ಕಾರ್ಮಿಕನ ರಕ್ಷಿಸಿ, ಹಣ ಮರಳಿಸಿದ ರೈಲ್ವೆ ಪೊಲೀಸರು

7

ಕಾರ್ಮಿಕನ ರಕ್ಷಿಸಿ, ಹಣ ಮರಳಿಸಿದ ರೈಲ್ವೆ ಪೊಲೀಸರು

Published:
Updated:
ಕಾರ್ಮಿಕನ ರಕ್ಷಿಸಿ, ಹಣ ಮರಳಿಸಿದ ರೈಲ್ವೆ ಪೊಲೀಸರು

ಮಂಗಳೂರು: ನಗರದ ಸೆಂಟ್ರಲ್ ರೈಲು ನಿಲ್ದಾಣದ ಆವರಣದಲ್ಲಿ ಮೂಲೆಯ ಬೇ ಲೈನ್‌ ಬಳಿ ಹಳಿಯ ಪಕ್ಕದಲ್ಲಿ ಭಾನುವಾರ ಬೆಳಿಗ್ಗೆ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಕಾರ್ಮಿಕರೊಬ್ಬರನ್ನು ರಕ್ಷಿಸಿರುವ ರೈಲ್ವೆ ಸುರಕ್ಷಾ ದಳದ ಪೊಲೀಸರು, ಆ ವ್ಯಕ್ತಿಯ ಬಳಿ ಇದ್ದ ₹ 70,240 ನಗದನ್ನು ಸುರಕ್ಷಿತವಾಗಿ ಮರಳಿಸಿದ್ದಾರೆ.

ಬಾಗಲಕೋಟೆಯ ಹೆಗೆದಾಳ್ ನಿವಾಸಿ ಶಿವಾನಂದ ಅಮರಾವತಿ ರಕ್ಷಣೆ ಗೊಳಗಾದವರು. ರೈಲ್ವೆ ಪೊಲೀಸರ ನಡೆಗೆ ಸಾರ್ವಜನಿಕರ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ರೈಲ್ವೆ ಸುರಕ್ಷಾ ದಳದ ಇನ್‌ಸ್ಪೆಕ್ಟರ್‌ ಅಜಯ್‌ಕುಮಾರ್‌ ಮತ್ತು ಸಹಾಯಕ ಸಬ್‌ ಇನ್‌ಸ್ಪೆಕ್ಟರ್ ವಿ.ಕೆ.ಬಿನೋಯ್ ಕುರಿಯನ್‌ ಭಾನುವಾರ ಬೆಳಿಗ್ಗೆ ಗಸ್ತು ತಿರುಗುತ್ತಿದ್ದರು. ಆಗ ವ್ಯಕ್ತಿಯೊಬ್ಬರು ರೈಲ್ವೆ ಹಳಿ ‍ಪಕ್ಕ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವುದು ಕಾಣಿಸಿತು. ಸ್ಥಳಕ್ಕೆ ತೆರಳಿ ಅವರನ್ನು ಎಚ್ಚರಿಸಲು ಯತ್ನಿಸಿದರೆ, ಸರಿಯಾದ ಪ್ರತಿಕ್ರಿಯೆ ಬರಲಿಲ್ಲ. ಅವರ ಬಳಿ ಇದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಿದಾಗ ರಬ್ಬರ್‌ ಬ್ಯಾಂಡ್‌ ಹಾಕಿ ಇರಿಸಿದ್ದ ನೋಟಿನ ಕಂತೆಗಳು ಕಂಡವು.

ತಕ್ಷಣ ಅವರನ್ನು ಠಾಣೆಗೆ ಕರೆದೊ ಯ್ದು ಪ್ರಥಮ ಚಿಕಿತ್ಸೆ ಕೊಡಿಸಿದರು. ನಂತರ ಅವರ ಬ್ಯಾಗ್‌ನಲ್ಲಿ ಪುಸ್ತಕ ವೊಂದರಲ್ಲಿ ಇದ್ದ ಮೊಬೈಲ್‌ ಸಂಖ್ಯೆಗೆ ಪೊಲೀಸರು ಕರೆ ಮಾಡಿದರು. ಅದು ಅತ್ತಾವರ ಬಾಬುಗುಡ್ಡೆ ನಿವಾಸಿ ಗುರು ಪ್ರಸಾದ್ ಅವರದ್ದಾಗಿತ್ತು. ಅವರು ಶಿವಾನಂದ ಅವರ ಗುರುತು ಖಚಿತಪಡಿಸಿದರು.

ಕೂಲಿ ಕೆಲಸದ ಹಣ: ಶಿವಾನಂದ್ ಮಂಕಿಸ್ಟ್ಯಾಂಡ್, ಅತ್ತಾವರ ಸುತ್ತಮುತ್ತ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಅಪಸ್ಮಾರ ರೋಗದಿಂದ ಬಳಲುತ್ತಿದ್ದ ಅವರು, ದುಡಿದ ಹಣವನ್ನು ಜಾಗರೂಕತೆಯಿಂಧ ಕೂಡಿಟ್ಟು, ಬ್ಯಾಂಕ್‍ ಖಾತೆಗೆ ಜಮಾ ಮಾಡಲು ನೀಡುತ್ತಿದ್ದರು. ಅನಿವಾರ್ಯವಿದ್ದಾಗ ಬ್ಯಾಂಕ್‍ನಿಂದ ಹಣ ತೆಗೆದು ಊರಿಗೆ ಕೊಂಡೊಯ್ಯುತ್ತಿದ್ದರು ಎಂಬ ಮಾಹಿತಿಯನ್ನು ವೆಲೆನ್ಸಿಯಾದ ಸೆಲೆಕ್ಷನ್ ಬೇಕರಿ ಮಾಲೀಕ ಗುರುಪ್ರಸಾದ್ ಪೊಲೀಸರಿಗೆ ತಿಳಿಸಿದರು.

ಗುರುಪ್ರಸಾದ್ ಬಳಿ ₹ 70240 ನಗದು ನೀಡಿದ ಪೊಲೀಸರು, ಶಿವಾನಂದ್ ಖಾತೆಗೆ ಜಮಾ ಮಾಡುವಂತೆ ತಿಳಿಸಿದರು. ಬಳಿಕ ಹಣ ಜಮೆಯಾಗಿರುವುದನ್ನು ಖಚಿತಪಡಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry