ಶುಕ್ರವಾರ, ಡಿಸೆಂಬರ್ 6, 2019
24 °C

ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ಹಗರಣ: ರಾಹುಲ್ ಗಾಂಧಿ ಆರೋಪ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ಹಗರಣ: ರಾಹುಲ್ ಗಾಂಧಿ ಆರೋಪ

ನವದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ರಫೇಲ್‌ ವಿಮಾನಕ್ಕೆ ಎಷ್ಟು ಹಣ ನೀಡಲಾಗಿದೆ ಎಂಬುದನ್ನು ಯಾಕೆ ಬಹಿರಂಗಪಡಿಸುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

‘ಯುದ್ಧ ವಿಮಾನ ಖರೀದಿಗೆ ಎಷ್ಟು ಹಣ ನೀಡಲಾಗಿದೆ ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವರೊಬ್ಬರು ಹೇಳುತ್ತಿರುವುದು ಇದೇ ಮೊದಲು. (ರಫೇಲ್‌ ಖರೀದಿಯಲ್ಲಿ) ಹಗರಣ ನಡೆದಿದೆ ಎಂದು ಗುಜರಾತ್‌ ಚುನಾವಣೆ ಸಂದರ್ಭದಲ್ಲಿ ನಾನು ಹೇಳಿದ್ದೆ. ಮೋದಿ ಅವರೇ ಖುದ್ದಾಗಿ ಈ ಒಪ್ಪಂದ ನಡೆಯುವಂತೆ ನೋಡಿಕೊಂಡಿದ್ದಾರೆ’ ಎಂದು ರಾಹುಲ್‌ ಹೇಳಿದ್ದಾರೆ. 

‘ಮೋದಿ ಪ್ಯಾರಿಸ್‌ಗೆ ಹೋಗಿ, ಖುದ್ದಾಗಿ ಒಪ್ಪಂದದಲ್ಲಿ ಬದಲಾವಣೆ ಮಾಡಿದ್ದಾರೆ. ಇದು ಇಡೀ ಭಾರತಕ್ಕೆ ಗೊತ್ತು. ಈಗ, ಯುದ್ಧ ವಿಮಾನಕ್ಕೆ ಎಷ್ಟು ಹಣ ವೆಚ್ಚ ಮಾಡಲಾಗಿದೆ ಎಂಬ ಮಾಹಿತಿಯನ್ನು ಭಾರತದ ಜನರು, ಹುತಾತ್ಮ ಯೋಧರ ಮನೆಯವರಿಗೆ ನೀಡಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವೆ ಹೇಳುತ್ತಿದ್ದಾರೆ. ಇದರ ಅರ್ಥ ಏನು? ಈ ವ್ಯವಹಾರದಲ್ಲಿ ಅವ್ಯವಹಾರ ನಡೆದಿದೆ ಎಂಬುದೇ ಇದರ ಅರ್ಥ’ ಎಂದು ರಾಹುಲ್‌ ಹರಿಹಾಯ್ದಿದ್ದಾರೆ.

ಭಾರತ ಮತ್ತು ಫ್ರಾನ್ಸ್‌ ನಡುವಣ ಒಪ್ಪಂದದ ಪ್ರಕಾರ, ರಫೇಲ್‌ ಖರೀದಿಯ ಮೊತ್ತ ಎಷ್ಟು ಎಂಬುದನ್ನು ಬಹಿರಂಗಪಡಿಸುವಂತಿಲ್ಲ ಎಂದು ಕೆಲವು ದಿನಗಳ ಹಿಂದೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದರು.

‘ಭಾರತ–ಫ್ರಾನ್ಸ್‌ ನಡುವಣ ಯುದ್ಧ ವಿಮಾನ ಖರೀದಿ ಒಪ್ಪಂದದ ವಿವರಗಳನ್ನು ಬಹಿರಂಗಪಡಿಸಲು ಸರ್ಕಾರ ಬಯಸುತ್ತಿಲ್ಲವೇ’ ಎಂಬ ಪ್ರಶ್ನೆಯನ್ನು ಸಮಾಜವಾದಿ ಪಕ್ಷದ ಸದಸ್ಯ ನರೇಶ್‌ ಅಗರ್‌ವಾಲ್‌ ರಾಜ್ಯಸಭೆಯಲ್ಲಿ ಕೇಳಿದ್ದರು. ಇದಕ್ಕೆ ನಿರ್ಮಲಾ ಹೀಗೆ ಪ್ರತಿಕ್ರಿಯೆ ನೀಡಿದ್ದರು.

 

ಪ್ರತಿಕ್ರಿಯಿಸಿ (+)