ಬುಧವಾರ, ಡಿಸೆಂಬರ್ 11, 2019
16 °C

ಮತದಾರ ‘ಪ್ರಭು’ ಗೆಲ್ಲಲು ಕಾಂಗ್ರೆಸ್‌ ರಣತಂತ್ರ

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಮತದಾರ ‘ಪ್ರಭು’ ಗೆಲ್ಲಲು ಕಾಂಗ್ರೆಸ್‌ ರಣತಂತ್ರ

ಬೆಳಗಾವಿ: ಜಿಲ್ಲೆಯ ಗಡಿ ಅಥಣಿ ಮತಕ್ಷೇತ್ರದಲ್ಲಿ ತಲೆಎತ್ತಿರುವ ಬಿಜೆಪಿ ಭದ್ರಕೋಟೆಯನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ವಶ ಮಾಡಿಕೊಳ್ಳಲು ಕಾಂಗ್ರೆಸ್‌ನವರು ರಣತಂತ್ರ ರೂಪಿಸಿದ್ದಾರೆ. ಸ್ವಾಮೀಜಿಯೊಬ್ಬರನ್ನು ಕಣಕ್ಕಿಳಿಸುವ ಅಚ್ಚರಿಯ ಹೆಜ್ಜೆ ಇಡಲು ಮುಂದಾಗಿದ್ದಾರೆ.

ಈ ಕ್ಷೇತ್ರದಿಂದ ಬಿಜೆಪಿಯ ಲಕ್ಷ್ಮಣ ಸವದಿ ಸತತ ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ವೈಯಕ್ತಿಕ ವರ್ಚಸ್ಸಿನ ಮೂಲಕ ಪ್ರಬಲರಾಗಿರುವ ಅವರನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್‌ ಹೊಸ ಲೆಕ್ಕಾಚಾರ ಹಾಕಿದೆ. ಆ ಪಕ್ಷದ ಮುಖಂಡರು ಖಾವಿಧಾರಿಯನ್ನು ರಾಜಕಾರಣಕ್ಕೆ ಕರೆತರಲು ಪ್ರಯತ್ನಿಸಿದ್ದಾರೆ. ಪ್ರಭಾವಿ ಲಿಂಗಾಯತ ಸಮುದಾಯದ ಮಠವಾದ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಕಾಂಗ್ರೆಸ್‌ ಉತ್ಸುಕತೆ ತೋರಿದೆ. ಕಾಂಗ್ರೆಸ್‌ ಉರುಳಿಸಿರುವ ಈ ದಾಳ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

‘ಈ ಬಗ್ಗೆ ಕಾಂಗ್ರೆಸ್ಸಿನ ಪ್ರಮುಖರು ಚರ್ಚಿಸಿರುವುದು ನಿಜ. ವಿಷಯವನ್ನು ಮಠದ ಭಕ್ತರ ಮುಂದೆ ಇಟ್ಟಿದ್ದೇನೆ. ಅವರ ನಿರ್ಣಯ ಕಾಯುತ್ತಿದ್ದೇನೆ. ರಾಜಕೀಯ ಕ್ಷೇತ್ರದ ಮೂಲಕ ಸಮಾಜಸೇವೆಗೆ ಅವಕಾಶ ದೊರೆತರೆ ಅದಕ್ಕೆ ಸಿದ್ಧವಿದ್ದೇನೆ. ಅಧಿಕಾರದ ಮೂಲಕ ಹೆಚ್ಚು ಜನರ ಸೇವೆ ಮಾಡಬಹುದು ಎನ್ನುವುದನ್ನು ಬಸವಣ್ಣ ತೋರಿಸಿದ್ದಾರೆ. ಅವರು ತೋರಿಸಿದ ಮಾರ್ಗದಲ್ಲಿ ನಡೆಯುತ್ತೇನೆ’ ಎಂದು ಸ್ವಾಮೀಜಿ ಹೇಳುವ ಮೂಲಕ, ತಮಗೂ ‘ಜನತಂತ್ರದ ಹಬ್ಬ’ದಲ್ಲಿ ಅಭ್ಯರ್ಥಿಯಾಗಿ ಭಾಗಿಯಾಬೇಕು ಎನ್ನುವ ಬಯಕೆ ಇರುವುದನ್ನು ವ್ಯಕ್ತಪ‍ಡಿಸಿದ್ದಾರೆ.

ಕೆಜೆಪಿ ಪ್ರಭಾವದ ನಡುವೆಯೂ: ಲಿಂಗಾಯತ ಮತಗಳ ಪ್ರಾಬಲ್ಯ ಹೊಂದಿರುವ ಕ್ಷೇತ್ರದಲ್ಲಿ, 2013ರ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿ ಕಣದಲ್ಲಿದ್ದ ಹೊರತಾಗಿಯೂ ಸವದಿ ಗೆಲುವಿನ ಪತಾಕೆ ಹಾರಿಸಿದ್ದರು. ಈ ಬಾರಿ ಅವರ ಜಯದ ಓಟಕ್ಕೆ ತಡೆಯೊಡ್ಡಲು, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್‌ ನಾಯಕರು ತಂತ್ರ ಹೆಣೆಯುತ್ತಿದ್ದಾರೆ. ಲಿಂಗಾಯತ ಮತಗಳನ್ನು ಸೆಳೆಯಲು ಯೋಜಿಸುತ್ತಿದ್ದಾರೆ. ಸ್ವಾಮೀಜಿ ಜತೆ ಸಂಪರ್ಕದಲ್ಲಿದ್ದಾರೆ. ಸ್ವಾಮೀಜಿ ಅಭ್ಯರ್ಥಿಯಾಗುವುದಾದರೆ, ಜಿಲ್ಲೆಯ ಮತ್ತೊಬ್ಬ ಪ್ರಭಾವಿ ಮುಖಂಡ ಸತೀಶ ಜಾರಕಿಹೊಳಿ ತಕರಾರು ಇರಲಾರದು, ಟಿಕೆಟ್ ಆಕಾಂಕ್ಷಿಗಳೂ ಹಿಂದೆ ಸರಿಯಬಹುದು ಎನ್ನಲಾಗುತ್ತಿದೆ. ಕಾಂಗ್ರೆಸ್‌ನ ಯೋಚನೆ ಸಾಕಾರಗೊಂಡಲ್ಲಿ ಖಾದಿ–ಖಾವಿ ವಿರುದ್ಧದ ಹಣಾಹಣಿಗೆ ಕ್ಷೇತ್ರ ಸಾಕ್ಷಿಯಾಗಲಿದೆ.

ಮೂಲತಃ ಜನತಾ ಪರಿವಾರದವರಾದ ಲಕ್ಷ್ಮಣ ಸವದಿ 1999ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಡಿಮೆ ಮತಗಳಿಂದ ಅಂತರದಿಂದ ಪರಾಭವಗೊಂಡಿದ್ದರು. 2004ರ ಚುನಾವಣೆಯಲ್ಲಿ ಬಿಜೆಪಿ ಸೇರಿ ಪ್ರಥಮ ಬಾರಿಗೆ ಶಾಸಕರಾದರು. 2007ರಲ್ಲಿ ಅಪೆಕ್ಸ್ ಬ್ಯಾಂಕ್‌ ಉಪಾಧ್ಯಕ್ಷ ಮತ್ತು ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿಯೂ ಆಗಿದ್ದರು. 2008ರ ಚುನಾವಣೆಯಲ್ಲಿ 2ನೇ ಬಾರಿಗೆ ಆಯ್ಕೆಯಾಗಿ ಸಹಕಾರ ಸಚಿವರಾಗಿದ್ದರು. ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಆರೋಪದಿಂದಾಗಿ, ಮಂತ್ರಿ ಪದವಿ ಕಳೆದುಕೊಂಡರು. ನಂತರ 2013ರಲ್ಲಿ ಮತ್ತೆ ಆಯ್ಕೆಯಾಗಿ ‘ಹ್ಯಾಟ್ರಿಕ್‌’ ಸಾಧನೆ ಮಾಡಿದ್ದಾರೆ. ಮುಂಬರುವ ಚುನಾವಣೆಯಲ್ಲೂ ಪಕ್ಷದಿಂದ ಟೆಕೆಟ್‌ ದೊರೆಯುತ್ತದೆ ಎನ್ನುವ ಆತ್ಮವಿಶ್ವಾಸದಲ್ಲಿ ‘ಕ್ಷೇತ್ರಸಂಚಾರ’ ಮಾಡುತ್ತಿದ್ದಾರೆ.

ಯಡಿಯೂರಪ್ಪ ಬೆಂಬಲದ ಮೇಲೆ: ಬಿಜೆಪಿಯಿಂದ ಹೊರಬಂದು ಬಿ.ಎಸ್‌. ಯಡಿಯೂರಪ್ಪ ಅವರು ನೇತೃತ್ವ ವಹಿಸಿಕೊಂಡಿದ್ದ ಕೆಜೆಪಿ ಅಭ್ಯರ್ಥಿಯಾಗಿ 2013ರ ಚುನಾವಣೆಯಲ್ಲಿ ಅಥಣಿಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದ ಸಂಗನಗೌಡ ಪಾಟೀಲ ಈ ಬಾರಿ ಕಮಲ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಯಡಿಯೂರಪ್ಪ ಬೆಂಬಲಿಗರೂ ಆಗಿರುವ ಅವರು ಸವದಿಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಟಿಕೆಟ್‌ ಯಾರಿಗೆ ದಕ್ಕುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ.

ಅಥಣಿ ನಿವಾಸಿಯಾಗಿರುವ ಆರ್‌ಎಸ್ಎಸ್ ಸಹ ಸಂಘಚಾಲಕ ಅರವಿಂದರಾವ ದೇಶಪಾಂಡೆ ಅವರ ಮೂಲಕ ಟಿಕೆಟ್‌ ಪಡೆಯಲು ಯತ್ನಿಸುತ್ತಿದ್ದಾರೆ. ಉತ್ತರ ಕರ್ನಾಟಕದ ಹಾಲಿ ಶಾಸಕರು ಮತ್ತು ಆಕಾಂಕ್ಷಿಗಳು ಅವರನ್ನು ಭೇಟಿಯಾಗಿ ಚರ್ಚಿಸುವುದು ಕಂಡುಬರುತ್ತಿದೆ.

2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ಮಹೇಶ ಕುಮಟೊಳ್ಳಿ, ಜೆಡಿಎಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಎಸ್.ಕೆ. ಬುಟಾಳಿ, ತಾಲ್ಲೂಕಿನ ಕೃಷಿ ಪಂಡಿತರೆಂದೇ ಹೆಸರಾಗಿರುವ ಎಂ.ಎಂ. ನಾಯಕ ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಪಕ್ಷದ ಮುಖಂಡ ಗಜಾನನ ಮಂಗಸೂಳಿ ಕೂಡ ಪ್ರಬಲ ಆಕಾಂಕ್ಷಿ. ಜೆಡಿಎಸ್‌ನಿಂದ ಗಿರೀಶ ಬುಟಾಳಿ ಟಿಕೆಟ್‌ ಕೇಳಿದ್ದಾರೆ.

2013ರ ಚುನಾವಣೆಯಲ್ಲಿ ಬಿಜೆಪಿ ಲಕ್ಷ್ಮಣ ಸವದಿ 74,299 ಮತಗಳನ್ನು ಗಳಿಸಿ, ಕಾಂಗ್ರೆಸ್‌ನ ಮಹೇಶ ಕುಮಟೊಳ್ಳಿ (50528) ವಿರುದ್ಧ ಗೆಲುವು ಸಾಧಿಸಿದ್ದರು. ಲಿಂಗಾಯತ ಸಮಾಜದವರ ಮತಗಳು ಇಲ್ಲಿ ನಿರ್ಣಾಯಕವಾಗಿವೆ.

ಮತದಾರರ ವಿವರ

ಪುರುಷರು– 1,06,925

ಮಹಿಳೆಯರು–100448

ಇತರೆ– 11

ಒಟ್ಟು – 2,07,384

ಆಕಾಂಕ್ಷಿಗಳು

ಲಕ್ಷ್ಮಣ ಸವದಿ, ಸಂಗನಗೌಡ ಪಾಟೀಲ (ಬಿಜೆಪಿ)

ಪ್ರಭು ಚನ್ನಬಸವ ಸ್ವಾಮೀಜಿ, ಮಹೇಶ ಕುಮಟೊಳ್ಳಿ, ಎಸ್.ಕೆ. ಬುಟಾಳಿ, ಎಸ್.ಎಂ. ನಾಯಿಕ, ಗಜಾನನ ಮಂಗಸೂಳಿ (ಕಾಂಗ್ರೆಸ್‌)

ಗಿರೀಶ ಬುಟಾಳಿ (ಜೆಡಿಎಸ್)

ಪ್ರತಿಕ್ರಿಯಿಸಿ (+)