ಸೋಮವಾರ, ಡಿಸೆಂಬರ್ 9, 2019
24 °C
6 ದಿನದಲ್ಲಿ ₹ 10 ಲಕ್ಷ ಕೋಟಿ ಕರಗಿದ ಸಂಪತ್ತು

ಜಾಗತಿಕ ಪ್ರಭಾವಕ್ಕೆ ನಲುಗಿದ ಷೇರುಪೇಟೆ

Published:
Updated:
ಜಾಗತಿಕ ಪ್ರಭಾವಕ್ಕೆ ನಲುಗಿದ ಷೇರುಪೇಟೆ

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ 6ನೇ ವಹಿವಾಟಿನ ದಿನವೂ ಸೂಚ್ಯಂಕ ಭಾರಿ ಇಳಿಕೆ ಕಂಡಿದೆ.

ಈ ದಿನಗಳಲ್ಲಿ ಹೂಡಿಕೆದಾರರ ಸಂಪತ್ತಿನಲ್ಲಿ ₹ 10 ಲಕ್ಷ ಕೋಟಿ  ಕೊಚ್ಚಿ ಹೋಗಿದ್ದು, ಷೇರುಪೇಟೆಯ ಬಂಡವಾಳ ಮೌಲ್ಯ ₹ 145 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ. ಮಂಗಳವಾರ ಒಂದೇ ದಿನ ₹ 2.7 ಲಕ್ಷ ಕೋಟಿಯಷ್ಟು ಸಂಪತ್ತು ಕರಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ದಿನದ ವಹಿವಾಟಿನ ಆರಂಭದಲ್ಲಿ 1,275 ಅಂಶ ಕುಸಿತ ಕಾಣುವ ಮೂಲಕ 34,000 ಕ್ಕಿಂತಲೂ ಕೆಳಕ್ಕೆ ಇಳಿದಿತ್ತು. ನಂತರ ತುಸು ಚೇತರಿಕೆ ಕಂಡಿತಾದರೂ ಸಕಾರಾತ್ಮಕ ಮಟ್ಟಕ್ಕೆ ಮರಳಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 561 ಅಂಶಗಳ ನಷ್ಟದೊಂದಿಗೆ 34,196 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯಕಂಡಿತು.

ಜನವರಿ 5 ರ ನಂತರ ವಹಿವಾಟಿನ ಕನಿಷ್ಠ ಮಟ್ಟದ ಅಂತ್ಯ ಇದಾಗಿದೆ. ಅಂದು 34,154 ಅಂಶಗಳಲ್ಲಿ ‘ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದ ದೇಶಿ ಷೇರುಪೇಟೆಯಲ್ಲಿಯೂ ನಕಾರಾತ್ಮಕ ವಹಿವಾಟು ನಡೆಯಿತು. ದೀರ್ಘಾವಧಿಯ ಬಂಡವಾಳ ಗಳಿಕೆಗೆ ತೆರಿಗೆ ವಿಧಿಸುವ ಪ್ರಸ್ತಾವ ಮತ್ತು ವಿತ್ತೀಯ ಕೊರತೆ ಮಿತಿ ಹೆಚ್ಚಳಗೊಂಡಿರುವುದು ಹೂಡಿಕೆ ಚಟುವಟಿಕೆ ತಗ್ಗಿಸಿದೆ. ಹೀಗಿದ್ದರೂ ಮೂರನೇ ತ್ರೈಮಾಸಿಕದಲ್ಲಿ ಕಂಪನಿಗಳ ಹಣಕಾಸು ಸಾಧನೆ ಮಾರುಕಟ್ಟೆ ನಿರೀಕ್ಷೆಯಂತೆಯೇ ಇದೆ. ಇದು ಕೆಲ ಷೇರುಗಳ ಖರೀದಿಗೆ ಉತ್ತೇಜನ ನೀಡಿದ್ದು, ನಷ್ಟದ ಪ್ರಮಾಣವನ್ನು ತುಸು ತಗ್ಗಿಸುವಂತಾಗಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಅಭಿಪ್ರಾಯಪಟ್ಟಿದ್ದಾರೆ.

ಪ್ರಮುಖ 30 ಕಂಪನಿಗಳಲ್ಲಿ 29 ಕಂಪನಿಗಳು ನಷ್ಟ ಕಂಡಿವೆ. ಟಾಟಾ ಸ್ಟೀಲ್‌ ಮಾತ್ರವೇ ಶೇ 0.06 ರಷ್ಟು ಗಳಿಕೆ ಕಂಡುಕೊಂಡಿದೆ.

ನಿಫ್ಟಿ: ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ ವಹಿವಾಟಿನ ಆರಂಭದ ಹಂತದಲ್ಲಿಯೇ 390 ಅಂಶ ಇಳಿಕೆ ಕಂಡಿತ್ತು. ನಂತರ ಇಳಿಕೆ ಪ್ರಮಾಣ ಕಡಿಮೆಯಾಗಿ, ವಹಿವಾಟಿನ ಅಂತ್ಯದ ವೇಳೆಗೆ 168 ಅಂಶ ನಷ್ಟದೊಂದಿಗೆ 10,498 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯವಾಯಿತು. ದಿನದ ವಹಿವಾಟಿನಲ್ಲಿ 10,276 ಅಂಶಗಳ ಗರಿಷ್ಠ ಮತ್ತು 10,594 ಅಂಶಗಳ ಗರಿಷ್ಠವನ್ನು ತಲುಪಿತ್ತು.

**

ಬಂಡವಾಳ ಗಳಿಕೆಗೆ ತೆರಿಗೆ: ಸರ್ಕಾರದ ಸಮರ್ಥನೆ

ದೀರ್ಘಾವಧಿಯ ಬಂಡವಾಳ ಗಳಿಕೆಗೆ ತೆರಿಗೆ ವಿನಾಯ್ತಿ ನೀಡುವುದರಿಂದ ಸಣ್ಣ ಹೂಡಿಕೆದಾರರಿಗೂ ಸಮಸ್ಯೆ ಆಗಲಿದೆ ಎಂದು ಹಣಕಾಸು ಕಾರ್ಯದರ್ಶಿ ಹಸ್ಮುಖ್ ಆಧಿಯಾ ಹೇಳಿದ್ದಾರೆ.

ದೀರ್ಘಾವಧಿಯ ಬಂಡವಾಳ ಗಳಿಕೆ ತೆರಿಗೆಯನ್ನು ಮತ್ತೆ ಜಾರಿಗೊಳಿಸಿರುವ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಅವರು, ‘ಲಾಭವನ್ನು ಸೃಷ್ಟಿಸುವ ಇತರೆ ಎಲ್ಲಾ ಸಂಪತ್ತಿನಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡುವುದಕ್ಕೆ ತೆರಿಗೆ ವಿಧಿಸಲಾಗುತ್ತಿದೆ. ಆದರೆ, ಷೇರುಪೇಟೆಯಲ್ಲಿ ವಿನಾಯ್ತಿ ನೀಡಲಾಗಿತ್ತು. ಇದರಿಂದ ಬೇಡಿಕೆ ಮತ್ತು ಪೂರೈಕೆ ಮದ್ಯೆ ಅಂತರ ಮೂಡಿತ್ತು’ ಎಂದು ಹೇಳಿದ್ದಾರೆ.

‘ತೆರಿಗೆ ವಿನಾಯ್ತಿಯಿಂದಾಗಿ ಷೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಆಗುತ್ತಿತ್ತು. ಹೂಡಿಕೆ ಹೆಚ್ಚಾದಂತೆಲ್ಲ ಸಂಪತ್ತಿನ ಮೌಲ್ಯವೂ ವೃದ್ಧಿಯಾಗುತ್ತದೆ. ಅದರೆ ಕೆಲವೊಮ್ಮೆ ಸಂಪತ್ತಿನ ಮೌಲ್ಯವು ಹೂಡಿಕೆ ಮಾಡುವ ಕಂಪನಿಯ ನೈಜ ಸಾಮರ್ಥ್ಯಕ್ಕೆ ಅನುಗುಣವಾಗಿ ಇರುವುದಿಲ್ಲ’ ಎಂದಿದ್ದಾರೆ..

ಪ್ರತಿಕ್ರಿಯಿಸಿ (+)