ಶುಕ್ರವಾರ, ಡಿಸೆಂಬರ್ 6, 2019
25 °C

ಅಳ್ನಾವರ ಗ್ರಾಮದೇವಿ ದೇವಸ್ಥಾನ ಉದ್ಘಾಟನೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಳ್ನಾವರ ಗ್ರಾಮದೇವಿ ದೇವಸ್ಥಾನ ಉದ್ಘಾಟನೆ ಇಂದು

ಬದುಕಿನ ಸಂಭ್ರಮದಲ್ಲಿ- ಕಷ್ಟದಲ್ಲಿ, ಮಳೆ ಬಂದಾಗ- ಬಾರದಿದ್ದಾಗ, ಕೈತುತ್ತು ಸಿಕ್ಕಾಗ- ತುತ್ತು ಅನ್ನಕ್ಕೂ ಪಡಿಪಾಟಲು ಪಡುವಾಗ, ಬಿದ್ದಾಗ-ಎದ್ದಾಗ... ಎಲ್ಲ ಹೊತ್ತಿಗೂ ರೈತಾಪಿ ಜನರಿಗೆ ಊರ ದೈವ ಕಣ್ಣ ಮುಂದಿರಬೇಕು. ಭಕ್ತರು ಊರಿನ ದೈವವನ್ನು ನೆನೆಯದೇ ಏನನ್ನೂ ಮಾಡರು. ಆ ದೈವ ಪ್ರೀತಿ- ಭಕ್ತಿಯ ಮೂರ್ತ ರೂಪವಾಗಿ ಅಳ್ನಾವರದ ಗ್ರಾಮದೇವಿಯ ನೂತನ ಮಂದಿರ ನಿರ್ಮಾಣವಾಗಿದೆ. ಹೊಸ ಮಂದಿರದಲ್ಲಿ ದೇವಿಯರ ಮೂರ್ತಿಯನ್ನು ಪ್ರತಿಷ್ಠಾಪಿಸುವ ಘಳಿಗೆಯನ್ನು ಕಣ್ತುಂಬಿಕೊಳ್ಳುವ ಸಡಗರದಲ್ಲಿ ಊರ ದೈವವೇ ಕಾಯುವಂತಿದೆ...

ಕಟ್ಟಿಗೆ ವ್ಯಾಪಾರಕ್ಕಾಗಿ ರಾಜ್ಯವಾಪಿ ಹೆಸರು ಮಾಡಿರುವ ಮಲೆನಾಡಿನ ಸೆರಗಿನ ಅಳ್ನಾವರ ಪಟ್ಟಣ ಹಲವು ಧಾರ್ಮಿಕ ತಾಣಗಳ ಪ್ರಭುತ್ವ ಸಾಧಿಸಿದೆ. ಅದರಲ್ಲಿ ಗ್ರಾಮದೇವಿ ದೇವಸ್ಥಾನಕ್ಕೆ ಪ್ರಮುಖ ಸ್ಥಾನ. ಪಟ್ಟಣದ ಎಲ್ಲ ವರ್ಗದ ಆರಾಧ್ಯ ದೇವಿಯರಾದ ಶ್ರೀ ಲಕ್ಷ್ಮಿ ಮತ್ತು ಶ್ರೀ ದುರ್ಗಾ ದೇವಿಯರ ಸಾನ್ನಿಧ್ಯದಲ್ಲಿ ಬದುಕಿನ ದುಃಖ ದುಮ್ಮಾನಗಳಿಗೆ ಮೊರೆ ಹೋಗಿ ಆರಾಧಿಸುವ ಜನರು ನೂತನ ದೇವಸ್ಥಾನದ ಉದ್ಘಾಟನೆಗಾಗಿ ಪಟ್ಟಣವನ್ನು ಸಿಂಗಾರಗೊಳಿಸುತ್ತಿದ್ದಾರೆ. ಸಹಸ್ರಾರು ಜನರ ಆಗಮನಕ್ಕಾಗಿ ಊರು ಸಜ್ಜಾಗಿದೆ.

ಸುಮಾರು ಒಂಬತ್ತು ದಶಕಗಳ ಹಿಂದೆ ನಿರ್ಮಿಸಿದ ಪುರಾತನ ದೇವಸ್ಥಾನದಲ್ಲಿ ಹೊಸ ದೇವಸ್ಥಾನ ಕಟ್ಟಲು ಭಕ್ತರು ಮುಂದಾಗಿ ಜೀರ್ಣೋದ್ಧಾರ ಸಮಿತಿ ರಚಿಸಿಕೊಂಡು ಮುಂದೆ ಸಾಗಿದರು. ಯಾವುದೇ ಸರ್ಕಾರದ ಅನುದಾನ ಪಡೆಯದೇ ಭಕ್ತರಿಂದಲೇ ಹಣ ಸಂಗ್ರಹಿಸಿ ನೋಡ ನೋಡುತ್ತಿದ್ದಂತೆ ಕೇವಲ ಒಂದು ವರ್ಷದ ಅಲ್ಪಾವಧಿಯಲ್ಲಿ ಬೃಹತ್ ಹಾಗೂ ಸುಂದರ ದೇವಸ್ಥಾನ ಸುಮಾರು ₹ 80 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿದೆ.

ಉದ್ಘಾಟನೆಯ ತಯಾರಿಯಲ್ಲಿ ತೊಡಗಿರುವ ಹಿರಿಯರು ಆಮಂತ್ರಣ ಪತ್ರಿಕೆ ನೀಡುವಲ್ಲಿ ನಿರತರಾಗಿದ್ದಾರೆ. ಪಟ್ಟಣದ ತುಂಬೆಲ್ಲ ಸ್ವಾಗತ ಕಮಾನುಗಳು, ಕಟೌಟ್‌ಗಳು, ಬ್ಯಾನರ್‌ಗಳು ರಾರಾಜಿಸತೊಡಗಿವೆ.

ದೇವಸ್ಥಾನಗಳು ಸುಣ್ಣ ಬಣ್ಣ ಬಳಿದುಕೊಂಡು ಸಿಂಗಾರಗೊಂಡಿದ್ದು, ಪಟ್ಟಣಕ್ಕೆ ದೈವಕಳೆ ಬಂದಿದೆ. ಗ್ರಾಮದೇವಿ ದೇವಸ್ಥಾನದಲ್ಲಿ ದೇವಿಯರ ಮೂರ್ತಿಗಳನ್ನು ಪುನರ್‌ ಪ್ರತಿಷ್ಠಾಪಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೇವಿಯರ ಮೂರ್ತಿಗಳನ್ನು 1935ರಲ್ಲಿ ನಿರ್ಮಿಸಲಾಗಿತ್ತು ಎಂದು ಹಿರಿಯರು ಹೇಳುತ್ತಾರೆ.

ದೇವಸ್ಥಾನದ ಮೇಲುಭಾಗದ ಗೋಪುರ ಹಾಗೂ ಕಳಸ ಬಾಹ್ಯ ಸೌಂದರ್ಯಕ್ಕೆ ಮುಕುಟಪ್ರಾಯವಿದ್ದಂತೆ ಭಾಸವಾಗುತ್ತಿದೆ. ಸುಮಾರು ₹7 ಲಕ್ಷ ವೆಚ್ಚದಲ್ಲಿ 70 ಟನ್ ತೂಕದ ಕಳಸವನ್ನು ಹಲಗಾ ಗ್ರಾಮದ ಪ್ರಕಾಶ ಜಾಸೋರೆ ನಿರ್ಮಿಸಿಕೊಟ್ಟಿದ್ದಾರೆ.

ದೇವಿಯ ಗರ್ಭ ಗುಡಿಯ ಮುಂದಿನ ಅಲಂಕಾರ ನೋಡುತ್ತಿದ್ದಂತೆ ಮನಸ್ಸಿಗೆ ಆನಂದ ಮೂಡುತ್ತಿದೆ. ಇತಿಹಾಸ ಸಾರುವ ಕಟ್ಟಗೆಯಲ್ಲಿ ಸಂಪೂರ್ಣ ಅಲಂಕಾರ ಮಾಡಿದ್ದು, ಕಟ್ಟಿಗೆ ನಾಡಿನ ಗತ ವೈಭವನ್ನು ಸಾರುವಂತಿದೆ. ಕಟ್ಟಿಗೆಯಲ್ಲಿ ಸೂಕ್ಷ್ಮ ಕೆತ್ತನೆಯ ಸೊಗಸು ನೋಡುಗರನ್ನು ಭಾವ ಪರವಶ ಗೊಳಿಸುತ್ತಿದೆ. ಅಷ್ಟ ಲಕ್ಷ್ಮಿ, ಸೂರ್ಯ ನಾರಾಯಣ, ಶಿವಾಜಿ , ಬಸವೇಶ್ವರ, ದುರ್ಗಾ ದೇವಿ ಹಾಗೂ ಹಲವಾರು ದೇವತೆಗಳ ಚಿತ್ರಗಳನ್ನು ಮನಮೋಹಕವಾಗಿ ಚಿತ್ರಿಸಲಾಗಿದೆ. ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಗಣಕೀಕೃತ ವ್ಯವಸ್ಥೆಯಲ್ಲಿ ಕಟ್ಟೆಯ ಕೆತ್ತನೆ ಮಾಡಲಾಗಿದ್ದು ವಿಶೇಷ. ದೇವಸ್ಥಾನದ ಎದುರು ಸುಂದರವಾದ ಗಜಗಳು ಭಕ್ತರನ್ನು ಸ್ವಾಗತಿಸಲು ಸೊಂಡಿಲು ಎತ್ತಿ ನಿಂತಿವೆ. ಒಟ್ಟಾರೆ ದೇವಸ್ಥಾನ ಮಾತ್ರವಲ್ಲ ಇಡೀ ಊರೇ ಸಂಭ್ರಮಿಸುತ್ತಿದೆ.

ಕಾರ್ಯಕ್ರಮಗಳ ವಿವರ

ಬುಧವಾರ ಬೆಳಿಗ್ಗೆ 7 ಗಂಟೆಗೆ ಕುಂಭ ಪ್ರವೇಶ, ಪುಣ್ಯಾಹವಾಚನ, ದೇವತಾ ಸ್ಥಾಪನಾ, ವಾಸ್ತು ಹೋಮ, ಶ್ರೀ ದೇವಿಯರ ಮೂರ್ತಿ ಪ್ರತಿಷ್ಠಾಪನೆ, ಪೂಜೆ, ನೈವೇದ್ಯ, ಮಹಾ ಮಂಗಳಾರತಿ, ಹಾಗೂ ಗ್ರಾಮದ ಎಲ್ಲಾ ದೇವಸ್ಥಾನಗಳಲ್ಲಿ ದೀಪೋತ್ಸವ ನಡೆಯಲಿದೆ. ಅಂದು ಮಧ್ಯಾಹ್ನ 12 ಗಂಟೆಗೆ ಕಳಸಾರೋಹಣ ಕಾರ್ಯಕ್ರಮ ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಹಂಡಿ ಬಡಂಗನಾಥ ಕ್ಷೇತ್ರದ ಪೀರ ಶಿವಯೋಗಿ ಪ್ರಕರನಾಥ ಮಹಾರಾಜರಿಂದ ನಡೆಯಲಿದೆ.

ಗುರವಾರ ಪುಣ್ಯ ಹವನ, ಸಪ್ತಶತಿ ಪಾರಾಯಣ, ಚಂಡಿ ಹೋಮ ಹಾಗೂ ಧಾರ್ಮಿಕ ವಿಧಿಗಳು ಬೆಳಿಗ್ಗೆ 7 ರಿಂದ ಆರಂಭವಾಗುತ್ತವೆ. ಮಧ್ಯಾಹ್ನ 3 ಗಂಟೆಗೆ ಸಚಿವ ಸಂತೋಷ ಲಾಡ್ ಸೇರಿದಂತೆ ಗಣ್ಯರ ಹಾಗೂ ದಾನಿಗಳ ಸತ್ಕಾರ ಕಾರ್ಯ ನಡೆಯಲಿದೆ.

ಶುಕ್ರವಾರ  ದೇವಿಯರಿಗೆ ಅಭಿಷೇಕ, ಅಲಂಕಾರ ಪೂಜೆ, ಕುಂಕುಮಾರ್ಚನೆ ಹಾಗೂ ಶ್ರೀದೇವಿಯರಿಗೆ ಸಾರ್ವಜನಿಕರಿಂದ ಊಡಿ ತುಂಬುವ ಕಾರ್ಯಕ್ರಮ ಬೆಳಿಗ್ಗೆ 7 ರಿಂದ ಸಾಯಂಕಾಲದವರೆಗೆ ನಡೆಯಲಿದೆ. ಮಧ್ಯಾಹ್ನ ದೇವಿ ಜಾತ್ರಾ ಸ್ಥಳದಲ್ಲಿ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ಥಾನ ಜೀರ್ಣೋದ್ಧಾರ ಸಮಿತಿ ತಿಳಿಸಿದೆ.

ರಾಜಶೇಖರ ಸುಣಗಾರ

ಪ್ರತಿಕ್ರಿಯಿಸಿ (+)