ಶುಕ್ರವಾರ, ಡಿಸೆಂಬರ್ 6, 2019
25 °C

ರೌಡಿಶೀಟ್ ಪಟ್ಟಿಯಲ್ಲಿ ಮುಗ್ಧರಿದ್ದರೆ ಕ್ರಮ: ಮುಖ್ಯಮಂತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೌಡಿಶೀಟ್ ಪಟ್ಟಿಯಲ್ಲಿ ಮುಗ್ಧರಿದ್ದರೆ ಕ್ರಮ: ಮುಖ್ಯಮಂತ್ರಿ

ಬೆಂಗಳೂರು: ರಾಜಕೀಯ ದುರುದ್ದೇಶದಿಂದ ಯಾರ ಮೇಲೂ ರೌಡಿ ಶೀಟ್ ತೆ‌ರೆದಿಲ್ಲ. ಅಮಾಯಕರನ್ನು ರೌಡಿಶೀಟ್ ಪಟ್ಟಿಗೆ ಸೇರಿಸಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ವಿಧಾನಸಭೆಯಲ್ಲಿ ಯು.ಬಿ. ಬಣಕಾರ ಪರವಾಗಿ ಬಿಜೆಪಿ ಶಾಸಕ ಸುನಿಲ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ‘ಪದೇ ಪದೇ ಅಪರಾಧ ಕೃತ್ಯಗಳಲ್ಲಿ ತೊಡಗಿರುವವರ ಮೇಲೆ ರೌಡಿ ಶೀಟ್ ತೆರೆಯಲಾಗುತ್ತದೆ. ಆಧಾರ ಇಲ್ಲದೆ ಯಾರನ್ನೂ ಆ ಪಟ್ಟಿಗೆ ಸೇರಿಸುವುದಿಲ್ಲ’ ಎಂದರು.

‘ಚಳವಳಿ, ಪ್ರತಿಭಟನೆ ಮಾಡುವ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ರೌಡಿ ಶೀಟ್ ತೆರೆಯಲಾಗುತ್ತಿದೆ. ಆ ಮೂಲಕ ಚಳವಳಿಗಳನ್ನು ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ’ ಎಂದು ಸುನಿಲ್ ಕುಮಾರ್ ಆರೋಪಿಸಿದರು.

ಆಗ ಧ್ವನಿಗೂಡಿಸಿದ ಜಗದೀಶ ಶೆಟ್ಟರ್, ‘ರಾಜಕೀಯ ಕಾರಣಗಳಿಗಾಗಿ ಹೋರಾಟಗಾರರನ್ನು ಫಿಕ್ಸ್ ಮಾಡಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರಿಗೆ ನೋಟಿಸ್ ಕೊಟ್ಟು ಕಿರುಕುಳ ಕೊಡಲಾಗುತ್ತಿದೆ. ರೌಡಿ ಶೀಟ್ ತೆರೆಯುವ ಬೆದರಿಕೆ ಹಾಕಲಾಗುತ್ತಿದೆ. ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು  ರೌಡಿ ಶೀಟ್‌ಗೆ ಸೇರಿಸಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಗವಾಧ್ವಜ ಹಾರಿಸಿದರೆ ರೌಡಿಶೀಟ್: ‘ರಾಜ್ಯದಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದವರು ಮುಗ್ಧರು. ಆದರೆ, ಭಗವಾಧ್ವಜ ಹಾರಿಸಿದವರನ್ನು ರೌಡಿಶೀಟ್‌ನಲ್ಲಿ ದಾಖಲಿಸಲಾಗುತ್ತಿದೆ’ ಎಂದು ಸಿ.ಟಿ. ರವಿ ಟೀಕಿಸಿದರು.

‘ಚಿಕ್ಕಮಗಳೂರಿನಲ್ಲಿ ರೌಡಿಶೀಟರ್‍ ಮಾಹಿತಿ ನೀಡಲು ಅಲ್ಲಿನ ಎಸ್‍.ಪಿ ನಿರಾಕರಿಸಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಯಾರು ರೌಡಿಗಳಿದ್ದಾರೆ ಎಂಬ ಮಾಹಿತಿ ಪಡೆಯುವ ಹಕ್ಕು ನಮಗಿಲ್ಲವೇ’ ಎಂದೂ ಪ್ರಶ್ನಿಸಿದರು.

‘ಆರ್‍ಎಸ್‍ಎಸ್, ಬಿಜೆಪಿ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಲಾಗುತ್ತಿದೆ. ರಾಜಕೀಯಕ್ಕಾಗಿ ರೌಡಿಶೀಟ್ ಬಳಕೆ ಮಾಡಲಾಗುತ್ತಿದೆ’ ಎಂದು ಕಾಗೇರಿ ಆರೋಪಿಸಿದರು.

ಪ್ರತಿಕ್ರಿಯಿಸಿ (+)