ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತ ಋಣಮುಕ್ತನಾಗುವುದು ಅಗತ್ಯ’

Last Updated 7 ಫೆಬ್ರುವರಿ 2018, 11:43 IST
ಅಕ್ಷರ ಗಾತ್ರ

ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ,ಎಸ್. ಯಡಿಯೂರಪ್ಪ ಹಾಗೂ ಜೆಡಿಎಸ್ ರಾಜ್ಯ ಘಟಕದ  ಅಧ್ಯಕ್ಷ ಎಚ್.ಡಿ . ಕುಮಾರಸ್ವಾಮಿ ಅವರ 2018ರ ವಿಧಾನಸಭಾ ಚುನಾವಣೆಯ ಆದ್ಯತಾ ವಿಷಯದ ಬಗ್ಗೆ ಪ್ರಜೆಗಳ ಪ್ರತಿಕ್ರಿಯೆಗಳು;

ಮತ್ತೆ ಸಾಲ ಕೇಳಿದರೆ ಏನು ಮಾಡುತ್ತೀರಿ?

ಮೂರೂ ಆದ್ಯತೆಗಳು ಸರಿಯಾಗಿಯೇ ಇವೆ. ಆದರೆ, ಸ್ಪಷ್ಟತೆ ಇಲ್ಲ. ರೈತರ ಸಾಲದ ಸಮಸ್ಯೆ ಅನಾದಿ ಕಾಲದಿಂದಲೂ ಇದೆ. ಸಾಲಮನ್ನಾ ಮಾಡುವುದಕ್ಕಿಂತ ಹೆಚ್ಚಾಗಿ ಕೃಷಿ ಕ್ಷೇತ್ರದ ಮೂಲ ಸಮಸ್ಯೆಗಳನ್ನು ಬಗೆಹರಿಸಬೇಕು. ರೈತರ ಸಾಲವನ್ನು ಒಮ್ಮೆ ಮನ್ನಾ ಮಾಡಬಹುದು. ಮುಂದೆ ಸಾಲ ಕೇಳಿದರೆ ಏನು ಮಾಡುತ್ತೀರಿ? 10 ವರ್ಷಗಳಲ್ಲಿ ಮುಗಿಯಬಹುದಾದ ಒಂದು ನೀರಾವರಿ ಯೋಜನೆಗೆ 20 ವರ್ಷ ತೆಗೆದುಕೊಂಡರೆ ಏನು ಪ್ರಯೋಜನ? ಕೇಂದ್ರ ಸರ್ಕಾರ ಕೂಡ ಬಜೆಟ್‌ನಲ್ಲಿ ಆರೋಗ್ಯ ವಲಯಕ್ಕೆ ಆದ್ಯತೆ ನೀಡಿದೆ. ಇಂಥ ಸಂದರ್ಭದಲ್ಲಿ ಆರೋಗ್ಯ ಭಾಗ್ಯ ಯೋಜನೆಯನ್ನು ರಾಜ್ಯ ಸರ್ಕಾರ ಯಾವ ಸ್ವರೂಪದಲ್ಲಿ ಅನುಷ್ಠಾನಗೊಳಿಸಲಿದೆ? ಯಾವ ರೀತಿ ಹಣ ಹೊಂದಿಸಲಿದೆ ಎಂಬುದು ಮುಖ್ಯ.

–ಪ್ರೊ.ವಿ.ಕೆ.ನಟರಾಜ್‌, ಆರ್ಥಿಕ ತಜ್ಞ, ಮೈಸೂರು

**

‘ಶಿಕ್ಷಣಕ್ಕೆ ಮಹತ್ವ ನೀಡಬೇಕು’

ಅಧಿಕಾರಕ್ಕೆ ಬರಬೇಕು ಎನ್ನುವ ಯಾವ ಮುಖ್ಯಮಂತ್ರಿಯೂ ಶಿಕ್ಷಣವನ್ನು ಆದ್ಯತೆಯಾಗಿ ಪರಿಗಣಿಸುತ್ತಿಲ್ಲ. ಗುಣಮಟ್ಟದ ಶಿಕ್ಷಣ ಹೀಗಿರುತ್ತದೆ ಎಂದು ಜನತೆಗೆ ಇಲ್ಲಿಯವರೆಗೂ ಹೇಳುತ್ತಾ ಬರುತ್ತಿದ್ದಾರೆಯೇ ಹೊರತು, ಕೊಡುವುದಕ್ಕೆ ಸಾಧ್ಯವಾಗಿಲ್ಲ. ಶಾಲಾ ಶಿಕ್ಷಣಕ್ಕೆ ಮಹತ್ವ ನೀಡದಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ.

ಸಾಲಮನ್ನಾ ಮಾಡುವುದು, ರೈತರನ್ನು ಋಣಮುಕ್ತರನ್ನಾಗಿ ಮಾಡುತ್ತೇವೆ ಎನ್ನುವ ಘೋಷಣೆಯಿಂದಾಗಿಯೆ ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕಾರಣವಾಗಿದೆ.

ರೈತರು ಕಷ್ಟಪಟ್ಟು ಬೆಳೆಯು ಬೆಳೆಗೆ ಯೋಗ್ಯ ಬೆಲೆ ನೀಡುವ ವ್ಯವಸ್ಥೆ ಮಾಡಿದರೆ ಸಾಕು, ರೈತರ ಸಾಲಮನ್ನಾ ಮಾಡುವ ಅಗತ್ಯವೇ ಇರುವುದಿಲ್ಲ.

–ಹಫಿಜುಲ್ಲಾ, ಸಾಮಾಜಿಕ ಕಾರ್ಯಕರ್ತ, ರಾಯಚೂರು

**

ಯುವಜನರಿಗೆ ಉದ್ಯೋಗ ಬೇಕು

ಆರೋಗ್ಯ, ಕೃಷಿ ಹಾಗೂ ನೀರಾವರಿ ಮೂರು ಒಂದಕ್ಕೊಂದು ಸಂಬಂಧವಿರುವ ಕ್ಷೇತ್ರಗಳು. ಆದರೆ, ಇದೆಲ್ಲಕ್ಕಿಂತಲೂ ಮುಖ್ಯವಾಗಿ ಯುವ ಜನಾಂಗ ಕಾಡುತ್ತಿರುವ ನಿರುದ್ಯೋಗ ಸಮಸ್ಯೆ ‍ಪರಿಹಾರಕ್ಕೆ ಈ ಮೂವರೂ ನಾಯಕರು ಆದ್ಯತೆ ನೀಡದಿರುವುದು ದುರಂತ. ಪ್ರಧಾನಿ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಯುವಕರಿಗೆ ಉದ್ಯೋಗದ ಭರವಸೆ ನೀಡಿದ್ದರು. ಆದರೆ, ಈಗ ದೇಶದಲ್ಲಿ ಬರೀ ಉದ್ಯೋಗ ರಹಿತ ಅಭಿವೃದ್ಧಿ ಕಾಣಿಸುತ್ತಿದೆ. ಮುಖ್ಯಮಂತ್ರಿ ಉಚಿತ ಚಿಕಿತ್ಸೆ ಬಗ್ಗೆ ಮಾತನಾಡಿದ್ದಾರೆ. ನಮಗೆ ಇಂದು ರೋಗಿಗಳು ಬೇಕಾಗಿಲ್ಲ. ಭೂಮಿ ಉಳುವ ಯೋಗಿಗಳು ಬೇಕಾಗಿದ್ದಾರೆ. ಗ್ರಾಮೀಣ ಯುವಕರು ಕೃಷಿಗೆ ಮರಳುವ ವಾತಾವರಣ ಕಲ್ಪಿಸಬೇಕು.

– ಚುಕ್ಕಿ ನಂಜುಂಡಸ್ವಾಮಿ, ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷೆ

**

ನೀರಾವರಿ ಮೊದಲ ಆದ್ಯತೆಯಾಗಲಿ

ಮೂವರು ನಾಯಕರ ಆದ್ಯತೆಗಳಲ್ಲಿ ಸಮರ್ಪಕತೆ ಕಾಣಿಸುತ್ತಿಲ್ಲ. ಆರೋಗ್ಯ ವ್ಯವಸ್ಥೆ ಹೇಗೋ ನಡೆಯುತ್ತಿದೆ. ಆದರೆ, ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ತುರ್ತು ಅಗತ್ಯ. ನೀರಿನ ಸದ್ಬಳಕೆ ಮತ್ತು ಸಮಸ್ಯೆ ನಿವಾರಣೆಗೆ ‘ನೀರಾವರಿ ಆಯೋಗ ರಚನೆ’ ಸರ್ಕಾರದ ಮೊದಲ ಆದ್ಯತೆಯಾಗಬೇಕು. ಯಡಿಯೂರಪ್ಪ ನೀರಾವರಿಗೆ ಆದ್ಯತೆ ನೀಡಿರುವುದು ಸರಿ ಇದೆ. 5 ವರ್ಷದೊಳಗೆ ಮೇಕೆದಾಟು ಯೋಜನೆ ಮತ್ತು ಮಧ್ಯ ಕರ್ನಾಟಕದ ನೀರಾವರಿ ಯೋಜನೆಗಳ ಅನುಷ್ಠಾನವೂ ಆದ್ಯತೆಯಾಗಬೇಕು. ಮೊದಲು ನೀರಾವರಿ ನಂತರದಲ್ಲಿ ಕೃಷಿ, ಆರೋಗ್ಯ ಹಾಗೂ ಶಿಕ್ಷಣಕ್ಕೆ ಆದ್ಯತೆ ಇರಲಿ.

-ಕ್ಯಾಪ್ಟನ್‌ ಎಸ್‌.ರಾಜಾರಾವ್‌, ಜಲತಜ್ಞ

**

ಶಿಕ್ಷಣ ಕ್ಷೇತ್ರ ನಿರ್ಲಕ್ಷಿಸದಿರಿ

ಶಿಕ್ಷಣ ಅತ್ಯಂತ ಹೆಚ್ಚು ಆದ್ಯತೆ ಕೊಡಬೇಕಾದ ಕ್ಷೇತ್ರ. ಮೂವರೂ ಇದರ ಬಗ್ಗೆ ಚಕಾರ ಎತ್ತಿಲ್ಲ. ಎಲ್ಲರಿಗೂ ಕಡ್ಡಾಯ ಶಿಕ್ಷಣ ಹಕ್ಕು ದೊರಕಿಸಿಕೊಡಲು ಸರ್ಕಾರಗಳಿಗೆ ಸಾಧ್ಯವಾಗಿಲ್ಲ. ಈ ಬಗ್ಗೆಯೂ ಗಮನ ಕೊಡಬೇಕು. ಕೃಷಿ ಕ್ಷೇತ್ರವನ್ನು ಗಂಭೀರ ಸಮಸ್ಯೆಯಿಂದ ಪಾರು ಮಾಡಲು ಕುಮಾರಸ್ವಾಮಿ ಅವರನ್ನು ಬಿಟ್ಟರೆ ಉಳಿದಿಬ್ಬರ ಬಳಿ ಸರಿಯಾದ ಪರಿಹಾರ ಕಾಣಿಸುತ್ತಿಲ್ಲ. ಯಡಿಯೂರಪ್ಪ ನೀರಾವರಿಗೆ ₹1 ಲಕ್ಷ ಕೋಟಿ ನೀಡುವುದಾಗಿ ಹೇಳಿದ್ದಾರೆ. ಅಷ್ಟು ಅನುದಾನ ಎಲ್ಲಿಂದ ಹೊಂದಿಸುತ್ತಾರೆ ಎನ್ನುವುದರಲ್ಲಿ ಸ್ಪಷ್ಟತೆ ಇಲ್ಲ. ಕರ್ನಾಟಕ ಮತ್ತು ತಮಿಳುನಾಡಿನ ಆರೋಗ್ಯ ಸೇವೆ ದೇಶಕ್ಕೆ ಮಾದರಿ ಎನಿಸಿವೆ. ಆದರೂ ಆರೋಗ್ಯ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ. ಇದನ್ನು ಅನುಷ್ಠಾನಗೊಳಿಸುವುದರಲ್ಲಿ ಸಿದ್ದರಾಮಯ್ಯ ಅವರಲ್ಲಿ ಸ್ಪಷ್ಟತೆ ಕಾಣಿಸುತ್ತಿದೆ.

–  ಪ್ರೊ.ಎಂ.ಎಸ್‌.ಶ್ರೀರಾಮ್‌, ಐಐಎಂ ಸಾರ್ವಜನಿಕ ನೀತಿ ವಿಭಾಗದ ಪ್ರಾಧ್ಯಾಪಕ

**

‘ರೈತ ಋಣಮುಕ್ತನಾಗುವುದು ಅಗತ್ಯ’

ಸಿದ್ದರಾಮಯ್ಯ ಎಲ್ಲರಿಗೂ ‘ಆರೋಗ್ಯ ಭಾಗ್ಯ’ ಕಲ್ಪಿಸುವ ಮಾತನಾಡಿದ್ದಾರೆ. ಆದರೆ, ಈಗಾಗಲೇ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಅದನ್ನು ಘೋಷಿಸಿದೆ. ಹಾಗಾಗಿ ಇದು ದೊಡ್ಡ ವಿಷಯವೇನಲ್ಲ.

ರೈತ ಋಣಮುಕ್ತನಾಗಬೇಕು ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದರಲ್ಲಿ ತಪ್ಪಿಲ್ಲ. ಅದರ ಬದಲು ಕಾಲಾವಕಾಶ ವಿಸ್ತರಿಸಿ, ಅತಿ ಕಡಿಮೆ ಬಡ್ಡಿಯಲ್ಲಿ ಹಣ ವಸೂಲಿ ಮಾಡಬೇಕು.

ಬಿ.ಎಸ್‌.ಯಡಿಯೂರಪ್ಪ ನೀರಾವರಿಗೆ ₹1 ಲಕ್ಷ ಕೋಟಿ ಹಣ ಕೊಟ್ಟು ನೀರಿನ ಸಮಸ್ಯೆ ನೀಗಿಸುತ್ತೇವೆ ಎಂದಿದ್ದಾರೆ. ಹೂಳು ತೆಗೆಸುವುದರ ಮೂಲಕವೇ ಹೇಗೆ ಎನ್ನುವುದು ಸ್ಪಷ್ಟವಾಗಿಲ್ಲ.

ಅಶ್ವಿನ್‌ ಕೋತಂಬ್ರಿ, ಪೆಟ್ರೋಲ್‌ ಬಂಕ್‌ ಮಾಲೀಕರು, ಹೊಸಪೇಟೆ

**

‘ಭರವಸೆಗಳು ಎಷ್ಟು ನಿಜವಾಗಿವೆ?’

ಸ್ವಾತಂತ್ರ್ಯ ಬಂದಾಗಿನಿಂದಲೂ ಎಲ್ಲ ಪಕ್ಷಗಳೂ ಭರವಸೆ ಕೊಡುತ್ತಿವೆ. ಆದರೆ, ಚುನಾವಣೆ ಮುಗಿದ ಮೇಲೆ ಇವರು ಎಷ್ಟು ಈಡೇರಿಸಿದ್ದಾರೆ ಎಂಬುದು ನಮಗೆಲ್ಲ ತಿಳಿದಿದೆ.

ಪುಕ್ಕಟೆ ಸೌಲಭ್ಯಗಳ ಭರವಸೆಗಳಿಗಿಂತ ಜನರಿಗೆ ಸ್ವಾವಲಂಬನೆ ಮಾಡುವ ನಿಟ್ಟಿನಲ್ಲಿ ಎಲ್ಲ ಪಕ್ಷಗಳು ಗಮನ ಹರಿಸಲಿ. ಸಶಕ್ತೀಕರಣದೆಡೆಗೆ ದಿಟ್ಟ ಹೆಜ್ಜೆ ಇಡಲಿ. ಮೂರು ಜನ ನಾಯಕರ ಮಾತುಗಳು ಚೆನ್ನಾಗಿಯೇ ಕಾಣುತ್ತವೆ. ಆದರೆ, ಅದನ್ನು ಕಾರ್ಯಗತಗೊಳಿಸುವಲ್ಲಿ ಒಂದು ಸರಿಯಾದ ವ್ಯವಸ್ಥೆ ಮಾಡುವಲ್ಲಿ ಲೋಪವಿದೆ.

ಅಭಿವೃದ್ಧಿ ವಿಷಯದಲ್ಲಿ ಜಾತಿ ಧರ್ಮಗಳನ್ನು ಬೆರೆಸಿ ನಿಜವಾದ ವಿಷಯಗಳಿಂದ ಜನರ ಗಮನವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡದಿರಲಿ.

ಒಟ್ಟಿಲಿ ಅನ್ಬನ್‌ಕುಮಾರ್‌, ಮನೋವಿಜ್ಞಾನಿ, ಹುಬ್ಬಳ್ಳಿ

**

‘ಯಾರನ್ನು ನಂಬುವುದು ಗೊತ್ತಾಗುತ್ತಿಲ್ಲ’

ಸಿದ್ದರಾಮಯ್ಯ ಇಷ್ಟು ದಿನ ಬಿಟ್ಟು ಚುನಾವಣೆ ಹತ್ತಿರವಿದ್ದಾಗ ಆರೋಗ್ಯ ಯೋಜನೆ ಕೊಟ್ಟಿದ್ದಾರೆ. ರೈತರ ಸಾಲಮನ್ನಾ, ನೀರಾವರಿಗೆ ಲಕ್ಷ ಕೋಟಿ ಕೊಡುವುದಾಗಿ ಕುಮಾರಸ್ವಾಮಿ, ಯಡಿಯೂರಪ್ಪ ಹೇಳಿದ್ದಾರೆ. ಅವರೀಗ ಅಧಿಕಾರದಲ್ಲಿ ಇಲ್ಲ. ಹಾಗಾಗಿ ಹೇಳುತ್ತಿದ್ದಾರೆ. ನಾಳೆ ಅಧಿಕಾರಕ್ಕೆ ಬಂದರೆ ಈ ಭರವಸೆಗಳನ್ನು ಈಡೇರಿಸುತ್ತಾರೆ ಎಂದು ಹೇಗೆ ನಂಬುವುದು. ಮಹದಾಯಿ ಸಮಸ್ಯೆ ಪರಿಹರಿಸಿಯೇ ಉತ್ತರ ಕರ್ನಾಟಕಕ್ಕೆ ಬರುವುದಾಗಿ ಯಡಿಯೂರಪ್ಪ ಹೇಳಿದ್ದರು. ಎಲ್ಲಿ ಪರಿಹರಿಸಿದ್ದಾರೆ. ನರೇಂದ್ರ ಮೋದಿ ಬಂದರೂ ರೈತರ ಸಾಲ ಮನ್ನಾ ಆಗಲಿಲ್ಲ. ಹೀಗಾಗಿ ಯಾರನ್ನು ನಂಬುವುದು ಗೊತ್ತಾಗುತ್ತಿಲ್ಲ. ಮಹದಾಯಿ ವಿವಾದ ಬಗೆಹರಿಸುವ ಬಗ್ಗೆ ಮೂರು ಪಕ್ಷದವರೂ ಸ್ಪಷ್ಟ ನಿಲುವು ಪ್ರಕಟಿಸದಿರುವುದು ಬೇಸರ ತಂದಿದೆ.

-ಶೇಖರಪ್ಪ ಬಡಿಗೇರ, ಕುಳಗೇರಿ ಕ್ರಾಸ್, ಬಾಗಲಕೋಟೆ ಜಿಲ್ಲೆ

**

ದೂರದೃಷ್ಟಿ ಕೊರತೆ

ಆದ್ಯತೆಗಳಲ್ಲಿ ದೂರದೃಷ್ಟಿ ಇಲ್ಲ. ಆರೋಗ್ಯ, ರೈತರ ಸಾಲ, ನೀರಾವರಿ ಇವು ಸದಾ ಚಲಾವಣೆಯಲ್ಲಿರುವ ಮತ್ತು ರಾಜಕೀಯಕ್ಕೆ ಬಳಕೆಯಾಗುವ ವಿಚಾರಗಳು. ಮೂವರು ನಾಯಕರೂ ಹಳೆಯ ವಿಷಯಗಳನ್ನೇ ಪ್ರಸ್ತಾಪಿಸಿದ್ದಾರೆ. ಆಡಳಿತ ಸರಿಪಡಿಸುವ ಕುರಿತು ಹಾಗೂ ಭ್ರಷ್ಟಾಚಾರ, ಸಿಬ್ಬಂದಿ ವೈಫಲ್ಯದ ಬಗ್ಗೆ ಯಾರೂ ಪ್ರಸ್ತಾಪ ಮಾಡಿಲ್ಲ. ದೈನಂದಿನ ಜೀವನದಲ್ಲಿ ಜನಸಾಮಾನ್ಯರು ಅನುಭವಿಸುವ ತೊಂದರೆಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಮುಂದಿನ ಐದು ವರ್ಷಗಳ ಅಭಿವೃದ್ಧಿ ಪಥದ ಸ್ಪಷ್ಟಚಿತ್ರಣ ಇಲ್ಲ. ಪರಿಸರ, ಜಲಮೂಲಗಳ ಸಂರಕ್ಷಣೆ, ಜನಸಂಖ್ಯೆ ನಿಯಂತ್ರಣಕ್ಕೆ ಆದ್ಯತೆ ಇರಬೇಕಿತ್ತು.

-ಡಿ.ವಿ.ಗಿರೀಶ್‌, ವ್ಯವಸ್ಥಾಪಕ ಟ್ರಸ್ಟಿ, ಭದ್ರಾ ವನ್ಯಜೀವಿ ಸಂರಕ್ಷಣಾ ಸಂಸ್ಥೆ

**

ಉದ್ಯೋಗಕ್ಕೆ ಆದ್ಯತೆ ನೀಡಬೇಕಿತ್ತು

ನಿರುದ್ಯೋಗ ಹೋಗಲಾಡಿಸುವುದು ಈ ಮೂವರು ನಾಯಕರ ಆದ್ಯತೆ ಆಗದಿರುವುದು ದುರದೃಷ್ಟಕರ. ಉಚಿತ ಲ್ಯಾಪ್‌ಟಾಪ್‌, ಉಚಿತ ಸೈಕಲ್ ನೀಡುವುದಕ್ಕಿಂತ ಉದ್ಯೋಗ ಸೃಷ್ಟಿಸಬೇಕು. ಆಗ ನಮ್ಮ ದುಡ್ಡಿನಿಂದಲೇ ಖರೀದಿಸುತ್ತೇವೆ, ಕುಟುಂಬದವರನ್ನು ಸಾಕುತ್ತೇವೆ. ಮೊದಲು ಬ್ಯಾಕ್‌ಲಾಗ್‌ ಹುದ್ದೆ ಭರ್ತಿ ಮಾಡಲಿ. ಆರೋಗ್ಯ ಭಾಗ್ಯ ನೀಡುವುದಕ್ಕೆ ಮೊದಲು ಸರ್ಕಾರಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆ ಸರಿಪಡಿಸಲಿ. ಚಾಮರಾಜನಗರ ಜಿಲ್ಲೆಯ ನನ್ನೂರಿಗೆ ನಾಲ್ಕು ದಿನಗಳಿಗೊಮ್ಮೆ ಕೇವಲ ಅರ್ಧ ಗಂಟೆ ನೀರು ಸರಬರಾಜು ಮಾಡುತ್ತಾರೆ. ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡಲಿ. ರೈತರ ಬೆಳೆಗೆ ಬೆಲೆ ನಿಗದಿಪಡಿಸಲಿ. ಗ್ರಾಮೀಣ ಭಾಗದಲ್ಲಿ ರಸ್ತೆ ನಿರ್ಮಿಸಲು ಆದ್ಯತೆ ನೀಡಲಿ.

-ಎಸ್‌.ಹರೀಶ್‌, ಪ್ರಥಮ ಸ್ನಾತಕೋತ್ತರ ವಿದ್ಯಾರ್ಥಿ, ಮೈಸೂರು ವಿ.ವಿ

**

ಸಮಗ್ರ ಚಿಂತನೆ, ಮುನ್ನೋಟ ಇಲ್ಲ

ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವ ಬಗ್ಗೆ ಮೂವರೂ ನಾಯಕರು ಮಾತನಾಡಿಲ್ಲ. ಸ್ವಾಮಿನಾಥನ್ ವರದಿ ಶಿಫಾರಸುಗಳನ್ನು ಜಾರಿಗೊಳಿ
ಸಿದರೆ ಮಾತ್ರ ರೈತರು ಋಣಮುಕ್ತರಾಗುತ್ತಾರೆ. ಆದರೆ, ಈ ವರದಿ ಜಾರಿಯ ಬಗ್ಗೆ ಪ್ರಸ್ತಾಪ ಇಲ್ಲ. ಇವರ ಆದ್ಯತೆಯ ಕ್ಷೇತ್ರದಲ್ಲಿ ಸಮಗ್ರ ಚಿಂತನೆ, ಮುನ್ನೋಟ ಇಲ್ಲ. ತೆರಿಗೆ ಕಟ್ಟುವ ಸಾಮಾನ್ಯ ಜನರ ಬದುಕು, ಬವಣೆಯ ಬಗ್ಗೆಯೂ ಮಾತನಾಡಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಶಿಕ್ಷಣ ಗಗನಕುಸುಮವಾಗಿಯೇ ಉಳಿದಿದೆ. ಈ ಬಗ್ಗೆ ಯಾವುದೇ ಮಾತುಗಳಿಲ್ಲ. ಜೊತೆಗೆ ಮಹಿಳೆಯರಿಗೆ ರಾಜಕೀಯದಲ್ಲಿ ಸಮಾನ ಅವಕಾಶ ನೀಡುವ ಬಗ್ಗೆಯೂ ಮಾತನಾಡಬೇಕಾಗಿತ್ತು.

-ಸುನಂದಾ ಜಯರಾಂ, ರೈತ ಸಂಘದ ನಾಯಕಿ, ಮಂಡ್ಯ

**

ಸಿದ್ದರಾಮಯ್ಯ ಯೋಜನೆ ರೂಪಿಸಿರುವುದು

ಕಾಂಗ್ರೆಸ್‌ನವರಿಗೆ ರಾಜ್ಯದ ಬಗ್ಗೆ ಕಾಳಜಿ ಇರುವುದು ಗೊತ್ತಾಗುತ್ತದೆ. ಸಿದ್ದರಾಮಯ್ಯ ಅವರಿಗೆ ರಾಜ್ಯಕ್ಕೆ ಏನು ಅಗತ್ಯ ಎಂಬುದು ಚೆನ್ನಾಗಿ ಗೊತ್ತಿದೆ. ಆ ನಿಟ್ಟಿನಲ್ಲಿ ಅವರು ಯೋಜನೆ ರೂಪಿಸಿರುವುದು ಸರಿಯಾಗಿಯೇ ಇದೆ.

ಇನ್ನು ಜೆಡಿಎಸ್‌ನವರು ಕೇವಲ ಅಧಿಕಾರಕ್ಕಾಗಿ ಇಂತಹ ಹೇಳಿಕೆ ನೀಡುತ್ತಿರುವುದು ಸ್ಪಷ್ಟವಾಗುತ್ತದೆ. ಯಡಿಯೂರಪ್ಪನವರು ಮಹದಾಯಿ ವಿಚಾರದಲ್ಲಿ ಏನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಹಾಗಾಗಿ ನೀರಾವರಿಗೆ ₹1 ಲಕ್ಷ ಕೋಟಿ ಮೀಸಲಿಡುವ ಘೋಷಣೆ ಎಷ್ಟರಮಟ್ಟಿಗೆ ಜಾರಿಯಾಗುತ್ತದೆ ಎಂಬುದು ಎಲ್ಲರಿಗೂ ಅರ್ಥವಾಗುವಂಥದ್ದು. ಮೂರೂ ಪಕ್ಷಗಳು ಜನರಿಗೆ ಹತ್ತಿರವಾಗುವ ಹಾಗೂ ಕಾರ್ಯರೂಪಕ್ಕೆ ಇಳಿಸಬಹುದಾದ ಘೋಷಣೆಗಳನ್ನು ಮಾಡಬೇಕಿತ್ತು.

-ಪ್ರೊ.ಪಟ್ಟಾಭಿರಾಮ ಸೋಮಯಾಜಿ, ವಿಶ್ವವಿದ್ಯಾಲಯ ಕಾಲೇಜಿನ ಇಂಗ್ಲಿಷ್‌ ಉಪನ್ಯಾಸಕ

**

ನಾಯಕರಿಗೆ ರಾಜಕೀಯ ಇಚ್ಛಾಶಕ್ತಿಯಿಲ್ಲ

ಮೂರೂ ಪಕ್ಷಗಳ ನಾಯಕರು ತಮ್ಮ ಬೆನ್ನು ತಾವೇ ತಟ್ಟಿಕೊಂಡಂತಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಇವರಿಗೆ ನೈತಿಕತೆಯಿಲ್ಲ. ಯಾವ ಆದ್ಯತೆ ಮೇಲೆ ಜನರ ಮುಂದೆ ಹೋಗಬೇಕೆಂಬ ಸ್ಪಷ್ಟತೆಯೂ ಇಲ್ಲ. ಪ್ರಮುಖ ಆದ್ಯತಾ ವಿಷಯಗಳಾದ ಮಹಿಳೆಯರು, ಅಸಂಘಟಿತ ಕಾರ್ಮಿಕರು ಹಾಗೂ ಶಿಕ್ಷಣದ ಬಗ್ಗೆ ಮಾತನಾಡದಿರುವುದು ದೊಡ್ಡ ದುರಂತ. ಜನರನ್ನು ಮೂರ್ಖರೆಂದು ಭಾವಿಸಿರುವ ಈ ನಾಯಕರಿಗೆ ರಾಜಕೀಯ ಇಚ್ಛಾಶಕ್ತಿಯಿಲ್ಲ.

-ವಿ.ಗೀತಾ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ, ಕೋಲಾರ

**

ಸುಳ್ಳು ಭರವಸೆ ಎನಿಸುತ್ತಿವೆ

ವಿಜ್ಞಾನಿಗಳ ಎಚ್ಚರಿಕೆ ಮತ್ತು ಹೋರಾಟಗಾರರ ವಿರೋಧ ಕಡೆಗಣಿಸಿ ಸಿದ್ದರಾಮಯ್ಯ ಅವರೇ ಇವತ್ತು ಬೆಂಗಳೂರಿನ ಕೊಳಚೆ ನೀರನ್ನು ಕೇವಲ ಎರಡು ಹಂತದಲ್ಲಿ ಸಂಸ್ಕರಿಸಿ ಬಯಲು ಸೀಮೆಯ ಜಿಲ್ಲೆಗಳಿಗೆ ಹರಿಸಲು ಮುಂದಾಗಿ ಜನರನ್ನು ಅನಾರೋಗ್ಯಕ್ಕೆ ದೂಡಲು ಹೊರಟಿದ್ದಾರೆ. ಕುಮಾರಸ್ವಾಮಿ ಅವರ ಪಕ್ಷ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬರುವುದು ಸಂದೇಹ. ಮಹದಾಯಿ ಸಮಸ್ಯೆ ಬಗೆಹರಿಸಲು ಮುಂದಾಗದ ಬಿಜೆಪಿಯವರು ಸದ್ಯದ ಸ್ಥಿತಿಯಲ್ಲಿ ನೀರಾವರಿ ವಿಚಾರದಲ್ಲಿ ಸೋತಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ಸಾಲದ ಸುಳಿಗೆ ಸಿಲುಕಿದೆ. ₹ 1 ಲಕ್ಷ ಕೋಟಿ ಇವರು ಎಲ್ಲಿಂದ ತರುತ್ತಾರೆ?

-ಎ.ಟಿ.ಕೃಷ್ಣನ್, ಸಾಮಾಜಿಕ ಹೋರಾಟಗಾರ ಚಿಕ್ಕಬಳ್ಳಾಪುರ

**

ಸಿದ್ದರಾಮಯ್ಯ ವಾಸ್ತವಕ್ಕೆ ಹತ್ತಿರ

ಜನರಿಗೆ ಹತ್ತಿರವಾಗಿರುವಂಥ ವಿಷಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತುಗಳಲ್ಲಿ ಕಾಣುತ್ತಿದೆ. ವಾಸ್ತವದ ನೆಲೆಗಟ್ಟಿನಲ್ಲಿ ಮಾತನಾಡಿದ್ದಾರೆ. ಎಚ್‌.ಡಿ. ಕುಮಾರಸ್ವಾಮಿ ಅವರು ರೈತರ ಕೃಷಿ ಸಾಲ ಮನ್ನಾ ಮಾಡುತ್ತೇನೆ ಎನ್ನುವುದು ಮೂಗಿಗೆ ತುಪ್ಪ ಸವರುವ ಕೆಲಸ ಎಂಬಂತೆ ಕಾಣುತ್ತಿದೆ.

ಯಡಿಯೂರಪ್ಪ ಅವರು ಮುಂದೆ ಅಧಿಕಾರಕ್ಕೆ ಬಂದರೆ ನೀರಾವರಿಗೆ ಕೆಲಸ ಮಾಡುತ್ತೇನೆ ಎಂದು ಹೇಳುತ್ತಾರೆ. ಆದರೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಕಾಲದ ಒಂದೇ ಒಂದು ಸಾಧನೆ ಹೇಳಿಕೊಂಡಿಲ್ಲ. ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರ ನೀಡಬೇಕಾಗಿ ಬರಬಹುದಾದ ಬೆಂಬಲದ ಬಗ್ಗೆಯೂ ಮೌನವಹಿಸಿದ್ದಾರೆ.

–ಮುಖ್ಯಪ್ರಾಣ, ಟೀ ಅಂಗಡಿ ಮಾಲಿಕ, ತುಮಕೂರು

**

ಹೊಸ ಪರಿಕಲ್ಪನೆ

ಚುನಾವಣೆ ಸಂದರ್ಭದಲ್ಲಿ ಇಂಥದ್ದೊಂದು ಹೊಸ ಪರಿಕಲ್ಪನೆ ಬೇಕಾಗಿತ್ತು. ಅದನ್ನು ‘ಪ್ರಜಾವಾಣಿ’ ಮಾಡಿ ತೋರಿಸಿದೆ.

ಸರ್ವರಿಗೂ ಆರೋಗ್ಯಕ್ಕೆ ಒತ್ತು ನೀಡುವ ಸಿದ್ದರಾಮಯ್ಯ ಅವರ ಉದ್ದೇಶ ಸಫಲವಾಗಬಹುದೇನೋ? ಏಕೆಂದರೆ ಈಗಾಗಲೇ ಸಾಕಷ್ಟು ಆರೋಗ್ಯ ಸೌಲಭ್ಯಗಳನ್ನು ಕೇಂದ್ರ, ರಾಜ್ಯ ಸರ್ಕಾರಗಳು ಘೋಷಿಸಿವೆ. ಕುಮಾರಸ್ವಾಮಿ ಹೇಳಿರುವಂತೆ ಪೂರ್ಣ ರೈತರ ಸಾಲ ಮುನ್ನಾ ಅಸಾಧ್ಯ. ನೀರಾವರಿಗೆ ಲಕ್ಷ ಕೋಟಿ ವೆಚ್ಚ ಮಾಡುವ ಯಡಿಯೂರಪ್ಪ ಗುರಿ ಕೂಡ ಸಿಂಧುವಲ್ಲ; ಜಲಾಶಯಗಳಲ್ಲಿ ನೀರೇ ಇಲ್ಲವಲ್ಲ.

ಇನ್ನು ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ಜೆಡಿಎಸ್ ಪ್ರತಿಸ್ಪರ್ಧಿಯಲ್ಲ ಎನ್ನುವಂತಹ ಉತ್ತರ ಕೊಟ್ಟಿದ್ದಾರೆ‌. ಅದು ಒಪ್ಪುವಂಥದ್ದಲ್ಲ.

–ಜಿ.ಎಸ್.ಉಜ್ಜಿನಪ್ಪ, ಪ್ರಗತಿಪರ ರೈತರು, ಗೌನಹಳ್ಳಿ, ಹಿರಿಯೂರು ತಾಲ್ಲೂಕು.

**

‘ಸಿದ್ದರಾಮಯ್ಯ, ಬಿಎಸ್‌ವೈ ಆದ್ಯತೆ ಸೂಕ್ತ’

ರಾಜಕೀಯ ನಾಯಕರು ಚುನಾವಣೆಯನ್ನು ಮುಂದಿಟ್ಟುಕೊಂಡು ಭರವಸೆ ಕೊಡುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಬಿ.ಎಸ್‌.ಯಡಿಯೂರಪ್ಪ ಅವರ ಆದ್ಯತೆಗಳು ಸರಿಯಾಗಿಯೇ ಇವೆ. ವೈದ್ಯಕೀಯ ಚಿಕಿತ್ಸೆ ದುಬಾರಿಯಾಗಿರುವ ಇಂದಿನ ದಿನಗಳಲ್ಲಿ ಸರ್ವರಿಗೂ ಆರೋಗ್ಯ ಭಾಗ್ಯ ಅಗತ್ಯವಿದೆ. ಕೃಷಿ ಹಾಗೂ ಕೃಷಿಕರನ್ನು ಉಳಿಸಿಕೊಳ್ಳಲು ನೀರಾವರಿ ಯೋಜನೆಗಳೂ ಬೇಕಿದೆ.
ಈವರೆಗೆ ಜಮೀನ್ದಾರರೇ ಸಾಲಮನ್ನಾದ ಲಾಭ ಪಡೆದಿದ್ದಾರೆ. ಸಾಲ ಮನ್ನಾದಿಂದ ರೈತರಲ್ಲಿ ಸಾಲ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಸರ್ಕಾರ ಬಡ ರೈತರಿಗೆ ಹೆಚ್ಚಿನ ಸವಲತ್ತುಗಳನ್ನು ಕೊಡಲಿ, ಮತ್ತೆ ಸಾಲ ಮನ್ನಾ ಮಾಡುವುದು ಬೇಡ.

-ಶಿವಪುತ್ರ ಪಟಪಳ್ಳಿ,ವ್ಯಾಪಾರಿ, ಬೀದರ್‌

**

‘ಅಭಿನಂದನೀಯ ಕೆಲಸ’

ಮೂರೂ ಜನ ನಾಯಕರು ಮೂಲಭೂತ ವಿಷಯವನ್ನೇ ತಮ್ಮ ಮುಖ್ಯ ಆದ್ಯತೆಯಾಗಿ ಜನರ ಮುಂದಿಟ್ಟಿದ್ದಾರೆ. ಆದ್ದರಿಂದ ಇದರಲ್ಲಿ ಇಂಥದ್ದೇ ಸರಿ ಅಥವಾ ತಪ್ಪು, ಇದೇ ಹೆಚ್ಚು ಅಥವಾ ಇನ್ನೊಂದು ಕಡಿಮೆ ಎಂದು ಹೇಳುವುದು ಕಷ್ಟ. ಇವೇ ಜನಸಾಮಾನ್ಯರ ಅಗತ್ಯಗಳೂ ಹೌದು. ಅದನ್ನೇ ನಾಯಕರು ಪ್ರಧಾನವಾಗಿ ಆರಿಸಿದ್ದಾರೆ. ಆದ್ದರಿಂದ ಜನರು ಸೂಕ್ಷ್ಮವಾಗಿ ಇಂಥ ವಿಚಾರಗಳನ್ನು ಗಮನಿಸಿ ತಮಗೆ ಬೇಕಾದ ವ್ಯಕ್ತಿಯನ್ನು ಆಯ್ಕೆ ಮಾಡಬೇಕು.

ಮೂವರೂ ನಾಯಕರನ್ನು ಮಾಧ್ಯಮವೊಂದು ಒಂದೇ ವೇದಿಕೆಯಲ್ಲಿ ತಂದು ನಿಲ್ಲಿಸಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿರುವುದು ಅಭಿನಂದನೀಯ. ಅಮೆರಿಕದ ಅಧ್ಯಕ್ಷೀಯ ಚುನಾವಣೆ ಸಂದರ್ಭ ಜನರು ಮತ್ತು ರಾಜಕಾರಣಿಗಳನ್ನು ಬೆಸೆಯುವ ಕಾರ್ಯವನ್ನು ಅಲ್ಲಿನ ಮಾಧ್ಯಮಗಳು ಮಾಡುತ್ತಿವೆ. ಆ ಸಂದರ್ಭ ಇಲ್ಲಿ ನೆನಪಾಯಿತು. ಆರೋಗ್ಯಕರ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಇದು ನಾಂದಿ.

-ಡಾ.ಪ್ರಭುರಾಜ ನಾಯಕ, ರಾಜ್ಯಶಾಸ್ತ್ರ ಉಪನ್ಯಾಸಕ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಕೊಪ್ಪಳ

(ಇಲ್ಲಿ ಪ್ರಕಟವಾಗುವ  ಲೇಖನ, ವಿಶ್ಲೇಷಣೆ, ಸಂದರ್ಶನಗಳ, ವಿಶೇಷ ವರದಿಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು election@prajavani.co.in ಅಥವಾ ವಾಟ್ಸ್ ಆಪ್ ನಂಬರ್ 9513322930 ಗೆ ಕಳುಹಿಸಿಕೊಡಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT