ಭಾನುವಾರ, ಡಿಸೆಂಬರ್ 8, 2019
25 °C
ಮೈಸೂರಿನಲ್ಲಿ ಚಿರತೆ ಸೆರೆ

ನಾಯಿ ಎಂದು ಚಿರತೆ ಸವರಿದಾಗ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಯಿ ಎಂದು ಚಿರತೆ ಸವರಿದಾಗ...

ಮೈಸೂರು: ನಗರದ ಹೊರ ವಲಯದ ಬಾಳೆಹಣ್ಣಿನ ಮಂಡಿಯೊಂದಕ್ಕೆ ಮಂಗಳವಾರ ನಸುಕಿನಲ್ಲಿ ನುಗ್ಗಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.

ಎಪಿಎಂಸಿ ಮಾರುಕಟ್ಟೆ ಪಕ್ಕದ ಉತ್ತನಹಳ್ಳಿಗೆ ತೆರಳುವ ಮಾರ್ಗಮಧ್ಯೆ ಇರುವ ರಾಜು ಎಂಬುವರ ಬಾಳೆಹಣ್ಣಿನ ಮಂಡಿಗೆ ನಸುಕಿನ 3.10ರ ಸಮಯದಲ್ಲಿ 10 ವರ್ಷದ ಗಂಡು ಚಿರತೆಯೊಂದು ನುಸುಳಿದೆ.

ಎರಡು ನಾಯಿಗಳನ್ನು ಸಾಕಿಕೊಂಡಿದ್ದ ಬಾಳೆಹಣ್ಣಿನ ಮಂಡಿಯ ರಾಮಕೃಷ್ಣ ನಾಯಿ ಓಡಾಡುವುದಕ್ಕಾಗಿ ಜನರೇಟರ್ ಕೊಠಡಿಯಲ್ಲಿ ಒಂದು ಸಣ್ಣ ಕಿಟಕಿ ಇರಿಸಿದ್ದಾರೆ. ಅದರ ಮೂಲಕ ಎರಡೂ ನಾಯಿಗಳು ಹೊರ ಹೋಗುವುದು, ಬರುವುದು ಮಾಡುತ್ತಿದ್ದವು. ಕೆಲವು ಬಾರಿ ಜತೆಯಲ್ಲೇ ಮಲಗುತ್ತಿದ್ದವು.

ನಾಯಿಗಳು ಬೊಗಳುವುದು ಕೇಳಿ ಎಚ್ಚರಗೊಂಡ ರಾಮಕೃಷ್ಣ ನಿದ್ದೆಗಣ್ಣಿನಲ್ಲಿ ನಾಯಿ ಎಂದು ಭಾವಿಸಿ ಚಿರತೆಯ ಮುಖ ಸವರಿದ್ದಾರೆ. ಅದರ ಮೀಸೆ ಕೈಗೆ ತಗುಲಿದಾಗ ಅನುಮಾನಗೊಂಡು ಕಣ್ಣು ಬಿಟ್ಟುನೋಡಿದಾಗ ಚಿರತೆ ನಾಯಿಗಳನ್ನು ಅಟ್ಟಾಡಿಸುತ್ತಾ ಮತ್ತೊಂದು ಮೂಲೆಗೆ ಹೋಗಿದೆ’

ತಕ್ಷಣವೇ ಎಚ್ಚೆತ್ತ ರಾಮಕೃಷ್ಣ ಪಕ್ಕದಲ್ಲೇ ಮಲಗಿದ್ದ ಸಂತೋಷ್‌ ಅವರನ್ನು ಎಬ್ಬಿಸಿ ಹೊರಗೆ ಕರೆದುಕೊಂಡು ಬಂದು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಬಂದ ಸಿಬ್ಬಂದಿ, ಸೆರೆಗೆ ಕಾರ್ಯಾಚರಣೆ ರೂಪಿಸಿದರು. ಈ ವೇಳೆಗೆ ಮಂಡಿಯೊಳಗಿದ್ದ ಎರಡು ನಾಯಿಗಳ ಪೈಕಿ ಒಂದು ನಾಯಿಯನ್ನು ಕೊಂದು ಹಾಕಿತು. ಇದನ್ನು ಕಂಡು ಹೆದರಿದ ಮತ್ತೊಂದು ನಾಯಿ ಸಣ್ಣ ಕಿಂಡಿಯಿಂದ ನುಸುಳಿ ಹೊರಬಂದಿತು.

ಮಂಡಿಯೊಳಗೆ ಆರ್ಭಟಿಸುತ್ತಿದ್ದ ಚಿರತೆಯನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳ ಜನರು, ರಸ್ತೆಯಲ್ಲಿ ಸಾಗುತ್ತಿದ್ದವರು ಮುಗಿಬಿದ್ದರು. ಮುಂಜಾನೆ 7 ಗಂಟೆಯ ಹೊತ್ತಿಗೆ ಬೋನು ಹಾಗೂ ಬಲೆ ತರಿಸಲಾಯಿತು. ಪಶುವೈದ್ಯ ನಾಗರಾಜು ಕಿಟಕಿ ಮೂಲಕ ಒಂದು ಸುತ್ತಿನ ಅರಿವಳಿಕೆ ನೀಡಿದರು. ಪ್ರಜ್ಞೆ ತಪ್ಪಿದ ನಂತರ ಬಾಗಿಲು ತೆರೆದು ಬಲೆಯನ್ನು ಹಾಕಿ ಸೆರೆ ಹಿಡಿಯಲಾಯಿತು. ಈ ವೇಳೆ ಜನರ ದೊಡ್ಡ ಗುಂಪು ಸೇರಿದ್ದರಿಂದ ಕಾರ್ಯಚರಣೆಗೆ ತೊಂದರೆಯಾಯಿತು.

ನಂತರ, ಇಲವಾಲದಲ್ಲಿರುವ ಚಾಮುಂಡಿ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಯಿತು.

**

ನಾಯಿ ಎಂದು ಚಿರತೆ ಸವರಿದೆ!

ನಾಯಿ ಎಂದು ತಿಳಿದು ಚಿರತೆಯನ್ನು ಸವರಿದ್ದಾಗಿ ಬಾಳೆಹಣ್ಣಿನ ಮಂಡಿಯೊಳಗೆ ಮಲಗಿದ್ದ ರಾಮಕೃಷ್ಣ ಹೇಳಿದರು.

‘ಎರಡು ನಾಯಿಗಳನ್ನು ಸಾಕಿಕೊಂಡಿದ್ದೆ. ನಾಯಿ ಓಡಾಡುವುದಕ್ಕಾಗಿ ಜನರೇಟರ್ ಕೊಠಡಿಯಲ್ಲಿ ಒಂದು ಸಣ್ಣ ಕಿಟಕಿ ಇರಿಸಿದ್ದೆ. ಅದರ ಮೂಲಕ ಎರಡೂ ನಾಯಿಗಳು ಹೊರ ಹೋಗುವುದು, ಬರುವುದು ಮಾಡುತ್ತಿದ್ದವು. ಕೆಲವು ಬಾರಿ ಜತೆಯಲ್ಲೇ ಮಲಗುತ್ತಿದ್ದವು. ನಾಯಿಗಳು ಬೊಗಳುವುದು ಕೇಳಿ ಎಚ್ಚರವಾಯಿತು. ನಿದ್ದೆಗಣ್ಣಿನಲ್ಲಿ ನಾಯಿ ಎಂದು ಭಾವಿಸಿ ಚಿರತೆಯ ಮುಖ ಸವರಿದೆ. ಅದರ ಮೀಸೆ ಕೈಗೆ ತಗುಲಿದಾಗ ಅನುಮಾನಗೊಂಡು ಕಣ್ಣು ಬಿಟ್ಟೆ. ಅಷ್ಟೊತ್ತಿಗೆ ನಾಯಿಗಳನ್ನು ಅಟ್ಟಾಡಿಸುತ್ತಾ ಮತ್ತೊಂದು ಮೂಲೆಗೆ ಹೋಯಿತು. ಪಕ್ಕದಲ್ಲೇ ಮಲಗಿದ್ದ ಸಂತೋಷ್‌ನನ್ನು ಎಬ್ಬಿಸಿ ಹೊರಗೆ ಕರೆದುಕೊಂಡು ಬಂದೆ ಎಂದು ತಮ್ಮ ಅನುಭವ ಹಂಚಿಕೊಂಡರು.

**

ಮುಳ್ಳುಹಂದಿ ಜತೆ ಇದ್ದದ್ದು ಇದೇ ಚಿರತೆ

ಈಚೆಗೆ ಚಾಮುಂಡಿಬೆಟ್ಟದ ರಸ್ತೆಯಲ್ಲಿ ಮುಳ್ಳುಹಂದಿ ಜತೆ ಚಿರತೆ ಕಾಣಿಸಿಕೊಂಡಿತ್ತು. ಈಗ ಸೆರೆಯಾಗಿರುವುದು ಅದೇ ಚಿರತೆ. ಕಳೆದ 10 ವರ್ಷಗಳಿಂದಲೂ ಬೆಟ್ಟದಲ್ಲಿ ವಾಸವಿತ್ತು ಎಂದು ಅರಣ್ಯ ಇಲಾಖೆ ಮೂಲಗಳು ಖಚಿತಪಡಿಸಿವೆ.

‘ಚಿರತೆಯ ಗಂಟಲಲ್ಲಿ ಮುಳ್ಳುಹಂದಿಯ ಮುಳ್ಳುಗಳು ಚುಚ್ಚಿಕೊಂಡಿದ್ದು, ಗಾಯದ ಗುರುತುಗಳಿವೆ. ಜತೆಗೆ, ಗಂಟಲಿನ ಆಳದಲ್ಲಿ ಸಿಲುಕಿದ್ದ ಒಂದೆರಡು ಮುಳ್ಳುಗಳನ್ನೂ ಹೊರತೆಗೆಯಲಾಗಿದೆ. ಸದ್ಯ, ಆರೋಗ್ಯವಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ದೇವರಾಜು ತಿಳಿಸಿದರು.

ಪ್ರತಿಕ್ರಿಯಿಸಿ (+)