ತೆಂಗಿಗೆ ಹಾನಿ: ಚರ್ಚೆಗೆ ಜೆಡಿಎಸ್‌ ಆಗ್ರಹ

7

ತೆಂಗಿಗೆ ಹಾನಿ: ಚರ್ಚೆಗೆ ಜೆಡಿಎಸ್‌ ಆಗ್ರಹ

Published:
Updated:
ತೆಂಗಿಗೆ ಹಾನಿ: ಚರ್ಚೆಗೆ ಜೆಡಿಎಸ್‌ ಆಗ್ರಹ

ಬೆಂಗಳೂರು: ತೆಂಗು ಬೆಳೆಗಾರರಿಗೆ ಉಂಟಾಗಿರುವ ಆರ್ಥಿಕ ನಷ್ಟ ತುಂಬಿಕೊಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕ್ರಮ ಕೈಗೊಂಡಿಲ್ಲ ಎಂದು ಜೆಡಿಎಸ್‍ನ ಕೆ.ಎಂ. ಶಿವಲಿಂಗೇಗೌಡ ದೂರಿದರು.

ವಿಧಾನಸಭೆ ಕಲಾಪದ ಆರಂಭದಲ್ಲಿ ನಿಲುವಳಿ ಸೂಚನೆ ಮಂಡಿಸಿದ ಚರ್ಚೆಗೆ ಅವಕಾಶ ನೀಡುವಂತೆ ಶಿವಲಿಂಗೇಗೌಡ ಕೋರಿದರು. ಆಗ ಸಭಾಧ್ಯಕ್ಷರು ಮಂಗಳವಾರ ಕೈಗೆತ್ತಿಕೊಳ್ಳುವ ಭರವಸೆ ನೀಡಿದರು.

‘ಏಳು ದಿನಗಳಿಂದ ಅಹೋರಾತ್ರಿ ಧರಣಿ ನಡೆಸಿ ಇಲ್ಲಿಗೆ ಬಂದಿದ್ದೇನೆ. ಬರಗಾಲ ಹಾಗೂ ಅಂತರ್ಜಲ ಕುಸಿತದಿಂದ ರಾಜ್ಯದಲ್ಲಿ 44 ಲಕ್ಷ ತೆಂಗಿನ ಮರಗಳು ನಾಶವಾಗಿವೆ. ₹4,500 ಕೋಟಿಯಷ್ಟು ನಷ್ಟ ಉಂಟಾಗಿದೆ. ಕೇರಳದ ಮಾದರಿಯಲ್ಲಿ ಕರ್ನಾಟಕ ರಾಜ್ಯದ ರೈತರಿಗೂ ಪರಿಹಾರ ಘೋಷಿಸಬೇಕು’ ಎಂದು ಒತ್ತಾಯಿಸಿದರು.

ಎನ್‌ಪಿಎಸ್‌ ಪರಿಶೀಲನೆ: ಮುಖ್ಯಮಂತ್ರಿ

ಬೆಂಗಳೂರು:‌ ‘ರಾಜ್ಯದ ನೂತನ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಆರನೇ ವೇತನ ಆಯೋಗ ಕೆಲವು ಶಿಫಾರಸುಗಳನ್ನು ಮಾಡಿದೆ. ಆಯೋಗದ ವರದಿ ಸಚಿವ ಸಂಪುಟ ಸಭೆಯ ಮುಂದೆ ಬರಲಿದ್ದು, ಆಗ ಆ ಶಿಫಾರಸುಗಳನ್ನು ಪರಿಶೀಲಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಬಿಜೆಪಿಯ ಐಹೊಳೆ ಡಿ. ಮಹಾಲಿಂಗಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಹೊಸ ಪಿಂಚಣಿ ಯೋಜನೆ 12 ವರ್ಷಗಳ ಹಿಂದೆಯೇ ಜಾರಿಗೆ ಬಂದಿದೆ. ಪಶ್ಚಿಮ ಬಂಗಾಳ ಮತ್ತು ತ್ರಿಪುರ ಬಿಟ್ಟು ಇತರ ಎಲ್ಲ ರಾಜ್ಯಗಳಲ್ಲಿ ಅನುಷ್ಠಾನಗೊಂಡಿದೆ. ಈಗ ಯೋಜನೆಯನ್ನು ಬದಲಿಸಲು ಹೇಗೆ ಸಾಧ್ಯ’ ಎಂದೂ ಪ್ರಶ್ನಿಸಿದರು.

‘ಅಕ್ರಮ ಮದ್ಯಕ್ಕೆ ಹೆಚ್ಚು ದಂಡ ವಸೂಲು‘

ಬೆಂಗಳೂರು: ‘ರಾಜ್ಯದಲ್ಲಿರುವ ಹೋಂ ಸ್ಟೇಗಳಲ್ಲಿ ಮದ್ಯ ಸರಬರಾಜಿಗೆ ಅವಕಾಶ ಇಲ್ಲ. ಅಕ್ರಮವಾಗಿ ಮದ್ಯ ಸರಬರಾಜು ಪ್ರಕರಣಗಳು ಪತ್ತೆಯಾದರೆ ವಿಧಿಸುತ್ತಿರುವ ದಂಡ ಪ್ರಮಾಣ ಹೆಚ್ಚಿಸಲಾಗುವುದು’ ಎಂದು ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪೂರ ಹೇಳಿದರು.

ಜೆಡಿಎಸ್‌ನ ಕೆ.ಎಂ. ಶಿವಲಿಂಗೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಮದ್ಯ ಸರಬರಾಜು ಇಲ್ಲದಿದ್ದರೂ ಕೆಲವರು ಅಲ್ಲಿಗೆ ಕೊಂಡೊಯ್ದು ಮದ್ಯ ಸೇವಿಸುತ್ತಿದ್ದಾರೆ. ಅಂತಹ ಪ್ರಕರಣಗಳಲ್ಲಿ ಈಗಾಗಲೇ ದಂಡ ವಸೂಲು ಮಾಡಲಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry