ಅಧಿಕಾರಿಗಳ ಗೈರು: ಬಿಜೆಪಿ ಸಭಾತ್ಯಾಗ

7

ಅಧಿಕಾರಿಗಳ ಗೈರು: ಬಿಜೆಪಿ ಸಭಾತ್ಯಾಗ

Published:
Updated:

ಬೆಂಗಳೂರು: ವಿಧಾನ ಪರಿಷತ್ತಿನ ಕಲಾಪದ ವೇಳೆ ಬಹುತೇಕ ಅಧಿಕಾರಿಗಳು ಗೈರು ಹಾಜರಾಗಿದ್ದನ್ನು ಖಂಡಿಸಿ ವಿರೋಧ ಪಕ್ಷ ಬಿಜೆಪಿ ಸದಸ್ಯರು ಮಂಗಳವಾರ ಸಭಾತ್ಯಾಗ ಮಾಡಿದರು.

ಕಲಾಪ ಆರಂಭವಾದಾಗ ಬೆರಳೆಣಿಕೆ ಅಧಿಕಾರಿಗಳು ಮಾತ್ರ ಹಾಜರಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ, ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ನಾನು ನಿಲುವಳಿ ಸೂಚನೆ ಮಂಡಿಸಿದ್ದೇನೆ. ಸದನದಲ್ಲಿ ಗೃಹಸಚಿವರು ಇಲ್ಲ. ಅಧಿಕಾರಿಗಳನ್ನುಕರೆಸುವ ಯೋಗ್ಯತೆಯೂ ಈ ಸರ್ಕಾರಕ್ಕಿಲ್ಲ. ನಾವೇನೂ ರಸ್ತೇಲಿ ಸಂತೆ ಮಾಡುವ ಜಾಗದಲ್ಲಿದ್ದೇವೆಯೇ’ ಎಂದು ಖಾರವಾಗಿ ಪ್ರಶ್ನಿಸಿದರು.

ಸದನ ಸಭೆ ಸೇರಿದಾಗ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳು ಹಾಜರಿರಲೇಬೇಕು. ಒಂದು ಪ್ರಶ್ನೆಗೆ ಉತ್ತರಿಸಲು ಸರಿಸುಮಾರು ₹2 ಲಕ್ಷ ವೆಚ್ಚವಾಗುತ್ತದೆ. ಈ ಹಿಂದೆ ಪ್ರಶ್ನೆಯೊಂದಕ್ಕೆ ಉತ್ತರ ನೀಡಲು ₹18 ಲಕ್ಷ ವೆಚ್ಚವಾಗಿರುವ ಉದಾಹರಣೆಯೂ ಇದೆ. ಇಷ್ಟೆಲ್ಲ ಆದರೂ ಕಲಾಪ ನಡೆಯುವಾಗ ಅಧಿಕಾರಿಗಳು ಇರುವುದಿಲ್ಲ ಎಂದರೆ ಏನರ್ಥ ಎಂದು ಜೆಡಿಎಸ್‌ನ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಕಲಾಪದ ವೇಳೆ ಯಾವ ಅಧಿಕಾರಿಗಳು ಹಾಜರಿರಬೇಕು ಎಂಬುದನ್ನು ಮೊದಲೇ ಪಟ್ಟಿ ಮಾಡಲಾಗುತ್ತದೆ. ಸಮಯಕ್ಕೆ ಸರಿಯಾಗಿ ಹಾಜರಿರುವುದು ಅವರ ಜವಾಬ್ದಾರಿ. ಅವರು ಬರದಿದ್ದರೆ ಆಡಳಿತ ಪಕ್ಷದವರೂ ಸಮರ್ಥನೆ ಮಾಡಿಕೊಳ್ಳಲು ಹೋಗಬಾರದು. ಪರಿಷತ್ತಿನ ನಿಯಮಗಳ ಪ್ರಕಾರ ಅವರ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಸಭಾಪತಿ ಎಚ್ಚರಿಕೆ ನೀಡಿದರು.

‘ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಬಿಡುವುದು ನಿಮ್ಮಿಷ್ಟ. ನಾವಂತೂ ಪ್ರತಿಭಟನೆ ದಾಖಲಿಸುತ್ತೇವೆ’ ಎಂದು ಈಶ್ವರಪ್ಪ ಹೊರ ನಡೆದರು. ಪಕ್ಷದ ಸದಸ್ಯರು ಅವರನ್ನು ಹಿಂಬಾಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry