ಶುಕ್ರವಾರ, ಡಿಸೆಂಬರ್ 13, 2019
27 °C

ಹಳದಿ, ಬಿಳಿ, ಕೆಂಪು ಬಣ್ಣದ ನಾಡಧ್ವಜ

ಹೊನಕೆರೆ ನಂಜುಂಡೇಗೌಡ Updated:

ಅಕ್ಷರ ಗಾತ್ರ : | |

ಹಳದಿ, ಬಿಳಿ, ಕೆಂಪು ಬಣ್ಣದ ನಾಡಧ್ವಜ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಚಕ್ರವರ್ತಿ ಮೋಹನ್‌ ನೇತೃತ್ವದ ತಜ್ಞರ ಸಮಿತಿ ನಾಡಧ್ವಜದ ವಿನ್ಯಾಸವನ್ನು ಅಂತಿಮಗೊಳಿಸಿ ಮುಖ್ಯಮಂತ್ರಿಗೆ ವರದಿ ಕೊಟ್ಟಿದೆ.

ಧ್ವಜದ ಮೇಲ್ಭಾಗದಲ್ಲಿ ಹಳದಿ, ಮಧ್ಯದಲ್ಲಿ ಬಿಳಿ ಮತ್ತು ಕೆಳಗೆ ಕೆಂಪು ಬಣ್ಣಗಳಿದ್ದು, ಬಿಳಿ ಬಣ್ಣದ ನಡುವೆ ರಾಜ್ಯ ಸರ್ಕಾರದ ಲಾಂಛನ ಹಾಕಲಾಗಿದೆ. ಆರೇಳು ವಿನ್ಯಾಸಗಳನ್ನು ಪರಿಶೀಲಿಸಿದ ಸಮಿತಿ ಈ ಧ್ವಜವನ್ನು ಅಂತಿಮಗೊಳಿಸಿದೆ. ಸರ್ಕಾರಕ್ಕೆ ವರದಿ ಕೊಡುವ ಮುನ್ನ, ಸ್ವಂತ ಧ್ವಜ ಹೊಂದಲು ಸಂವಿಧಾನಾತ್ಮಕ ತೊಡಕುಗಳೇನಾದರೂ ಇದೆಯೇ ಎಂದೂ ಪರಿಶೀಲಿಸಿದೆ.

ಸಮಿತಿ ಅಧ್ಯಕ್ಷರು, ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಮವಾರ ಭೇಟಿ ಮಾಡಿ ವರದಿ ಸಲ್ಲಿಸಿದರು. ಇದೇ ವೇಳೆ ಕಾನೂನಾತ್ಮಕ ಅಂಶಗಳನ್ನು ವಿವರಿಸಿದರು. ಈ ವಿಷಯ ಸದ್ಯದಲ್ಲೇ ಸಚಿವ ಸಂಪುಟದ ಸಭೆಯಲ್ಲಿ ಚರ್ಚೆಗೆ ಬರಲಿದ್ದು, ಆನಂತರ ಕೇಂದ್ರದ ಒಪ್ಪಿಗೆಗಾಗಿ ಕಳುಹಿಸಲಾಗುವುದು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ರಾಜ್ಯದ ಶಿಫಾರಸನ್ನು ಕೇಂದ್ರ ಒಪ್ಪಿಕೊಂಡರೆ ಕರ್ನಾಟಕವು ಜಮ್ಮು– ಕಾಶ್ಮೀರ ಬಳಿಕ ಸ್ವಂತ ಧ್ವಜ ಹೊಂದಿದ ಎರಡನೇ ರಾಜ್ಯ ಆಗಲಿದೆ. ವಿಧಾನಸಭೆ ಚುನಾವಣೆ ಘೋಷಣೆ ಆಗುವುದರೊಳಗಾಗಿ ಪ್ರತ್ಯೇಕ ಧ್ವಜ ಹೊಂದುವ ಕಾಳಜಿಯನ್ನು ಮುಖ್ಯಮಂತ್ರಿ ಹೊಂದಿದ್ದು, ಇದರಿಂದ ರಾಜಕೀಯ ಲಾಭ ಪಡೆಯುವ ಲೆಕ್ಕಾಚಾರವಿದೆ.

‘ರಾಜ್ಯದ ಶಿಫಾರಸಿಗೆ ಕೇಂದ್ರ ಒಪ್ಪಿಗೆ ಕೊಟ್ಟರೂ ಲಾಭ, ಕೊಡದಿದ್ದರೂ ಲಾಭ’ ಎಂದು ಕಾಂಗ್ರೆಸ್‌ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ‘ವಿರೋಧ ಪಕ್ಷ ಬಿಜೆಪಿ ಪ್ರತ್ಯೇಕ ನಾಡಧ್ವಜ ಹೊಂದುವ ಕುರಿತು ವಿವಾದ ಎಬ್ಬಿಸಬಹುದು’ ಎಂಬ ಕಾರಣಕ್ಕೆ ಸಮಿತಿ ವರದಿಯನ್ನು ರಹಸ್ಯವಾಗಿ ಇಡಲಾಗಿದೆ. ಈ ವಿಷಯದಲ್ಲಿ ಸಿದ್ದರಾಮಯ್ಯ ಅವರನ್ನು ಬಿಟ್ಟು ಬೇರೆ ಯಾರೂ ಮಾತನಾಡದಂತೆ ತಾಕೀತು ಮಾಡಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ರಾಜ್ಯಕ್ಕೆ ಸ್ವಂತ ಧ್ವಜ ಇರಬೇಕೆಂದು ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪಾಟೀಲ ‍ಪುಟ್ಟಪ್ಪ ಹಾಗೂ ಸಮಾಜ ಸೇವಕ ಭೀಮಪ್ಪ ಗಡಾದ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿ ಪರಿಶೀಲಿಸಿದ ಸರ್ಕಾರ 2017ರ ಜೂನ್‌ 6ರಂದು ನಾಡ ಧ್ವಜವನ್ನು ವಿನ್ಯಾಸಗೊಳಿಸಿ, ಕಾನೂನಾತ್ಮಕ ಅಂಶಗಳನ್ನು ಪರಿಶೀಲಿಸಲು ಒಂಬತ್ತು ಸದಸ್ಯರ ಸಮಿತಿ ರಚಿಸಿತ್ತು. ಎಂಟು ತಿಂಗಳಲ್ಲಿ ನಾಲ್ಕು ಸಭೆ ನಡೆಸಿದ ಸಮಿತಿ ಈಗ ವರದಿ ಸಲ್ಲಿಸಿದೆ.

ಪರ– ವಿರುದ್ಧದ ಚರ್ಚೆ

ಕರ್ನಾಟಕ ಪ್ರತ್ಯೇಕ ಧ್ವಜ ಹೊಂದುವ ಕುರಿತು ಪರ– ವಿರುದ್ಧದ ಚರ್ಚೆಗಳು ಜೋರಾಗಿಯೇ ನಡೆದಿತ್ತು. ವಿರೋಧ ಪಕ್ಷ ಬಿಜೆಪಿ ಇದನ್ನು ಪ್ರಬಲವಾಗಿ ವಿರೋಧಿಸಿ, ಇದರಿಂದ ರಾಷ್ಟ್ರದ ಏಕತೆ ಹಾಗೂ ಸಮಗ್ರತೆಗೆ ಧಕ್ಕೆ ಬರಲಿದೆ ಎಂದು ಅಭಿಪ್ರಾಯಪಟ್ಟಿತ್ತು. ಕಾನೂನು ತಜ್ಞರೂ ವಿಭಿನ್ನ ನಿಲುವು ತಳೆದಿದ್ದರು. ‘ರಾಜ್ಯಗಳು ಧ್ವಜ ಹೊಂದಬಾರದು ಎಂದು ಸಂವಿಧಾನದಲ್ಲಿ ಎಲ್ಲೂ ಹೇಳಿಲ್ಲ’ ಎಂದು ಕೆಲವರು ಪ್ರತಿಪಾದಿಸಿದ್ದರು. ಮುಖ್ಯಮಂತ್ರಿಗಳೂ ಇದೇ ಪ್ರತಿಕ್ರಿಯೆ ನೀಡಿದ್ದರು.

2012ರಲ್ಲಿ ಮುಖ್ಯಮಂತ್ರಿ ಆಗಿದ್ದ ಡಿ.ವಿ. ಸದಾನಂದಗೌಡ ತಮ್ಮ ಬಜೆಟ್‌ನಲ್ಲಿ ನವೆಂಬರ್‌ 1 ರಂದು ರಾಜ್ಯದ ಎಲ್ಲ ಸರ್ಕಾರಿ ಕಚೇರಿ, ಶಾಲಾ– ಕಾಲೇಜುಗಳಲ್ಲಿ ಕನ್ನಡ ಧ್ವಜಾರೋಹಣ ಕಡ್ಡಾಯ ಎಂದು ಘೋಷಿಸಿದ್ದರು. ಇದಕ್ಕೆ ಪೂಕರವಾಗಿ ಸುತ್ತೋಲೆಯನ್ನೂ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಪ್ರಕಾಶ್‌ ಶೆಟ್ಟಿ ಎಂಬುವರು ಸಲ್ಲಿಸಿದ ಪಿಐಎಲ್‌ ವಿಚಾರಣೆ ನಡೆಸಿದ ಹೈಕೋರ್ಟ್‌ ಕನ್ನಡ ಧ್ವಜ ಅಧಿಕೃತವೇ ಎಂದು ಕೇಳಿ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿತ್ತು. ಆನಂತರ ಸುತ್ತೋಲೆ ವಾಪಸ್‌ ಪಡೆಯಲಾಗಿದೆ ಎಂದು ಸರ್ಕಾರ ಕೋರ್ಟ್‌ಗೆ ತಿಳಿಸಿತ್ತು.

ಪ್ರತಿಕ್ರಿಯಿಸಿ (+)