ಬುಧವಾರ, ಡಿಸೆಂಬರ್ 11, 2019
23 °C

ಖಾಸಗಿ ಶಾಲೆಗೆ ಊಟ ಪೂರೈಸಲಾಗದು: ಲಮಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾಸಗಿ ಶಾಲೆಗೆ ಊಟ ಪೂರೈಸಲಾಗದು: ಲಮಾಣಿ

ಬೆಂಗಳೂರು: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಗೆ ಕಲ್ಪಿಸಿದ್ದ ಊಟದ ವ್ಯವಸ್ಥೆ ಸ್ಥಗಿತಗೊಳಿಸಿದ್ದನ್ನು ಖಂಡಿಸಿ ವಿರೋಧ ಪಕ್ಷ ಬಿಜೆಪಿ ಸದಸ್ಯರು ವಿಧಾನ ಪರಿಷತ್ತಿನಲ್ಲಿ ಮಂಗಳವಾರ ಧರಣಿ ನಡೆಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ‘ಕಲ್ಲಡ್ಕದಲ್ಲಿ ಈ ಶಾಲೆ ಇದೆ ಎಂಬ ಕಾರಣಕ್ಕೆ ಊಟ ನಿಲ್ಲಿಸಿದಿರೋ ಅಥವಾ ಶಾಲೆ ಹೆಸರಿನಲ್ಲಿ ಶ್ರೀರಾಮ ಎಂದಿರುವುದಕ್ಕೆ ನಿಲ್ಲಿಸಿದಿರೋ’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ, ‘ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಹಾಗೂ ಪುಣಚ ಶ್ರೀದೇವಿ ವಿದ್ಯಾಕೇಂದ್ರಗಳನ್ನು ದತ್ತು ತೆಗೆದುಕೊಳ್ಳಲು 2007ರ ಜೂನ್‌ 20ರಂದು ಆದೇಶ ಹೊರಡಿಸಲಾಗಿತ್ತು. ಈ ಬಗ್ಗೆ ದೂರುಗಳು ಬಂದಿದ್ದವು. ಮುಜರಾಯಿ ಇಲಾಖೆಯಿಂದ ಖಾಸಗಿ ಶಾಲೆಗಳಿಗೆ ಊಟ ಪೂರೈಸಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದರು. ಹಾಗಾಗಿ ಈ ಹಿಂದಿನ ಆದೇಶವನ್ನು 2017ರ ಜುಲೈ 31ರಂದು ರದ್ದುಪಡಿಸಿದ್ದೇವೆ’ ಎಂದು ತಿಳಿಸಿದರು.

‘ಕಲ್ಲಡ್ಕ ಶಾಲೆಯಲ್ಲಿ ಹಿಂದುಳಿದವರ, ದಲಿತರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಕಲಿಯುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಪತ್ರ ಬರೆದಿದ್ದರಿಂದ ಊಟ ಪೂರೈಕೆ ನಿಲ್ಲಿಸಿದ್ದೀರಿ. ರಾಜಕೀಯ ದ್ವೇಷದಿಂದ ಹೀಗೆ ಮಾಡಿದ್ದೀರಿ’ ಎಂದು ಶ್ರೀನಿವಾಸ ಪೂಜಾರಿ ಆರೋಪ ಮಾಡಿದರು.

‘ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿ ಸಭೆ ನಡೆಸಿದಾಗ ಖಾಸಗಿ ಶಾಲೆಗಳಿಗೆ ಊಟ ಪೂರೈಕೆಯಾಗುತ್ತಿರುವ  ವಿಚಾರ ಗಮನಕ್ಕೆ ಬಂದಿತ್ತು. ಸಚಿವ ರೈ ಪತ್ರ ಬರೆದ ಕಾರಣಕ್ಕೆ ಈ ಕ್ರಮ ಕೈಗೊಂಡಿಲ್ಲ’ ಎಂದರು.

‘ಶಿಕ್ಷಣ ಇಲಾಖೆಯಿಂದ ಬಿಸಿಯೂಟ ನೀಡುವ ಕಾರ್ಯಕ್ರಮ ಜಾರಿಯಲ್ಲಿದೆ. ನಮ್ಮ ಇಲಾಖೆಯಿಂದಲೂ ಊಟ ಪೂರೈಸಿದರೆ, ಲೆಕ್ಕಪರಿಶೋಧನೆ ವೇಳೆ ಆಕ್ಷೇಪ ವ್ಯಕ್ತವಾಗುತ್ತದೆ. ಕಲ್ಲಡ್ಕದ ಶಾಲೆ ಮಾತ್ರವಲ್ಲ, ಅನೇಕ ಶಾಲೆಗಳಿಗೆ ಈ ಕಾರಣದಿಂದಾಗಿಯೇ ಊಟ ಸ್ಥಗಿತಗೊಳಿಸಿದ್ದೇವೆ. ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಆದೇಶ ಹೊರಡಿಸುವ ಮೂಲಕ ಹಿಂದಿನವರು ತಪ್ಪು ಮಾಡಿದ್ದಾರೆ. ಅದನ್ನು ನಾವು ಸರಿಪಡಿಸಿದ್ದೇವೆ’ ಎಂದು ಅವರು ಸಮರ್ಥಿಸಿಕೊಂಡರು.

ಪ್ರತಿಕ್ರಿಯಿಸಿ (+)