ಬೇಸಿಗೆ ಮುನ್ನವೇ ನೀರಿಗೆ ಪರದಾಟ

7

ಬೇಸಿಗೆ ಮುನ್ನವೇ ನೀರಿಗೆ ಪರದಾಟ

Published:
Updated:
ಬೇಸಿಗೆ ಮುನ್ನವೇ ನೀರಿಗೆ ಪರದಾಟ

ಔರಾದ್: ತಾಲ್ಲೂಕಿನ ಸಂತಪುರ ಗ್ರಾಮ ಮೂಲಸೌಲಭ್ಯ ಕೊರತೆಯಿಂದ ನಲುಗಿದೆ. ತಾಲ್ಲೂಕು ಕೇಂದ್ರ ಎಂದು ಕರೆಸಿಕೊಂಡಿದ್ದ ಸಂತಪುರದಲ್ಲಿ ಈಗಲೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಲೋಕೋಪಯೋಗಿ ಇಲಾಖೆ ತಾಲ್ಲೂಕುಮಟ್ಟದ ಕಚೇರಿ ಇದೆ. ತಾ.ಪಂ. ಕಚೇರಿ, ಮೀನುಗಾರಿಕೆ, ಪ್ರವಾಸಿ ಮಂದಿರ ಸೇರಿದಂತೆ ವಿವಿಧ ಕಚೇರಿ ಕಟ್ಟಡಗಳು ಅಳಿವಿನ ಅಂಚಿನಲ್ಲಿದ್ದು, ಸುಮಾರು 12 ಸಾವಿರ ಜನಸಂಖ್ಯೆ ಹೊಂದಿರುವ ಈ ಊರಿನ ಜನ ದಶಕಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಜಲನಿರ್ಮಲ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಖರ್ಚಾದರೂ ಬವಣೆ ಮಾತ್ರ ತಪ್ಪಿಲ್ಲ.

ಬೇಸಿಗೆ ಬರಲು ಇನ್ನೂ ಎರಡು ತಿಂಗಳು ಬಾಕಿ ಇದೆ. ಆದರೆ ಪರಿಶಿಷ್ಟ ಜಾತಿಯ ಬೀದಿ ಸೇರಿದಂತೆ ವಿವಿಧೆಡೆ ಈಗಲೇ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಇದೆ. ಕಾಲೊನಿ ಮಹಿಳೆಯರು ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗೆ ಸಮಸ್ಯೆ ಪರಿಹರಿಸುವಂತೆ ಮನವಿ ಸಲ್ಲಿಸಿದ್ದಾರೆ.

‘ಎರಡು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಇರುವ ಬಂದು ತೆರೆದ ಬಾವಿಯಿಂದ ಸರತಿಯಲ್ಲಿ ನಿಂತು ನೀರು ತರಬೇಕಾಗಿದೆ. ಅದೂ ಕುಡಿಯಲು ಬರುವುದಿಲ್ಲ. ಕುಡಿಯುವ ನೀರಿಗಾಗಿ ಎರಡು ಕಿ.ಮೀ. ದೂರ ಹೋಗಬೇಕಾಗಿದೆ. ಕ್ರಿಸ್ಮಸ್ ಹಬ್ಬದ ವೇಳೆ ಟ್ಯಾಂಕರ್ ಮೂಲಕ ನೀರು ಖರೀದಿಸಿ ಬೇಕಾಯಿತು’ ಎಂದು ಶೋಭಾ ಹಲಗೆ, ಶಾಂತಮ್ಮ ಮೇತ್ರೆ ಗೋಳು ತೋಡಿಕೊಂಡಿದ್ದಾರೆ.

'ಸಮಸ್ಯೆ ಪರಿಹರಿಸಲು ಗ್ರಾಮ ಪಂಚಾಯಿತಿಗೆ ಹೋದರೆ ಸ್ಪಂದನೆ ಸಿಗುತ್ತಿಲ್ಲ. ಪ್ರತಿಭಟನೆ ಮಾಡಿದರೆ ಪೊಲೀಸರಿಗೆ ಹೇಳಿ ಒಳಗೆ ಹಾಕಿಸುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ಪಿಡಿಒ ಅವರೂ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಈಗ ಚುನಾವಣೆ ಸಮೀಪಿಸುತ್ತಿದೆ. ನಮಗೆ ಯಾರ ಹಣದ ಅವಶ್ಯಕತೆ ಇಲ್ಲ. ಕುಡಿಯುವ ನೀರು, ಚರಂಡಿ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಿದರೆ ಮಾತ್ರ ಮತದಾನ ಮಾಡುತ್ತೇವೆ. ಇಲ್ಲದೆ ಹೋದರೆ ನಾವು ಯಾರಿಗೂ ಮತ ಹಾಕದೆ ಚುನಾವಣೆ ಬಹಿಷ್ಕರಿಸುವುದಾಗಿ'  ಗ್ರಾಮದ ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ. ಕಾಮಗಾರಿ ನನೆಗುದಿಗೆ: ಸಂತಪುರ ಹೋಬಳಿ ಕೇಂದ್ರಿಂದ ಎರಡು ರಾಜ್ಯ ಹೆದ್ದಾರಿಗಳು ಹಾದು ಹೋಗಿವೆ. ಈ ಎರಡೂ ರಸ್ತೆ ವಿಸ್ತರಣೆ ಮಾಡುವ ಉದ್ದೇಶದಿಂದ ಒಂದು ವರ್ಷದ ಹಿಂದೆ ಅತಿಕ್ರಮಣವನ್ನು ತೆರವು ಮಾಡಲಾಯಿತು.

‘ರಸ್ತೆ ವಿಸ್ತರಣೆ ಮಾಡುವ ಮಾತು ದೂರ ಇರಲಿ. ಅತಿಕ್ರಮಣದಿಂದ ಬಿದ್ದ ಕಲ್ಲು-ಮಣ್ಣು ಈಗಲೂ ತೆರವು ಮಾಡಲಾಗಿಲ್ಲ. ಇದರಿಂದ ಇಡೀ ಊರು ಹಾಳಾಗಿ ಜನ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ಸಂಬಂಧಿತರು ಮೌನ ವಹಿಸಿರುವುದು ತೀವ್ರ ವಿಷಾದದ ಸಂಗತಿ’ ಎಂದು ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಸಿದ್ದಯ್ಯ ಸ್ವಾಮಿ ಲೋಕೋಪಯೋಗಿ ಇಲಾಖೆ ವಿರುದ್ಧ ಕಿಡಿ ಕಾರಿದ್ದಾರೆ.

‘ಕಟ್ಟಡಗಳ ಅತಿಕ್ರಮಣ ತೆರವು ಮಾಡಿದ್ದು, ವಿದ್ಯುತ್ ಕಂಬಗಳು ತೆರವು ಮಾಡಿಲ್ಲ. ಇದರಿಂದ ಸಮಸ್ಯೆ ಬಗೆ ಹರಿಯುವ ಬದಲು ಮತ್ತಷ್ಟು ಸಮಸ್ಯೆಯಾಗಿ ನಿತ್ಯ ಅವಘಡ ಸಂಭವಿಸುತ್ತಿವೆ’ ಎಂದು ಅವರು ದೂರಿದ್ದಾರೆ.

‘ಸರ್ಕಾರಿ ಪದವಿಪೂರ್ವ ಕಾಲೇಜು, ಐಟಿಐ ಕಾಲೇಜು, ಅಗ್ನಿ ಶಾಮಕ ಠಾಣೆ ಮಂಜೂರು ಮಾಡುವಂತೆ ದಶಕಗಳಿಂದ ಬೇಡಿಕೆ ಇಟ್ಟಿದ್ದೇವೆ. ಅಳಿವಿನ ಅಂಚಿನಲ್ಲಿರುವ ಸರ್ಕಾರಿ ಕಟ್ಟಡ ಮತ್ತು ಭೂಮಿ ಸೂಕ್ತ ರಕ್ಷಣೆ ಮಾಡುವಂತೆಯೂ ಸಾಕಷ್ಟು ಸಲ ಸಂಬಂಧಿತರಿಗೆ ಲಿಖಿತ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇನ್ನು ಮುಂದೆ ಕಾನೂನು ಹೋರಾಟ ಅನಿವಾರ್ಯವಾಗಲಿದೆ’ ಎಂದು ಅವರು ತಿಳಿಸಿದ್ದಾರೆ.

* * 

ಸಂತಪುರನ ಕೆಲ ಕಡೆ ಕುಡಿಯುವ ನೀರಿನ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಸದ್ಯಕ್ಕೆ ಅಲ್ಲಿ ಕೊಳವೆ ಬಾವಿ ಕೊರೆದು ನೀರು ಕೊಡುವ ವ್ಯವಸ್ಥೆ ಮಾಡಲಾಗುವುದು.

ಜಗನ್ನಾಥ ಮೂರ್ತಿ ತಾಪಂ. ಇಒ ಔರಾದ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry