ಭಾನುವಾರ, ಡಿಸೆಂಬರ್ 8, 2019
25 °C

ರಾಜ್ಯಕ್ಕೆ ಧಾನ್ಯ ಹಂಚಿಕೆಗೆ ಕೇಂದ್ರ ಅಂಕುಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯಕ್ಕೆ ಧಾನ್ಯ ಹಂಚಿಕೆಗೆ ಕೇಂದ್ರ ಅಂಕುಶ

ನವದೆಹಲಿ: ಕರ್ನಾಟಕದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಿಗೆ ಆಹಾರ ಧಾನ್ಯ ಹಂಚಿಕೆಯನ್ನು ನಾಲ್ಕು ತಿಂಗಳಿಂದ ಕೇಂದ್ರ ಸರ್ಕಾರ ನಿಲ್ಲಿಸಿದೆ. ಬಡವರಿಗೆ ನೀಡಬೇಕಿದ್ದ ಈ ಆಹಾರಧಾನ್ಯವನ್ನು ಕರ್ನಾಟಕವು ಬೇರೆ ಉದ್ದೇಶಗಳಿಗೆ ಬಳಸಿದೆ ಎಂಬ ಅನುಮಾನ ಈ ಕ್ರಮಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಮಾಜ ಕಲ್ಯಾಣ ಯೋಜನೆಗಳ ಅಡಿಯಲ್ಲಿ ವೃದ್ಧಾಶ್ರಮಗಳು, ಭಿಕ್ಷುಕರ ಪುನರ್ವಸತಿ ಕೇಂದ್ರಗಳು, ನಿರಾಶ್ರಿತ ಕೇಂದ್ರಗಳು ಮತ್ತು ವಿದ್ಯಾರ್ಥಿ ನಿಲಯಗಳಿಗಾಗಿ ಪ್ರತಿ ವರ್ಷ ರಾಜ್ಯಕ್ಕೆ ಕೇಂದ್ರವು 65,714 ಟನ್‌ ಆಹಾರ ಧಾನ್ಯವನ್ನು ಮಂಜೂರು ಮಾಡುತ್ತಿದೆ.

ಈ ಆಹಾರಧಾನ್ಯಗಳ ಫಲಾನುಭವಿಗಳ ವಿವರವನ್ನು ರಾಜ್ಯವು ಕೊಡಬೇಕು ಎಂದು ಕೇಂದ್ರ ಕೇಳಿತ್ತು. ಆದರೆ ಕರ್ನಾಟಕದಿಂದ ಈ ಪಟ್ಟಿ ಬಂದಿಲ್ಲ ಹಾಗಾಗಿ ಹಂಚಿಕೆ ನಿಲ್ಲಿಸಲಾಗಿದೆ. ಫಲಾನುಭವಿಗಳ ವಿವರ ದೊರೆತ ಕೂಡಲೇ ಧಾನ್ಯ ಹಂಚಿಕೆ ಮಾಡಲಾಗುವುದು ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೃದ್ಧಾಶ್ರಮಗಳಂತಹ ಸಂಸ್ಥೆಗಳು ಮತ್ತು ವಿದ್ಯಾರ್ಥಿ ನಿಲಯಗಳಿಗೆ ಎರಡು ಪ್ರತ್ಯೇಕ ಯೋಜನೆಗಳ ಮೂಲಕ ಕೇಂದ್ರವು ಆಹಾರ ಧಾನ್ಯ ಮಂಜೂರು ಮಾಡುತ್ತಿತ್ತು. ವಿತರಣೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರುವ ಉದ್ದೇಶದಿಂದ ಕಳೆದ ಸೆಪ್ಟೆಂಬರ್‌ನಲ್ಲಿ ಈ ಎರಡೂ ಯೋಜನೆಗಳನ್ನು ವಿಲೀನಗೊಳಿಸಲಾಗಿತ್ತು. ಬಳಿಕ, ಈ ಧಾನ್ಯಗಳನ್ನು ಬಳಸುವ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳು ಹಾಗೂ ಫಲಾನುಭವಿಗಳ ಪಟ್ಟಿ ನೀಡುವಂತೆ ಕೇಂದ್ರ ಸೂಚಿಸಿತ್ತು.

ಫಲಾನುಭವಿಗಳ ವಿವರ ನೀಡಿಕೆ ಅತ್ಯಂತ ತುರ್ತಾಗಿ ಆಗಬೇಕಾದ ಕೆಲಸ ಎಂದು ಕರ್ನಾಟಕದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ಹಾಗಿದ್ದರೂ ಮಾಹಿತಿ ಬಂದಿಲ್ಲ ಎಂದು ಕೇಂದ್ರದ ಅಧಿಕಾರಿಗಳು ದೂರಿದ್ದಾರೆ.

ಪೂರೈಕೆ ಸ್ಥಗಿತಕ್ಕೆ ಕಾರಣವೇನು ಎಂದು ಕೇಳಲು ಕರ್ನಾಟಕದ ಹಿರಿಯ ಅಧಿಕಾರಿಗಳು ದೆಹಲಿಗೆ ಬಂದಿದ್ದರು. ಅವರಿಗೂ ಕೇಂದ್ರದ ನಿಲುವನ್ನು ತಿಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

* ಫಲಾನುಭವಿಗಳ ಪಟ್ಟಿ ನೀಡಲು ಕೇಂದ್ರ ಸೂಚನೆ

ಧಾನ್ಯ ಸೋರಿಕೆ ತಡೆಗಾಗಿ ಈ ಕ್ರಮ

ಪ್ರತಿಕ್ರಿಯಿಸಿ (+)