ಭಾನುವಾರ, ಡಿಸೆಂಬರ್ 8, 2019
24 °C

ಸಹಕಾರ ಸಂಘಗಳಿಗೆ ಆದಾಯ ತೆರಿಗೆ ವಿನಾಯ್ತಿ

Published:
Updated:
ಸಹಕಾರ ಸಂಘಗಳಿಗೆ  ಆದಾಯ ತೆರಿಗೆ ವಿನಾಯ್ತಿ

ಸದಸ್ಯರಿಂದ, ಸದಸ್ಯರಿಗಾಗಿ, ಸದಸ್ಯರಿಗೋಸ್ಕರ ಒಬ್ಬರಿಗಾಗಿ ಎಲ್ಲರೂ, ಎಲ್ಲರಿಗಾಗಿ ಒಬ್ಬ ಎಂಬ ತತ್ವದಡಿ ರಚನೆಗೊಂಡಿರುವ ಸಹಕಾರ ಕ್ಷೇತ್ರವು ದೇಶದಲ್ಲಿ ಕ್ರಾಂತಿಯನ್ನೇ ಮಾಡಿದೆ. ಸಹಕಾರ ಸಂಸ್ಥೆಯ ಮೌಲ್ಯವೆಂದರೆ ಸ್ವ ಸಹಾಯ, ಸ್ವ ಜವಾಬ್ದಾರಿ, ಪ್ರಜಾಸತ್ತೆ, ಸಮಾನತೆ, ಸರ್ವಸಮ್ಮತ ಹಾಗೂ ದೃಢತೆಯಾಗಿದೆ. ಈ ಮೌಲ್ಯಗಳು ಸಹಕಾರಿಗಳ ಸಂಪ್ರದಾಯವಾಗಿರಬೇಕು. ಸಹಕಾರಿಗಳಲ್ಲಿ ನಂಬಿಕೆ, ಪ್ರಾಮಾಣಿಕತೆ, ಸಾಮಾಜಿಕ ಜವಾಬ್ದಾರಿ, ನೈತಿಕತೆಯ ಮುಕ್ತ ನಡವಳಿಕೆ ಅವರ ಮೌಲ್ಯಗಳಾಗಿರಬೇಕು. ಆ ಮೌಲ್ಯಗಳನ್ನು ಇತರರಿಗೆ ಮುಟ್ಟಿಸುವ ಮನ್ನಸ್ಸು ಉಳ್ಳವರಾಗಿರಬೇಕು. ಆದರೆ, ಸಹಕಾರ ವ್ಯವಸ್ಥೆಯ ಆಶಯಕ್ಕೆ ವಿರುದ್ಧವಾಗಿ ಸಹಕಾರಿಗಳು ನಡೆದುಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ಸ್ವಾರ್ಥ, ಸ್ವಜನಪಕ್ಷಪಾತ, ಪ್ರತಿಷ್ಠೆ, ಭ್ರಷ್ಟಾಚಾರವನ್ನು ಮೈಗೂಡಿಸಿಕೊಳ್ಳುತ್ತಿದ್ದು, ಬಹಳಷ್ಟು ಸಹಕಾರ ಸಂಸ್ಥೆಗಳು ನಲುಗಿ ಹೋಗುತ್ತಿವೆ.

ಪತ್ತಿನ ಸಹಕಾರ ಸಂಘಗಳು, ಸಹಕಾರ ಕಾಯ್ದೆ ಹಾಗೂ ನಿಯಮಕ್ಕೆ ಅನುಗುಣವಾಗಿ ಸಹಕಾರ ಸಂಘಗಳ ನಿಬಂಧಕರಲ್ಲಿ ನೋಂದಾಯಿಸಿಕೊಂಡು, ಸಹಕಾರ ಕಾಯ್ದೆ ಹಾಗೂ ನಿಯಮಕ್ಕೆ ಪೂರಕವಾಗಿ ತನ್ನದೇ ಆದ ಬೈಲಾ ರಚಿಸಿಕೊಂಡು ಅದನ್ನು ನಿಬಂಧಕರಿಂದ ನೋಂದಾಯಿಸಿಕೊಂಡು ತಮ್ಮೆಲ್ಲ ಚಟುವಟಿಕೆಗಳನ್ನು ನಡೆಸಬೇಕು. ಜೊತೆಗೆ ಸರ್ಕಾದ ಆರ್ಥಿಕ ಮತ್ತು ಆದಾಯ ಇಲಾಖೆಗಳ ನೀತಿ ನಿಯಮಗಳನ್ನು ಸಹ ಗಮನದಲ್ಲಿಟ್ಟುಕೊಂಡು ವ್ಯವಹಾರ ನಡೆಸುವುದು ಅಗತ್ಯ.

2016ರ ನವೆಂಬರ್ 8 ರಂದು ಕೇಂದ್ರ ಸರ್ಕಾರವು ಗರಿಷ್ಠ ಮುಖಬೆಲೆಯ ನೋಟು ರದ್ದುಗೊಳಿಸಿದ ಸಂದರ್ಭದಲ್ಲಿ ಆರ್ಥಿಕ ಇಲಾಖೆ ನೀಡಿದ ನಿರ್ದೇಶನಗಳನ್ನು ಗಮನಿಸಿ, ಅನುಸರಿಸದೇ ವ್ಯವಹಾರ ನಡೆಸಿದ ಅದೆಷ್ಟೋ ಪತ್ತಿನ ಸಹಕಾರ ಸಂಘಗಳು ಸಂಕಟಕ್ಕೆ ಸಿಲುಕಿಕೊಂಡಿವೆ.

ಪತ್ತಿನ ಸಹಕಾರ ಸಂಘಗಳು ತನ್ನ ಸದಸ್ಯರೊಡನೆ ನಡೆಸುವ ಆರ್ಥಿಕ ಚಟುವಟಿಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರಾಷ್ಟ್ರದ ಆರ್ಥಿಕ ಚಟುವಟಿಕೆಯ ಭಾಗವಾಗಿರುತ್ತದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರವು ಪತ್ತಿನ ಸಹಕಾರ ಸಂಘಗಳ ಚಟುವಟಿಕೆಗಳಿಗೆ ಉತ್ತೇಜನ ನೀಡಿ, ಅವುಗಳನ್ನು ಆರ್ಥಿಕ ಪ್ರಗತಿಯ ಹಾದಿಯಲ್ಲಿ ಮುನ್ನಡೆಸುವ ಸದುದ್ದೇಶದಿಂದ ಆದಾಯ ತೆರಿಗೆ ಕಾಯ್ದೆಯ ಕಲಂ 80ಪಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯ್ತಿ ನೀಡಿದೆ.

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ವ್ಯಾಖ್ಯಾನದ ಪ್ರಕಾರ, ಸಂಘದ ಸದಸ್ಯನೆಂದರೆ, ಸದಸ್ಯ / ಸಹ-ಸದಸ್ಯ / ನಾಮ ಮಾತ್ರ ಸದಸ್ಯರಾಗಿದ್ದಾರೆ. ಸಹಕಾರ ಸಂಘಗಳ ಕಾಯ್ದೆಯಡಿ ಸಹಕಾರ ಸಂಘಗಳು ಈ ಮೂರೂ ರೀತಿಯ ಸದಸ್ಯತ್ವ ಹೊಂದಬಹುದಾಗಿದೆ. ಆದರೆ, ಈ ಮೂರೂ ವರ್ಗದ ಸದಸ್ಯತ್ವ ಹೊಂದಲು ತನ್ನ ಬೈಲಾದಲ್ಲಿ ಅವಕಾಶ ಕಲ್ಪಿಸಿ, ಆಯಾ ವರ್ಗದ ಸದಸ್ಯರ ಹಕ್ಕು ಮತ್ತು ಹೊಣೆಗಾರಿಕೆಯನ್ನು ಸ್ಪಷ್ಟವಾಗಿ ಬೈಲಾದಲ್ಲಿ ವಿವರಿಸಿರತಕ್ಕದ್ದು.

ಹೈದರಾಬಾದ್‌ನ ದಿ ಸಿಟಿಜನ್ ಕೋ-ಆಪರೇಟಿವ್ ಸೊಸೈಟಿ ವರ್ಸಸ್ ಆದಾಯ ತೆರಿಗೆ ಇಲಾಖೆಯ ಪ್ರಕರಣದಲ್ಲಿ ಆದಾಯ ತೆರಿಗೆ ಕಾಯ್ದೆ ಕಲಂ 80ಪಿ ಅಡಿಯಲ್ಲಿ ದಿ ಸಿಟಿಜನ್ ಕೋ-ಆಪರೇಟಿವ್ ಸೊಸೈಟಿ ಪಡೆಯುತ್ತಿದ್ದ ತೆರಿಗೆ ವಿನಾಯಿತಿಗೆ ಇತ್ತೀಚಿನ ತನ್ನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ತಡೆ ಹಾಕಿದೆ. ಇದರಿಂದ ಇತರ ಎಲ್ಲಾ ಪತ್ತಿನ ಸಹಕಾರ ಸಂಘಗಳು ಆತಂಕಕ್ಕೆ ಒಳಗಾಗಿವೆ.

ಈ ಪ್ರಕರಣದಲ್ಲಿ ದಿ ಸಿಟಿಜನ್ ಕೋ-ಆಪರೇಟಿವ್ ಸೊಸೈಟಿ ವ್ಯವಹಾರದಲ್ಲಿ ನಾಮಮಾತ್ರ ಸದಸ್ಯರಿಂದ ಠೇವಣಿ ಸ್ವೀಕರಿಸಲು ನಿಬಂಧಕರಿಂದ ಅನುಮೋದನೆ ಪಡೆಯದಿರುವುದು, ಸಾರ್ವಜನಿಕರಿಗೆ ಸಾಲ ಮಂಜೂರು ಮಾಡಿರುವುದು, ಛಾಪಾ ಕಾಗದ ವ್ಯಾಪಾರ ನಡೆಸುತ್ತಿರುವುದನ್ನು ಸಹಕಾರ ಸಂಘಗಳ ಕಾಯ್ದೆ ಹಾಗೂ ನಿಯಮಗಳ ಉಲ್ಲಂಘನೆ ಎಂದು ಸುಪ್ರೀಂ ಕೋರ್ಟ್‌ ನಿರ್ಣಯಿಸಿದೆ. ಈ ನ್ಯೂನತೆಗಳ ಕಾರಣದಿಂದಾಗಿ ದಿ ಸಿಟಿಜನ್ ಕೋ-ಆಪರೇಟಿವ್ ಸೊಸೈಟಿಗೆ ಹಿನ್ನಡೆ ಉಂಟಾಗಿದೆ.

ಸಹಕಾರ ಸಂಘಗಳ ಕಾಯ್ದೆ ಹಾಗೂ ನಿಯಮಕ್ಕೆ ಅನುಗುಣವಾಗಿ ತನ್ನ ಆರ್ಥಿಕ ಚಟುವಟಿಕೆ ನಡೆಸಲು ಕರಾರುವಾಕ್ಕಾದ ಬೈಲಾವನ್ನು ಸಹಕಾರ ಸಂಘಗಳ ನಿಬಂಧಕರಿಂದ ಅನುಮೋದನೆ ಪಡೆದು, ಕಾನೂನು ರೀತ್ಯ ತನ್ನ ಆರ್ಥಿಕ ಚಟುವಟಿಕೆ ನಡೆಸುತ್ತಿರುವ ಹಾಗೂ ಸುಪ್ರೀಂ ಕೋರ್ಟ್‌ ಗಣನೆಗೆ ತೆಗೆದುಕೊಂಡಿರುವ ನ್ಯೂನತೆಗಳಿಗೆ ಅವಕಾಶ ಕೊಡದ ಪತ್ತಿನ ಸಹಕಾರ ಸಂಘಗಳಿಗೆ  ಕೋರ್ಟಿನ ಈ ತೀರ್ಪು ಬಾಧಿಸಲಾರದು.

ಪತ್ತಿನ ಸಹಕಾರ ಸಂಘಗಳು ತಮ್ಮ ಮಿತಿಯನ್ನು ಅರ್ಥ ಮಾಡಿಕೊಂಡು ವ್ಯವಹಾರವನ್ನು ಕಾನೂನು ರೀತ್ಯ ನಡೆಸಿಕೊಂಡು ಹೋಗುವ ಅಗತ್ಯ ಇಂದು ಅನಿವಾರ್ಯವಾಗಿದೆ. ಪತ್ತಿನ ಸಹಕಾರ ಸಂಘಗಳು ಭ್ರಮೆಯಲ್ಲಿ ತಮ್ಮ ವ್ಯಾಪ್ತಿ ಮೀರಿ ಬ್ಯಾಂಕ್ ರೀತಿಯಲ್ಲಿ ಹಾಗೂ ಖಾಸಗಿ ಆರ್ಥಿಕ ಸಂಸ್ಥೆಯ ರೀತಿಯಲ್ಲಿ ಚಟುವಟಿಕೆ ನಡೆಸಲು ಹೊರಟರೆ ತೊಂದರೆ ಕಟ್ಟಿಟ್ಟ ಬುತ್ತಿ ಎನ್ನುವುದು ಈ ಪ್ರಕರಣದಲ್ಲಿ ಸಾಬೀತಾಗಿದೆ.

ಸಹಕಾರ ಸಂಘಗಳು ಸಹಕಾರ ಕಾಯ್ದೆ ಹಾಗೂ ನಿಯಮಗಳ ಜೊತೆಗೆ ಸರ್ಕಾರದ ಆರ್ಥಿಕ ಮತ್ತು ಆದಾಯ ಇಲಾಖೆಗಳ ನೀತಿ-ನಿಯಮಗಳಿಗೂ ಬದ್ಧವಾಗಿ ತಮ್ಮ ವ್ಯವಹಾರಗಳನ್ನು ನಡೆಸುವುದು ಅನಿವಾರ್ಯವಾಗಿದೆ.

ಯಾವ ಪತ್ತಿನ ಸಹಕಾರ ಸಂಘವು ಸಹಕಾರ ಕಾಯ್ದೆ ಹಾಗೂ ನಿಯಮಗಳ ಜೊತೆಗೆ ಸರ್ಕಾರದ ಆರ್ಥಿಕ ಮತ್ತು ಆದಾಯ ಇಲಾಖೆಯ ನೀತಿ-ನಿಯಮಗಳಿಗೂ ಬದ್ಧವಾಗಿ ತನ್ನ ವ್ಯವಹಾರಗಳನ್ನು ನಡೆಸುತ್ತಿದ್ದರೆ, ಅಂತಹ ಸಹಕಾರ ಸಂಘಗಳಿಗೆ ಆದಾಯ ತೆರಿಗೆ ಕಾಯ್ದೆಯ ಕಲಂ 80ಪಿ ಅಡಿ ರಿಯಾಯ್ತಿ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಆದಾಯ ತೆರಿಗೆ ಕಾಯ್ದೆ ಕಲಂ 80ಪಿ ಅಡಿ ಸಹಕಾರ ಸಂಘಗಳಿಗೆ ಒದಗಿಸಿರುವ ರಿಯಾಯ್ತಿ ಸಂಬಂಧ ಇರುವ ಗೊಂದಲಗಳನ್ನು ಕೇಂದ್ರ ಸರ್ಕಾರವು  ನಿವಾರಣೆ ಮಾಡುವ ಅಗತ್ಯವಿದೆ. ಆದಾಯ ತೆರಿಗೆ ಇಲಾಖೆ ಗೊಂದಲ ನಿವಾರಣೆ ಸಲುವಾಗಿ 80ಪಿ ಅಡಿಯಲ್ಲಿ ಸಿಗುವ ರಿಯಾಯ್ತಿ ಬಗ್ಗೆ   ಸ್ಪಷ್ಟ ವಿವರಣೆ ನೀಡಿದಲ್ಲಿ, ಸಹಕಾರ ಸಂಘಗಳಿಗಿರುವ ಆದಾಯ ತೆರಿಗೆ ವಿನಾಯ್ತಿ ಗೊಂದಲಗಳು ನಿವಾರಣೆಗೊಳ್ಳುತ್ತವೆ.  ಈಗಾಗಲೇ ಆದಾಯ ತೆರಿಗೆ ರಿಯಾಯ್ತಿ ವಿವಾದಲ್ಲಿ ಸಿಲುಕಿಕೊಂಡಿರುವ ಹಲವು ಸಹಕಾರ ಸಂಘಗಳಿಗೂ ಇದರಿಂದ ಪ್ರಯೋಜನ ಆಗಲಿದೆ.

 

ಪ್ರತಿಕ್ರಿಯಿಸಿ (+)