ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಜಯದ ಮೇಲೆ ಕಣ್ಣು

Last Updated 6 ಫೆಬ್ರುವರಿ 2018, 20:09 IST
ಅಕ್ಷರ ಗಾತ್ರ

ಕಿಂಬರ್ಲಿ, ದಕ್ಷಿಣ ಆಫ್ರಿಕಾ: ಜಯದೊಂದಿಗೆ ಉತ್ತಮ ಆರಂಭ ಮಾಡಿರುವ ಭಾರತ ಮಹಿಳೆಯರ ತಂಡದವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಕೈವಶ ಮಾಡಿಕೊಳ್ಳುವ ಭರವಸೆಯಿಂದ ಬುಧವಾರ ಕಣಕ್ಕೆ ಇಳಿಯಲಿದ್ದಾರೆ.

ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯಕ್ಕೆ ಇಲ್ಲಿ ಕಣ ಸಜ್ಜಾಗಿದ್ದು ಸಮಬಲ ಸಾಧಿಸಲು ಆತಿಥೇಯ ತಂಡವೂ ಪ್ರಯತ್ನಿಸಲಿರುವುದರಿಂದ ಭಾರಿ ಪೈಪೋಟಿ ನಿರೀಕ್ಷಿಸಲಾಗಿದೆ.

ಮಹಿಳೆಯರ ವಿಶ್ವಕಪ್‌ನಲ್ಲಿ ಅತ್ಯಪೂರ್ವ ಆಟವಾಡಿ ರನ್ನರ್ ಅಪ್‌ ಆದ ಮಿಥಾಲಿ ರಾಜ್ ಬಳಗ ಏಳು ತಿಂಗಳ ನಂತರವೂ ಅದೇ ಲಯದಲ್ಲಿ ಆಡಿ ಮೊದಲ ಪಂದ್ಯದಲ್ಲಿ ಸೋಮವಾರ 88 ರನ್‌ಗಳ ಜಯ ಗಳಿಸಿತ್ತು. ಈ ಸರಣಿಯಲ್ಲಿ ಗೆಲ್ಲುವ ತಂಡ 2021ರ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಗಳಿಸಲಿದೆ. ಈ ನಿಟ್ಟಿನಲ್ಲಿ ಸರಣಿಯ ಮಹತ್ವ ಹೆಚ್ಚಿದೆ.

ವಿಶ್ವಕಪ್ ನಂತರ ಯಾವುದೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡದಿದ್ದ ಭಾರತ ತಂಡ ಇಲ್ಲಿ ಹೇಗೆ ಆಡಲಿದೆ ಎಂಬ ಕುತೂಹಲ ಮೂಡಿತ್ತು. ಆದರೆ ವಿರಾಮದಿಂದ ತಮ್ಮೊಳಗಿನ ಕ್ರಿಕೆಟ್‌ಗೆ ಧಕ್ಕೆಯಾಗಲಿಲ್ಲ ಎನ್ನುವುದನ್ನು ತಂಡದ ಆಟಗಾರ್ತಿಯರು ಸಾಬೀತು ಮಾಡಿದ್ದರು.

ಸ್ಮೃತಿ ಮಂದಾನ ಅವರ 84 ರನ್‌ ಮತ್ತು ಮಿಥಾಲಿ ರಾಜ್ ಗಳಿಸಿದ 45 ರನ್‌ಗಳ ಬಲದಿಂದ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದ್ದ ತಂಡಕ್ಕೆ ಬೌಲರ್‌ಗಳು ಇನ್ನಷ್ಟು ಶಕ್ತಿ ತುಂಬಿದ್ದರು. ಕ್ರಮವಾಗಿ ನಾಲ್ಕು ಮತ್ತು ಮೂರು ವಿಕೆಟ್ ಪಡೆದ ವೇಗಿ ಜೂಲನ್ ಗೋಸ್ವಾಮಿ ಹಾಗೂ ಶಿಖಾ ಪಾಂಡೆ ಎದುರಾಳಿಗಳನ್ನು 125 ರನ್‌ಗಳಿಗೆ ಕೆಡವಿದ್ದರು. 22 ರನ್‌ಗಳಿಗೆ ಎರಡು ವಿಕೆಟ್ ಉರುಳಿಸಿದ ಲೆಗ್‌ ಬ್ರೆಕ್ ಬೌಲರ್ ಪೂನಮ್ ರಾವತ್ ಕೂಡ ಗಮನ ಸೆಳೆದಿದ್ದರು.

ಸರ್ವಾಂಗೀಣ ಆಟ ಆಡಲು ಸಾಧ್ಯವಾದ ಕಾರಣ ಬುಧವಾರವೂ ಗೆದ್ದು 2–0 ಮುನ್ನಡೆ ಸಾಧಿಸುವ ಭರವಸೆ ತಂಡದಲ್ಲಿ ಮೂಡಿದೆ.

ಬ್ಯಾಟಿಂಗ್ ವೈಫಲ್ಯಕ್ಕೆ ಉತ್ತರ ಹುಡುಕುವ ಯತ್ನ

ಅತ್ತ ದಕ್ಷಿಣ ಆಫ್ರಿಕಾ ತಂಡದವರು ಕಳೆದ ಪಂದ್ಯದಲ್ಲಿ ಬ್ಯಾಟಿಂಗ್‌ ಕಳಪೆಯಾಗಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾರೆ. ಆರಂಭದಲ್ಲಿ ಬೇಗನೇ ವಿಕೆಟ್‌ಗಳನ್ನು ಕಳೆದುಕೊಂಡ ಕಾರಣ ಅಗ್ರ ಕ್ರಮಾಂಕವನ್ನು ಬಲಿಷ್ಠಗೊಳಿಸಲು ತಂಡ ಶ್ರಮಿಸಲಿದೆ.

ಮಂದಾನ ಮತ್ತು ಮಿಥಾಲಿ ರಾಜ್ ನಡುವಿನ 99 ರನ್‌ಗಳ ಜೊತೆಯಾಟವನ್ನು ಮುರಿದ ನಂತರ ಬೇಗನೇ ವಿಕೆಟ್‌ಗಳನ್ನು ಕಬಳಿಸಲು ಆ ತಂಡಕ್ಕೆ ಸಾಧ್ಯವಾಗಿತ್ತು. ಆದ್ದರಿಂದ ಬೌಲಿಂಗ್ ವಿಭಾಗದ ಬಗ್ಗೆ ವ್ಯಾನ್ ಡೀಕರ್ಕ್ ಅವರಿಗೆ ಹೆಚ್ಚು ಆತಂಕವಿಲ್ಲ. ಹೀಗಾಗಿ ಬುಧವಾರದ ಪಂದ್ಯದಲ್ಲಿ ಬ್ಯಾಟಿಂಗ್‌ ವಿಭಾಗವನ್ನು ಬಲಪಡಿಸುವ ಕಡೆಗೆ ಹೆಚ್ಚು ಗಮನ ನೀಡಲಿದ್ದಾರೆ.

ತಂಡಗಳು

ಭಾರತ: ಮಿಥಾಲಿ ರಾಜ್‌ (ನಾಯಕಿ), ತಾನಿಯಾ ಭಾಟಿಯಾ (ವಿಕೆಟ್ ಕೀಪರ್‌), ಏಕ್ತಾ ಬಿಶ್ಟ್‌, ರಾಜೇಶ್ವರಿ ಗಾಯಕವಾಡ್‌, ಜೂಲನ್ ಗೋಸ್ವಾಮಿ, ಹರ್ಮನ್‌ಪ್ರೀತ್ ಕೌರ್‌, ವೇದಾ ಕೃಷ್ಣಮೂರ್ತಿ, ಸ್ಮೃತಿ ಮಂದಾನ, ಮೋನಾ ಮೇಶ್ರಮ್‌, ಶಿಖಾ ಪಾಂಡೆ, ಪೂನಮ್‌ ರಾವತ್‌, ಜೆಮಿಮಾ ರಾಡ್ರಿಗಸ್‌, ದೀಪ್ತಿ ಶರ್ಮಾ, ಪೂಜಾ ವಸ್ತ್ರಕಾರ್‌, ಸುಶ್ಮಾ ವರ್ಮಾ, ಪೂನಮ್ ಯಾದವ್‌.

ದಕ್ಷಿಣ ಆಫ್ರಿಕಾ: ಡೇನ್‌ ವ್ಯಾನ್ ನೀಕರ್ಕ್‌, ಮರಿನೆ ಕಪ್‌, ತ್ರಿಶಾ ಚೆಟ್ಟಿ, ಶಮ್ನಿಂ ಇಸ್ಮಾಯಿಲ್‌, ಅಯಬೋಂಗಾ ಖಾಕ, ಮಸಬಟಾ ಕ್ಲಾಸ್‌, ಸೂನ್ ಲೂಜ್‌, ಲಾರಾ ವೊಲ್ವಾರ್ಟ್‌, ಮಿಗ್ನಾನ್‌ ಡು ಪ್ರೀಜ್‌, ಲೆಜೆಲಿ ಲೀ, ಕ್ಲಾ ಟ್ರಯಾನ್‌, ಆ್ಯಂಡ್ರಿ ಸ್ಟೇಯ್ನ್‌, ರೈಸಿಬೆ ನೊಜಾಕೆ, ಜಿಂಟಲ್ ಮಾಲಿ.

ಪಂದ್ಯ ಆರಂಭ: ಮಧ್ಯಾಹ್ನ 1.30 (ಭಾರತೀಯ ಕಾಲಮಾನ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT