ಬಿಜಿಎಲ್ ಸ್ವಾಮಿ ಕನ್ನಡದ ಸಂಯೋಜಕ ಪ್ರತಿಭೆ

7

ಬಿಜಿಎಲ್ ಸ್ವಾಮಿ ಕನ್ನಡದ ಸಂಯೋಜಕ ಪ್ರತಿಭೆ

Published:
Updated:
ಬಿಜಿಎಲ್ ಸ್ವಾಮಿ ಕನ್ನಡದ ಸಂಯೋಜಕ ಪ್ರತಿಭೆ

ಕೋಲಾರ: ‘ಕನ್ನಡ ನಾಡಿನಿಂದ ಆಚೆ ಇದ್ದು, ಕನ್ನಡದ ಸೇವೆ ಮಾಡಿದವರಲ್ಲಿ ಬಿಜಿಎಲ್‌ ಸ್ವಾಮಿ ಪ್ರಮುಖರು’ ಎಂದು ಸಾಹಿತಿ ಹಾಗೂ ಉಪನ್ಯಾಸಕ ಎಚ್.ಎಸ್. ಸತ್ಯನಾರಾಯಣ ಅಭಿಪ್ರಾಯಪಟ್ಟರು.

ಡಿವಿಜಿ ಪ್ರತಿಷ್ಠಾನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಸರ್ಕಾರಿ ಮಹಿಳಾ ಕಾಲೇಜು ಸಹಯೋಗದಲ್ಲಿ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾಹಿತಿ ಬಿಜಿಎಲ್‌ ಸ್ವಾಮಿ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿ, ಬಿಜಿಎಲ್‌ ಸ್ವಾಮಿಯವರು ಅಮೆರಿಕದಲ್ಲಿ ಹೆಚ್ಚಿನ ಸಮಯ ಕಳೆದರೂ ಕನ್ನಡ ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಅನೇಕ ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಸೇವೆ ಮಾಡಿದರು. ಹೆಚ್ಚಾಗಿ ಗಿಡ ಮರಗಳ ಬಗ್ಗೆ ಅಧ್ಯಯನ ನಡೆಸಿದ ಅವರು ಅಂತರರಾಷ್ಟ್ರೀಯ ಖ್ಯಾತಿಯ ಸಸ್ಯ ವಿಜ್ಞಾನಿಯಾಗಿದ್ದರು. ಪೂರ್ಣಚಂದ್ರ ತೇಜಸ್ವಿ ಮತ್ತು ಬಿಜಿಎಲ್ ಸ್ವಾಮಿ ಕನ್ನಡದ ಸಂಯೋಜಕ ಪ್ರತಿಭೆಗಳಾಗಿದ್ದು, ಒಂದೇ ಮನೋಧರ್ಮ ಹೊಂದಿದ್ದರು ಎಂದು ಹೇಳಿದರು.

ಪ್ರಶಸ್ತಿ, ಸನ್ಮಾನ ಎಂದರೆ ಹಿಂದೆ ಸರಿಯುತ್ತಿದ್ದ ಬಿಜಿಎಲ್‌ ಸ್ವಾಮಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸ್ವೀಕರಿಸಲಿಲ್ಲ. ಈ ಕಾರಣಕ್ಕಾಗಿ ಅವರನ್ನು ಡಿ.ವಿ.ಜಿಯಂತಹ ಪ್ರಸಿದ್ಧ ತಂದೆಗೆ ಸುಪ್ರಸಿದ್ಧ ಮಗ ಎಂದು ಕರೆಯಲಾಗುತ್ತಿತ್ತು. ಜತೆಗೆ ಸರ್ವ ಕುತೂಹಲಿ ಎಂದು ಗುರುತಿಸಿಕೊಂಡಿದ್ದರು ಎಂದು ತಿಳಿಸಿದರು.

ಹೆಚ್ಚು ಅರ್ಥಪೂರ್ಣ: ಸ್ವಾಮಿಯವರು ವಿದ್ಯಾರ್ಥಿ ದಿಸೆಯಲ್ಲಿ ಬರೆದ ಪಂಚಕಲಶ ಗೋಪುರ ಕೃತಿಯನ್ನು ಎಲ್ಲರೂ ಓದಲೇಬೇಕು. ಅವರು ಅನೇಕ ಶಾಸನ ಓದಿದ್ದರು. ತಮಿಳು ಭಾಷೆಯ ಸ್ವಾಮಿನಾಥ್‍ ಅಯ್ಯರ್‌ರ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದರು. ಜತೆಗೆ ಕನ್ನಡದ ಅನೇಕ ಪುಸ್ತಕಗಳನ್ನು ತಮಿಳು ಭಾಷೆಗೆ ಅನುವಾದಿಸಿದರು ಎಂದು ವಿವರಿಸಿದರು.

1980ರಲ್ಲಿ ಅವರು ನಿಧನರಾದ ಬಳಿಕ ಮೈಸೂರು ಡೈರಿ ಕೃತಿ ಮುದ್ರಣವಾಯಿತು. ಅವರ ಪುಸ್ತಕಗಳು ಒಂದಕ್ಕಿಂತ ಒಂದು ಹೆಚ್ಚು ಅರ್ಥಪೂರ್ಣ ಮತ್ತು ಆಕರ್ಷಣೀಯವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉಪನ್ಯಾಸಕ ಎಂ.ಆರ್.ನಾಗರಾಜ್ ಬಿಜಿಎಲ್ ಸ್ವಾಮಿಯವರ ಸಂವಹನ ಕೌಶಲ ಕುರಿತು ಹಾಗೂ ಪ್ರಾಧ್ಯಾಪಕ ನಾಗೇಂದ್ರಕುಮಾರ್ ‘ಹಸುರು ಹೊನ್ನು’ ಕೃತಿ ಬಗ್ಗೆ ಮಾತನಾಡಿದರು.

ಸರ್ಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲ ಪ್ರೊ.ಜಯರಾಮರೆಡ್ಡಿ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜು, ಪದಾಧಿಕಾರಿಗಳಾದ ಚಂದ್ರಪ್ಪ, ರತ್ನಪ್ಪ, ಡಿವಿಜಿ ಪ್ರತಿಷ್ಠಾನದ ಅಧ್ಯಕ್ಷ ಕೆ.ಪ್ರಹ್ಲಾದರಾವ್ ಪಾಲ್ಗೊಂಡಿದ್ದರು.

* * 

ಬಿಜಿಎಲ್‌ ಸ್ವಾಮಿ ಮತ್ತು ತೇಜಸ್ವಿ 21ನೇ ಶತಮಾನಕ್ಕೆ ಮುನ್ನೋಟ ನೀಡಿದರು. ಈ ಇಬ್ಬರು ಪರಿಸರವನ್ನು ಆತ್ಮೀಯ ನೆಲೆಯಲ್ಲಿ ಸಂಶೋಧನಾತ್ಮಕವಾಗಿ ನೋಡಿದರು ಮುನಿರತ್ನಪ್ಪ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry