಳೆಯರು, ಮಕ್ಕಳು ಕೊಡಗಳನ್ನು ಹಿಡಿದು ನೀರು ತರಲು ಪೈಪೋಟಿ ನಡೆಯುತ್ತದೆ.

‘ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲ. ಮಹಿಳೆಯರಿಗೆ ಮುಳ್ಳುಕಂಟಿಗಳೇ ಆಸರೆ. ಚರಂಡಿ ವ್ಯವಸ್ಥೆಯಿಲ್ಲ. 20 ಮನೆಯಲ್ಲಿ ಕೂಡ ಶೌಚಾಲಯವಿಲ್ಲ. ಮಾಹಿತಿ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯ ಇದಕ್ಕೆ ಕಾರಣ. ಹೀಗೆ ಬೆಂಚಿಗಡ್ಡಿ ಇಲ್ಲಗಳ ಆಗರವಾಗಿದೆ’ ಎಂದು ಗ್ರಾಮಸ್ಥರು ದೂರುತ್ತಾರೆ.

‘ಸರ್ಕಾರಿ ಶಾಲೆಯಲ್ಲಿ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಮುಖ್ಯಶಿಕ್ಷಕ, ಒಬ್ಬ ಶಿಕ್ಷಕ ಹಾಗೂ ಇಬ್ಬರು ಅತಿಥಿ ಶಿಕ್ಷಕರು ಇದ್ದಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುವುದರ ಜೊತೆಗೆ ಅವರ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ. ಕಾರಣ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಶಿಕ್ಷಕರನ್ನು ನೇಮಕ ಮಾಡಬೇಕು’ ಎಂದು ಪಾಲಕರು ಒತ್ತಾಯಿಸುತ್ತಾರೆ.

* * 

ಗ್ರಾಮದಲ್ಲಿ ನೀರಿನ ಬವಣೆ ಹೆಚ್ಚಿದೆ. ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಜನಪ್ರತಿನಿಧಿಗಳು ಕೂಡಲೇ ಶಾಶ್ವತ ನೀರಿನ ವ್ಯವಸ್ಥೆ ಮಾಡಬೇಕು.

ದುರಗಪ್ಪ ಮಾಲಿಪಾಟೀಲ ಬೆಂಚಿಗಡ್ಡಿ ಗ್ರಾಮಸ್ಥ

ಪ್ರತಿಕ್ರಿಯಿಸಿ (+)