ಸೋಮವಾರ, ಡಿಸೆಂಬರ್ 9, 2019
25 °C

ಹೆಚ್ಚುತ್ತಿರುವ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

ಹೆಚ್ಚುತ್ತಿರುವ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ

ಚಿಂತಾಮಣಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಚಿಂತಾಮಣಿ ಕ್ಷೇತ್ರ ಉಳಿಸಿಕೊಳ್ಳುವ ತವಕವಾದರೆ, ಕಾಂಗ್ರೆಸ್‌ ಮುಖಂಡ ಡಾ.ಎಂ.ಸಿ.ಸುಧಾಕರ್‌ಗೆ ಮರಳಿ ವಾಪಸ್‌ ಪಡೆಯುವ ಹಠ. ಮೋದಿ ಅಲೆಯಲ್ಲಿ ಖಾತೆ ತೆರೆಯುವ ಉತ್ಸಾಹ ಬಿಜೆಪಿ ನಾಯಕರಲ್ಲಿದ್ದು, ಎಲ್ಲ ಪಕ್ಷಗಳಲ್ಲೂ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವುದು ವಿಶೇಷವಾಗಿದೆ.

ಕ್ಷೇತ್ರದಲ್ಲಿ ಪಕ್ಷಗಳಿಗಿಂತ ವ್ಯಕ್ತಿಗಳಿಗೆ ಪ್ರಾಧಾನ್ಯತೆ. ಕಳೆದ 5– 6 ದಶಕಗಳಿಂದ ಆಂಜನೇಯರೆಡ್ಡಿ ಕುಟುಂಬ ಮತ್ತು ಟಿ.ಕೆ.ಗಂಗಿರೆಡ್ಡಿ ಕುಟುಂಬ ಕ್ಷೇತ್ರದ ಮೇಲೆ ಪ್ರಾಬಲ್ಯ ಮೆರೆದಿವೆ. ಮೂರನೆಯವರು ಪ್ರವೇಶ ಮಾಡಲು ಸಾಧ್ಯವಾಗಿರಲಿಲ್ಲ. 2013ರ ಚುನಾವಣೆಯಲ್ಲಿ ಸಮಾಜ ಸೇವೆಯ ಹೆಸರಿನಲ್ಲಿ ಬೆಂಗಳೂರಿನಿಂದ ಬಂದ ಎಂ.ಕೃಷ್ಣಾರೆಡ್ಡಿ ಗೆಲುವು ಪಡೆಯುವುದರ ಮೂಲಕ ಕ್ಷೇತ್ರದ ಇತಿಹಾಸವನ್ನೇ ಬದಲಾಯಿಸಿದರು. ಜೆಡಿಎಸ್‌ನ ಎಂ.ಕೃಷ್ಣಾರೆಡ್ಡಿ ಹಾಲಿ ಶಾಸಕರು.

ಜೆಡಿಎಸ್‌ನಲ್ಲಿ ಇದುವರೆಗೆ ಎಂ.ಕೃಷ್ಣಾರೆಡ್ಡಿ ಒಬ್ಬರೇ ಆಕಾಂಕ್ಷಿಯಾಗಿದ್ದರು. ಬಹುತೇಕ ಅವರೇ ಅಭ್ಯರ್ಥಿ ಎನ್ನಲಾಗಿತ್ತು. ಇತ್ತೀಚೆಗೆ ಹಿರಿಯ ನಾಯಕರ ಒಂದು ಗುಂಪು ಪರ್ಯಾಯ ಅಭ್ಯರ್ಥಿ ಹುಡುಕಾಟದಲ್ಲಿ ತೊಡಗಿದ್ದಾರೆ. ನಿವೃತ್ತ ಪೊಲೀಸ್‌ ಅಧಿಕಾರಿ ಕೋನಪ್ಪರೆಡ್ಡಿಯೂ ಆಕಾಂಕ್ಷಿ ಎಂದು ಹೇಳಿಕೊಳ್ಳುವ ಮೂಲಕ ಟಿಕೆಟ್‌ಗೆ ಪೈಪೋಟಿ ಆರಂಭಿಸಿದ್ದಾರೆ. ಆದರೆ ಎಂ.ಕೃಷ್ಣಾರೆಡ್ಡಿ ಹೆಸರು ಆಖೈರಾಗಿದೆ ಎಂದು ಪಕ್ಷದ ಮೂಲಗಳು ಹೇಳುತ್ತವೆ.

ಕಾಂಗ್ರೆಸ್‌ ಪಾಳೆಯದಲ್ಲಿ ದೊಡ್ಡ ನಾಟಕ ನಡೆಯುತ್ತಿದೆ. ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ರಾಜಕೀಯ ಮುಖಂಡ ಡಾ.ಎಂ.ಸಿ.ಸುಧಾಕರ್‌ ತೀರ್ಮಾನದ ಮೇಲೆ ಗಿರಕಿ ಹೊಡೆಯುತ್ತಿದೆ. ಸಂಸದ ಕೆ.ಎಚ್‌.ಮುನಿಯಪ್ಪ ಅವರ ವಿರುದ್ಧ ಮುನಿಸಿಕೊಂಡಿರುವ ಸುಧಾಕರ್‌ ಇನ್ನೂ ಗುಟ್ಟುಬಿಟ್ಟುಕೊಡುತ್ತಿಲ್ಲ. ಕಾಂಗ್ರೆಸ್‌ ಪಕ್ಷದ ಬಗ್ಗೆ ತಕರಾರಿಲ್ಲ. ಭಿನ್ನಾಭಿಪ್ರಾಯವಿರುವುದು ಕೆ.ಎಚ್‌.ಮುನಿಯಪ್ಪ ಅವರೊಂದಿಗೆ ಮಾತ್ರ. ಸದ್ಯಕ್ಕೆ ಕಾಂಗ್ರೆಸ್‌ನಲ್ಲೇ ಇದ್ದೇನೆ, ಮುಂದಿನದು ಪರದೆಯ ಮೇಲೆ ಕಾದು ನೋಡಿ ಎನ್ನುತ್ತಾರೆ.

ಸುಧಾಕರ್‌ ಸ್ಪರ್ಧೆಗೆ ಕೆ.ಎಚ್‌.ಮುನಿಯಪ್ಪ ಗುಂಪು ವಿರೋಧ ವ್ಯಕ್ತಪಡಿಸುತ್ತಿರುವುದು ತೋರಿಕೆಗೆ ಮಾತ್ರ. ಇಲ್ಲಿ ಪಕ್ಷ ಗೌಣ, ಪಕ್ಷದಿಂದ ಸ್ಪರ್ಧಿಸಲಿ, ಸ್ವತಂತ್ರವಾಗಿ ಸ್ಪರ್ಧಿಸಲಿ, ಸುಧಾಕರ್‌ ವಿರುದ್ಧವಾಗಿ ಪ್ರಬಲವಾಗಿರುವ ಅಭ್ಯರ್ಥಿಗೆ ಮತ ನೀಡುವುದು ಹಿಂದಿನ ಎಲ್ಲ ಚುನಾವಣೆಗಳಲ್ಲಿ ಸಾಬೀತಾಗಿದೆ. ಸುಧಾಕರ್‌ 2013 ಚುನಾವಣೆಯಲ್ಲೂ ಕಾಂಗ್ರೆಸ್‌ ಬಿ.ಫಾರಂ ಬೇಡವೆಂದು ಸ್ವತಂತ್ರವಾಗಿ ಸ್ಪರ್ಧಿಸಿದ್ದರು.

ಒಪ್ಪಿದರೆ ಟಿಕೆಟ್‌ ಖಚಿತ: ಪ್ರಸ್ತುತ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ಗೆ ಒಂದೊಂದು ಸ್ಥಾನವೂ ಮುಖ್ಯವಾಗಿರುವುದರಿಂದ ಸುಧಾಕರ್‌ ಒಪ್ಪಿದರೆ ಟಿಕೆಟ್‌ ಖಚಿತ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಕಾಂಗ್ರೆಸ್‌ ಪಾಳೆಯದಲ್ಲಿ ಇನ್ನೂ ಅನೇಕ ಮಂದಿ ನಾವೂ ಆಕಾಂಕ್ಷಿಗಳು ಎಂದು ಘೋಷಣೆ ಮಾಡಿಕೊಂಡು ತಿರುಗಾಡುತ್ತಿದ್ದಾರೆ.

ಕ್ಷೇತ್ರದ ಹಳೆಯ ಹುರಿಯಾಳು ಕೆ.ಎಂ.ಕೃಷ್ಣಾರೆಡ್ಡಿ ಗುಂಪು ನೇಪಥ್ಯಕ್ಕೆ ಸರಿಯುತ್ತಿದೆ ಎಂದುಕೊಳ್ಳುವಾಗಲೇ ಅವರ ಪುತ್ರಿ ವಾಣಿಕೃಷ್ಣಾರೆಡ್ಡಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿದ್ದಾರೆ. ತಾವೂ ಟಿಕೆಟ್‌ ಆಕಾಂಕ್ಷಿ ಎಂಬ ಸಂದೇಶವನ್ನು ಪಕ್ಷದ ಮುಖಂಡರಿಗೆ ಮುಟ್ಟಿಸಿ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದಾರೆ.

ಬೆಂಗಳೂರಿನ ಉದ್ಯಮಿ ಟಿ.ಸಿ.ವೆಂಕಟೇಶರೆಡ್ಡಿ ಸಮಾಜ ಸೇವೆಯ ಹೆಸರಿನಲ್ಲಿ ಕ್ಷೇತ್ರಕ್ಕೆ ಕಾಲಿಟ್ಟು, ಈಗ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಕ್ಷೇತ್ರಾದ್ಯಂತ ಕಾಂಗ್ರೆಸ್‌ ನಾಯಕರ ಫ್ಲೆಕ್ಸ್‌ ಹಾಕಿಕೊಂಡು ಒಡಾಡುತ್ತಿದ್ದಾರೆ. ಸಮಾಜ ಸೇವೆಯ ಹೆಸರಿನಲ್ಲಿ ಮಹಿಳೆಯರನ್ನು ಯಾತ್ರೆ ಕಳುಹಿಸುವುದು, ವಿವಿಧ ಸಂಘ ಸಂಸ್ಥೆಗಳಿಗೆ ದನ ಸಹಾಯ ಮಡುವುದರ ಮೂಲಕ ಪ್ರಚಾರ ಮಾಡುತ್ತಿದ್ದಾರೆ.

ಬಿಜೆಪಿಗೆ ಕ್ಷೇತ್ರದಲ್ಲಿ ನಾ.ಶಂಕರ್‌ ಮತ್ತು ಅರುಣಬಾಬು ನಡುವೆ ಟಿಕೆಟ್‌ಗೆ ಪೈಪೋಟಿ ನಡೆಯಬಹುದು ಎಂದು ಪಕ್ಷದ ಮೂಲಗಳು ತಿಳಿಸುತ್ತವೆ. ಕ್ಷೇತ್ರದಲ್ಲಿ 3 ಪಕ್ಷಗಳಲ್ಲಿ ಟಿಕೆಟ್‌ ಆಕಾಂಕ್ಷಿಗಳು ತಮ್ಮ ವರಸೆ ಆರಂಭಿಸಿದ್ದಾರೆ. ಅಂತಿಮವಾಗಿ ಯಾರು ಭಿ.ಫಾರಂ ಪಡೆಯುತ್ತಾರೆ ಎಂಬುದು ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಒಂದು ಕೈ ನೋಡುವ ತವಕದಲ್ಲಿ ಬಿಜೆಪಿ

ಬಿಜೆಪಿಗೆ ಕ್ಷೇತ್ರದಲ್ಲಿ ಹೇಳಿಕೊಳ್ಳುವ ನೆಲೆ ಇಲ್ಲ. ಮೋದಿಯ ಅಲೆಯಲ್ಲಿ ತಾವೂ ಒಂದು ಕೈ ನೋಡುವ ತವಕದಲ್ಲಿದ್ದಾರೆ. ಟಿಕೆಟ್‌ಗೆ ಅಂತಹ ಪೈಪೋಟಿ ಇಲ್ಲ ಎನ್ನಬಹುದು. ಆರಂಭದಲ್ಲಿ ಇತರೆ ಪಕ್ಷಗಳಿಂದ ಬರುವ ಅಭ್ಯರ್ಥಿಗಳಿಗಾಗಿ ಕಾಯುತ್ತಿದ್ದರು. ಯಾರು ಬರುವುದಿಲ್ಲ ಎಂದು ಖಾತ್ರಿಯಾದ ಮೇಲೆ ಮುಖಂಡರಾದ ಹಿರಿಯ ನಾಯಕ ಸತ್ಯನಾರಾಯಣ ಮಹೇಶ್‌, ಅರುಣ್‌ ಬಾಬು, ನಾ.ಶಂಕರ್‌ ಹೆಸರುಗಳು ಕೇಳಿ ಬರುತ್ತಿವೆ. ಅದರಲ್ಲಿ ಸತ್ಯನಾರಾಯಣ ಮಹೇಶ್‌ಗೆ ಆಸಕ್ತಿ ಇಲ್ಲ, ನಾ.ಶಂಕರ್‌ ಟಿಕೆಟ್‌ ನೀಡಿದರೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅರುಣ್‌ಬಾಬು ಯಡಿಯುರಪ್ಪ ಮೂಲಕ ಹೈಕಮಾಂಡ್‌ ಕದ ತಟ್ಟಿದ್ದಾರೆ.

 

ಪ್ರತಿಕ್ರಿಯಿಸಿ (+)