ಬುಧವಾರ, ಡಿಸೆಂಬರ್ 11, 2019
16 °C

ವಾರ್ಷಿಕ ₹2 ಕೋಟಿಗೂ ಅಧಿಕ ಆದಾಯ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾರ್ಷಿಕ ₹2 ಕೋಟಿಗೂ ಅಧಿಕ ಆದಾಯ ನಿರೀಕ್ಷೆ

ಹಾವೇರಿ: ನಗರಸಭೆಯ 239 ಮಳಿಗೆಗಳ ಬಹಿರಂಗ ಹರಾಜಿಗೆ ಅರ್ಜಿ ಸಲ್ಲಿಕೆಯ ಅವಧಿ ಸೋಮವಾರ ಕೊನೆಗೊಂಡಿದ್ದು, ವಾರ್ಷಿಕ ₹ 2 ಕೋಟಿಗೂ ಅಧಿಕ ಆದಾಯವನ್ನು ನಿರೀಕ್ಷಿಸಲಾಗಿದೆ.

12 ವರ್ಷಗಳಿಂದ ಸೋರಿಕೆಯಾಗುತ್ತಿದ್ದ ಆದಾಯ ತಡೆಯುವ ಜಿಲ್ಲಾಡಳಿತ ಹಾಗೂ ನಗರಸಭೆ ಕ್ರಮಕ್ಕೆ ಜನ ಸಾಮಾನ್ಯರ ಬೆಂಬಲ ವ್ಯಕ್ತವಾಗಿದ್ದು, ಭವಿಷ್ಯದಲ್ಲಿ ನಗರದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಪೌರಾಡಳಿತದಿಂದ ಬಂದ ಸೂಚನೆ ಪಾಲಿಸಿಕೊಂಡು, ಯಾರಿಗೂ ತೊಂದರೆ ಆಗದಂತೆ ಕ್ರಮಕೈಗೊಳ್ಳಲಾಗುವುದು. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ ಹಲಗಣ್ಣನವರ ತಿಳಿಸಿದ್ದಾರೆ.

ಹೀಗಿದೆ: ನಗರದ ಪ್ರಮುಖ ಪ್ರದೇಶಗಳಾದ ಗೂಗಿಕಟ್ಟೆ, ಗಣೇಶ ಕಾಂಪ್ಲೆಕ್ಸ್, ಸುಭಾಷ್‌ ವೃತ್ತ, ಲಾಲ್‌ ಬಹದ್ದೂರ್‌ ಶಾಸ್ತ್ರಿ ಮಾರುಕಟ್ಟೆ, ಎಲ್‌.ಬಿ.ಎಸ್‌. ಮಾರುಕಟ್ಟೆ, ಎಂ.ಜಿ ರಸ್ತೆ, ಹೈಸ್ಕೂಲ್‌ ರಸ್ತೆ ಸೇರಿದಂತೆ ವಿವಿಧೆಡೆ ನಗರಸಭೆಯು 240ಕ್ಕೂ ಅಧಿಕ ಮಳಿಗೆಗಳನ್ನು ಹೊಂದಿದೆ.

ಇವುಗಳನ್ನು 2002ರಲ್ಲಿ ಅಂದಿನ ಪುರಸಭೆ ಹರಾಜು ಹಾಕಿತ್ತು. ನಿಯಮಾವಳಿ ಪ್ರಕಾರ ಮತ್ತೆ 2006ರಲ್ಲಿ ದರ ಪರಿಷ್ಕರಿಸಿ, ಮರು ಹರಾಜು ಹಾಕಬೇಕಿತ್ತು. ಪುರಸಭೆಯು 2003ರಲ್ಲಿ ನಗರಸಭೆ ದರ್ಜೆಗೆ ಏರಿತು. ಆದರೆ, ಈ ತನಕ ದಿಟ್ಟ ನಿರ್ಧಾರ ಕೈಗೊಂಡಿರಲಿಲ್ಲ. ಜಿಲ್ಲಾಡಳಿತವೂ ಹೆಜ್ಜೆ ಇಟ್ಟಿರಲಿಲ್ಲ. ಹೀಗಾಗಿ, ನಗರಸಭೆ ಆದಾಯ ಸೋರಿಕೆ ಆಗುತ್ತಿತ್ತು.

‘ಈ ಹಿಂದೆ ಸುಭಾಷ್‌ ವೃತ್ತದಲ್ಲಿ 12X15 ಅಡಿಯ ಮಳಿಗೆಯೊಂದಕ್ಕೆ ಕೇವಲ ₹ 90, ಲಾಲ್‌ಬಹುದ್ದೂರ್‌ ಶಾಸ್ತ್ರಿ ಮಾರುಕಟ್ಟೆ ಬಳಿಯ 7.5X6 ಅಡಿಯ ಮಳಿಗೆಯೊಂದಕ್ಕೆ ಬಾಡಿಗೆ ಕೇವಲ ₹ 68. ಇದರ ಪಕ್ಕದಲ್ಲಿರುವ ₹ 72, ಅದರ ಪಕ್ಕದಲ್ಲೇ ₹79 ಬಾಡಿಗೆ ಇತ್ತು. ಹೀಗೆ ಹಲವು ಮಳಿಗೆಗಳ ಬಾಡಿಗೆ ತೀರಾ ಕಡಿಮೆ ಇತ್ತು. ಈ ಬಗ್ಗೆ ಹಲವು ಬಾರಿ ಮನವಿ ನೀಡಿದರೂ ಪರಿಗಣಿಸಿರಲಿಲ್ಲ’ ಎನ್ನುತ್ತಾರೆ ನಗರಸಭೆ ಸದಸ್ಯ ಗುಡ್ಡನಗೌಡ್ರ ಅಂದಾನಿಗೌಡ್ರ.

‘ಇಷ್ಟೊಂದು ಕಡಿಮೆ ಬಾಡಿಗೆ ಇದ್ದರೂ, ಸಂಪೂರ್ಣವಾಗಿ ಪಾವತಿಸಿರಲಿಲ್ಲ. 2016ರ ತನಕ ವಸೂಲಾತಿಗೆ ₹ 22.59 ಲಕ್ಷ ತೆರಿಗೆ ಬಾಕಿ ಇತ್ತು. ಇದರ ಜೊತೆ 2017–18ನೇ ಸಾಲಿನ ₹ 29.88 ಲಕ್ಷ ಬಾಡಿಗೆ ಸೇರಿದಂತೆ ಒಟ್ಟು ₹ 52.39 ಲಕ್ಷ ಬಾಡಿಗೆಯನ್ನು ಕಳೆದ ವಾರದಲ್ಲಿ ವಸೂಲಾತಿ ಮಾಡಲಾಗಿದೆ. ಒಟ್ಟಾರೆ, ಈಗ ಶೇ 98ರಷ್ಟು ವಸೂಲಾತಿ ಆಗಿದೆ’ ಎಂದು ಪೌರಾಯುಕ್ತ ಬಿ. ಶಿವಕುಮಾರಯ್ಯ ತಿಳಿಸಿದರು.

ವರ್ತಕ–ರೈತರಿಗೂ ದಕ್ಕದ ಲಾಭ: ಕನಿಷ್ಠ ಬೆಲೆಗೆ ಮಳಿಗೆಗಳನ್ನು ಬಾಡಿಗೆ ಪಡೆದ ಕೆಲವರು, ಅದನ್ನು ಸಾವಿರಾರು ರೂಪಾಯಿಗಳಿಗೆ ಇತರರಿಗೆ ಬಾಡಿಗೆಗೆ ನೀಡಿದ್ದರು. ಕೆಲವರು ಸುಮಾರು 5ರಿಂದ 10 ಅಂಗಡಿಗಳನ್ನು ತಮ್ಮ ಸುಪರ್ದಿಯಲ್ಲಿ ಇರಿಸಿಕೊಂಡಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಹೀಗಾಗಿ ಅತ್ತ ವರ್ತಕರು, ರೈತರು, ವ್ಯಾಪಾರಿಗಳಿಗೂ ಪ್ರಯೋಜನ ದೊರೆತಿರಲಿಲ್ಲ. ಇತ್ತ ನಗರಸಭೆಗೂ ಆದಾಯ ಬಂದಿರಲಿಲ್ಲ. ನಗರದ ಅಭಿವೃದ್ಧಿಗೆ ವಿನಿಯೋಗ ಆಗಬೇಕಿದ್ದ ಹಣವು ಸೋರಿಕೆ ಆಗುತ್ತಿತ್ತು’ ಎಂದು ಪೌರಾಯುಕ್ತ ಶಿವಕುಮಾರಯ್ಯ ವಿವರಿಸಿದರು.

‘ಸ್ವಚ್ಛ–ಸುಂದರ ಹಾವೇರಿ ನಿರ್ಮಾಣ’

ಕಾನೂನು ಬದ್ಧವಾಗಿ ನಗರಸಭೆಯ ಆದಾಯ ವೃದ್ಧಿಸುವ ಮೂಲಕ ನಾಗರಿಕರಿಗೆ ಉತ್ತಮ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳನ್ನು ಇಡಲಾಗುತ್ತಿದೆ. ಹಂತ ಹಂತವಾಗಿ ಇನ್ನುಳಿದ ಅಕ್ರಮ, ಸಮಸ್ಯೆಗಳನ್ನೂ ಬಗೆ ಹರಿಸಲಾಗುವುದು. ಸ್ವಚ್ಛ–ಸುಂದರ ಹಾವೇರಿ ನಗರ ನಿರ್ಮಾಣಕ್ಕೆ ಸಕಲ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ. ತಿಳಿಸಿದರು.

‘12 ವರ್ಷಗಳ ಲೀಸ್’

ಮಳಿಗೆಯನ್ನು 12 ವರ್ಷಗಳ ಅವಧಿಗೆ ಲೀಸ್ ನೀಡಲಾಗಿದ್ದು, ಮೂರು ವರ್ಷಕ್ಕೊಮ್ಮೆ ಶೇ 10 ಬಾಡಿಗೆ ಏರಿಕೆ ಮಾಡಲಾಗುವುದು. ಸೇವಾ ತೆರಿಗೆ ಪಾವತಿ, ನೀರು–ವಿದ್ಯುತ್ ಕರಗಳನ್ನು ತುಂಬಬೇಕು, ಸುಣ್ಣ–ಬಣ್ಣ ಬಳಿಯುವುದು, ಸಣ್ಣ–ಪುಟ್ಟ ದುರಸ್ತಿಯ್ನು ಬಾಡಿಗೆದಾರರೇ ಮಾಡಬೇಕು. ಬಾಡಿಗೆ ಪಡೆದ ಮಳಿಗೆಯನ್ನು ಬೇರೆಯವರಿಗೆ ನೀಡಿದರೆ, ನಗರಸಭೆಗೆ ಜಪ್ತಿ ಮಾಡಲು ಅವಕಾಶ ಇದೆ ಎಂದು ಕರಾರಿನಲ್ಲಿ ತಿಳಿಸಲಾಗಿದೆ.

ಪ್ರತಿಕ್ರಿಯಿಸಿ (+)