ಧ್ವನಿ ಆಧಾರಿತ ಲಿಂಗತಾರತಮ್ಯವೂ ಇದೆ

7

ಧ್ವನಿ ಆಧಾರಿತ ಲಿಂಗತಾರತಮ್ಯವೂ ಇದೆ

Published:
Updated:
ಧ್ವನಿ ಆಧಾರಿತ ಲಿಂಗತಾರತಮ್ಯವೂ ಇದೆ

ಬೆಂಗಳೂರು: ‘ಬಸ್ಸಿನಲ್ಲಿ ಒಮ್ಮೆ ಪ್ರಯಾಣಿಸುತ್ತಿದ್ದೆ. ಅಮ್ಮನಿಂದ ಮೊಬೈಲ್‌ಗೆ ಬಂದ ಕರೆ ಸ್ವೀಕರಿಸಿ ಮಾತನಾಡಲಾರಂಭಿಸಿದೆ. ನನ್ನ ಧ್ವನಿ ಕೇಳಿದ್ದೇ ತಡ ಪಕ್ಕದಲ್ಲಿ ಕುಳಿತ್ತಿದ್ದ ಸಹ ಪ್ರಯಾಣಿಕ ಎದ್ದು ಬೇರೆ ಸೀಟಿಗೆ ಹೋಗಿ ಕುಳಿತುಕೊಂಡ...’

ಇದು ಲೈಂಗಿಕ ಅಲ್ಪಸಂಖ್ಯಾತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಚಾಂದಿನಿ ಅವರು ‘ಲೋಕ ಕಾಣದ ಲೋಕ’ ದೇಸಿ ಕಮ್ಮಟದಲ್ಲಿ ತೆರೆದಿಟ್ಟ ಸ್ವ ಅನುಭವದ ಕಥನ.

ಕನ್ನಡ ಪುಸ್ತಕ ಪ್ರಾಧಿಕಾರ ನಗರದಲ್ಲಿ ಆಯೋಜಿಸಿದ್ದ ಎರಡು ದಿನಗಳ ವಿಚಾರ ಸಂಕಿರಣದಲ್ಲಿ ‘ಮಂಗಳಮುಖಿಯರು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು’ ಗೋಷ್ಠಿಯಲ್ಲಿ ಮಾತನಾಡಿದರು.

‘ಧ್ವನಿ ಆಧರಿಸಿ ಲಿಂಗತಾರತಮ್ಯ ಮಾಡುವುದರಿಂದ ನಮಗೆಷ್ಟು ನೋವಾಗಬಹುದು, ಮನಸಿನ ಮೇಲೆ ಎಂತಹ ಪರಿಣಾಮ ಬೀರಬಹುದು, ನಾವೆಷ್ಟು ಖಿನ್ನತೆಗೆ ಒಳಗಾಗಬಹುದೆಂದು ಈ ಜನ, ಈ ಸಮಾಜ ಎಂದಾದರೂ ಯೋಚಿಸಿದೆಯೇ? ಸಮಾಜ ಇನ್ನೂ ಬದಲಾಗುತ್ತಿಲ್ಲ’ ಎಂದು ನೋವು ತೋಡಿಕೊಂಡರು.

‘ನಾವೆಲ್ಲರೂ ದಲಿತ ಸಮುದಾಯದಿಂದ ಬಂದವರು. ನಮಗೆ ಜಾತಿ ಮುಖ್ಯ ಅಲ್ಲವೇ ಅಲ್ಲ. ಆದರೆ, ಬೆಂಗಳೂರಿನಲ್ಲಿ ನಮ್ಮಗಳ ಮೇಲೆ ಜಾತಿ ಮತ್ತು ಭಾಷೆ ಆಧಾರದಲ್ಲಿ ನಮ್ಮ ಸಮುದಾಯದವರಿಂದಲೇ ದೌರ್ಜನ್ಯ ಎಸಗುತ್ತಿರುವ ಬೆಳವಣಿಗೆ ನಡೆಯುತ್ತಿದೆ’ ಎಂದರು.

‘ಲೈಂಗಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳಿಗೆ ತಿಲಾಂಜಲಿ ಇಡುವ ಸಂದರ್ಭ ಬಂದಿದೆ. ರಾಜ್ಯ ಸರ್ಕಾರ ಲೈಂಗಿಕ ಅಲ್ಪಸಂಖ್ಯಾತರ ಕಾನೂನು ಜಾರಿಗೆ ತಂದಿದೆ. ನಮ್ಮನ್ನೂ ಮನುಷ್ಯರಂತೆ ಪರಿಗಣಿಸುವ, ನಮ್ಮ ಮೇಲೆ ದೌರ್ಜನ್ಯ ನಡೆದರೆ ಠಾಣೆಗಳಿಗೆ ದೂರು ನೀಡುವ ಕಾನೂನು ಇದೆ. ಇದು ಸರಿಯಾಗಿ ಜಾರಿಯಾದರೆ ನಾವು ಸಹ ಎಲ್ಲರಂತೆ ಘನತೆಯಿಂದ ಬದುಕಬಹುದು’ ಎಂದರು.

ಡಾ.ಕೆ.ಷರೀಫಾ, ‘ಹೆಣ್ಣಲ್ಲ, ಗಂಡಲ್ಲ ಎನ್ನುವುದು ಮುಖ್ಯವಲ್ಲ. ಎಲ್ಲರೂ ಮೊದಲು ಮನುಷ್ಯರಾಗಬೇಕಿದೆ. ಮಾನವೀಯತೆಯಿಂದ ಬದುಕುವಂತಹ ಸಮಾಜ ಕಟ್ಟುವ ಹೊಣೆ ಎಲ್ಲರ ಮೇಲಿದೆ’ ಎಂದರು.

ವಕೀಲೆ ಮಂಜುಳಾ ಮಾನಸ ಮಾತನಾಡಿ, ‘ಜಡ್ಡುಗಟ್ಟಿರುವ ಮತ್ತು ದರಿದ್ರಾವಸ್ಥೆಯಲ್ಲಿರುವ ಸಮಾಜವನ್ನು ದೇವರಿಂದಲೂ ಸರಿಪಡಿಸಲಾಗುವುದಿಲ್ಲ. ಇದಕ್ಕೆ ಮಹಿಳೆಯರ ಮನಸ್ಥಿತಿ ಬದಲಾಗಬೇಕು. ನಮ್ಮ ದಾರಿಯನ್ನು ನಾವೇ ಕಂಡುಕೊಳ್ಳಬೇಕು. ಸರ್ಕಾರ ಮಹಿಳೆಯರಿಗೆ ನೀಡಿರುವ ಸೌಲಭ್ಯಗಳು ಭಿಕ್ಷೆಯಲ್ಲ. ಅವು ನಮ್ಮ ಹಕ್ಕುಗಳು’ ಎಂದರು.

* ಅಪರಾಧ ನಡೆಯುತ್ತಿದ್ದಾಗ ಅದಕ್ಕೆ ಯಾರು ಹೊಣೆಗಾರರು ಎನ್ನುವುದಕ್ಕಿಂತ ಮೂಕಪ್ರೇಕ್ಷಕರಾದವರು ಕೂಡ ನೈತಿಕ ಹೊಣೆ ಹೊರಬೇಕು 

 –ಸುಶೀಲಾ ಚಿಂತಾಮಣಿ, ಲೈಂಗಿಕ ಅಲ್ಪಸಂಖ್ಯಾತರ ಪರವಾದ ಹೋರಾಟಗಾರ್ತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry