ಬುಧವಾರ, ಡಿಸೆಂಬರ್ 11, 2019
16 °C

‘ಕಾರ್ಖಾನೆ ರೈತರ ಏಳಿಗೆಗೆ ಶ್ರಮಿಸಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕಾರ್ಖಾನೆ ರೈತರ ಏಳಿಗೆಗೆ ಶ್ರಮಿಸಲಿ’

ಚಿಕ್ಕೋಡಿ: ‘ಮುಂದಿನ ಪೀಳಿಗೆಗೆ ಆರೋಗ್ಯವಂತ ಭೂಮಿಯನ್ನು ನೀಡುವ ಉದ್ದೇಶದಿಂದ ಸಾವಯವ ಕೃಷಿ ಪದ್ಧತಿಯೊಂದಿಗೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ ಪಡೆಯುವ ಅತ್ಯಾಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು’ ಎಂದು ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ ಸಲಹೆ ನೀಡಿದರು.

ಇಲ್ಲಿನ ದೂಧ್‌ಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಮುಂದಿನ ಐದು ವರ್ಷಗಳ ಅವಧಿಗಾಗಿ ಆಡಳಿತ ಮಂಡಳಿ ಸದಸ್ಯರ ಆಯ್ಕೆ ಕುರಿತು ನಡೆದ ಚುನಾವಣೆ ಪ್ರಕ್ರಿಯೆ ಪ್ರಯುಕ್ತ ಭಾನುವಾರ ನಡೆದ ವಿಶೇಷ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.

‘ಅತಿಯಾದ ನೀರು, ರಸಗೊಬ್ಬರ, ಕೀಟನಾಶಕಗಳನ್ನು ನೀಡುವುದರಿಂದ ಭೂಮಿಯ ಫಲವತ್ತತೆ ಹಾಳಾಗುತ್ತದೆ. ಸವುಳು–ಜವುಳು ಉಂಟಾಗಿ ಇಳುವರಿ ಕುಂಠಿತಗೊಳ್ಳುತ್ತಿದೆ. ಇಂದಿನ ಕೃಷಿ ಪದ್ದತಿಯಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ ಪಡೆಯುವ ತಾಂತ್ರಿಕತೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಅದರ ಮಾಹಿತಿ ಪಡೆದು ಪಾರಂಪರಿಕ ಕೃಷಿ ಪದ್ದತಿಯನ್ನು ಕಡೆಗಣಿಸಿ ಆಧುನಿಕತೆಯ ವಾಲಬೇಕು’ ಎಂದರು.

‘ದೂಧ್‌ಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಎರಡನೇ ಬಾರಿಗೆ ಆಡಳಿತ ಮಂಡಳಿಯನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದು ದಾಖಲೆಯಾಗಿದೆ. ನೂತನ ಆಡಳಿತ ಮಂಡಳಿ ಕಾರ್ಖಾನೆ ಮತ್ತು ಕೃಷಿಕರ ಏಳ್ಗೆಗೆ ಮುಂದಾಗಲಿ’ ಎಂದು ಡಾ.ಕೋರೆ ಹೇಳಿದರು.

ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ‘ಕಾರ್ಖಾನೆಯ 40 ಸಾವಿರ ರೈತ ಸದಸ್ಯರು ಎರಡನೇ ಬಾರಿಗೂ ಆಡಳಿತ ಮಂಡಳಿಯನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದು, ಆಡಳಿತ ಮಂಡಳಿ ಜವಾಬ್ದಾರಿ ಹೆಚ್ಚಿದೆ. ಕಾರ್ಖಾನೆಯು ಕಬ್ಬು ಬೆಳೆಗೆ ನ್ಯಾಯಯುತ ಬೆಲೆ ನೀಡುವ ಜೊತೆಗೆ ಕಬ್ಬು ಬೆಳೆಗಾರರ ಅಭಿವೃದ್ಧಿಗಾಗಿ ಹತ್ತಾರು ಸವಲತ್ತುಗಳನ್ನು ಒದಗಿಸುತ್ತಿದೆ’ ಎಂದರು.

ಕಾರ್ಖಾನೆ ನಿರ್ದೇಶಕ ಅಣ್ಣಾಸಾಹೇಬ ಜೊಲ್ಲೆ,‘ ಆಡಳಿತ ಮಂಡಳಿಯ ಅವಿರೋಧ ಆಯ್ಕೆಯು ಕಾರ್ಖಾನೆಯ ರೂವಾರಿ ಡಾ.ಪ್ರಭಾಕರ ಕೋರೆ ಅವರ ನೇತೃತ್ವ ಮತ್ತು ಆಡಳಿತ ಮಂಡಳಿ ಮೇಲಿಟ್ಟಿರುವ ವಿಶ್ವಾಸದ ದ್ಯೋತಕವಾಗಿದೆ’ ಎಂದರು.

‘ಸರ್ವ ಸಾಧಾರಣ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಕಾರ್ಖಾನೆಗೆ ಕಾರ್ಖಾನೆಯ ಸಂಸ್ಥಾಪಕ ಅಧ್ಯಕ್ಷ ದಿವಂಗತ ಚಿದಾನಂದ ಬಸವಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿ., ಚಿಕ್ಕೋಡಿ’ ಎಂದು ಹಾಗೂ ಕಾರ್ಖಾನೆಯ ಆವರಣಕ್ಕೆ ಸಂಸ್ಥಾಪಕ ಸಂಚಾಲಕರಾದ ‘ಶ್ರೀ ಶಾಂತಪ್ಪಣ್ಣ ಮಿರ್ಜೆ ನಗರ’ ಮತ್ತು ಕಾರ್ಖಾನೆಯ ಬೆಳವಣಿಗೆಗೆ ಶ್ರಮಿಸಿದ ಮಾಜಿ ಅಧ್ಯಕ್ಷ ದಿ.ಅಶೋಕ ಆಮಗೌಡ ಪಾಟೀಲ ಅವರ ಹೆಸರನ್ನು ಸಹ ವಿದ್ಯುತ್‌ ಘಟಕಕ್ಕೆ ಕೆಲವೇ ದಿನಗಳಲ್ಲಿ ನಾಮಕರಣ ಮಾಡಲಾಗುವುದು’ ಎಂದು ತಿಳಿಸಿದರು.

ಆಡಳಿತ ಮಂಡಳಿ ಸದಸ್ಯರು

ಸಭೆಯ ಅಧ್ಯಕ್ಷತೆ ವಹಿಸಿದ್ದ ಚುನಾವಣಾಧಿಕಾರಿ, ಸಹಕಾರ ಸಂಘಗಳ ನಿವೃತ್ತ ಉಪನಿಬಂಧಕ ಆರ್.ಎಸ್‌.ನೂಲಿ ಇಲ್ಲಿನ ದೂಧ ಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ 2019–19 ರಿಂದ 2022–23ರ ಅವಧಿಗಾಗಿ ಆಡಳಿತ ಮಂಡಳಿ ಮಂಡಳಿ ಸದಸ್ಯರ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು.

‘ಕಾರ್ಖಾನೆ ‘ಅ’ ವರ್ಗದಿಂದ ಅಜಿತ ಶಿವಾಜಿರಾವ್ ದೇಸಾಯಿ, ಅಮಿತ್ ಪ್ರಭಾಕರ ಕೋರೆ, ಅಣ್ಣಾಸಾಹೇಬ ಶಂಕರ ಜೊಲ್ಲೆ, ಬಾಳಗೌಡ ಶಿವಮೂರ್ತಿ ರೇಂದಾಳೆ, ಭರತೇಶ ಶಾಂತಪ್ಪ ಬನವಣೆ, ಚೇತನ ಪ್ರಕಾಶ ಪಾಟೀಲ, ಮಹಾಂತೇಶ ಮಲ್ಲಯ್ಯಸ್ವಾಮಿ ಕವಟಗಿಮಠ, ಮಹಾವೀರ ಯಶವಂತ ಮಿರ್ಜೆ, ಮಲ್ಲಪ್ಪ ಶಂಕರ ಮೈಶಾಳೆ, ಮಲ್ಲಿಕಾರ್ಜುನ ಗಣಪತರಾವ್ ಕೋರೆ, ಪರಸ ಗೌಡ ಈರಗೌಡ ಪಾಟೀಲ, ರಾಮಚಂದ್ರ ಮಾರುತಿ ನಿಶಾನದಾರ, ರೋಹನ ಉರ್ಫ್ ಸಂದೀಪ ಅಶೋಕ ಪಾಟೀಲ, ಸುಭಾಷ ನೇಮನ್ನ ಕಾತ್ರಾಳೆ, ತಾತ್ಯಾಸಾಹೇಬ್ ದಾದು ಕಾಟೆ ಹಾಗೂ ‘ಬ’ ಮತ್ತು ‘ಡ’ವರ್ಗದಿಂದ ನಂದಕುಮಾರ ಮಲ್ಲಪ್ಪ ನಾಶಿಪುಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ’ ಎಂದರು.

ಅಮಿತ್ ಅಧ್ಯಕ್ಷ, ಸುಭಾಷ್ ಉಪಾಧ್ಯಕ್ಷ

ಸರ್ವಸಾಧಾರಣ ಸಭೆಯ ನಂತರ ನಡೆದ ನೂತನ ಆಡಳಿತ ಮಂಡಳಿ ಸಭೆಯಲ್ಲಿ ಕಾರ್ಖಾನೆಯ ಅಧ್ಯಕ್ಷರನ್ನಾಗಿ ಅಮಿತ್ ಪ್ರಭಾಕರ ಕೋರೆ ಅವರನ್ನು ಹಾಗೂ ಉಪಾಧ್ಯಕ್ಷರನ್ನಾಗಿ ಸುಭಾಷ ನೇಮನ್ನಾ ಕಾತ್ರಾಳೆ ಅವರನ್ನು ಸರ್ವಾ ನುಮತದಿಂದ ಆಯ್ಕೆ ಮಾಡಲಾಯಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅಮಿತ್ ಕೋರೆ,‘ ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷ ಸ್ಥಾನಕ್ಕೆ ಪುನರಾಯ್ಕೆ ಮಾಡಿದ್ದು, ಆಡಳಿತ ಮಂಡಳಿ ಸದಸ್ಯರು ಮತ್ತು ಎಲ್ಲ ರೈತ ಸದಸ್ಯರು, ಕಾರ್ಮಿಕರು, ಸಿಬ್ಬಂದಿಯನ್ನು ವಿಶ್ವಾಸಕ್ಕೆ ತಗೆದುಕೊಂಡು ಕಾರ್ಖಾನೆ ಮತ್ತು ಕೃಷಿಕರ ಅಭಿವೃದ್ಧಿಗೆ ದುಡಿಯುತ್ತೇನೆ’ ಎಂದರು.

ಪ್ರತಿಕ್ರಿಯಿಸಿ (+)