ಸೋಮವಾರ, ಡಿಸೆಂಬರ್ 9, 2019
24 °C

ಜಿಕೆವಿಕೆ ಬಡಾವಣೆಗೆ ಹೊಸ ರಸ್ತೆ: ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಕೆವಿಕೆ ಬಡಾವಣೆಗೆ ಹೊಸ ರಸ್ತೆ: ಆಕ್ಷೇಪ

ಬೆಂಗಳೂರು: ಬಿಬಿಎಂಪಿ ವತಿಯಿಂದ ಬಳ್ಳಾರಿ ರಸ್ತೆಯಿಂದ ಜಕ್ಕೂರು ಫ್ಲೈಯಿಂಗ್‌ ಶಾಲೆಯ ಮೂಲಕ ಜಿಕೆವಿಕೆ ಬಡಾವಣೆಗೆ ಹೊಸ ರಸ್ತೆ ನಿರ್ಮಾಣಕ್ಕೆ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿದೆ.

ಜಿಕೆವಿಕೆ ಬಡಾವಣೆಗೆ ಹೋಗಲು ಜಕ್ಕೂರು ಪ್ಲಾಂಟೇಷನ್‌ ರಸ್ತೆ ಇದ್ದರೂ ಹೊಸ ರಸ್ತೆ ನಿರ್ಮಿಸಲು ಪಾಲಿಕೆ ಮುಂದಾಗಿದೆ. ಪ್ಲಾಂಟೇಷನ್‌ ರಸ್ತೆಯು ಶೋಭಾ ಅಲ್ಟಿಮಾ ಕ್ಯಾಂಪಸ್‌, ಐಟಿಸಿ ಗಾರ್ಡನ್‌ ಎನ್‌ಕ್ಲೇವ್‌ ಬಳಿ ಕೊನೆಗೊಳ್ಳುತ್ತದೆ. ಎನ್‌ಕ್ಲೇವ್‌ ಪಕ್ಕದಲ್ಲೇ ಜಿಕೆವಿಕೆ ಬಡಾವಣೆ ಇದೆ. ಇಲ್ಲಿ ಖಾಲಿ ನಿವೇಶನವಿದ್ದು, ಸ್ವಲ್ಪ ಭಾಗವನ್ನು ಸ್ವಾಧೀನ ಪಡಿಸಿಕೊಂಡು ರಸ್ತೆಯನ್ನು ವಿಸ್ತರಿಸಬಹುದು ಎಂದು ರೈಲ್ವೆ ಕಾರ್ಯಕರ್ತ ಸಂಜೀವ್‌ ದ್ಯಾಮಣ್ಣವರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ಲಾಂಟೇಷನ್‌ ರಸ್ತೆಯು ಶೋಭಾ ಅಲ್ಟಿಮಾ ಕ್ಯಾಂಪಸ್‌, ಐಟಿಸಿ ಗಾರ್ಡನ್‌ ಎನ್‌ಕ್ಲೇವ್‌ನವರ ಬಳಕೆಗೆ ಮಾತ್ರ ಸೀಮಿತವಾಗಿದೆ. ಈ ಮಾರ್ಗದ ಮೂಲಕವೇ ಸಂಪರ್ಕ ಕಲ್ಪಿಸಲು ಸಾಧ್ಯವಿದೆ ಎಂದರು.

ಹೊಸ ರಸ್ತೆ ನಿರ್ಮಿಸಲು ವಾಯುನೆಲೆಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿರ್ಮಿಸಲು ಉದ್ದೇಶಿಸಿರುವ ಮೆಟ್ರೊ ಮಾರ್ಗವೂ ಜಕ್ಕೂರು ವಾಯುನೆಲೆಯ ಬಳಿಯೇ ಬರಲಿದೆ. ಇದಕ್ಕಾಗಿ ಮತ್ತಷ್ಟು ಭೂಮಿಯನ್ನು ಬಿಟ್ಟುಕೊಡಬೇಕಿದೆ. ಇದು ಹೀಗೇ ಮುಂದುವರಿದರೆ ಜಕ್ಕೂರು ವಾಯುನೆಲೆಗೆ ನೆಲೆಯೇ ಇಲ್ಲವಾಗುತ್ತದೆ ಎಂದು ಎಚ್ಚರಿಸಿದರು.

ಜಿಕೆವಿಕೆ ಬಡಾವಣೆಗೆ ಹೋಗಲು ಹಳೇ ರಸ್ತೆ ಇತ್ತು. ಆದರೆ, ಜಕ್ಕೂರು ವಾಯುನೆಲೆಯ ರನ್‌ವೇ ವಿಸ್ತರಿಸುವ ಉದ್ದೇಶದಿಂದ ಈ ರಸ್ತೆಯನ್ನು ಎರಡು ವರ್ಷಗಳ ಹಿಂದೆ ಮುಚ್ಚಲಾಗಿತ್ತು. ಇದರಿಂದ ಅಲ್ಲಿನ ನಿವಾಸಿಗಳು ಜಕ್ಕೂರು ಮೂಲಕ ಬಳ್ಳಾರಿ ರಸ್ತೆಗೆ ಬರಬೇಕಿದೆ. ಅವರ ಅನುಕೂಲಕ್ಕಾಗಿ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಯಲಹಂಕ ವಲಯ ಯೋಜನಾ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ರಸ್ತೆಗೆ ಅಗತ್ಯವಿರುವ ಜಾಗವನ್ನು ಬಿಟ್ಟುಕೊಡಲು ಜಕ್ಕೂರು ಫ್ಲೈಯಿಂಗ್‌ ಶಾಲೆ ಒಪ್ಪಿಗೆ ಸೂಚಿಸಿದೆ. ಶಾಲೆಗೆ ಕಾಂಪೌಂಡ್‌ ನಿರ್ಮಿಸಿಕೊಡಬೇಕಿದೆ. ಟಿಡಿಆರ್‌ ನಿಯಮಾವಳಿ ಅನ್ವಯ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗುತ್ತದೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ. ಬಳಿಕ, ಟೆಂಡರ್ ಕರೆಯಲಾಗುತ್ತದೆ ಎಂದು ಹೇಳಿದರು.

ಅಂಕಿ–ಅಂಶ

40 ಅಡಿ -ಜಿಕೆವಿಕೆ ಬಡಾವಣೆಗೆ ನಿರ್ಮಿಸುತ್ತಿರುವ ರಸ್ತೆಯ ಅಗಲ

1 ಕಿ.ಮೀ. -ರಸ್ತೆಯ ಉದ್ದ ₹5.5 ಕೋಟಿರಸ್ತೆ ನಿರ್ಮಾಣದ ಅಂದಾಜು ವೆಚ್ಚ

11,097 ಚ.ಮೀ. -ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ ಪಡಿಸಿಕೊಳ್ಳಲು ಉದ್ದೇಶಿಸಿರುವ ಸರ್ಕಾರಿ ಭೂಮಿ

332 ಚ.ಮೀ. -ಸ್ವಾಧೀನಪಡಿಸಿಕೊಳ್ಳುವ ಜಿಕೆವಿಕೆ ಸೊಸೈಟಿ ಆಸ್ತಿ

ಜಕ್ಕೂರು ವಾಯುನೆಲೆಯನ್ನು ಮುಚ್ಚಿಸಲು ಬಿಲ್ಡರ್‌ಗಳು ಷಡ್ಯಂತ್ರ ನಡೆಸಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಬಾರದು.

ಸಂಜೀವ್‌ ದ್ಯಾಮಣ್ಣವರ್‌, ರೈಲ್ವೆ ಕಾರ್ಯಕರ್ತ

ಪ್ರತಿಕ್ರಿಯಿಸಿ (+)