ಬುಧವಾರ, ಡಿಸೆಂಬರ್ 11, 2019
26 °C

ಸೆರೆಯಾಗದಿದ್ದರೆ ಸಾಯುತ್ತಿದ್ದ ಚಿರತೆ!

ಕೆ.ಎಸ್. ಗಿರೀಶ್ Updated:

ಅಕ್ಷರ ಗಾತ್ರ : | |

ಸೆರೆಯಾಗದಿದ್ದರೆ ಸಾಯುತ್ತಿದ್ದ ಚಿರತೆ!

ಮೈಸೂರು: ನಗರದ ಹೊರವಲಯದಲ್ಲಿ ಮಂಗಳವಾರ ಸೆರೆಯಾದ ಚಿರತೆ ಒಂದು ವೇಳೆ ಬಲೆಗೆ ಬೀಳದಿದ್ದರೆ ಅದು ಸಾಯುವ ಸಂಭವ ಹೆಚ್ಚಿತ್ತು ಎಂದು ಮೂಲಗಳು ತಿಳಿಸಿವೆ. ಈಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮುಳ್ಳುಹಂದಿಯೊಂದರ ಹಿಂದೆ ಹೆಜ್ಜೆ ಹಾಕುತ್ತಿದ್ದ ಚಿರತೆಯ ವಿಡಿಯೊ ವೈರಲ್ ಆಗಿತ್ತು. ಇದೇ ಚಿರತೆ ಮುಳ್ಳುಹಂದಿಯನ್ನು ಬೇಟೆಯಾಡಲು ಪ್ರಯತ್ನಿಸಿ ಗಾಯಗೊಂಡಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಊಹಿಸಿದ್ದಾರೆ.

ಗಂಟಲಲ್ಲಿ ಮೂರು ಇಂಚು ಆಳಕ್ಕೆ ಮುಳ್ಳುಗಳು ಹೊಕ್ಕಿದ್ದವು. ಸೆರೆ ಹಿಡಿದ ನಂತರ ಇಲವಾಲದ ಚಾಮುಂಡಿ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಮುಳ್ಳುಗಳನ್ನು ಹೊರತೆಗೆಯಲಾಯಿತು. ಇದರ ಜತೆಗೆ, ಮೈಮೇಲೆ ಹಾಗೂ ತಲೆಯ ಮೇಲೆ ತರಚಿದ ಗಾಯಗಳಾಗಿದ್ದು, ಅದಕ್ಕೂ ಚಿಕಿತ್ಸೆ ನೀಡಲಾಗಿದೆ. ಪ್ರಜ್ಞೆ ಬಂದ ಬಳಿಕ ಚಿರತೆ ಮಾಂಸ ಸೇವಿಸಿ ಆರೋಗ್ಯವಾಗಿದೆ.

ಚಿರತೆ ಬಂದದ್ದಾದರೂ ಏಕೆ?: ರಾತ್ರಿ ವೇಳೆ ಸಾಮಾನ್ಯವಾಗಿ ಆಹಾರ ಅರಸಿಕೊಂಡು ಅಲೆಯುವುದು ಚಿರತೆ ಮೊದಲಿನಿಂದಲೂ ರೂಢಿಸಿಕೊಂಡು ಬಂದ ಕ್ರಮ. ಅದರಂತೆ ಆಹಾರ ಹುಡುಕುತ್ತಾ ಬಂದಾಗ ನಾಯಿಯ ವಾಸನೆ ಮೂಗಿಗೆ ಅಡರಿದೆ. ಇದರ ಜಾಡು ಹಿಡಿದು ಎಪಿಎಂಸಿ ಮಾರುಕಟ್ಟೆ ಸಮೀಪ ಉತ್ತನಹಳ್ಳಿಗೆ ಹೋಗುವ ಮಾರ್ಗಮಧ್ಯೆ ಇರುವ ರಾಜು ಬಾಳೆಹಣ್ಣಿನ ಮಂಡಿಯ ಜನರೇಟರ್ ಇರಿಸುವ ಕೊಠಡಿಯ ಕಿಟಕಿಯ ಕಿಂಡಿಯಲ್ಲಿ ನುಸುಳಿದೆ.

ನಾಯಿಯನ್ನು ಕೊಂದರೂ ತಿನ್ನಲಾರದಾದ ಚಿರತೆ: ಮಂಡಿಯಲ್ಲಿದ್ದ ಎರಡು ನಾಯಿಗಳ ಪೈಕಿ ಒಂದು ನಾಯಿಯನ್ನು ಸುಲಭವಾಗಿ ಚಿರತೆ ಕೊಂದರೂ ಅದನ್ನು ತಿನ್ನಲಾಗಲಿಲ್ಲ. ನಾಯಿ ದೇಹದ ಮಧ್ಯಭಾಗವನ್ನು ಸೀಳಿ ಇನ್ನೇನು ತಿನ್ನಬೇಕು ಎನ್ನುವಷ್ಟರಲ್ಲಿ ಸ್ವಯಂಚಾಲಿತ ಜನರೇಟರ್ ಚಾಲು ಆಯಿತು. ಇದರ ಸದ್ದು ಹಾಗೂ ಹೊಗೆಗೆ ಬೆಚ್ಚಿದ ಚಿರತೆ ಮತ್ತೆ ನಾಯಿಯ ಸಮೀಪವೇ ಸುಳಿಯಲಿಲ್ಲ.

ಜೀವ ಉಳಿಸಿಕೊಂಡ ನಾಯಿ: ಮತ್ತೊಂದು ನಾಯಿಯನ್ನು ಚಿರತೆ ಸಾಕಷ್ಟು ಹೊತ್ತು ಮಂಡಿಯೊಳಗೆ ಅಟ್ಟಾಡಿಸಿತು. ನಾಯಿಯ ಬೊಗಳುವಿಕೆ ಹಾಗೂ ಚಿರತೆಯ ಆರ್ಭಟಗಳು ರಸ್ತೆಯಲ್ಲಿ ಸಾಗುತ್ತಿದ್ದ ಜನರನ್ನು ಸೆಳೆದವು. ಕೊನೆಗೆ, ಚಿರತೆಯು ಸತ್ತ ನಾಯಿಯ ದೇಹದ ಬಳಿ ಹೋದ ಲಾಭ ಪಡೆದ ಮತ್ತೊಂದು ನಾಯಿ, ಚಿರತೆ ನುಸುಳಿದ್ದ ಕಿಂಡಿಯಿಂದ ಹೊರಕ್ಕೆ ನುಸುಳಿ ಜೀವ ಉಳಿಸಿಕೊಂಡಿತು.

ಮುಗಿಬಿದ್ದ ಜನ, ಕಾರ್ಯಾಚರಣೆಗೆ ತೊಡಕು: ಸುಮಾರು 200 ಮಂದಿ ಕಾರ್ಯಾಚರಣೆ ನಡೆಯುತ್ತಿದ್ದ ಸ್ಥಳವನ್ನು ಸುತ್ತುವರಿದಿದ್ದು ಸಿಬ್ಬಂದಿಗೆ ಆತಂಕವನ್ನು ತಂದೊಡ್ಡಿತು. ಬೆರಳೆಣಿಕೆಯಷ್ಟಿದ್ದ ಪೊಲೀಸರು ಜನರನ್ನು ಚದುರಿಸಲಾಗದೆ ಅಸಹಾಯಕರಾದರು. ಎಷ್ಟೇ ಹೇಳಿದರೂ ಕೇಳದ ಜನ ಮೊಬೈಲ್ ಮೂಲಕ ಫೋಟೊ, ವಿಡಿಯೊ ಮಾಡಲು ಪದೇ ಪದೇ ಬಾಳೆಹಣ್ಣಿನ ಮಂಡಿಯ ಮುಂದೆ ಬರುತ್ತಿದ್ದರು. ಚಿರತೆ ಸೆರೆಯಾದ ಬಳಿಕವಂತೂ ಬಲೆಯಲ್ಲಿ ಅದನ್ನು ತಂದು ವಾಹನಕ್ಕೆ ಹಾಕಲು ಸಿಬ್ಬಂದಿ ಹರಸಾಹಸಪಟ್ಟರು.

ಸಹಾಯಕ ಅರಣ್ಯಾಧಿಕಾರಿ ಪ್ರಕಾಶ, ವಲಯ ಅರಣ್ಯಾಧಿಕಾರಿಗಳಾದ ದೇವರಾಜು, ಗೋವಿಂದರಾಜು, ಸಹಾಯಕ ವಲಯ ಅರಣ್ಯಾಧಿಕಾರಿಗಳಾದ ನವೀನ್, ಮಂಜು, ವಿನೋದ್, ವಿಜಯಕುಮಾರ್, ವೈದ್ಯ ನಾಗರಾಜು ಸೇರಿದಂತೆ 20 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ತವರಿನಿಂದ ಮರೆಯಾದ ಚಿರತೆ

ಸೆರೆ ಸಿಕ್ಕಿದ್ದು ಚಾಮುಂಡಿಬೆಟ್ಟದಲ್ಲೇ ಹುಟ್ಟಿ, ಬೆಳೆದ ಚಿರತೆಯಾಗಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ತಿಳಿಸಿದರು. ಇದಕ್ಕೆ ಪೂರಕ ಎಂಬಂತೆ ಉತ್ತನಹಳ್ಳಿಯ ಗ್ರಾಮಸ್ಥರೊಬ್ಬರು, ‘ಆಗ್ಗಿದ್ದಾಂಗೆ ಚಿರತೆ ಇದೇ ಹಾದಿಯಲ್ಲಿ ಕಾಣಿಸಿಕೊಳ್ಳುತ್ತಿತ್ತು. ಮನುಷ್ಯರ ಮೇಲೆ ಇದು ದಾಳಿ ಮಾಡಿರಲಿಲ್ಲ. ರಾತ್ರಿ ವೇಳೆ ಹಲವು ಬಾರಿ ಇಲ್ಲಿ ಓಡಾಡುವುದನ್ನು ಕಂಡಿದ್ದೆ’ ಎಂದರು.

‘ಬೆಳಿಗ್ಗೆಯೇ ಹೇಳಿದೆ, ಕಾರ್ಯಾಚರಣೆ ಮಾಡುವ ನೆವದಲ್ಲಿ ಮಂಡಿಯ ಬಾಗಿಲು ತೆರೆದು ಬಿಡೋಣ. ಚಿರತೆ ಓಡಿ ಹೋಗಿ ಸಮೀಪದ ಬೆಟ್ಟವನ್ನು ಸೇರಿಕೊಳ್ಳುತ್ತದೆ ಎಂದು. ಆದರೆ, ಇತರ ಸಿಬ್ಬಂದಿ ನನ್ನ ಮಾತು ಕೇಳಲಿಲ್ಲ. ಚಿರತೆಗೆ ವಯಸ್ಸಾಗಿದೆ. ಬೇರೆಡೆ ಅದು ಸುಲಭವಾಗಿ ಬೇಟೆಯಾಡಲಾರದು’ ಎಂದು ಸಿಬ್ಬಂದಿಯೊಬ್ಬರು ಹೇಳಿದರು.

ಹತ್ತು ವರ್ಷಗಳ ಚಿರತೆ ತನ್ನ ಅಂತಿಮ ದಿನಗಳನ್ನು ಇದೀಗ ಬೇರೆಡೆ ಕಳೆಯಬೇಕಿದೆ. ಸದ್ಯ, ಇಲವಾಲದ ಚಾಮುಂಡಿ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿರುವ ಚಿರತೆಯನ್ನು ಬಂಡೀಪುರ ಹುಲಿ ರಕ್ಷಿತಾರಣ್ಯಕ್ಕೆ ಬಿಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಚಿರತೆ ಸೆರೆಯ ಹೆಜ್ಜೆ ಗುರುತುಗಳು

ನಸುಕಿನ 3.10– ಮಂಡಿಯಲ್ಲಿ ಮಲಗಿದ್ದ ರಾಮಕೃಷ್ಣ, ಚಿರತೆಯನ್ನು ಕಂಡಿದ್ದು

3.15– ರಾಮಕೃಷ್ಣ ಹೊರಕ್ಕೆ ಬಂದು ಬಾಗಿಲು ಬಂದ್ ಮಾಡಿದ್ದು

3.30– ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ

4.10– ಚಿರತೆಗೆ ನಾಯಿ ಬಲಿ

5.55– ಕಿಟಿಕಿಯ ಕಿಂಡಿಯಿಂದ ಹೊರಕ್ಕೆ ಬಂದು ಜೀವ ಉಳಿಸಿಕೊಂಡ ಮತ್ತೊಂದು ನಾಯಿ

7.00– ಸ್ಥಳಕ್ಕೆ ಬೋನು ಹಾಗೂ ಬಲೆ ತರಲಾಯಿತು

7.15– ಕಾರ್ಯಾಚರಣೆ ಆರಂಭ

7.30– ಚಿರತೆಯ ದೇಹ ನಾಟಿದ ಅರಿವಳಿಕೆ ಚುಚ್ಚುಮದ್ದು

7.40– ಪ್ರಜ್ಞೆ ತಪ್ಪಿದ ಚಿರತೆ

7.50– ಪ್ರಜ್ಞೆ ತಪ್ಪಿದ ಚಿರತೆಗೆ ಬಲೆ ಹಾಕಿದ ಸಿಬ್ಬಂದಿ

* * 

ಅರಣ್ಯ ಕ್ಷಿಪ್ರ ಕಾರ್ಯಪಡೆಯು ದಿನದ 24 ಗಂಟೆಯೂ ಕಾರ್ಯನಿರತವಾಗಿರುತ್ತದೆ. ಸಾರ್ವಜನಿಕರನ್ನು ವನ್ಯಜೀವಿಗಳಿಂದ ಕಾಪಾಡುವುದು, ವನ್ಯಜೀವಿಗಳನ್ನು ಸಾರ್ವಜನಿಕರಿಂದ ರಕ್ಷಿಸುವುದು ಇದರ ಗುರಿ.

– ದೇವರಾಜು,

ವಲಯ ಅರಣ್ಯಾಧಿಕಾರಿ.

ಪ್ರತಿಕ್ರಿಯಿಸಿ (+)