ಮಂಗಳವಾರ, ಡಿಸೆಂಬರ್ 10, 2019
26 °C

ಪ್ರಧಾನಿ ಮಧ್ಯಸ್ಥಿಕೆಗೆ ಅಡ್ಡಿ ಎಲ್ಲಿದೆ?

Published:
Updated:
ಪ್ರಧಾನಿ ಮಧ್ಯಸ್ಥಿಕೆಗೆ ಅಡ್ಡಿ ಎಲ್ಲಿದೆ?

ಮಹದಾಯಿ ಜಲವಿವಾದದ ಈಗಿನ ತೀವ್ರ ಬಿಕ್ಕಟ್ಟನ್ನು ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕೆಂದು ಒಂದೆಡೆ ಮತ್ತು ಈ ವಿವಾದ ನ್ಯಾಯಮಂಡಳಿಯ ಮುಂದೆ ಇರುವುದರಿಂದ ಪ್ರಧಾನಿ ಮಧ್ಯಸ್ಥಿಕೆ ಸಾಧ್ಯವಿಲ್ಲ ಎಂದು ಇನ್ನೊಂದೆಡೆ ವಾದ–ಪ್ರತಿವಾದಗಳು ನಡೆಯುತ್ತಿವೆ. ಇವು ಬಹುಮಟ್ಟಿಗೆ ರಾಜಕೀಯ ಪ್ರೇರಿತವಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ.

ನಾವು ಮುಕ್ತ ಮನಸ್ಸಿನಿಂದ ವಿವೇಚಿಸಿದಾಗ ಮತ್ತು ಇತಿಹಾಸದತ್ತ ನೋಟ ಹರಿಸಿದಾಗ ನಮಗೆ ಇಂತಹ ವಿವಾದಗಳ ಬಗೆಗೆ ಒಂದು ಸ್ಪಷ್ಟ ಚಿತ್ರಣ ಸಿಗಲು ಸಾಧ್ಯ. 1995ರಲ್ಲಿ ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿತ್ತು. ಕಾವೇರಿ ನ್ಯಾಯಮಂಡಳಿಯ ಮಧ್ಯಂತರ ತೀರ್ಪಿನಂತೆ ತಮಿಳುನಾಡಿಗೆ ಕರ್ನಾಟಕ ನೀರು ಬಿಡಬೇಕಾಗಿತ್ತು. ಆದರೆ ನಮ್ಮಲ್ಲಿಯೇ ನೀರಿಲ್ಲದ ಕಾರಣ ಅಸಹಾಯಕ ಸ್ಥಿತಿ ಎದುರಾಗಿತ್ತು. ಆಗ ತಮಿಳುನಾಡು ಸರ್ಕಾರ ಆ ಅವಧಿಯಲ್ಲಿ ತನಗೆ ಬರಬೇಕಾದ 30 ಟಿಎಂಸಿ ಅಡಿ ನೀರನ್ನು ಬಿಡಬೇಕೆಂದು ಸುಪ್ರೀಂ ಕೋರ್ಟ್‌ ಮೊರೆ ಹೋಯಿತು. ನ್ಯಾಯಮಂಡಳಿಯ ತೀರ್ಪಿನ ವಿಷಯದಲ್ಲಿ ತಾನೀಗ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ತಮಿಳುನಾಡಿನ ಅರ್ಜಿಯನ್ನು ತಳ್ಳಿಹಾಕಿತು. ‘ನ್ಯಾಯಮಂಡಳಿಯ ಮುಂದೆಯೇ ಹೋಗಿ’ ಎಂದಿತು. ಆಗ ನ್ಯಾಯಮಂಡಳಿಯು ತಮಿಳುನಾಡಿನ ಅರ್ಜಿಯ ವಿಚಾರಣೆ ನಡೆಸಿತು. ತಮಿಳುನಾಡಿಗೆ ತುರ್ತಾಗಿ 11 ಟಿಎಂಸಿ ಅಡಿ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಿತು.

ತೀವ್ರ ನೀರಿನ ಕೊರತೆಯಿಂದಾಗಿ ಕರ್ನಾಟಕವು ಈ ಆದೇಶವನ್ನು ಜಾರಿಗೊಳಿಸುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಹಟಮಾರಿಯಂತೆ ವರ್ತಿಸುತ್ತಿದ್ದ ಅಂದಿನ ಮುಖ್ಯಮಂತ್ರಿ ಜಯಲಲಿತಾ, ಮತ್ತೆ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದರು. ಆಗ ಸುಪ್ರೀಂ ಕೋರ್ಟ್, ‘ಈ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸಿ’ ಎಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಅವರಿಗೆ ಆದೇಶಿಸಿತು.

ಸುಪ್ರೀಂ ಕೋರ್ಟಿನ ಆದೇಶದಂತೆ ನರಸಿಂಹರಾವ್ ಅವರು ಕಾವೇರಿ ಕಣಿವೆಯ ನಾಲ್ಕೂ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಪ್ರತಿಪಕ್ಷಗಳ ನಾಯಕರ ಸಭೆ ಕರೆದರು. ತಮಿಳುನಾಡು ಮತ್ತು ಕರ್ನಾಟಕದ ಸಮಸ್ಯೆಯನ್ನು ಆಲಿಸಿದರು. ತಮಿಳುನಾಡಿಗೆ ತುರ್ತಾಗಿ 6 ಟಿಎಂಸಿ ಅಡಿ ನೀರು ಬಿಡುವಂತೆ ಸೂಚಿಸಿದರು. ಆಗ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದ ಎಚ್.ಡಿ ದೇವೇಗೌಡರು ಬೇರೆ ಮಾರ್ಗವೇ ಇಲ್ಲದೆ ತಮಿಳುನಾಡಿಗೆ ನೀರು ಹರಿಸಿದರು. ಆದರೆ ಪ್ರಧಾನಿಯ ಈ ಸೂಚನೆಗೆ ಅಸಮಾಧಾನ ವ್ಯಕ್ತಪಡಿಸಿದ ಜಯಲಲಿತಾ ಸಭೆಯಿಂದ ಹೊರಬಂದು ತಮ್ಮ ಸಿಬ್ಬಂದಿಯೊಂದಿಗೆ ನೇರವಾಗಿ ವಿಮಾನ ನಿಲ್ದಾಣಕ್ಕೆ ಹೊರಟೇಬಿಟ್ಟರು.

ಎರಡೂ ರಾಜ್ಯಗಳ ನೀರಿನ ಸಮಸ್ಯೆಯ ಮೂಲವನ್ನು ತಿಳಿಯಲು ನರಸಿಂಹರಾವ್ ಪ್ರಾಮಾಣಿಕ ಪ್ರಯತ್ನ ಮಾಡಿದರು. ನೀರಿಗಾಗಿ ತಮಿಳುನಾಡು ಪದೇ ಪದೇ ಕ್ಯಾತೆ ತೆಗೆಯುತ್ತಲೇ ಇತ್ತು. ಹಾಗಾಗಿ ಕಾವೇರಿ ಕಣಿವೆಯಲ್ಲಿನ ನೀರು ಮತ್ತು ಬೆಳೆ ಪರಿಸ್ಥಿತಿ, ಮಳೆ ಪ್ರಮಾಣ, ಬಳಕೆ ಮಾಡುವ ನೀರಿನ ಪ್ರಮಾಣ ಇತ್ಯಾದಿ ಅಂಶಗಳನ್ನು ಕುರಿತು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕೆಂದು ದೇವೇಗೌಡರು ಪ್ರಧಾನಿಗೆ ಮನವಿ ಮಾಡಿದರು. ಅವರ ಮನವಿಗೆ ಕಿವಿಗೊಟ್ಟ ಪ್ರಧಾನಿಯು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಪ್ರೊ. ವೈ.ಕೆ. ಅಲಘ್ ನೇತೃತ್ವದಲ್ಲಿ ಮೂವರು ತಜ್ಞರ ಸಮಿತಿಯನ್ನು ನೇಮಿಸಿ ಕಾವೇರಿ ಕಣಿವೆಯ ಸತ್ಯಸಂಗತಿಯನ್ನು ತಿಳಿದ ಉದಾಹರಣೆ ಇದೆ.

ಆಗ ಕಾವೇರಿ ವಿವಾದವು ನ್ಯಾಯಮಂಡಳಿಯ ಮುಂದಿದ್ದರೂ ಪ್ರಧಾನಿಯವರು ಸಂಬಂಧಿಸಿದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದರು. ವಿವಾದ ಪರಿಹಾರಕ್ಕಾಗಿ ಮಧ್ಯಸ್ಥಿಕೆ ವಹಿಸಿದ್ದರು. 2002ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು 2012ರಲ್ಲಿ ಡಾ. ಮನಮೋಹನ್‌ ಸಿಂಗ್ ಅವರು ಕಾವೇರಿ ಕಣಿವೆ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿದ್ದಾರೆ. ಇದು ನಮ್ಮ ಕಣ್ಣೆದುರಿಗೇ ನಡೆದಿರುವ ವಿದ್ಯಮಾನ.

ದೇವೇಗೌಡರು ಪ್ರಧಾನಿಯಾಗಿದ್ದಾಗ  ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್ ಮುಖ್ಯಮಂತ್ರಿಗಳ ಸಭೆ ಕರೆದು ನರ್ಮದಾ ಅಣೆಕಟ್ಟು ವಿವಾದವನ್ನು  ಬಗೆಹರಿಸಿದ್ದಾರೆ. ಹೀಗಿರುವಾಗ ಮೋದಿ ಅವರು ಮಹದಾಯಿ ವಿವಾದದ ಮಧ್ಯಸ್ಥಿಕೆ ವಹಿಸಿ ತಾತ್ಕಾಲಿಕ ಪರಿಹಾರವನ್ನಾದರೂ ಕಂಡುಹಿಡಿಯಲು ಸಾಧ್ಯವಿದೆ. ಮೂರು ರಾಜ್ಯಗಳ ನಡುವೆ ದಿನೇ ದಿನೇ ಬೆಳೆಯುತ್ತಿರುವ ದ್ವೇಷವನ್ನು ಶಮನ ಮಾಡಲು ಇಂತಹ ಸಭೆ ನಡೆಸುವುದು ಅವಶ್ಯ. ಜಲವಿವಾದದಂತಹ ಸಮಸ್ಯೆಯನ್ನು ಮಾತುಕತೆ ಮೂಲಕ ಸೌರ್ಹಾದವಾಗಿ ಬಗೆಹರಿಸಿಕೊಳ್ಳಲು ನ್ಯಾಯಾಲಯವಾಗಲೀ ಅಥವಾ ನ್ಯಾಯಮಂಡಳಿಗಳಾಗಲೀ ಅಡ್ಡಬರುವುದಿಲ್ಲ. ಆದ್ದರಿಂದ ಗಟ್ಟಿ ಮನಸ್ಸು ಮತ್ತು ವಿವಾದವನ್ನು ಬಗೆಹರಿಸುವ ಮುತ್ಸದ್ದಿತನ ಹಾಗೂ ಬದ್ಧತೆ ಪ್ರಧಾನಿಗೆ ಮುಖ್ಯ. ವಿವಾದ ಬಗೆಹರಿಸಬೇಕೆನ್ನುವ ಇಚ್ಛಾಶಕ್ತಿ ಇದ್ದರೆ ಪರಿಹಾರ ಇದ್ದೇ ಇದೆ.

ಇನ್ನು ನಮ್ಮ ರಾಜ್ಯದ ಬಿಜೆಪಿ ಮುಖಂಡರು ಮಹದಾಯಿ ವಿವಾದ ಕುರಿತಂತೆ ಎಲ್ಲದಕ್ಕೂ ಕಾಂಗ್ರೆಸ್ ಮತ್ತು ಸೋನಿಯಾ–ರಾಹುಲ್ ಗಾಂಧಿ ಅವರತ್ತ ಕೈತೋರಿಸುತ್ತಿದ್ದಾರೆ. ಗೋವಾದಲ್ಲಿ ಕಾಂಗ್ರೆಸ್ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ, ‘ಕರ್ನಾಟಕಕ್ಕೆ ಹನಿ ನೀರೂ ಬಿಡುವುದಿಲ್ಲ’ ಎಂದು ಗೋವಾ ಸರ್ಕಾರದ ಪರವಾಗಿ ಸೋನಿಯಾ ನೀಡಿದ ಹೇಳಿಕೆ ಖಂಡನೀಯ. ಆದರೆ ಈಗ ಗೋವಾದಲ್ಲಿ ಇರುವುದು ಬಿಜೆಪಿ ಸರ್ಕಾರ.

ಕರ್ನಾಟಕದ ಬೇಡಿಕೆಯನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕಿರುವುದು ಸರ್ಕಾರವೇ ಹೊರತು ಅಲ್ಲಿನ ಪ್ರತಿಪಕ್ಷವಲ್ಲ. ಮಹದಾಯಿ ನೀರು ಬಿಡುವ ವಿಷಯದಲ್ಲಿ ‘ಮೊದಲು ಕಾಂಗ್ರೆಸ್ ನಾಯಕರನ್ನು ಒಪ್ಪಿಸಿ’ ಎನ್ನುತ್ತಿದ್ದಾರೆ ಬಿಜೆಪಿಯವರು. ಹಾಗಿದ್ದರೆ ಗೋವಾ ಸರ್ಕಾರವು ಕಾಂಗ್ರೆಸ್ಸಿನ ಆಣತಿಯಂತೆ ನಡೆಯುತ್ತಿದೆಯೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಇದು ನುಣುಚಿಕೊಳ್ಳುವ ಯತ್ನವಲ್ಲದೇ ಬೇರೇನೂ ಅಲ್ಲ.

ಪ್ರತಿಕ್ರಿಯಿಸಿ (+)