ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೆವ ಚಳಿ ಲೆಕ್ಕಿಸದೆ ರಸ್ತೆಯಲ್ಲೇ ಮಲಗಿದರು

Last Updated 6 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕನಿಷ್ಠ ವೇತನಕ್ಕಾಗಿ ಆಗ್ರಹಿಸಿ ಮಂಗಳವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿರುವ ಬಿಸಿಯೂಟ ಕಾರ್ಯಕರ್ತೆಯರು ಸ್ವಾತಂತ್ರ್ಯ ಉದ್ಯಾನ ಬಳಿಯ ರಸ್ತೆಯಲ್ಲಿ ಮಲಗಿ, ಕೊರೆವ ಚಳಿಯಲ್ಲಿಯೇ ರಾತ್ರಿ ಕಳೆದರು.

ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ನೇತೃತ್ವದಲ್ಲಿ ಬೆಳಿಗ್ಗೆಯಿಂದಲೇ ಧರಣಿ ನಡೆಯುತ್ತಿತ್ತು. ಸಂಜೆಯಾಗುತ್ತಿದ್ದಂತೆ ಯಾರೊಬ್ಬರೂ ಮನೆಗೆ ವಾಪಸ್ ಹೋಗದೆ ಉದ್ಯಾನದ ಅಕ್ಕ–ಪಕ್ಕದ ರಸ್ತೆಗಳಲ್ಲಿ ಹಾಗೂ ಪುಟ್‌ಪಾತ್‌ ಮೇಲೆ ಕುಳಿತು ಧರಣಿ ನಡೆಸಿದರು. ಕತ್ತಲಾಗುತ್ತಿದ್ದಂತೆ ರಸ್ತೆಯಲ್ಲೇ ಮಲಗಿದರು.

ಕೆಲವರಿಗೆ ನೆಲವೇ ಹಾಸಿಗೆಯಾಗಿತ್ತು. ಇನ್ನೂ ಕೆಲವರಿಗೆ ಆಗಸವೇ ಹೊದಿಕೆಯಾಗಿತ್ತು. ತಮ್ಮೊಂದಿಗೆ ಕರೆತಂದಿದ್ದ ಮಕ್ಕಳನ್ನೂ ರಸ್ತೆಯಲ್ಲೇ ಮಲಗಿಸಿದ್ದು ಕಂಡುಬಂತು.

ಮಧ್ಯಾಹ್ನ ರಸ್ತೆಯಲ್ಲಿ ಊಟ ಮಾಡಿ, ತ್ಯಾಜ್ಯವನ್ನೆಲ್ಲ ರಸ್ತೆ ಪಕ್ಕವೇ ಎಸೆಯಲಾಗಿತ್ತು. ಆ ತ್ಯಾಜ್ಯದ ಪಕ್ಕವೇ ಹಲವರು ಮಲಗಿದ್ದರು. ದುರ್ವಾಸನೆ ಹಾಗೂ ಸೊಳ್ಳೆ ಕಾಟದಿಂದ ಕಿರಿಕಿರಿ ಅನುಭವಿಸಿದರು. ಸ್ಥಳದಲ್ಲಿ ಶೌಚಾಲಯಗಳ ಕೊರತೆ ಇದ್ದಿದ್ದರಿಂದ, ಕಾರ್ಯಕರ್ತೆಯರು ತೊಂದರೆ ಅನುಭವಿಸಿದರು.

‘ಸರ್ಕಾರ ಬೇಡಿಕೆಗಳನ್ನು ಈಡೇರಿಸಲು ಆಸಕ್ತಿ ತೋರಿಲ್ಲ. ಈಗ ರಸ್ತೆಯಲ್ಲಿ ನಾವು ಮಲಗಲು ಸರ್ಕಾರವೇ ಕಾರಣ. ಇಲ್ಲಿ ಯಾವುದೇ ಮೂಲಸೌಕರ್ಯವೂ ಇಲ್ಲ. ನಮ್ಮ ಆರೋಗ್ಯದಲ್ಲಿ ಏರುಪೇರಾದರೆ ಅದಕ್ಕೆ ಸರ್ಕಾರವೇ ಹೊಣೆ’ ಎಂದು ತೀರ್ಥಹಳ್ಳಿಯ ಎಂ.ಶೈಲಜಾ ಹೇಳಿದರು.

ಮಧ್ಯಾಹ್ನ ಇಬ್ಬರು ಅಸ್ವಸ್ಥ: ಧರಣಿಯಲ್ಲಿ ಭಾಗಿಯಾಗಿದ್ದ ಹಾವೇರಿಯ ಲಕ್ಷ್ಮಮ್ಮ ಹಾಗೂ ರಾಮನಗರದ ನಿರ್ಮಲಾ ಅವರು ಮಧ್ಯಾಹ್ನ ಅಸ್ವಸ್ಥಗೊಂಡರು. ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಯಕರ್ತೆಯರು ಭಾಗಿಯಾಗಿದ್ದಾರೆ. ಬೇಡಿಕೆ ಈಡೇರಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ, ಕೆಲವರು ಪ್ರತಿಭಟನೆಯ ಭಾಗವಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಅವರನ್ನು ಪೊಲೀಸರು ತಡೆದರು.

ಮುರಿದು ಬಿದ್ದ ಸಚಿವರ ಸಂಧಾನ: ಪ್ರತಿಭಟನಾಕಾರರನ್ನು ಭೇಟಿಯಾದ ತನ್ವೀರ್ ಸೇಠ್, ‘ಕಾರ್ಯಕರ್ತೆಯರ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು. ಅಧಿವೇಶನ ಮುಕ್ತಾಯದ ವರೆಗೆ ತಾಳ್ಮೆಯಿಂದ ಇದ್ದು, ಪ್ರತಿಭಟನೆ ಕೈಬಿಡಿ’ ಎಂದು ಮನವಿ ಮಾಡಿದರು.

ಅದಕ್ಕೆ ಒಪ್ಪದ ಕಾರ್ಯಕರ್ತೆಯರು, ‘ಪ್ರತಿ ಬಾರಿ ಕೇವಲ ಭರವಸೆ ನೀಡುತ್ತಿದ್ದೀರಿ. ಈ ಬಾರಿ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯವಾಡಿ’ ಎಂದು ಒತ್ತಾಯಿಸಿದರು.

‘ಸಭೆ ನಡೆಸುವ ಬಗ್ಗೆ ಅಧಿಕಾರಿಗಳು ಪತ್ರದ ಮೂಲಕ ಭರವಸೆ ನೀಡಿದ್ದಾರೆ. ಆದರೆ, ಸಭೆ ಆಯೋಜಿಸುವ ದಿನವನ್ನು ತಿಳಿಸಿಲ್ಲ. ಹೀಗಾಗಿ, ಧರಣಿ ಮುಂದುವರೆಸಿದ್ದೇವೆ’ ಎಂದು ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಎ.ಚಂದ್ರು ಹೇಳಿದರು.

ಪ್ರಮುಖ ಬೇಡಿಕೆಗಳು

* ತಮಿಳುನಾಡು ಮಾದರಿಯಲ್ಲಿ ಕಾಯಂ ನೌಕರರು ಎಂದು ಪರಿಗಣಿಸಬೇಕು

* ಇಎಸ್‌ಐ ಹಾಗೂ ಭವಿಷ್ಯ ನಿಧಿ, ಗ್ರಾಚ್ಯುಯಿಟಿ ಸೌಲಭ್ಯ ನೀಡಬೇಕು

*  26 ವಾರಗಳ ಸಂಬಳ ಸಹಿತ ಹೆರಿಗೆ ರಜೆ ನೀಡಬೇಕು.

* ಕರ್ತವ್ಯದಲ್ಲಿದ್ದಾಗ ದುರ್ಮರಣಕ್ಕೀಡಾದಾಗ ₹2 ಲಕ್ಷ ಪರಿಹಾರ ನೀಡಬೇಕು.

* ₹ 1 ಲಕ್ಷದ ವರೆಗೆ ಆರೋಗ್ಯ ವಿಮೆ ಜಾರಿ ಮಾಡಬೇಕು

* ನಿಗದಿತ ಸಮಯಕ್ಕೆ ಭತ್ಯೆ, ಸಂಬಳ ಸಹಿತ ರಜೆ ನೀಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT