ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನಗಳಲ್ಲಿ ಪ್ರತಿಧ್ವನಿಸಿದ ಕಾನೂನು ಸುವ್ಯವಸ್ಥೆ

Last Updated 6 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಮಂಡಲದ ಉಭಯ ಸದನಗಳಲ್ಲೂ ಸೋಮವಾರ ರಾಜ್ಯದ ಕಾನೂನು ಸುವ್ಯವಸ್ಥೆ ವಿಷಯ ಪ್ರತಿಧ್ವನಿಸಿ,  ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಮಧ್ಯೆ ವಾಗ್ವಾದಕ್ಕೆ ಕಾರಣವಾಯಿತು.

ಬಿಜೆಪಿ ಸದಸ್ಯರ ಆರೋಪಗಳಿಗೆ ವಿಧಾನಸಭೆಯಲ್ಲಿ ಉತ್ತರ ನೀಡಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ, ‘ವಿರೋಧ ಪಕ್ಷವಾಗಿ ಆರೋಪ ಮಾಡಬೇಕು ಎಂಬ ಕಾರಣಕ್ಕೆ ಸದಸ್ಯರು ಮಾಡಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿದೆ’ ಎಂದು ಸಮರ್ಥಿಸಿಕೊಂಡರು.

‍‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಎಸ್‌ಡಿಪಿಐ ನಿಷೇಧಿಸುವ ಬಗ್ಗೆ ಸಚಿವರು ಹೇಳಿಲ್ಲ, ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸವನ್ನು ಮಾಡುತ್ತಿದೆ’ ಎಂದು ಟೀಕಿಸಿದ ಬಿಜೆಪಿ ಸದಸ್ಯರು, ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ನಡೆಸಿದರು. ಸಭಾಧ್ಯಕ್ಷ ಪೀಠದಲ್ಲಿದ್ದ ಎನ್.ಎಚ್. ಶಿವಶಂಕರ ರೆಡ್ಡಿ ಸದನವನ್ನು ಬುಧವಾರಕ್ಕೆ ಮುಂದೂಡಿದರು.

ಮಂಗಳವಾರ ಬೆಳಿಗ್ಗೆ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಶೆಟ್ಟರ್‌ ರಾಜ್ಯದ ಕಾನೂನು ಸುವ್ಯವಸ್ಥೆ ವಿಷಯ ಪ್ರಸ್ತಾಪಿಸಿದರು. ‘ಸುಪ್ರೀಂ’ ಸಿ.ಎಂ ಒಬ್ಬರು ಗೃಹ ಇಲಾಖೆಯನ್ನು ನಿರ್ವಹಿಸುತ್ತಿದ್ದಾರೆ ಎಂದು ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಹೆಸರು ಪ್ರಸ್ತಾಪಿಸದೆ ಟೀಕಾ ಪ್ರಹಾರ ನಡೆಸಿದರು.

‘ಗಾರ್ಡನ್ ಸಿಟಿಯಾಗಿದ್ದ ಬೆಂಗಳೂರು ಈಗ ಗಾರ್ಬೆಜ್‍, ರೇಪ್, ಮರ್ಡರ್ ಸಿಟಿಯಾಗಿದೆ’ ಎಂದು ಶೆಟ್ಟರ್‌ ಆರೋಪಿಸಿದಾಗ, ಬೃಹತ್ ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆ, ‘ಈ ರೀತಿ ಆರೋಪ ಮಾಡುವುದರಿಂದ ಕೆಟ್ಟ ಸಂದೇಶ ರವಾನೆಯಾಗುತ್ತದೆ. ದೇಶದಲ್ಲೇ ಬೆಂಗಳೂರು ನಂಬರ್ ಒನ್ ನಗರ’ ಎಂದರು.

‘ಯಾವುದರಲ್ಲಿ ನಂ.1 ಆಗಿದೆ. ಎಷ್ಟು ಹೂಡಿಕೆಯಾಗಿದೆ ಎಂಬ ಬಗ್ಗೆ ನನ್ನ ಬಳಿ ಮಾಹಿತಿ ಇದೆ. ಪ್ರಧಾನಿ ಅನಿವಾರ್ಯವಾಗಿ ಭ್ರಷ್ಟಾಚಾರ ಮತ್ತು ಅಪರಾಧ ರಾಜ್ಯ ಎಂದಿದ್ದಾರೆ’ ಎಂದೂ ಶೆಟ್ಟರ್‌ ಕೆಣಕಿದರು.

ಈ ಮಧ್ಯೆ, ಲಿಂಬಾವಳಿ ಹೆಗಲು ತಟ್ಟಿಕೊಂಡು ಏರಿದ ಧ್ವನಿಯಲ್ಲಿ ಮಾತನಾಡಿದಾಗ, ಅದೇ ಶೈಲಿಯಲ್ಲಿ ಸಚಿವ ಪಾಟೀಲ ತಿರುಗೇಟು ನೀಡಿದರು.

ಗದ್ದಲ ಹೆಚ್ಚಾದಾಗ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು. ಮತ್ತೆ ಕಲಾಪ ಆರಂಭವಾದಾಗ, ‘ಇಡೀ ದೇಶದಲ್ಲೇ ಅತ್ಯಂತ ಕೆಟ್ಟ ಪರಿಸ್ಥಿತಿ ಕರ್ನಾಟಕದಲ್ಲಿದೆ. ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ’ ಎಂದು ಅಂಕಿ ಅಂಶ ಸಮೇತ ಶೆಟ್ಟರ್‌ ಆರೋಪಿಸಿದರು.

ಗೋಲಿ ಆಡೋಕೆ ಬಂದಿಲ್ಲ!

‘ಯಾವುದೇ ಇಲಾಖೆಯಲ್ಲಿ ಕೇಳಿದ ಮಾಹಿತಿಗಳನ್ನು ಅಧಿಕಾರಿಗಳು ನೀಡುತ್ತಿಲ್ಲ. ಮಾಹಿತಿ ನೀಡದಂತೆ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಲಾಗಿದೆ’ ಎಂದು ಬಿಜೆಪಿಯ ಗೋವಿಂದ ಕಾರಜೋಳ ಕಿಡಿಕಾರಿದರು.

ಆಗ, ಸಚಿವ ಜಾರ್ಜ್, ‘ಆರ್‌ಟಿಐ ಅಡಿ ತೆಗೆದುಕೊಳ್ಳಿ’ ಎಂದು ಉಸಿರಿದ್ದು ಕೆಲಹೊತ್ತು ಕೋಲಾಹಲಕ್ಕೆ ಕಾರಣವಾಯಿತು. ‘ಸಚಿವರೊಬ್ಬರು ಈ ರೀತಿ ಉತ್ತರ ನೀಡುವುದು ನಾಚಿಕೆಗೇಡಿನ ಸಂಗತಿ. ನಾವೇನು ಇಲ್ಲಿಗೆ ಗೋಲಿ ಆಡೋಕೆ ಬಂದಿಲ್ಲ’ ಎಂದೂ ಕಾರಜೋಳ ಸಿಡಿಮಿಡಿಗೊಂಡರು.

‘ಅತ್ಯಾಚಾರಿಗಳಿಗೆ ಕರ್ನಾಟಕ ಸ್ವರ್ಗ’

‘ಅತ್ಯಾಚಾರಿಗಳ ಪಾಲಿಗೆ ನಮ್ಮ ರಾಜ್ಯ ಸ್ವರ್ಗದಂತಾಗಿದೆ. 6 ವರ್ಷದ ಕಂದಮ್ಮನಿಂದ ಹಿಡಿದು 60 ವರ್ಷದ ವೃದ್ಧೆಯರ ಮೇಲೂ ಅತ್ಯಾಚಾರಗಳು ನಡೆದಿವೆ’ ಎಂದು ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಟೀಕಿಸಿದರು.

ಅಪರಾಧ ಪ್ರಕರಣಗಳಲ್ಲಿ ನವದೆಹಲಿ ಮೊದಲ ಸ್ಥಾನದಲ್ಲಿದ್ದರೆ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಮಹಾ ನಗರಗಳಲ್ಲಿ ನಡೆದಿರುವ ಕೊಲೆ ಪ್ರಕರಣಗಳ ಪೈಕಿ ಶೇ 21ರಷ್ಟು ನವದೆಹಲಿಯಲ್ಲಿ ದಾಖಲಾಗಿದ್ದರೆ, ಶೇ 10ರಷ್ಟು ಬೆಂಗಳೂರಿನಲ್ಲಿ ದಾಖಲಾಗಿವೆ. ಅಪಹರಣ ಪ್ರಕರಣಗಳಲ್ಲಿ ಬೆಂಗಳೂರು ದೇಶದಲ್ಲೇ ಮೂರನೇ ಸಾಲಿನಲ್ಲಿದೆ‌ ಎಂದು ರಾಷ್ಟ್ರೀಯ ಅಪರಾಧ ದಾಖಲಾತಿ ಘಟಕದ (ಎನ್‌ಸಿಆರ್‌ಬಿ) ಅಂಕಿಅಂಶಗಳನ್ನು ವಿವರಿಸಿದರು.

ಸಂಘಪರಿವಾರದ ಕಾರ್ಯಕರ್ತರಿಂದ 13 ಮುಸ್ಲಿಮರ ಹತ್ಯೆ: ಸಚಿವ ರೆಡ್ಡಿ

ಬೆಂಗಳೂರು: ಬಜರಂಗದಳ, ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು 13ಕ್ಕೂ ಹೆಚ್ಚು ಮುಸ್ಲಿಮರನ್ನು ಹತ್ಯೆ ಮಾಡಿದ್ದಾರೆ. ಅವರೆಲ್ಲರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ವಿಧಾನಸಭೆಯಲ್ಲಿ ಬಿಜೆಪಿ ಮಾಡಿದ ಆರೋಪಕ್ಕೆ ಅಂಕಿ ಅಂಶ ಸಮೇತ ವಿವರ ನೀಡಿದ ಅವರು, ‘ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ  ಸಂಘಪರಿವಾರದ 25 ಕಾರ್ಯಕರ್ತರನ್ನು ಹತ್ಯೆ ನಡೆದಿದೆ ಎಂದು ನೀವು ಆಪಾದಿಸುತ್ತಿದ್ದೀರಿ. ನಿಮ್ಮ ಮಾಹಿತಿ ಸುಳ್ಳು’ ಎಂದು ಪ್ರತಿಪಾದಿಸಿದರು.

ಸಂಸದರೊಬ್ಬರು ಗೃಹ ಸಚಿವರಿಗೆ ನೀಡಿದ ದಾಖಲೆಯಲ್ಲಿ 24 ಜನರ ಕೊಲೆಯಾಗಿದೆ ಎಂದು ಹೇಳಿದ್ದರು. ಈ ಪೈಕಿ ಅಶೋಕ್‌ ಪೂಜಾರಿ ಬದುಕಿದ್ದಾರೆ. ಉಳಿದ ಒಂಬತ್ತು ಜನರು ಮತೀಯ ದ್ವೇಷದ ಕಾರಣಕ್ಕೆ ಹತ್ಯೆಯಾಗಿರುವುದು ನಿಜ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸೇರಿದಂತೆ ಕೆಲವು ಸಂಘಟನೆಗಳ ಕಾರ್ಯಕರ್ತರನ್ನು ಈ ಪ್ರಕರಣಗಳಲ್ಲಿ ಬಂಧಿಸಲಾಗಿದೆ. ಪರೇಶ ಮೇಸ್ತ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಸಂತೋಷ್‌ ಕೊಲೆ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಇವೆರಡು ಪ್ರಕರಣ ಸೇರಿ, ಸಂಘಪರಿವಾರದ 11 ಜನ ಹತ್ಯೆಯಾಗಿದ್ದಾರೆ. ಉಳಿದ 13 ಜನರ ಪೈಕಿ ಕೆಲವರು ವೈಯಕ್ತಿಕ, ಆಸ್ತಿ ವಿವಾದದಿಂದ ಹತ್ಯೆಯಾಗಿದ್ದಾರೆ ಎಂದರು.

ಅಪರಾಧದಲ್ಲಿ 10ನೇ ಸ್ಥಾನ, ಮಹಿಳಾ ದೌರ್ಜನ್ಯದಲ್ಲಿ 19ನೇ ಸ್ಥಾನ, ಮಹಿಳಾ ಅಪಹರಣದಲ್ಲಿ 12ನೇ ಸ್ಥಾನ, ಅತ್ಯಾಚಾರದಲ್ಲಿ 6 ನೇ ಸ್ಥಾನ ಹಾಗೂ ಕೊಲೆಗಳಲ್ಲಿ 5 ನೇ ಸ್ಥಾನದಲ್ಲಿ ಕರ್ನಾಟಕ ಇದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಇದಕ್ಕಿಂತ  ಮೇಲಿನ ಸ್ಥಾನದಲ್ಲಿವೆ ಎಂದು ರೆಡ್ಡಿ ವಿವರಿಸಿದರು.

‘2016ರ ರಾಷ್ಟ್ರೀಯ ಅಪರಾಧ ದಾಖಲಾತಿ ಘಟಕದ ಮಾಹಿತಿ ನನ್ನ ಬಳಿ ಆ ದಾಖಲೆ ಇದೆ. ನೀವು ಅದನ್ನೇ ಆಧರಿಸಿ ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದೀರಿ’ ಎಂದು ಜಗದೀಶ ಶೆಟ್ಟರ್ ಆಕ್ಷೇಪಿಸಿದರು.

ಗೃಹ ಸಚಿವ ನೀಡಿದ ವಿವರ

ಬಿಜೆಪಿ ಸರ್ಕಾರದ ಅವಧಿ, ಕಾಂಗ್ರೆಸ್ ಸರ್ಕಾರದ ಅವಧಿ

ಕೊಲೆ, 8,880, 6,759

ಸುಲಿಗೆ, 9,648, 4,452

ಅತ್ಯಾಚಾರ, 2,922, 3,933

ಸರಗಳವು, 4,675, 4,359

ಹಲ್ಲೆ 1,13,000, 94,886

ಖೋಟಾನೋಟು 560, 306

* ಕೊಲೆಗಡುಕರಿಗೆ ಪೊಲೀಸ್‌ ಠಾಣೆಗಳಲ್ಲಿ ಬಿರಿಯಾನಿ ನೀಡ<br/>ಲಾಗುತ್ತಿದೆ. ಜಾಮೀನ ಮೇಲೆ ಹೊರ<br/>ಬರುವ ಆರೋಪಿಗಳು ಮತ್ತೆ ಅಂತಹದೇ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ

- ಕೆ.ಎಸ್‌.ಈಶ್ವರಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT